Bangalore Water Crisis: ಬೆಂಗಳೂರಿನಲ್ಲಿ ನಲ್ಲಿಗಳಿಗೆ ಏರಿಯೇಟರ್ ಅಳವಡಿಕೆ ಇಂದಿನಿಂದ ಆರಂಭ

ಬೆಂಗಳೂರಿನಲ್ಲಿ ನೀರಿನ ಕೊರತೆ ಹೆಚ್ಚಾಗಿರುವ ಕಾರಣ ದೊಡ್ಡ ಪ್ರಮಾಣದ ಬಳಕೆದಾರರಿಗೆ ನಲ್ಲಿಗಳಿಗೆ ಏರಿಯೇಟರ್ ಬಳಕೆ ಕಡ್ಡಾಯಗೊಳಿಸಿದ್ದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಗುರುವಾರದಿಂದ ಆ ನಿಟ್ಟಿನಲ್ಲಿ ಕಾರ್ಯಾಚರಣೆ ಶುರು ಮಾಡಿದೆ. ನಗರದ ವಾಣಿಜ್ಯ ಸಂಸ್ಥೆಗಳು, ಹೋಟೆಲ್, ರೆಸ್ಟೋರೆಂಟ್ ಇತ್ಯಾದಿ ಪ್ರದೇಶಗಳಲ್ಲಿ ನಲ್ಲಿಗಳಿಗೆ ಏರಿಯೇಟರ್ ಅಳವಡಿಕೆ ಕಾರ್ಯ ಆರಂಭವಾಗಿದೆ.

Bangalore Water Crisis: ಬೆಂಗಳೂರಿನಲ್ಲಿ ನಲ್ಲಿಗಳಿಗೆ ಏರಿಯೇಟರ್ ಅಳವಡಿಕೆ ಇಂದಿನಿಂದ ಆರಂಭ
ಸಾಂದರ್ಭಿಕ ಚಿತ್ರImage Credit source: iStock
Follow us
Ganapathi Sharma
|

Updated on: Mar 21, 2024 | 10:26 AM

ಬೆಂಗಳೂರು, ಮಾರ್ಚ್ 21: ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು (Bengaluru Water Crisis) ತೀವ್ರಗೊಂಡಿರುವ ಕಾರಣ ದೊಡ್ಡ ಪ್ರಮಾಣದ ನೀರು ಬಳಕೆದಾರರು (ವಾಣಿಜ್ಯ ಸಂಸ್ಥೆಗಳು, ಹೋಟೆಲ್, ರೆಸ್ಟೋರೆಂಟ್ ಇತ್ಯಾದಿ ಪ್ರದೇಶಗಳಲ್ಲಿ) ನಲ್ಲಿಗಳಿಗೆ ಏರಿಯೇಟರ್ ಅಳವಡಿಕೆ ಕಡ್ಡಾಯಗೊಳಿಸಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB), ಇಂದಿನಿಂದ ನಿಟ್ಟಿನಲ್ಲಿ ಕಾರ್ಯಾರಂಭ ಮಾಡಿದೆ. ನಗರದ ಕಟ್ಟಡಗಳು, ವಾಣಿಜ್ಯ ಸಂಸ್ಥೆಗಳು, ರೆಸ್ಟೊರೆಂಟ್‌ಗಳು, ಐಷಾರಾಮಿ ಹೋಟೆಲ್‌ಗಳು, ಕೈಗಾರಿಕೆಗಳು ಮತ್ತು ಇತರ ಸಾರ್ವಜನಿಕ ಪ್ರದೇಶಗಳಲ್ಲಿ ನೀರನ್ನು ಸಂರಕ್ಷಿಸುವ ಉದ್ದೇಶದಿಂದ ಏರಿಯೇಟರ್ ಅಳವಡಿಕೆ ಆರಂಭಿಸಲಾಗಿದೆ.

ನಲ್ಲಿಗಳಿಗೆ ಏರಿಯೇಟರ್ ಅಳವಡಿಕೆ ಕಡ್ಡಾಯಗೊಳಿಸಿ ಬುಧವಾರವಷ್ಟೇ ಆದೇಶ ಹೊರಡಿಸಿದ್ದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮಾರ್ಚ್​ 31ರ ಗಡುವನ್ನೂ ವಿಧಿಸಿದೆ. ಮುಂಬರುವ ಹೋಳಿ ಹಬ್ಬದ ಆಚರಣೆಯ ಸಮಯದಲ್ಲಿ ನಗರದಲ್ಲಿ ಪೂಲ್ ಡ್ಯಾನ್ಸ್ ಮತ್ತು ರೈನ್ ಡ್ಯಾನ್ಸ್​ ಮತ್ತಿತರ ಚಟುವಟಿಕೆಗಳಿಗೆ ಕಾವೇರಿ ನೀರು ಮತ್ತು ಬೋರ್‌ವೆಲ್ ನೀರಿನ ಬಳಕೆಗೆ ನಿರ್ಬಂಧ ವಿಧಿಸಿದ ಬೆನ್ನಲ್ಲೇ ಏರಿಯೇಟರ್​ ಅಳವಡಿಕೆಗೂ ಕ್ರಮ ಕೈಗೊಳ್ಳಲಾಗುತ್ತಿದೆ.

ಕಾರುಗಳನ್ನು ತೊಳೆಯುವುದು, ನಿರ್ಮಾಣ ಚಟುವಟಿಕೆಗಳು, ತೋಟಗಾರಿಕೆ, ಕಾರಂಜಿಗಳು ಮತ್ತು ಈಜುಕೊಳಗಳಲ್ಲಿ ಇತರ ಉದ್ದೇಶಗಳಿಗಾಗಿ ಕುಡಿಯಲು ಯೋಗ್ಯ ನೀರಿನ ಬಳಕೆಯ ಮೇಲೆ ಈಗಾಗಲೇ ನಿರ್ಬಂಧ ಹೇರಲಾಗಿದೆ.

ಯಾಕಾಗಿ ಏರಿಯೇಟರ್ ಅಳವಡಿಕೆ?

ಏರಿಯೇಟರ್ ಎನ್ನುವುದು ನಲ್ಲಿಗೆ ಅಳವಡಿಸುವ ಸಾಧನವಾಗಿದೆ. ಇದು ನೀರಿನ ಹರಿವನ್ನು ನಿಯಂತ್ರಿಸುತ್ತದೆ. ಇದನ್ನು ಅಳವಡಿಸುವ ಮೂಲಕ ನೀರಿನ ಹರಿವು ನಿಯಂತ್ರಣದ ಜತೆಗೆ ಬಳಕೆಯನ್ನೂ ಕಡಿಮೆ ಮಾಡಬಹುದಾಗಿದೆ. ಅಧಿಕಾರಿಗಳು ಇಂದಿನಿಂದ ಕಟ್ಟಡಗಳಲ್ಲಿ ಏರಿಯೇಟರ್​ಗಳನ್ನು ಸ್ಥಾಪಿಸಲು ಪ್ರಾರಂಭಿಸುತ್ತಿದ್ದಾರೆ ಎಂದು ಜಲ ಮಂಡಳಿ ಅಧ್ಯಕ್ಷ ವಿ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದು, ಆ ಸಾಧನದ ಪ್ರಾಮುಖ್ಯತೆಯನ್ನೂ ಒತ್ತಿ ಹೇಳಿದ್ದಾರೆ. ಏರಿಯೇಟರ್​ ಅಳವಡಿಕೆಯಿಂದ ಶೇ 60 ರಿಂದ 85 ರಷ್ಟು ನೀರನ್ನು ಉಳಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮಾರ್ಚ್ 21 ರಿಂದ 31 ರವರೆಗೆ ಸ್ವಯಂ ಇಚ್ಛೆಯಿಂದ ಏರಿಯೇಟರ್​ ಅಳವಡಿಕೆಗೆ ಅವಕಾಶ ಒದಗಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ನೀರು ಪೋಲು ತಡೆಗೆ ಜಲಮಂಡಳಿ ಪ್ಲ್ಯಾನ್: ನಲ್ಲಿಗಳಿಗೆ ಏರಿಯೇಟರ್ ಅಳವಡಿಕೆ ಕಡ್ಡಾಯ, ಮಾರ್ಚ್​ 31ರ ಗಡುವು

ಬೆಂಗಳೂರು ಮತ್ತು ಕರ್ನಾಟಕದ ಉಳಿದ ಭಾಗಗಳು ಬೇಸಿಗೆಯ ಪೂರ್ಣ ಆರಂಭಕ್ಕೂ ಮುನ್ನವೇ ತೀವ್ರ ನೀರಿನ ಕೊರತೆ ಎದುರಿಸುತ್ತಿದ್ದು, ನಗರದಾದ್ಯಂತ ಸುಮಾರು 6,900 ಬೋರ್‌ವೆಲ್‌ಗಳು ಬತ್ತಿ ಹೋಗಿವೆ. ಕಳೆದ ಮುಂಗಾರು ಹಂಗಾಮಿನಲ್ಲಿ ಕಡಿಮೆ ಮಳೆಯಾಗರುವ ಕಾರಣ ನೀರಿನ ಸಮಸ್ಯೆ ಹೆಚ್ಚಾಗಿದೆ.

ಬುಧವಾರ ಪ್ಲಂಬರ್‌ ಅಸೋಸಿಯೇಷನ್‌ ಪದಾಧಿಕಾರಿಗಳ ಸಭೆ ನಡೆಸಿದ್ದ ರಾಮ್‌ ಪ್ರಸಾತ್‌ ಮನೋಹರ್‌, ನಂತರ ನಲ್ಲಿಗಳಿಗೆ ಏರಿಯೇಟರ್ ಅಳವಡಿಸುವುದನ್ನ ಕಡ್ಡಾಯ ಮಾಡಿ ಆದೇಶ ಹೊರಡಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ