ಬೆಂಗಳೂರಿಗಿಂದು ಪ್ರತಿಭಟನೆ ಶಾಕ್.. ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ

ರಾಜಧಾನಿಯಲ್ಲಿ ಪ್ರತಿಭಟನೆಗಳ ಪರ್ವ ಮುಗಿಯುವಂತೆ ಕಾಣುತ್ತಿಲ್ಲ. ಸಾಲು ಸಾಲು ಪ್ರತಿಭಟನೆಗಳಿಂದ ಕಂಗೆಟ್ಟಿದ್ದ ಸಿಟಿ ಸವಾರರಿಗೆ ಇಂದು ಮತ್ತೆ ಪ್ರತಿಭಟನೆಯ ಬಿಸಿ ತಟ್ಟಿಲಿದೆ. ಇಂದೂ ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆ ನಡೆಯಲಿದ್ದು, ಹೊರಗೆ ಕಾಲಿಡುವ ಮುನ್ನ ಎಚ್ಚರ.

  • TV9 Web Team
  • Published On - 7:32 AM, 4 Mar 2021
ಬೆಂಗಳೂರಿಗಿಂದು ಪ್ರತಿಭಟನೆ ಶಾಕ್.. ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯ ರಾಜಧಾನಿ ಇಂದು ಮತ್ತೊಮ್ಮೆ ನಡುಗಿ ಹೋಗಲಿದೆ. ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ಆಕ್ರೋಶದ ಕಿಚ್ಚು ಹಬ್ಬಲಿದೆ. ಸಿಲಿಕಾನ್ ಸಿಟಿ ಪ್ರತಿಭಟನೆಯ ಬೆಂಕಿಗೆ ಬೆಂದು ಹೋಗಲಿದೆ. ವೇತನ ಹೆಚ್ಚಳಕ್ಕಾಗಿ, ಹಲವು ಸೌಲಭ್ಯಕ್ಕಾಗಿ ನಡೆಯೋ ಪ್ರತಿಭಟನೆಯ ಕೂಗು ಬೆಂಗಳೂರನ್ನ ಕಂಗಾಲು ಮಾಡಲಿದೆ. ಪ್ರತಿಭಟನೆಯಿಂದ ಉಂಟಾಗುವ ಟ್ರಾಫಿಕ್ ಬಿಸಿಗೆ ಬೆಂಗಳೂರಿನ ಜನ ಕಂಗೆಡಲಿದ್ದಾರೆ. ಆ ಮಟ್ಟಿಗೆ ಇಂದು ರಾಜ್ಯ ರಾಜಧಾನಿಯಲ್ಲಿ ಪ್ರತಿಭಟನೆಯ ಕಹಳೆ ಮೊಳಗಲಿದೆ.

ಇಂದು ರಾಜ್ಯರಾಜಧಾನಿಯಲ್ಲಿ ನಡೆಯುತ್ತೆ ದೊಡ್ಡ ಪ್ರತಿಭಟನೆ
ಸೋಮವಾರ ರಾಜ್ಯದ ಬಜೆಟ್‌ನ್ನು ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಂಡಿಸಲಿದ್ದಾರೆ. ಆದರೆ ಈ ಬಾರಿಯ ಬಜೆಟ್‌ನಲ್ಲಿ ನಮಗೆ ನ್ಯಾಯ ಒದಗಿಸಲೇಬೇಕೆಂದು ಸಿಐಟಿಯು ಸಂಘಟನೆಯ 131 ಇಲಾಖೆಯಲ್ಲಿ ಕೆಲಸ ಮಾಡುವ ಕೆಲಸಗಾರರು ವಿವಿಧ ಬೇಡಿಕೆಗಳೊಂದಿಗೆ ಬೆಂಗಳೂರಗೆ ಕಾಲಿಡಲಿದ್ದಾರೆ. ರಾಜ್ಯ ಸರ್ಕಾರಕ್ಕೆ ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರ ಹಾಗೂ ಕಟ್ಟಡ ಕಾರ್ಮಿಕರು ಮತ್ತು ಸಾರಿಗೆ ನೌಕರರು ಬಿಸಿ ಮುಟ್ಟಿಸಲಿದ್ದಾರೆ. ಈ ಱಲಿಯಲ್ಲಿ 25 ಸಾವಿರ ಜನರು ಭಾಗಿಯಾಗುವ ಸಾಧ್ಯತೆಯಿದೆ. ಇಂದು ಬೆಳಗ್ಗೆ 11 ಗಂಟೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಬೃಹತ್ ಱಲಿ ಮಾಡಲಿದ್ದಾರೆ. ಮೇಲಿಂದ ಮೇಲಿಂದ ರಾಜಧಾನಿಯಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಇಂದು ಮತ್ತೆ CITU ಯಿಂದ ಬೃಹತ್ ಱಲಿ ಮಾಡಲಿದ್ದಾರೆ.

ಬೇಡಿಕೆಗಳೇನು?
ಸೇವಾ ಹಿರಿತನದ ಆಧಾರದಲ್ಲಿ ಗೌರವಧನ ಹೆಚ್ಚಳ ಮಾಡಬೇಕು. ಹಾಗೇ ಉಚಿತ ವೈದ್ಯಕೀಯ ಸೌಲಭ್ಯ ಅಥವಾ ಇಎಸ್‌ಐ ಸೌಲಭ್ಯ ನೀಡಬೇಕು. LKG, UKGಯನ್ನು ಅಂಗನವಾಡಿಯಲ್ಲೇ ಆರಂಭಿಸಬೇಕು. ಮಿನಿ ಅಂಗನವಾಡಿಗಳನ್ನ ಉನ್ನತೀಕರಿಸುವ ಜೊತೆಗೆ ಮಿನಿ ಅಂಗನವಾಡಿ ಕೇಂದ್ರಗಳಿಗೆ ಸಹಾಯಕಿಯರನ್ನ ನೇಮಕಾತಿ ಮಾಡಬೇಕು. ಪಿಂಚಣಿ ಸೌಲಭ್ಯ, ಕೊವಿಡ್ 19 ರ ಪರಿಹಾರವನ್ನ ನೀಡಬೇಕು. ಖಾಯಂ ನೌಕರಿ ನೀಡಬೇಕು. ಮಾಸಿಕ 24 ಸಾವಿರ ರೂ. ಸಮಾನ ಕನಿಷ್ಠ ವೇತನ ನೀಡಬೇಕು ಸೇರಿ ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹ.

ವಿಧಾನಸೌಧಕ್ಕೆ ಮುತ್ತಿಗೆ, ವಾಹನ ಸವಾರರೇ ಹುಷಾರ್
ಇಂದು ಸಾವಿರಾರು ನೌಕರರಿಂದ ವಿಧಾನಸೌಧ ಮುತ್ತಿಗೆ ಹಾಕಲಿರುವುದರಿಂದ ಇಂದು ರಾಜಧಾನಿಗೆ ಸಾಲು ಸಾಲು ಪ್ರತಿಭಟನೆಗಳ ಬಿಸಿ ತಟ್ಟಲಿದೆ. ಇದರಿಂದ ಮೆಜೆಸ್ಟಿಕ್ ಸುತ್ತಮುತ್ತ ಸಂಚಾರ ಮಾಡುವ ವಾಹನ ಸವಾರರು ಮಾತ್ರ ಎಚ್ಚರವಾಗಿರಬೇಕು. ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಟ್ರಾಫಿಕ್ ಜಾಮ್ ಆಗುವ ಎಲ್ಲಾ ಸಾಧ್ಯತೆಗಳಿವೆ. ಸಂಚಾರ ಮಾಡುವ ವಾಹನ ಸವಾರರು ರೂಟ್ ಚೇಂಜ್‌ ಮಾಡುವುದು ಸೂಕ್ತ ಇಲ್ಲಾಂದ್ರೆ ಗಂಟೆಗಟ್ಟಲೆ ಟ್ರಾಫಿಕ್ ಜಾಮ್​ನಲ್ಲಿ ಸಿಲುಕೋದು ಗ್ಯಾರಂಟಿ.

ಎಲ್ಲಿಂದ ಎಲ್ಲಿ ತನಕ ಪ್ರತಿಭಟನೆ?
ಸಾವಿರಾರು ಸಂಖ್ಯೆಯಲ್ಲಿ ಲಗ್ಗೆಯಿಡಲಿರುವ ಪ್ರತಿಭಟನಾಕಾರರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಹೊರಟು ಸಂಗೊಳ್ಳಿ ರಾಯಣ್ಣ ಸರ್ಕಲ್ ತಲುಪಿ ಅಲ್ಲಿಂದ ರಾಯಣ್ಣ ಫ್ಲೈ ಓವರ್ ಮೇಲಿಂದ ಶೇಷಾದ್ರಿ ರೋಡ್ ಮೂಲಕ ಕೆ.ಆರ್ ಸರ್ಕಲ್ ನಿಂದ ವಿಧಾನಸೌಧ ಮುತ್ತಿಗೆ ಹಾಕಲು ಪ್ಲಾನ್ ಮಾಡಿಕೊಂಡಿದ್ದಾರೆ. ಆದರೆ ಪೋಲಿಸರು ಫ್ರೀಡಂ ಪಾರ್ಕ್ ಮುಂಭಾಗದಲೇ ರೋಡ್​ಗೆ ಅಡ್ಡಲಾಗಿ ಬ್ಯಾರಿಕೇಡ್​ಗಳನ್ನು ಹಾಕಿ ಪ್ರತಿಭಟನಾಕಾರರನ್ನು ತಡೆಗಟ್ಟಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಹೀಗಾಗಿ ಈ ರೋಡ್‌ನಲ್ಲಿ ಓಡಾಡುವವರಿಗೆ ಟ್ರಾಫಿಕ್ ಬಿಸಿ ತಟ್ಟಲಿದೆ.

ಒಟ್ನಲ್ಲಿ ಇಂದು ರಾಜಧಾನಿ ಬೆಂಗಳೂರಲ್ಲಿ ನೂರಾರು ಸಂಘಟನೆಯ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಲಿದ್ದಾರೆ. ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸೋದ್ರಿಂದ ಬೆಂಗಳೂರಿನ ಜನಕ್ಕೆ ಟ್ರಾಫಿಕ್ ಬಿಸಿ ತಟ್ಟೋದು ಪಕ್ಕಾ.

ಇದನ್ನೂ ಓದಿ: ಸರ್ಕಾರದ ವಿರುದ್ಧ ಅಂಗನವಾಡಿ ಕಾರ್ಯಕರ್ತೆಯರು ಗರಂ; ಇಂದಿನಿಂದ ಅಹೋರಾತ್ರಿ ಪ್ರತಿಭಟನೆಗೆ ನಿರ್ಧಾರ