ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ವಾಯುಮಾಲಿನ್ಯ: ಎಮಿಷನ್ ಟೆಸ್ಟ್ ಸರ್ಟಿಫಿಕೇಟ್ ತಪಾಸಣೆ ಮಾಡ್ತಿಲ್ಲ ಟ್ರಾಫಿಕ್ ಪೊಲೀಸರು!
ಬೆಂಗಳೂರು ನಗರದಲ್ಲಿ ಪ್ರತಿದಿನ ಎರಡು ಸಾವಿರ ಹೊಸ ವಾಹನಗಳು ರಸ್ತೆಗಿಳಿಯುತ್ತಿವೆ. ಇದರಿಂದ ನಗರದಲ್ಲಿ ವಾಯುಮಾಲಿನ್ಯ ಪ್ರಮಾಣ ವಿಪರೀತವಾಗಿದೆ. ಜನರು ಉಸಿರಾಡಲು ಆಗದ ವಾತಾವರಣವಿದೆ. ಆದರೆ ಇದಕ್ಕೆ ಬ್ರೇಕ್ ಹಾಕಬೇಕಾದ ಟ್ರಾಫಿಕ್ ಪೋಲಿಸರು, ಆರ್ಟಿಓ ಅಧಿಕಾರಿಗಳು ಮೌನವಾಗಿದ್ದಾರೆ. ಟ್ರಾಫಿಕ್ ಪೊಲೀಸರು ಎಮಿಷನ್ ಟೆಸ್ಟ್ ಸರ್ಟಿಫಿಕೇಟ್ ತಪಾಸಣೆ ಮಾಡದಿರಲು ಕಾರಣವೇನು? ಇಲ್ಲಿದೆ ನೋಡಿ ಮಾಹಿತಿ.
ಬೆಂಗಳೂರು, ಆಗಸ್ಟ್ 19: ಬೆಂಗಳೂರಿನಲ್ಲಿ ವಾಯುಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತಿದೆ. ಪ್ರತಿದಿನ ನಗರದಲ್ಲಿ ಎರಡು ಸಾವಿರ ಹೊಸ ವಾಹನಗಳು ರಸ್ತೆಗಿಳಿಯುತ್ತವೆ. ಆದರೂ, ಟ್ರಾಫಿಕ್ ಪೋಲಿಸರು ಮತ್ತು ಆರ್ಟಿಒ ಅಧಿಕಾರಿಗಳು ವಾಯುಮಾಲಿನ್ಯ ತಪಾಸಣೆ ಮಾಡುವುದನ್ನೇ ಮರೆತುಬಿಟ್ಟಿದ್ದಾರೆ. ನಗರದಲ್ಲಿ ಯಾವುದೇ ಬಸ್, ಲಾರಿ, ಕ್ಯಾಬ್ ಆಟೋ ಹಾಗೂ ಬೈಕ್ಗಳಲ್ಲಿ ವಾಯುಮಾಲಿನ್ಯ ತಪಾಸಣಾ ಸರ್ಟಿಫಿಕೇಟ್ಗಳೇ ಇಲ್ಲ. ಪೋಲಿಸರು, ಆರ್ಟಿಒ ಅಧಿಕಾರಿಗಳು ಎಮಿಷನ್ ಟೆಸ್ಟ್ ಸರ್ಟಿಫಿಕೇಟ್ ಇಲ್ಲಾಂದರೆ, ಈ ಮೊದಲು 500 ರುಪಾಯಿ ದಂಡ ವಿಧಿಸುತ್ತಿದ್ದರು. ಆದರೆ ಈಗ ಇಬ್ಬರೂ ವಾಹನಗಳನ್ನು ತಪಾಸಣೆ ಮಾಡುತ್ತಿಲ್ಲ, ದಂಡವನ್ನು ವಿಧಿಸುತ್ತಿಲ್ಲ. ಹಾಗಾಗಿ ವಾಹನಗಳ ಮಾಲೀಕರು ಎಮಿಷನ್ ಟೆಸ್ಟ್ ಮಾಡಿಸಲು ಮುಂದಾಗುತ್ತಿಲ್ಲ. ಈ ಬಗ್ಗೆ ಪರಿಸರ ತಜ್ಞ ಪ್ರಸಾದ್ ಆತಂಕ ವ್ಯಕ್ತಪಡಿಸಿದ್ದಾರೆ.
ಪೋಲಿಸರು ಮತ್ತು ಟ್ರಾಫಿಕ್ ಪೋಲಿಸರು ಎಮಿಷನ್ ಟೆಸ್ಟ್ ಸರ್ಟಿಫಿಕೇಟ್ ತಪಾಸಣೆ ಮಾಡದಿರಲು ಕಾರಣ, ಪ್ರಮಾಣ ಪತ್ರ ಇಲ್ಲ ಎಂದಾದರೆ, ಆ ನಿಯಮ ಉಲ್ಲಂಘನೆಗೆ ಸ್ಥಳದಲ್ಲಿಯೇ ದಂಡ ವಿಧಿಸುವ ಅವಕಾಶ ಈಗಿಲ್ಲ. ನ್ಯಾಯಾಲಯದಲ್ಲಿ ದಂಡ ಪಾವತಿ ಮಾಡಬೇಕು. ಇದರಿಂದ ಆರ್ಟಿಓ ಮತ್ತು ಟ್ರಾಫಿಕ್ ಪೋಲಿಸರು ಎಮಿಷನ್ ಸರ್ಟಿಫಿಕೇಟ್ ಇಲ್ಲದ ವಾಹನಗಳಿಗೆ ತಪಾಸಣೆಯನ್ನು ಮಾಡುವುದಿಲ್ಲ ಮತ್ತು ದಂಡ ವಿಧಿಸುತ್ತಿಲ್ಲ. ಹೀಗಾಗಿ ನಗರದಲ್ಲಿ ವಿಪರೀತವಾಗಿ ವಾಯುಮಾಲಿನ್ಯ ಹೆಚ್ಚಾಗುತ್ತಿದೆ.
ಬೆಂಗಳೂರಿನ ಸಾಕಷ್ಟು ಬಸ್, ಲಾರಿ, ಕ್ಯಾಬ್, ಆಟೋಗಳಲ್ಲಿ ಕಪ್ಪು ಬಣ್ಣದ ಹೊಗೆ ಬರುತ್ತಿದೆ. ಈ ಹಿಂದೆ ಟ್ರಾಫಿಕ್ ಪೋಲಿಸರು ಮತ್ತು ಆರ್ಟಿಓ ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದರು. ಇದರಿಂದ ವಾಹನ ಮಾಲೀಕರು ಎಮಿಷನ್ ಸರ್ಟಿಫಿಕೇಟ್ ಮಾಡಿಸಿಕೊಳ್ಳುತ್ತಿದ್ದರು. ಯಾವ ಯಾವ ವಾಹನದಿಂದ ಎಷ್ಟು ಪ್ರಮಾಣದಲ್ಲಿ ವಾಯುಮಾಲಿನ್ಯ ಆಗ್ತಿದೆ ಎಂಬುದು ಗೊತ್ತಾಗುತ್ತಿತ್ತು. ಆಗ ನಗರದಲ್ಲಿ ವಾಯು ಮಾಲಿನ್ಯ ಪ್ರಮಾಣ ಕಡಿಮೆ ಇತ್ತು. ಈಗ ತಪಾಸಣೆಯನ್ನು ನಿಲ್ಲಿಸಿದ ಕಾರಣ, ನಗರದ ಎಲ್ಲಾ ವಾಹನಗಳಲ್ಲಿ ಕಪ್ಪು ಬಣ್ಣದ ಹೊಗೆ ಸೂಸಿಕೊಂಡು ವಾಹನಗಳು ಸಂಚಾರ ಮಾಡುತ್ತಿವೆ.
ಇದನ್ನೂ ಓದಿ: ಡೆಂಗ್ಯೂ ಜತೆಗೆ ಬೆಂಗಳೂರಿಗೆ ಜಿಕಾ ವೈರಸ್, ಮಂಕಿಪಾಕ್ಸ್ ಭೀತಿ: ವೈದ್ಯರು ನೀಡಿರುವ ಎಚ್ಚರಿಗಳೇನು? ಇಲ್ಲಿದೆ ವಿವರ
ಒಟ್ಟಿನಲ್ಲಿ, ಟ್ರಾಫಿಕ್ ಪೋಲಿಸರು ಮತ್ತು ಆರ್ಟಿಓ ಅಧಿಕಾರಿಗಳು ಇನ್ನಾದರೂ ಎಮಿಷನ್ ಸರ್ಟಿಫಿಕೇಟ್ ಇಲ್ಲದ ವಾಹನಗಳ ಮಾಲೀಕರಿಗೆ ದಂಡ ಹಾಕಲು ಶುರು ಮಾಡಿದರೆ ನಗರದಲ್ಲಿ ವಾಯುಮಾಲಿನ್ಯದ ಪ್ರಮಾಣ ತುಸುವಾದರೂ ಕಡಿಮೆ ಆಗಬಹುದು. ಇಲ್ಲಾಂದ್ರೆ ಜನರು ಉಸಿರಾಡಲು ಕಷ್ಟಪಡಬೇಕಾಗುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ