Air Quality: ವಾಯುಮಾಲಿನ್ಯ ಹೆಚ್ಚಿಸಿದ ದೀಪಾವಳಿ ಸಂಭ್ರಮ: ಬೆಂಗಳೂರಿನ ಸಿಲ್ಕ್​ಬೋರ್ಡ್​ನಲ್ಲಿ ಆತಂಕಕಾರಿ ಮಟ್ಟಕ್ಕೆ ಕುಸಿದ ವಾಯು ಗುಣಮಟ್ಟ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 25, 2022 | 9:10 AM

ಬೆಂಗಳೂರಿನ ಬಹುತೇಕ ವಾಯು ಸರ್ವೇಕ್ಷಣಾ ಕೇಂದ್ರಗಳಲ್ಲಿ ವಾಯು ಗುಣಮಟ್ಟವು ಸಾಧಾರಣದಿಂದ ತೃಪ್ತಿಕರ ಎಂದು ದಾಖಲಾಗಿದೆ. ಆದರೆ ಸಿಲ್ಕ್​ಬೋರ್ಡ್​ ಕೇಂದ್ರದಲ್ಲಿ ಮಾತ್ರ ಕಳಪೆ ಮಟ್ಟಕ್ಕೆ ಕುಸಿದಿದೆ.

Air Quality: ವಾಯುಮಾಲಿನ್ಯ ಹೆಚ್ಚಿಸಿದ ದೀಪಾವಳಿ ಸಂಭ್ರಮ: ಬೆಂಗಳೂರಿನ ಸಿಲ್ಕ್​ಬೋರ್ಡ್​ನಲ್ಲಿ ಆತಂಕಕಾರಿ ಮಟ್ಟಕ್ಕೆ ಕುಸಿದ ವಾಯು ಗುಣಮಟ್ಟ
ಪ್ರತಿವರ್ಷ ಚಳಿಗಾಲದಲ್ಲಿ ದೆಹಲಿಯ ವಾಯು ಗುಣಮಟ್ಟ ಕಡಿಮೆಯಾಗುತ್ತದೆ.
Follow us on

ಬೆಂಗಳೂರು: ಪ್ರತಿವರ್ಷ ಚಳಿಗಾಲದಲ್ಲಿ ಉಸಿರಾಟ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುವುದು ವಾಡಿಕೆ. ದೀಪಾವಳಿ ಪಟಾಕಿಗಳು, ಉತ್ತರ ಭಾರತದಲ್ಲಿ ಹೊಲಗಳಲ್ಲಿ ಉಳಿದ ಕೃಷಿ ತ್ಯಾಜ್ಯಗಳನ್ನು ಸುಡುವ ಪ್ರಕ್ರಿಯೆ, ಚಳಿ ಮತ್ತು ಹೊಗೆಯಿಂದ ರೂಪುಗೊಳ್ಳುವ ಹೊಂಜು ಇದಕ್ಕೆ ಮುಖ್ಯ ಕಾರಣ. ಈ ವರ್ಷ ಸುಪ್ರೀಂಕೋರ್ಟ್​ ಪಟಾಕಿಗಳಿಗೆ ನಿರ್ಬಂಧ ಹೇರಿದೆ. ನಿರ್ಬಂಧ ಪ್ರಶ್ನಿಸುವ ಅರ್ಜಿಯನ್ನು ವಿಚಾರಣೆಗೂ ಅಂಗೀಕರಿಸಲಿಲ್ಲ. ‘ಜನರು ಉತ್ತಮ ಗಾಳಿ ಸೇವಿಸಲಿ’ ಎನ್ನುವುದು ಸುಪ್ರೀಂಕೋರ್ಟ್​ ನಿಲುವಾಗಿತ್ತು. ಆದರೆ ಸುಪ್ರೀಂಕೋರ್ಟ್​ ತೀರ್ಪನ್ನು ಜಾರಿಗೊಳಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ. ಹೀಗಾಗಿಯೇ ರಾಷ್ಟ್ರ ರಾಜಧಾನಿ ದೆಹಲಿ ಮತ್ತು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ ಕುಸಿದಿದೆ.

ಕಳೆದ ವರ್ಷ ಪಟಾಕಿ ಬಳಕೆ ಕುರಿತು ಸುಪ್ರೀಂಕೋರ್ಟ್​ ಸುದೀರ್ಘ ವಿಚಾರಣೆ ನಡೆಸಿತ್ತು. ದೆಹಲಿಯಲ್ಲಿ ಪ್ರತಿವರ್ಷ ಇದೇ ಅವಧಿಯಲ್ಲಿ ವಾಯು ಗುಣಮಟ್ಟ ಕುಸಿಯುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ನ್ಯಾಯಮೂರ್ತಿಗಳು ಕೇಂದ್ರ ಸರ್ಕಾರ ಮತ್ತು ಸಂಬಂಧಿಸಿದ ಇತರ ರಾಜ್ಯಗಳು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ತಾಕೀತು ಮಾಡಿತ್ತು.

ದೇಶದ ವಿವಿಧ ಮಹಾನಗರಗಳಲ್ಲಿ ಸ್ಥಾಪಿಸಿರುವ 40 ವಾಯು ಗುಣಮಟ್ಟ ಪರಿವೀಕ್ಷಣಾ ಕೇಂದ್ರಗಳಲ್ಲಿ ದಾಖಲಾದ ಮಾಲಿನ್ಯದ ಪ್ರಮಾಣದ ಬಗ್ಗೆ ರಾಷ್ಟ್ರೀಯು ವಾಯು ಗುಣಮಟ್ಟ ಸೂಚ್ಯಂಕವೂ (National Air Quality Index) ಮಾಹಿತಿ ನೀಡಿದೆ. ಈ ಪ್ರಮಾಣವು ಅತ್ಯಂತ ಕಳಪೆ (Very Poor) ಮಟ್ಟಕ್ಕೆ ಕುಸಿದಿದೆ. ವಾಯು ಗುಣಮಟ್ಟವು (Air Quality Index – AQI) 301ರಿಂದ 400ರ ನಡುವೆ ಇದ್ದರೆ ಅದನ್ನು ಕಳಪೆ ಗುಣಮಟ್ಟ ಎಂದು ವರ್ಗೀಕರಿಸಲಾಗುತ್ತದೆ. ಇಂಥ ವಾತಾವರಣದಲ್ಲಿ ಜೀವಿಸುವವರಲ್ಲಿ ಉಸಿರಾಟದ ಸಮಸ್ಯೆಗಳು ಕಾಣಿಸಿಕೊಳ್ಳಲು ಆರಂಭಿಸುತ್ತವೆ. ಒಂದು ವೇಳೆ ವಾಯು ಗುಣಮಟ್ಟವು ‘ಗಮನಾರ್ಹ ಕಳಪೆ’ (Severe Poor AQI 401-500) ಮಟ್ಟಕ್ಕೆ ಕುಸಿದರೆ ಅದು ಆರೋಗ್ಯವಂತ ಜನರ ಬದುಕಿನ ಮೇಲೆಯೂ ಕೆಟ್ಟ ಪರಿಣಾಮಗಳನ್ನು ಉಂಟು ಮಾಡುತ್ತದೆ. ಈಗಾಗಲೇ ಅನಾರೋಗ್ಯ ಪೀಡಿತರಾಗಿದ್ದರೆ ಅಂಥವರ ಪರಿಸ್ಥಿತಿ ಮತ್ತಷ್ಟು ವಿಷಮಿಸುತ್ತದೆ.

ದೀಪಾವಳಿ ಸಂದರ್ಭದಲ್ಲಿಯೇ ದೆಹಲಿಯು ಏಷ್ಯಾದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಿಂದ ಹೊರಗೆ ಬಂದಿತು. ‘ಈ ಸಾಧನೆ ಮಾಡಲು ತುಂಬಾ ಶ್ರಮಪಡಬೇಕಾಯಿತು. ಕೆಲವರು ನಾವೊಂದು ಯುದ್ಧ ಗೆದ್ದಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ ಖಂಡಿತ ಇದರಿಂದ ನನಗೆ ತೃಪ್ತಿ ಸಿಕ್ಕಿಲ್ಲ. ಈಗಷ್ಟೇ ನಾವು ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಿಂದ ಹೊರಗೆ ಬಂದಿದ್ದೇವೆ. ನಾವು ಸರಿಯಾದ ಹಾದಿಯಲ್ಲಿದ್ದೇವೆ ಎನ್ನುವುದು ನಿಜ. ಇದೇ ಹಾದಿಯಲ್ಲಿ ಮುನ್ನಡೆದು ವಿಶ್ವದ ಮಾಲಿನ್ಯ ರಹಿತ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆಯಬೇಕಿದೆ’ ಎಂದು ಕೇಜ್ರಿವಾಲ್ ಹೇಳಿದ್ದರು.

ವಾಯು ಗುಣಮಟ್ಟ ಸೂಚ್ಯಂಕದ ವಿವರ

ವಾಯು ಗುಣಮಟ್ಟದ ಬಗ್ಗೆ ಸಿಪಿಸಿಬಿ ವೆಬ್​ಸೈಟ್​ನಲ್ಲಿ ದಾಖಲಾಗಿರುವ ಮಾಹಿತಿ ಹೀಗಿದೆ. ದೆಹಲಿ ಸೇರಿದಂತೆ ದೇಶದ ವಿವಿಧ ನಗರಗಳೊಂದಿಗೆ ಕರ್ನಾಟಕದ ರಾಜಧಾನಿ ಬೆಂಗಳೂರನ್ನು ಹೀಗೆ ಹೋಲಿಸಬಹುದು.

1) ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನ ಬಹುತೇಕ ವಾಯು ಸರ್ವೇಕ್ಷಣಾ ಕೇಂದ್ರಗಳಲ್ಲಿ ವಾಯು ಗುಣಮಟ್ಟವು ಸಾಧಾರಣದಿಂದ ತೃಪ್ತಿಕರ ಎಂದು ದಾಖಲಾಗಿದೆ. ಆದರೆ ಸಿಲ್ಕ್​ಬೋರ್ಡ್​ ಕೇಂದ್ರದಲ್ಲಿ ಮಾತ್ರ ಕಳಪೆ ಮಟ್ಟಕ್ಕೆ ಕುಸಿದಿದೆ.

2) ದೆಹಲಿ: ದೆಹಲಿಯಲ್ಲಿ ವಾಯು ಮಾಲಿನ್ಯ ಪ್ರಮಾಣವು ಮತ್ತಷ್ಟು ಹೆಚ್ಚಾಗಿದೆ. ಆನಂದ್ ವಿಹಾರದಲ್ಲಿ ವಾಯು ಗುಣಮಟ್ಟವು 379 (ಕಳಪೆ) ದಾಖಲಾಗಿದೆ. ಸರಾಸರಿ ವಾಯು ಗುಣಮಟ್ಟವು 323 ಇದೆ.

3) ಮುಂಬೈ: ಪಟಾಕಿ ಹೊಡೆಯುವುದು ಹೆಚ್ಚಾಗಿರುವುದರಿಂದ ಭಾರತದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ವಾಯು ಮಾಲಿನ್ಯ ಗುಣಮಟ್ಟವು ಅಪಾಯಕಾರಿ ಮಟ್ಟ ಮುಟ್ಟಿದೆ. ಮುಂಬೈನ ಬಹುತೇಕ ಕೇಂದ್ರಗಳಲ್ಲಿ ವಾಯುಗುಣಮಟ್ಟವು 200ಕ್ಕಿಂತಲೂ ಕಡಿಮೆ ದಾಖಲಾಗಿದೆ.

4) ಚೆನ್ನೈ: ತಮಿಳುನಾಡು ರಾಜಧಾನಿ ಚೆನ್ನೈ ನಗರದಲ್ಲಿಯೂ ವಾಯು ಗುಣಮಟ್ಟವು ಕುಸಿದಿದೆ. ಬಹುತೇಕ ಕೇಂದ್ರಗಳಲ್ಲಿ ವಾಯುಗುಣಮಟ್ಟವು ಕಳಪೆಯಿಂದ ಸಮಾಧಾನಕರ ವರ್ಗಗಳಲ್ಲಿ ದಾಖಲಾಗಿದೆ.

5) ಕೊಲ್ಕತ್ತಾ: ಪೂರ್ವ ಭಾರತದ ಪ್ರಮುಖ ಮಹಾನಗರ ಮತ್ತು ಅತಿಹೆಚ್ಚು ಜನಸಂಖ್ಯೆ ಹೊಂದಿರುವ ನಗರವಾಗಿರುವ ಕೊಲ್ಕತ್ತಾದಲ್ಲಿ ವಾಯುಗುಣಮಟ್ಟವು ಉತ್ತಮ ಎಂದು ದಾಖಲಾಗಿದೆ. ಇದು ಸಮಾಧಾನಕರ ವಿದ್ಯಮಾನವಾಗಿದೆ.

Published On - 9:10 am, Tue, 25 October 22