ದೀಪಾವಳಿಯ ಮೊದಲ ದಿನವೇ 7 ಮಂದಿಗೆ ಗಾಯ: ಪಟಾಕಿ ಹೊಡೆಯುವಾಗ ಇರಲಿ ಎಚ್ಚರ
ಪಟಾಕಿ ಸಿಡಿಸುವ ಸಂದರ್ಭದಲ್ಲಿ ಹತ್ತಿರದಲ್ಲಿ ನೀರು ಅಥವಾ ಮರಳಿನಂಥ ಅಗ್ನಿಶಾಮಕ ವಸ್ತುಗಳೊಂದಿಗೆ ಪ್ರಥಮ ಚಿಕಿತ್ಸೆಗೆ ಅಗತ್ಯವಿರುವ ಔಷಧೋಪಕರಣಗಳನ್ನೂ ಇರಿಸಿಕೊಂಡಿರಬೇಕು ಎಂದು ವೈದ್ಯರು ಸಲಹೆ ಮಾಡಿದ್ದಾರೆ.
ಬೆಂಗಳೂರು: ಪಟಾಕಿಯಿಂದ ಗಾಯಗೊಳ್ಳುತ್ತಿರುವ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದೀಪಾವಳಿ ಹಬ್ಬದ ಮೊದಲ ದಿನವೇ ಪಟಾಕಿಯಿಂದ 12 ಮಂದಿ ಗಾಯಗೊಂಡಿದ್ದು, ಒಂದೇ ದಿನ 7 ಮಂದಿ ಮಿಂಟೊ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಾಮರಾಜಪೇಟೆ ಮತ್ತು ಮೈಸೂರು ರಸ್ತೆಯಲ್ಲಿ ತಲಾ ಇಬ್ಬರು ಗಾಯಗೊಂಡಿದ್ದಾರೆ. ಸರ್ಜಾಪುರ ಮತ್ತು ಅವೆನ್ಯೂ ರಸ್ತೆಯಲ್ಲಿ ತಲಾ ಒಬ್ಬರಿಗೆ ಗಾಯವಾಗಿದೆ. ಅನ್ನಪೂರ್ಣೇಶ್ವರಿ ನಗರದಲ್ಲಿ ಪಟಾಕಿ ಸಿಡಿದು ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಬಿಜಿಲಿ ಹಾಗೂ ಲಕ್ಷ್ಮೀ ಪಟಾಕಿಯಿಂದಲೇ ಹೆಚ್ಚು ಜನರಿಗೆ ಗಾಯಗಳಾಗಿವೆ. ಚಾಮರಾಜಪೇಟೆಯ 10 ವರ್ಷದ ಬಾಲಕ ಆಜಾದ್, 50 ವರ್ಷದ ರಮೇಶ್, ಮೈಸೂರು ರಸ್ತೆಯ 19 ವರ್ಷದ ಜಯಸೂರ್ಯ, 4 ವರ್ಷದ ಸುರಭಿ, ಸರ್ಜಾಪುರದ ಸಂಗೀತ ವರ್ಮಾ 49 ವರ್ಷ, ಅವೆನ್ಯೂ ರಸ್ತೆಯ ಹಬೀಬುಲ್ಲ 22 ವರ್ಷ, ಅನ್ನಪೂರ್ಣೇಶ್ವರಿ ನಗರದ 39 ವರ್ಷದ ಮಮತಾ ಅವರಿಗೆ ಪಟಾಕಿ ಸಿಡಿತದಿಂದ ಗಾಯಗಳಾಗಿವೆ. ನಿನ್ನೆ ಸಂಜೆ ಆದ ಮೇಲೆ ಪಟಾಕಿ ಸಿಡಿದ ಪ್ರಕರಣಗಳು ದುಪ್ಪಟ್ಟಾಗಿವೆ.
ಪಟಾಕಿ ಸಿಡಿಸುವಾಗ ಸುರಕ್ಷಿತ ಅಂತರ ಕಾಪಾಡಿಕೊಳ್ಳಬೇಕು. ಪಟಾಕಿಗಳಿಗೆ ತೀರಾ ಹತ್ತಿರದಿಂದ ಬೆಂಕಿ ಹಚ್ಚಬಾರದು. ಉದ್ದದ ಕೋಲಿಗೆ ಊದುಬತ್ತಿ ಸಿಕ್ಕಿಸಿ ಪಟಾಕಿಗೆ ಬೆಂಕಿ ಹಚ್ಚಬೇಕು. ನೈಲಾನ್ ಬಟ್ಟೆಗಳನ್ನು ಧರಿಸಬಾರದು. ಪಟಾಕಿ ಸಿಡಿಸುವ ಸಂದರ್ಭದಲ್ಲಿ ಹತ್ತಿರದಲ್ಲಿ ನೀರು ಅಥವಾ ಮರಳಿನಂಥ ಅಗ್ನಿಶಾಮಕ ವಸ್ತುಗಳೊಂದಿಗೆ ಪ್ರಥಮ ಚಿಕಿತ್ಸೆಗೆ ಅಗತ್ಯವಿರುವ ಔಷಧೋಪಕರಣಗಳನ್ನೂ ಇರಿಸಿಕೊಂಡಿರಬೇಕು ಎಂದು ವೈದ್ಯರು ಸಲಹೆ ಮಾಡಿದ್ದಾರೆ.
ಮಕ್ಕಳು ಪಟಾಕಿ ಹೊಡೆಯುವ ಮೊದಲು ಇವಿಷ್ಟೂ ಗೊತ್ತಿರಬೇಕು
ಮಕ್ಕಳ ತಜ್ಞೆಯಾಗಿರುವ ಡಾ. ಎಚ್.ವಿ. ನಿವೇದಿತಾ ಅವರು ಪಟಾಕಿ ಸಿಡಿಸುವುದರಿಂದಾಗುವ ಅನಾಹುತಗಳ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಪಟಾಕಿ ಎಂದರೇನು? ಅದರಲ್ಲಿರುವ ಅಪಾಯಕಾರಿ ಅಂಶಗಳೇನು? ಅದರಿಂದಾಗುವ ತೊಂದರೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಹಾಗಾದರೆ ಈ ಪಟಾಕಿಯಲ್ಲಿ ಏನೇನು ಇರುತ್ತವೆ, ಬಹುಮುಖ್ಯವಾದ ಭಾಗವೆಂದರೆ ಅದರಲ್ಲಿ ಫ್ಲ್ಯಾಶ್ ಪುಡಿ ಇದು ಪ್ಲಾಸ್ಟಿಕ್ ಹಾಗೂ ಕಾರ್ಡ್ಬೋರ್ಡ್ನ ಶೇ.70ರಷ್ಟನ್ನು ಬಳಕೆ ಮಾಡಿ ತಯಾರಿಸಲಾಗಿರುತ್ತದೆ. ಇದರಲ್ಲಿ ಸ್ಮೋಕ್ಲೆಸ್ ಪುಡಿ, ಬ್ಲ್ಯಾಕ್ ಪೌಡರ್ ಇದ್ದು, ಇದೆಲ್ಲವನ್ನು ಒಳಗೊಂಡು ಪಟಾಕಿಯನ್ನು ಸಿದ್ಧಪಡಿಸಲಾಗುತ್ತದೆ.
ಬಂಧೂಕು ಪುಡಿ, ಅದರಲ್ಲಿರುವ ರಾಸಾಯನಿಕಗಳೇನು? ಇಲ್ಲಿದೆ ಮಾಹಿತಿ ಇದರಲ್ಲಿ ಶೇ.70ರಷ್ಟು ಪೊಟ್ಯಾಸಿಯಂ ನೈಟ್ರೇಟ್ ಅಥವಾ ಬೇರಿಯಂ ನೈಟ್ರೇಟ್ ಇರುತ್ತದೆ. ಶೇ.15 ಇದ್ದಿಲಿರುತ್ತದೆ, ಶೇ.10ರಷ್ಟು ಸಲ್ಫರ್ ಇರಲಿದೆ. ಇದರ ಜತೆಗೆ ಅಲ್ಯೂಮಿನಿಯಂ ಪುಡಿ, ಮೆಗ್ನೀಶಿಯಂ ಲೋಹಗಳೆಲ್ಲವೂ ಇರುತ್ತವೆ. ಒಂದು ಬಾರಿ ಬೆಂಕಿಯನ್ನು ಹಚ್ಚಿ ಸಿಡಿಯಲು ಬಿಟ್ಟಾಗ , ಸಿಡಿದ ನಂತರ ಅದು ಒಂದು ಡಸ್ಟ್ ಪಾರ್ಟಿಕಲ್ ಆಗಿ ಮಾರ್ಪಾಡಾಗುತ್ತದೆ. ಮತ್ತೆ ನಾವು ಅದರಲ್ಲಿ ತಾಮ್ರ, ಸತು, ಸೀಸ, ಮೆಗ್ನೀಸಿಯಂ, ಸೋಡಿಯಂ ಕಾಣಬಹುದು, ಜತೆಗೆ ಸಲ್ಫರ್ ಕೂಡ ಇರಲಿದೆ ಇವೆಲ್ಲವು ಮಕ್ಕಳು ಜತೆಗೆ ದೊಡ್ಡವರ ಆರೋಗ್ಯದ ಮೇಲೂ ಪರಿಣಾಮ ಬೀರುವಂಥದ್ದಾಗಿವೆ. ಇದರಿಂದ ಉಸಿರಾಟ ಸೇರಿದಂತೆ ಆರೋಗ್ಯದ ಮೇಲೆ ದುಷ್ಪರಿಣಾಮವನ್ನುಂಟು ಮಾಡಲಿದೆ.
ಪಟಾಕಿ ಹೊಗೆಯನ್ನು ಉಸಿರಾಡುವುದರಿಂದ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಗಳೇನು? ಮೊದಲನೆಯದಾಗಿ ಮಕ್ಕಳಲ್ಲಿ ಕಾಣುವಂತಹ ತೊಂದರೆಯೆಂದರೆ ಪೆಟ್ಟಾಗುವಂಥದ್ದು. 15-16 ವರ್ಷದ ಮಕ್ಕಳು ಹೆಚ್ಚಾಗಿ ಪಟಾಕಿಯಿಂದ ಹೆಚ್ಚು ಗಾಯಗಳನ್ನು ಮಾಡಿಕೊಳ್ಳುತ್ತಾರೆ, ಏಕೆಂದರೆ ಅವರ ವಯಸ್ಸೇ ಅಂಥದ್ದು, ಹುಮ್ಮಸ್ಸು ತುಸು ಹೆಚ್ಚಿರುತ್ತದೆ, ಆಸಕ್ತಿ ಇರುತ್ತದೆ ಮತ್ತೆ ಅವರಲ್ಲಿ ಉತ್ಸಾಹ ಹೆಚ್ಚಿರುವುದರಿಂದ ಗಾಯಗಳನ್ನು ಮಾಡಿಕೊಳ್ಳುವವರ ಪ್ರಮಾಣವೂ ಹೆಚ್ಚಿರುತ್ತದೆ.
Published On - 9:48 am, Tue, 25 October 22