ಪರಪ್ಪನ ಅಗ್ರಹಾರ ಜೈಲು ಕೈದಿಗೆ ಕೇರಳದಿಂದ ಕೊರಿಯರ್‌ನಲ್ಲಿ ಡ್ರಗ್ಸ್, ಕೊರಿಯರ್‌ ಕಳಿಸಿದ್ದ ವ್ಯಕ್ತಿಯ ಬಂಧನಕ್ಕೆ ಕೇರಳಕ್ಕೆ ಪೊಲೀಸರು

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಡಿವಾಳ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಮುಜೀಬ್‌ಗೆ ಕೊರಿಯರ್ ಮೂಲಕ ಡ್ರಗ್ಸ್ ಸಪ್ಲೈ ಮಾಡಲಾಗುತ್ತಿದೆಯಂತೆ. ಜಿನೇಬ್ ಎಂಬ ವ್ಯಕ್ತಿ ಕೇರಳದ ಕಣ್ಣೂರಿನಿಂದ ಕೈದಿ ನಂಬರ್ 1716 ಹೆಸರಿನಲ್ಲಿ ಕೊರಿಯರ್ ಕಳಿಸಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ.

  • TV9 Web Team
  • Published On - 12:33 PM, 10 Apr 2021
ಪರಪ್ಪನ ಅಗ್ರಹಾರ ಜೈಲು ಕೈದಿಗೆ ಕೇರಳದಿಂದ ಕೊರಿಯರ್‌ನಲ್ಲಿ ಡ್ರಗ್ಸ್, ಕೊರಿಯರ್‌ ಕಳಿಸಿದ್ದ ವ್ಯಕ್ತಿಯ ಬಂಧನಕ್ಕೆ ಕೇರಳಕ್ಕೆ ಪೊಲೀಸರು
ಪರಪ್ಪನ ಅಗ್ರಹಾರ ಜೈಲು

ಆನೇಕಲ್: ಕೆಲ ತಿಂಗಳ ಹಿಂದೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆಯುತ್ತಿದ್ದ ಅವ್ಯವಹಾರಗಳನ್ನು ಟಿವಿ9 ಬಯಲು ಮಾಡಿತ್ತು. ಇದರ ಫಲಶ್ರುತಿಯಾಗಿ ಬೆಂಗಳೂರು, ಬೆಳಗಾವಿ ಸೇರಿದಂತೆ ಜೈಲು ಅಕ್ರಮಗಳಲ್ಲಿ ಭಾಗಿಯಾಗಿದ್ದ 6 ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿತ್ತು. ಆದರೆ ಈ ಘಟನೆ ಬಳಿಕವೂ ಜೈಲಿಯಲ್ಲಿ ಅವ್ಯವಹಾರ ಕಡಿಮೆಯಾಗಿಲ್ಲ. ಕೈದಿಯೊಬ್ಬನಿಗೆ ಕೇರಳದಿಂದ ಕೊರಿಯರ್‌ನಲ್ಲಿ ಡ್ರಗ್ಸ್ ಸಪ್ಲೈ ಆಗುತ್ತಿದೆ ಎಂಬ ಮಾಹಿತಿ ಇದೀಗ ಸಿಕ್ಕಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ತಪಾಸಣೆ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಡಿವಾಳ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಮುಜೀಬ್‌ಗೆ ಕೊರಿಯರ್ ಮೂಲಕ ಡ್ರಗ್ಸ್ ಸಪ್ಲೈ ಮಾಡಲಾಗುತ್ತಿದೆಯಂತೆ. ಜಿನೇಬ್ ಎಂಬ ವ್ಯಕ್ತಿ ಕೇರಳದ ಕಣ್ಣೂರಿನಿಂದ ಕೈದಿ ನಂಬರ್ 1716 ಹೆಸರಿನಲ್ಲಿ ಕೊರಿಯರ್ ಕಳಿಸಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ. ಈ ರೀತಿ ಕೇರಳದಿಂದ ಬಂದ ತಿಂಡಿ ಹಾಗೂ ಪ್ಯಾಕೆಟ್​ಗಳಲ್ಲಿ ಪೌಡರ್ ಸಿಕ್ಕಿದೆ.

ಆರೋಪಿ ಡ್ರಗ್ಸ್ ಪೌಡರನ್ನು ಬಾಟಲಿಯಲ್ಲಿ ತುಂಬಿ ಇಟ್ಟಿದ್ದ. ಅನುಮಾನ ಬಂದು ಜೈಲು ಸಿಬ್ಬಂದಿ ತಪಾಸಣೆ ಮಾಡಿದಾಗ ಹೆರಾಯಿನ್ ರೀತಿ ಇದ್ದ ಪೌಡರ್ ಲಭ್ಯವಾಗಿದೆ. ಹೀಗಾಗಿ ಆರೋಪಿ ವಿರುದ್ಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ದೂರು ದಾಖಲಾಗಿದೆ. ಹಾಗೂ ಕೇರಳದಿಂದ ಕೊರಿಯರ್‌ ಕಳಿಸಿದ್ದ ಜಿನೇಬ್ ಬಂಧಿಸುವುದಕ್ಕೆ ಪೊಲೀಸರು ತೆರಳಿದ್ದಾರೆ.

ಸದ್ಯ ಆರೋಪಿ ಮುಜೀಬ್ ಬಳಿ ಸಿಕ್ಕ ಹೆರಾಯಿನ್ ರೀತಿ ಇರುವ ಪೌಡರನ್ನು ಅಧಿಕಾರಿಗಳು ಲ್ಯಾಬ್​ಗೆ ಕಳುಹಿಸಿದ್ದಾರೆ. ಈಗಾಗಲೇ 10ಕ್ಕಿಂತ ಅಧಿಕ ವರ್ಷಗಳಿಂದ ಜೈಲು ವಾಸ ಅನುಭವಿಸಿರುವ ಮುಜೀಬ್ ಕಳ್ಳ ಮಾರ್ಗದಲ್ಲಿ ಜೈಲಿಗೆ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ. ಪರಪ್ಪನ ಅಗ್ರಹಾರ ಪೊಲೀಸರ ಕಾರ್ಯಾಚರಣೆಯಿಂದ ಡ್ರಗ್ಸ್ ಸರಬರಾಜಾಗುತ್ತಿದ್ದದ್ದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: TV9 Big Impact | ಟಿವಿ9 ರಹಸ್ಯ ಕಾರ್ಯಾಚರಣೆ ವರದಿ ಫಲಶ್ರುತಿ: ಬೆಂಗಳೂರು-ಬೆಳಗಾವಿ ಸೇರಿದಂತೆ ಜೈಲು ಅಕ್ರಮದಲ್ಲಿದ್ದ 6 ಅಧಿಕಾರಿಗಳು ಸಸ್ಪೆಂಡ್​!

(Drug Supply From Kerala to Parappana Agrahara Another Case Filed Against Accused in Bengaluru)