ಬೆಂಗಳೂರಿನ ಅತಿವೃಷ್ಟಿಗೆ ಯೋಜನಾರಹಿತವಾದ ನಗರ ಬೆಳವಣಿಗೆ ಕಾರಣ: ಸಿಎಂ ಬೊಮ್ಮಾಯಿ

ಬೆಂಗಳೂರಿನಲ್ಲುಂಟಾದ ಅತಿವೃಷ್ಟಿಗೆ ನಗರವನ್ನು ಯೋಜನಾ ರಹಿತವಾಗಿ ಬೆಳೆಸಿರುವುದೇ ಕಾರಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ಉತ್ತರಿಸಿದ್ದಾರೆ.

ಬೆಂಗಳೂರಿನ ಅತಿವೃಷ್ಟಿಗೆ ಯೋಜನಾರಹಿತವಾದ ನಗರ ಬೆಳವಣಿಗೆ ಕಾರಣ: ಸಿಎಂ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
TV9kannada Web Team

| Edited By: Vivek Biradar

Sep 19, 2022 | 5:21 PM

ಬೆಂಗಳೂರು: ಬೆಂಗಳೂರಿನಲ್ಲುಂಟಾದ ಅತಿವೃಷ್ಟಿಗೆ ನಗರವನ್ನು ಯೋಜನಾ ರಹಿತವಾಗಿ ಬೆಳೆಸಿರುವುದೇ ಕಾರಣ ಎಂದು ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ವಿಧಾನಸಭೆಯಲ್ಲಿ ಉತ್ತರಿಸಿದ್ದಾರೆ. ಮೂಲ ಬೆಂಗಳೂರು (Bengaluru) ಸಂಪೂರ್ಣವಾಗಿ ಬದಲಾಗಿದೆ. ಶಿವಾಜಿನಗರ, ಅಲಸೂರು, ಸ್ಯಾಂಕಿ ಭಾಗದಲ್ಲೂ ಮಳೆಯಾಗಿದೆ. ಅದರೆ ಅಲ್ಲಿ ಮಳೆ ನೀರು ಹರಿದುಹೋಗಿರುವುದರಿಂದ ಸಮಸ್ಯೆಯಾಗಿಲ್ಲ. ಬೆಂಗಳೂರು ನಗರದಲ್ಲಿ ಒಳಚರಂಡಿ ನೀರು ಹೆಚ್ಚಾಗುತ್ತಿರುವುದರಿಂದ  ಅದನ್ನು ನೇರವಾಗಿ ರಾಜಕಾಲುವೆಗೆ ಬಿಡುವ ಕೆಲಸ ಆಗುತ್ತಿದೆ ಎಂದರು.

ಬೆಂಗಳೂರಿನ 4 ವಲಯಗಳ ಪೈಕಿ 2 ವಲಯಗಳಲ್ಲಿ ಸಮಸ್ಯೆಯಾಗಿದೆ. ಎನ್​ಜಿಟಿ ಆದೇಶವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ರಾಜಕಾಲುವೆಯ ಪಕ್ಕ ಇರುವ ಮನೆಗಳನ್ನು ಪರಿಶೀಲಿಸಿದ್ದು, ರಾಜಕಾಲುವೆ ಕ್ಲಿಯರ್ ಮಾಡಲು ಕೆಲ ಮನೆಗಳ ತೆರವು ಅನಿವಾರ್ಯವಾಗಿದೆ. ಪ್ರಮುಖ ಕೆರೆಗಳಿಗೆ ಸ್ಲೂಯಿಸ್ ಗೇಟ್ ಹಾಕಲು ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಳೆ ಹಾನಿ ತಡೆಗೆ ಕ್ರಮಕೈಗೊಳ್ಳಲಾಗಿದೆ. ಒತ್ತುವರಿಯಾಗಿರುವ ರಾಜಕಾಲುವೆಗಳನ್ನು ತೆರವುಗೊಳಿಸುತ್ತೇವೆ. ಡ್ರೈನೇಜ್ ನೀರು ಸರಾಗವಾಗಿ ಹರಿದು ಹೋಗಲು ಕ್ರಮಕೈಗೊಳ್ಳಲಾಗುವುದು. ರಾಜಕಾಲುವೆಗಳ ದುರಸ್ತಿಗೆ ಅನುದಾನ ಬಿಡಗಡೆ ಆಗಿದೆ. ಮಳೆಗಾಲ ಮುಗಿದ ಕೂಡಲೇ ದುರಸ್ತಿ ಕಾರ್ಯ ಆರಂಭವಾಗುತ್ತದೆ. ಬಿಎಂಆರ್​ಡಿ, ಬಿಡಿಎ ವ್ಯಾಪ್ತಿಯಲ್ಲಿ ಹಲವು ಹಳ್ಳಿಗಳು ಇವೆ. 110 ಹಳ್ಳಿಗಳಲ್ಲಿ ಆಗ ನೀರಾವರಿ ಕಾಲುವೆಗಳು ಇದ್ದವು, ಆದರೆ ಈಗ ಗ್ರಾಮಗಳಲ್ಲಿ ಕಾಲುವೆಗಳು ಮಾಯವಾಗಿವೆ ಎಂದು ಹೇಳಿದರು.

ರಾಜ್ಯದಲ್ಲಿ ಉಂಟಾದ ಅತಿವೃಷ್ಟಿ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ ಅತಿವೃಷ್ಟಿಯಿಂದ ಸಾಕಷ್ಟು ಹಾನಿಯಾಗಿದೆ. ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ 700 ಕೋಟಿ ಬಿಡುಗಡೆ ಮಾಡುತ್ತಿದ್ದೇವೆ. ಅವಶ್ಯಕತೆ ನೋಡಿಕೊಂಡು ಹೆಚ್ಚಿನ ಹಣ ಬಿಡುಗಡೆ ಮಾಡುತ್ತೇವೆ. ನೆರೆ ನಿರ್ವಹಣೆಯಲ್ಲಿ ತಡ ಮಾಡದೇ ಕಾರ್ಯ ನಿರ್ವಹಣೆ ಮಾಡಿದ್ದೇವೆ. ಮಳೆ ಹಾನಿ ಸಂಬಂಧ 126 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ ಎಂದು ತಿಳಿಸಿದರು.

ಮನೆಗಳಿಗೆ ಹಾನಿಯಾದವರಿಗೆ ತಕ್ಷಣ ಹಣ ನೀಡುವ ಕೆಲಸ ಮಾಡಿದ್ದೇವೆ. ವರದಿ ಬಂದ ಕೂಡಲೇ ಬೆಳೆ ಪರಿಹಾರ ಬಿಡುಗಡೆ ಮಾಡಿದ್ದೇವೆ. ಭೂಕುಸಿತಕ್ಕೆ ಎನ್‌ಡಿಆರ್‌ಎಫ್‌ನಡಿ ಪರಿಹಾರ ಇಲ್ಲ. ಇದನ್ನೂ ಎನ್‌ಡಿಆರ್‌ಎಫ್‌ನಡಿ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada