ಬೆಂಗಳೂರು: ಕ್ಯಾನ್ಸರ್ ನಿಯಂತ್ರಣಕ್ಕೆ ಹೊಸ ಯೋಜನೆಗೆ ಮುಂದಾದ ಆರೋಗ್ಯ ಇಲಾಖೆಗೆ ಆರಂಭದಲ್ಲೇ ವಿಘ್ನ
ಬೆಂಗಳೂರಿನಲ್ಲಿ ಕ್ಯಾನ್ಸರ್ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿರುವುದರಿಂದ, ಸರ್ಕಾರವು ಉಚಿತ ಡೇಕೇರ್ ಕೀಮೋಥೆರಪಿ ಆರಂಭಿಸಲು ಮುಂದಾಗಿದೆ. ಆದರೆ, ಅಂಕಾಲಜಿಸ್ಟ್ಗಳ ತೀವ್ರ ಕೊರತೆಯಿಂದಾಗಿ ಈ ಯೋಜನೆಗೆ ಅಡ್ಡಿಯಾಗಿದೆ. ಇದರಿಂದಾಗಿ ರೋಗಿಗಳು ತೊಂದರೆ ಅನುಭವಿಸುವಂತಾಗಿದೆ.
ಬೆಂಗಳೂರು, ಡಿಸೆಂಬರ್ 9: ಕ್ಯಾನ್ಸರ್ ಹೆಸರು ಕೇಳಿದರೆ ಸಾಕು, ಎಲ್ಲರೂ ಬೆಚ್ಚಿ ಬೀಳುವುದು ಸಹಜ. ವಯಸ್ಕರು, ವೃದ್ಧರು, ಪುಟ್ಟಪುಟ್ಟ ಮಕ್ಕಳು ಎಂಬ ಭೇದಭಾವವಿಲ್ಲದೇ ಪ್ರತಿ ವರ್ಷವೂ ಸಾವಿರಾರು ಮಂದಿ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದು, ಅದರಲ್ಲೂ ಬೆಂಗಳೂರಂತೂ ಕ್ಯಾನ್ಸರ್ ಹಾಟ್‌ಸ್ಪಾಟ್ ಆಗಿ ಬದಲಾಗುತ್ತಿದೆ. ಹೀಗಾಗಿ ರಾಜಧಾನಿ ಸೇರಿದಂತೆ ಕರ್ನಾಟಕದಾದ್ಯಂತ ಕ್ಯಾನ್ಸರ್ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಹೊಸ ಯೋಜನೆಗೆ ಮುಂದಾಗಿದ್ದು, ದುರದೃಷ್ಟವಶಾತ್ ಆರಂಭದಲ್ಲೇ ವಿಘ್ನ ಎದುರಾಗಿದೆ.
ಕರ್ನಾಟಕದಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್ ಪ್ರಕರಣ
ಪ್ರತಿ ವರ್ಷ ಭಾರತದಲ್ಲಿ ಸುಮಾರು 14 ಲಕ್ಷ ಹೊಸ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿವೆ. ಕರ್ನಾಟಕದಲ್ಲಿ ಕಳೆದ ವರ್ಷ 86563 ಹೊಸ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಪ್ರಮುಖವಾಗಿ, ಮಹಿಳೆಯರೇ ಹೆಚ್ಚಾಗಿ ಮಾರಕ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಕಳೆದ ವರ್ಷ ಬರೋಬ್ಬರಿ 47,957 ಮಹಿಳೆಯರಲ್ಲಿ ಹಾಗೂ 38,604 ಪುರುಷರಲ್ಲಿ ಕ್ಯಾನ್ಸರ್ ಪತ್ತೆಯಾಗಿದೆ. ಇದರಲ್ಲಿ ಬೆಚ್ಚಿಬೀಳಿಸುವ ಸಂಗತಿಯೆಂದರೆ, ಬೆಂಗಳೂರಿನಲ್ಲೇ ಅತಿ ಹೆಚ್ಚು ಕ್ಯಾನ್ಸರ್ ಪ್ರಕರಣಗಳು ವರದಿಯಾಗಿವೆ. ಅಂದಾಜು 14,630 ಪ್ರಕರಣಗಳು ವಾರ್ಷಿಕವಾಗಿ ದಾಖಲಾಗುತ್ತಿವೆ.
ಹೀಗಾಗಿ ಕ್ಯಾನ್ಸರ್ ಸಾವಿನ ಪ್ರಕರಣಗಳ ನಿಯಂತ್ರಣಕ್ಕೆ ಸಿಎಂ ಸಿದ್ದರಾಮಯ್ಯ ಕೂಡಾ ಸೂಚನೆ ನೀಡಿದ್ದು, ಹೀಗಾಗಿ ಬೆಂಗಳೂರಿನಲ್ಲಿ ಆರೋಗ್ಯ ಇಲಾಖೆ ಉಚಿತ ಕಿಮೋ ಥೆರಪಿ ನೀಡಲು ಮುಂದಾಗಿತ್ತು. ಆದರೆ, ಅದಕ್ಕೂ ಸಮಸ್ಯೆ ಎದುರಾಗಿದೆ.
ಸದ್ಯ ಕಿದ್ವಾಯಿ ಹಾಗೂ ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ ಮಾತ್ರ ಕೀಮೋ ಥೆರಪಿ ಮಾಡಲಾಗುತ್ತಿದ್ದು, ಈಗ ಆರೋಗ್ಯ ಇಲಾಖೆಯು ಮಲ್ಲೇಶ್ವರಂ ಕೆಸಿ ಜನರಲ್ ಆಸ್ಪತ್ರೆ, ಸಿವಿ ರಾಮನ್ ನಗರ ಆಸ್ಪತ್ರೆ, ಜಯನಗರ ಸಾರ್ವಜನಿಕರ ಆಸ್ಪತ್ರೆಯಲ್ಲಿ ಡೇ ಕೇರ್ ಕಿಮೋ ಥೆರಪಿ ಶುರುಮಾಡಲು ಮುಂದಾಗಿದೆ. ಆದರೆ, ಇಲಾಖೆಯ ಯೋಜನೆಗೆ ಆರಂಭದಲ್ಲೇ ವಿಘ್ನ ಎದುರಾಗಿದೆ.
ಕಿಮೋ ಥೆರಪಿಗೆ ತಜ್ಞ ವೈದ್ಯರ ಕೊರತೆ
ಬೆಂಗಳೂರನ ಎಲ್ಲಾ ಆಸ್ಪತ್ರೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಆಂಕಾಲಜಿಸ್ಟ್ಗಳೇ ಇಲ್ಲ. ಕಿಮೋ ಥೆರಪಿ ನೀಡಲು ಆಂಕಾಲಜಿಸ್ಟ್ಗಳ ಅವಶ್ಯಕತೆ ಇದೆ. ಕಿದ್ವಾಯಿಯಲ್ಲಿಯೇ 4 ಮೆಡಿಕಲ್ ಅಂಕಾಲಜಿಸ್ಟ್ ಸ್ಪೆಷಲಿಸ್ಟ್ ಕೊರತೆ ಇದೆ. ಕೆಸಿ ಜನರಲ್ ಸೇರಿದಂತೆ ಅನೇಕ ಕಡೆಗಳಲ್ಲಿ ವೈದ್ಯರೇ ಸಿಗುತ್ತಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಆಂಕಾಲಜಿಸ್ಟ್ಗಳಿಗೆ ಬೇಡಿಕೆ ಹೆಚ್ಚಿದ ಕಾರಣ ಇದೀಗ ಆರೋಗ್ಯ ಇಲಾಖೆಗೆ ಆತಂಕ ಶುರುವಾಗಿದೆ.
ಡೇಕೇರ್ ಕೀಮೋ ಥೆರಪಿ ಆರಂಭ ಮಾಡಿ, ಚಿಕಿತ್ಸೆ ನೀಡಲು ವೈದ್ಯರೇ ಇಲ್ಲದಂತಾಗಿದೆ. ಸರ್ಕಾರಿ ಸೇರಿ ಖಾಸಗಿ ಆಸ್ಪತ್ರೆಗಳಲ್ಲೂ ಆಂಕಾಲಜಿಸ್ಟ್ಗಳ ಕೊರತೆ ಎದುರಾಗಿದೆ ಕ್ಯಾನ್ಸರ್ ರೋಗಿಗಳಿಗೆ ಎಲ್ಲಿಲ್ಲದ ಸಮಸ್ಯೆಯಾಗಿದೆ. ಹೀಗಾಗಿ ಆರೋಗ್ಯ ಇಲಾಖೆ ಹೊಸ ಎಸ್ಒಪಿ ಜಾರಿಗೊಳಿಸಲು ಚಿಂತನೆ ನಡೆಸುತ್ತಿದೆ ಎಂದು ಆರೋಗ್ಯ ಇಲಾಖೆ ಕಾರ್ಯದರ್ಶಿ ಹರ್ಷ ಗುಪ್ತಾ ತಿಳಿಸಿದ್ದಾರೆ.
ಇದನ್ನೂ ಓದಿ: ಪೇಪರ್ ಲೋಟದಲ್ಲಿ ಬಿಸಿ ಚಹಾ, ಕಾಫಿ ಕುಡಿಯುವವರೇ ಹಷಾರ್: ನಿಮಗೇ ಗೊತ್ತಿಲ್ಲದೇ ಹೊಟ್ಟೆ ಸೇರುತ್ತಿದೆ ಕ್ಯಾನ್ಸರ್
ಒಟ್ಟಿನಲ್ಲಿ ಬದಲಾದ ಜೀವನಶೈಲಿಯಿಂದ ಕ್ಯಾನ್ಸರ್ ವ್ಯಾಪಕವಾಗಿ ಹರಡುತ್ತಿದ್ದು. ಬೆಂಗಳೂರಿನದ್ದೇ ಸಿಂಹಪಾಲಾಗಿರುವುದು ನಿಜಕ್ಕೂ ಆತಂಕಕಾರಿಯಾಗಿದೆ. ಹೀಗಾಗಿ ಸರ್ಕಾರ ಕ್ಯಾನ್ಸರ್ ನಿಯಂತ್ರಣಕ್ಕೆ ಉಚಿತವಾಗಿ ಡೇಕೇರ್ ಕೀಮೋ ಥೆರಪಿ ಶುರು ಮಾಡಲು ಮುಂದಾಗಿದ್ದು, ಇದು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬಂದರೆ ಬಡ ಜನರಿಗೆ ಸಾಕಷ್ಟು ಅನಕೂಲವಾಗಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:59 am, Mon, 9 December 24