ಸಾಗರದಲ್ಲಿ ಭದ್ರತೆಯನ್ನು ಬಲಪಡಿಸುವ ಅಗತ್ಯವಿದೆ: ಕೇಂದ್ರ ಗೃಹ ಸಚಿವ ಅಮಿತ್ ಶಾ
2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿಯನ್ನು ಹೊಂದಿದ್ದೇವೆ ಮತ್ತು 2025 ರಲ್ಲಿ ಐದು ಟ್ರಿಲಿಯನ್ (USD) ಆರ್ಥಿಕತೆಯನ್ನು ಹೊಂದುವ ಗುರಿ ಇಟ್ಟುಕೊಂಡಿದ್ದೇವೆ. ಈ ಗುರಿಗಳನ್ನು ಸಾಧಿಸಲು ಮಾದಕವಸ್ತು ಮುಕ್ತ ಸಮಾಜದ ನಿರ್ಮಾಣ ಅಗತ್ಯವಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
ಬೆಂಗಳೂರು: ಮಾದಕ ದ್ರವ್ಯ ನಿಯಂತ್ರಣಕ್ಕೆ ಕೇವಲ ಕೇಂದ್ರ ಸರ್ಕಾರ ಮಾತ್ರವಲ್ಲದೆ, ರಾಜ್ಯಗಳು ಮತ್ತು ನಾಗರಿಕರೂ ಹೋರಾಟ ಮಾಡಬೇಕಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ. ‘ಮಾದಕ ವಸ್ತು ಕಳ್ಳಸಾಗಣೆ ಮತ್ತು ರಾಷ್ಟ್ರೀಯ ಭದ್ರತೆ’ ಕುರಿತು ಪ್ರಾದೇಶಿಕ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ಕನಿಷ್ಠ 60-70 ಪ್ರತಿಶತದಷ್ಟು ಮಾದಕವಸ್ತು ಕಳ್ಳಸಾಗಣೆ (Drug trafficking) ಸಮುದ್ರ ಮಾರ್ಗದ ಮೂಲಕ ನಡೆಯುತ್ತದೆ. ಹೆಚ್ಚಿನ ಮಾದಕ ದ್ರವ್ಯಗಳನ್ನು ಪಾಕಿಸ್ತಾನಕ್ಕೆ (Pakistan) ರವಾನಿಸಲಾಗುತ್ತದೆ ಮತ್ತು ಇರಾನ್ ಮೂಲಕ ಶ್ರೀಲಂಕಾ ಮತ್ತು ಆಫ್ರಿಕಾಕ್ಕೆ ಹೋಗುತ್ತಿದೆ. ಹೀಗಾಗಿ ಸಾಗರದಲ್ಲಿ ಭದ್ರತೆಯನ್ನು ಬಲಪಡಿಸುವ ಅಗತ್ಯವಿದೆ ಎಂದು ಗೃಹಸಚಿವರು ಹೇಳಿದರು.
ಮಾದಕ ವ್ಯಸನವನ್ನು ನಿಯಂತ್ರಿಸದಿದ್ದರೆ ಅದು ದೇಹದಲ್ಲಿ ಗುಣಪಡಿಸಲಾಗದ ಹುಣ್ಣಾಗಿ ಪರಿಣಮಿಸುತ್ತದೆ. ಮಾದಕವಸ್ತು ಕಳ್ಳಸಾಗಣೆಯಲ್ಲಿ ತೊಡಗಿರುವವರನ್ನು ಹಾಗೇ ಬಿಡಬಾರದು. ದೊಡ್ಡ ಜಾಲವನ್ನು ಹಿಡಿದಾಗ ಅದರಡಿ ಇರುವ ಸಣ್ಣಪುಟ್ಟ ಜಾಲಗಳನ್ನೂ ತನಿಖೆ ನಡೆಸಬೇಕು. ಅಂದರೆ ನಾವು ಮಾದಕ ವ್ಯಸನಿಯನ್ನು ಹಿಡಿದಾಗ, ಅವುಗಳನ್ನು ಸರಬರಾಜು ಮಾಡಿದವರ ಬಗ್ಗೆಯೂ ತನಿಖೆ ನಡೆಸಬೇಕಾಗುತ್ತದೆ ಎಂದು ಅಮಿತ್ ಶಾ ಹೇಳಿದರು.
ನಾವು ಮಾದಕ ದ್ರವ್ಯ ಮುಕ್ತ ಭಾರತದ ಗುರಿಯನ್ನು ಹೊಂದಿದ್ದೇವೆ. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿಯನ್ನು ಹೊಂದಿದ್ದೇವೆ ಮತ್ತು 2025 ರಲ್ಲಿ ಐದು ಟ್ರಿಲಿಯನ್ (USD) ಆರ್ಥಿಕತೆಯನ್ನು ಹೊಂದುವ ಗುರಿ ಇಟ್ಟುಕೊಂಡಿದ್ದೇವೆ. ಈ ಗುರಿಗಳನ್ನು ಸಾಧಿಸಲು ಮಾದಕವಸ್ತು ಮುಕ್ತ ಸಮಾಜದ ನಿರ್ಮಾಣ ಅಗತ್ಯವಾಗಿದೆ. ಇದಕ್ಕೆ ಎಲ್ಲ ಸರಕಾರಗಳು ಕೈಜೋಡಿಸಬೇಕು. ಡ್ರಗ್ಸ್ ಪಿಡುಗು ನಿರ್ಮೂಲನೆಯನ್ನು ನಾವು ಜನರ ಹೋರಾಟವನ್ನಾಗಿ ಮಾಡಬೇಕಾಗಿದೆ ಎಂದು ಶಾ ಹೇಳಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಫಲಾನುಭವಿಗಳ ಸಮಾವೇಶ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಅಮಿತ್ ಶಾ
ಕಂದಾಯ, ಸಮಾಜ ಕಲ್ಯಾಣ, ಶಿಕ್ಷಣ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ಎಲ್ಲಾ ಸರ್ಕಾರಿ ಇಲಾಖೆಗಳು ಮಾದಕ ವಸ್ತುಗಳ ವಿರುದ್ಧದ ಅಭಿಯಾನದಲ್ಲಿ ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು. ಮಾದಕ ದ್ರವ್ಯ ಪತ್ತೆ, ಜಾಲ ನಾಶ, ಅಪರಾಧಿಗಳ ಬಂಧನ ಮತ್ತು ವ್ಯಸನಿಗಳ ಪುನರ್ವಸತಿಯು ಮಾದಕ ವಸ್ತುಗಳ ವಿರುದ್ಧದ ಹೋರಾಟದ ನಾಲ್ಕು ಆಧಾರಗಳಾಗಿವೆ ಎಂದು ಅಮಿತ್ ಶಾ ಅವರು ಹೇಳಿದರು.
ಅಪರಾಧಿಗಳ ಬಂಧನವನ್ನು ಅತ್ಯಂತ ಲಘುವಾಗಿ ತೆಗೆದುಕೊಳ್ಳಲಾಗಿದೆ ಎಂದು ಹೇಳಲು ವಿಷಾದಿಸುತ್ತೇನೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಡ್ರಗ್ ಪ್ರಕರಣಗಳನ್ನು ಪ್ರತ್ಯೇಕವಾಗಿ ತೆಗೆದುಕೊಳ್ಳಬಾರದು. ಅಂತಹ ಪ್ರಕರಣಗಳನ್ನು ಸೂಕ್ಷ್ಮವಾಗಿ ನಿಭಾಯಿಸಬೇಕು. ಡ್ರಗ್ಸ್ ಪತ್ತೆ, ಜಾಲಗಳ ನಾಶ, ಅಪರಾಧಿಗಳ ಬಂಧನ ಮತ್ತು ವ್ಯಸನಿಗಳಿಗೆ ಪುನರ್ವಸತಿ ಕಲ್ಪಿಸುವ ಮೂಲಕ ನೀವು ಸಾಮೂಹಿಕವಾಗಿ ಹೋರಾಡಬೇಕು ಎಂದು ಸಚಿವರು ಸೂಚಿಸಿದರು. ಎನ್‌ಡಿಪಿಎಸ್ (ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್) ಕಾಯ್ದೆಯಲ್ಲಿರುವ ನಿಬಂಧನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿಲ್ಲ ಎಂದು ಹೇಳಿದ ಅಮಿತ್ ಶಾ, ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ