ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ, ದೊಂಬಿ ವಾಹನ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಬೆಂಕಿ ಹಚ್ಚಿದ ಪ್ರಕರಣಗಳಿಗೆ ಶಾಸಕ ಅಖಂಡ ಶ್ರೀನಿವಾಸಮಮೂರ್ತಿಯವರಿಗೆ ಆಪ್ತರಾಗಿರುವ ಪುಲಿಕೇಶಿ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕಾರಣ ಅಂತ ಕ್ಷೇತ್ರದ ಮಾಜಿ ಶಾಸಕ ಬಿ ಪ್ರಸನ್ನ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
‘‘ನಾನು ಮತ್ತೆ ಕಾಂಗ್ರೆಸ್ ಪಕ್ಷ ಸೇರಲು ನಿರ್ಧರಿಸಿರುವುದು ಗಲಭೆಗೆ ಕಾರಣವಲ್ಲ, ಕೆಲವರು ಸುಖಾಸುಮ್ಮನೆ ನನ್ನ ಹೆಸರನ್ನು ತೇಲಿ ಬಿಡುತ್ತಿದ್ದಾರೆ. ನಾನು ಕಾಂಗ್ರೆಸ್ಗೆ ವಾಪಸ್ಸು ಹೋಗುತ್ತಿರುವುದಕ್ಕೆ ಯಾವುದೇ ನಾಯಕನ ವಿರೋಧವಿಲ್ಲ, ಇದಕ್ಕೆ ಸಂಬಂಧಿಸಿದಂತೆ ನಾನು ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜತೆ ಚರ್ಚೆ ನಡೆಸಿದ್ದೇನೆ,’’ ಎಂದು ಹೇಳಿದ ಪ್ರಸನ್ನ ಕುಮಾರ್ ಪ್ರಕರಣದಲ್ಲಿ ತನ್ನನ್ನು ಸಿಲುಕಿಸುವ ಪ್ರಯತ್ನ ನಡೆದಿದೆ ಅಂತ ಆರೋಪಿಸಿದರು.
ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಟಿಕೆಟ್ ಹಂಚುವ ಬಗ್ಗೆ ಚರ್ಚೆ ಇನ್ನೂ ಶುರುವಾಗಿಲ್ಲ ಎಂದ ಮಾಜಿ ಶಾಸಕ, ‘‘ನಮ್ಮ ನಾಯಕರಾದ ಸಿದ್ದರಾಮಯ್ಯನವರೊಂದಿಗೆ ಮಾತಾಡುತ್ತೇನೆ,’’ ಎಂದು ಹೇಳುವ ಮೂಲಕ ತಾನು ಸಿದ್ದರಾಮಯ್ಯ ಕ್ಯಾಂಪಿಗೆ ಸೇರುವುದು ನಿಶ್ಚಿತವೆಂದು ಅಪರೋಕ್ಷವಾಗಿ ಹೇಳಿದರು.
ದೂರು ನೀಡಿದರೂ ಕಾರ್ಯಾಚರಣೆ ನಡೆಸಲು ಪೊಲೀಸರು ತಡಮಾಡಿದರೆಂದು ಆರೋಪಿಸಿದ ಪ್ರಸನ್ನ, ಪುಲಿಕೇಶ ನಗರ ಠಾಣೆಯ ಇನ್ಸ್ಪೆಕ್ಟರ್, ಶಾಸಕ ಮೂರ್ತಿಯವರೊಂದಿಗೆ ನಿಕಟ ಬಾಂಧವ್ಯ ಹೊಂದಿರುವುದು ಇದಕ್ಕೆ ಕಾರಣ ಎಂದರು.