ನನಗೆ ಸಮಾಜವೇ ತಂದೆ-ತಾಯಿ, ಸಮಾಜವೇ ಗುರು: ಪಂಚಮಸಾಲಿ ಸಮಾವೇಶದಲ್ಲಿ ಬಸವ ಜಯಮೃತ್ಯುಂಜಯಶ್ರೀ

ಸರ್ಕಾರದ ನಿಲುವು ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಸಮಾವೇಶದ ಬಳಿಕ ವಿಧಾನಸೌಧ ಮುಂದೆ ಧರಣಿ ಸತ್ಯಾಗ್ರಹ ನಡೆಸುತ್ತೇವೆ. ನಾನು ಮಠ ಕಟ್ಟಿಲ್ಲ ಎಂದು ಸಮುದಾಯದವರು ಹೇಳ್ತಿದ್ದರು. ಆದರೆ ನಿಮಗಾಗಿ ಪಾದಯಾತ್ರೆ, ಹೋರಾಟ ಮಾಡಿದ್ದೇನೆ.

  • TV9 Web Team
  • Published On - 13:14 PM, 21 Feb 2021
ನನಗೆ ಸಮಾಜವೇ ತಂದೆ-ತಾಯಿ, ಸಮಾಜವೇ ಗುರು: ಪಂಚಮಸಾಲಿ ಸಮಾವೇಶದಲ್ಲಿ ಬಸವ ಜಯಮೃತ್ಯುಂಜಯಶ್ರೀ
ಬಸವ ಜಯಮೃತ್ಯುಂಜಯ ಸ್ವಾಮೀಜಿ, ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ವಚನಾನಂದ ಸ್ವಾಮೀಜಿ

ಬೆಂಗಳೂರು: ಪಾದಯಾತ್ರೆ ಆರಂಭಿಸುವಾಗ ಭಕ್ತರ ಜತೆ ಒಬ್ಬನೇ ಇದ್ದೆ. ದಾವಣಗೆರೆ ತಲುಪಿದಾಗ ವಚನಾನಂದಶ್ರೀ ಜತೆಯಾದರು. ವಿಜಯಾನಂದ ಕಾಶಪ್ಪನವರ್ ಪಂಚಮಸಾಲಿಗರ ಬಲಗೈ ಬಂಟ. ನಮ್ಮ ಪರವಾಗಿ ಸಂಪುಟ ಸಭೆಯಲ್ಲಿ ಸಚಿವರು ದನಿ ಎತ್ತಿದ್ದಾರೆ. ಅದಕ್ಕಾಗಿ ಸಚಿವರಾದ ಸಿ.ಸಿ.ಪಾಟೀಲ್ ಹಾಗೂ ಮುರುಗೇಶ್ ನಿರಾಣಿಗೆ ಅಭಿನಂದನೆ ಸಲ್ಲಿಸುತ್ತೇನೆ. ಹೋರಾಟಕ್ಕೆ ಕೊಪ್ಪಳ ಪಂಚಮಸಾಲಿಗರ ಕೊಡುಗೆ ಹೆಚ್ಚಿದೆ. ಪಾದಯಾತ್ರೆಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು ಎಂದು ಬಸವ ಜಯಮೃತ್ಯುಂಜಯಶ್ರೀ ಸ್ವಾಮೀಜಿ ಮಾತನಾಡಿದ್ದಾರೆ.

ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿಗಾಗಿ ಬೆಂಗಳೂರು ಅರಮನೆ ಮೈದಾನದಲ್ಲಿ ಇಂದು (ಫೆ.21) ಬೃಹತ್ ಸಮಾವೇಶ ನಡೆಯುತ್ತಿದೆ. ಸಮಾವೇಶವನ್ನು ಉದ್ದೇಶಿಸಿ ಬಸವ ಜಯಮೃತ್ಯುಂಜಯಶ್ರೀ ಸ್ವಾಮೀಜಿ ಭಾಷಣ ಮಾಡಿದ್ದಾರೆ. ಬೆಂಗಳೂರಿನಲ್ಲಿ ಹಲವು ಸಮುದಾಯಗಳ ಸಮಾವೇಶ ನಡೆದಿದೆ. ಸಮುದಾಯಗಳು ಅವರದೇ ಆದ ಪ್ರಾಬಲ್ಯ ತೋರಿದ್ದರು. ಇಂದು ನಾವು ಕೂಡ ನಮ್ಮ ಪ್ರಾಬಲ್ಯವನ್ನು ತೋರಿಸಿದ್ದೇವೆ ಎಂದು ಹೇಳಿದ್ದಾರೆ.

ರಾಣಿ ಚೆನ್ನಮ್ಮನವರ ಕಿತ್ತೂರು ಅರಮನೆ ಇಂದು ಪಾಳುಬಿದ್ದಿದೆ ಎಂದು ಬೇಸರ ವ್ಯಕ್ತಪಡಿಸಿದ  ಅವರು, ನಾವು ಸಮುದಾಯದ ಋಣ ತೀರಿಸುವ ಕೆಲಸ ಮಾಡುತ್ತಿದ್ದೇವೆ. ನಮಗೆ ಜನ್ಮ ನೀಡಿದ ತಂದೆ, ತಾಯಿ ಋಣ ತೀರಿಸಲಾಗಿಲ್ಲ. ಆದರೆ ನಮ್ಮ ಸಮುದಾಯಕ್ಕೆ ಶಕ್ತಿಮೀರಿ ದುಡಿದಿದ್ದೇವೆ. ‘ನನಗೆ ಸಮಾಜವೇ ತಂದೆ-ತಾಯಿ, ಸಮಾಜವೇ ಗುರು’ ಎಂದು ಸ್ವಾಮೀಜಿ ವೇದಿಕೆಯ ಮೂಲಕ ಎಲ್ಲರಿಗೂ ನಮಿಸಿದ್ದಾರೆ.

ಯಾವುದೇ ಅಡೆತಡೆ ಇಲ್ಲದೆ ಪಾದಯಾತ್ರೆ ಮಾಡಿದ್ದೇವೆ. ಭಕ್ತರು ದೇವರ ರೂಪದಲ್ಲಿ ಬಂದಿದ್ದಕ್ಕೆ ಪಾದಯಾತ್ರೆ ಯಶಸ್ವಿಯಾಯಿತು. ಸಮಾಜದ ಋಣವನ್ನು ತೀರಿಸಲು ಮೀಸಲಾತಿ ಹೋರಾಟ ಮಾಡಿದ್ದೇವೆ. ನಾನು ಇಂದು ಹಣ ಗಳಿಸಿಲ್ಲ, ಜನರನ್ನು ಗಳಿಸಿದ್ದೇನೆ ಎಂದು ಸಮಾವೇಶದಲ್ಲಿ ಬಸವ ಜಯಮೃತ್ಯುಂಜಯಶ್ರೀ ಸಂತಸ ವ್ಯಕ್ತಪಡಿಸಿದ್ದಾರೆ.

ಅಂದು ದೇವೇಗೌಡರು, ಅರಸುರಿಂದ ಸಾಮಾಜಿಕ ನ್ಯಾಯ ಕೊಟ್ಟರು. ಈಗ ಯಡಿಯೂರಪ್ಪರಿಂದ ಸಾಮಾಜಿಕ ನ್ಯಾಯ ಸಿಗಬೇಕು. ನಮ್ಮ ಸಮುದಾಯಕ್ಕೆ ಈಗ 2A ಮೀಸಲಾತಿ ನೀಡಬೇಕು. ಇದೊಂದು ಬೇಡಿಕೆಯನ್ನು ಸಿಎಂ ಬಿಎಸ್‌ವೈ ಈಡೇರಿಸಬೇಕು ಎಂದು ಸ್ವಾಮೀಜಿ ಹೇಳಿದ್ದಾರೆ.

ಜುಲೈ 23ರಿಂದ ಅಕ್ಟೋಬರ್ 23ರವರೆಗೆ ರಥಯಾತ್ರೆ
ಸರ್ಕಾರದ ನಿಲುವು ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಸಮಾವೇಶದ ಬಳಿಕ ವಿಧಾನಸೌಧ ಮುಂದೆ ಧರಣಿ ಸತ್ಯಾಗ್ರಹ ನಡೆಸುತ್ತೇವೆ. ನಾನು ಮಠ ಕಟ್ಟಿಲ್ಲ ಎಂದು ಸಮುದಾಯದವರು ಹೇಳ್ತಿದ್ದರು. ಆದರೆ ನಿಮಗಾಗಿ ಪಾದಯಾತ್ರೆ, ಹೋರಾಟ ಮಾಡಿದ್ದೇನೆ. ಮೀಸಲಾತಿ ನೀಡಿದ್ದಕ್ಕೆ ಡಾ.ಅಂಬೇಡ್ಕರ್ ಇತಿಹಾಸದಲ್ಲಿದ್ದಾರೆ. ಇನ್ಮುಂದೆ ಮಠವನ್ನು ಕಟ್ಟುವ ಕೆಲಸವನ್ನು ಕೂಡ ಮಾಡುತ್ತೇನೆ. ಜುಲೈ 23-ಅಕ್ಟೋಬರ್ 23ರವರೆಗೆ ರಥಯಾತ್ರೆ ಮಾಡುತ್ತೇನೆ ಎಂದು ಸಮಾವೇಶದಲ್ಲಿ ಬಸವ ಜಯಮೃತ್ಯುಂಜಯಶ್ರೀ ತಿಳಿಸಿದ್ದಾರೆ.

ಪಂಚಮಸಾಲಿ ಸಮುದಾಯಕ್ಕೂ ನ್ಯಾಯ ಸಿಗಬೇಕು. ಇತರೆ ಸಮುದಾಯಗಳಿಗೂ ನ್ಯಾಯ ಸಿಗಬೇಕಾಗಿದೆ. ಪಂಚಮಸಾಲಿಗರು ಒಗ್ಗಟ್ಟಾಗಿ ಇರುವ ಸಂದೇಶ ರವಾನೆ ಆಗಬೇಕಿದೆ. ಈ ಸಮಾವೇಶದ ಮೂಲಕ ಪ್ರಧಾನಿ ಮೋದಿಗೆ ಒಗ್ಗಟ್ಟಿನ ಸಂದೇಶ ರವಾನೆಯಾಗಿದೆ. ಸಮಾಜದ ವಿಚಾರದಲ್ಲಿ ನಾವೆಲ್ಲಾ ಒಂದಾಗುತ್ತೇವೆ. ರಾಣಿ ಚೆನ್ನಮ್ಮನ ಮಕ್ಕಳು ಒಗ್ಗಟ್ಟಾಗಿದ್ದೇವೆಂದು ಸಾಬೀತಾಗಿದೆ. ವಿಜಯಪುರದಿಂದ ಅತಿ ಹೆಚ್ಚಿನ ಸಂಖ್ಯೆಯ ಜನ ಬಂದಿದ್ದಾರೆ. ಯತ್ನಾಳ್, ಕಾಶಪ್ಪನವರ ಏನು ಹೇಳುತ್ತಾರೋ ನೋಡೋಣ. ಅವರು ಹೇಳಿದ್ದನ್ನು ಕೇಳಿಕೊಂಡು ಮುಂದೆ ಸಾಗೋಣ ಎಂದು ಸಮಾವೇಶದಲ್ಲಿ ಬಸವ ಜಯಮೃತ್ಯುಂಜಯಶ್ರೀ ಹೇಳಿದ್ದಾರೆ.

ಇದನ್ನೂ ಓದಿ: ಪಂಚಮಸಾಲಿ ಸಮಾವೇಶ: ಯಾರೂ ಕೂಡ ರಾಜ್ಯ ಸರ್ಕಾರಕ್ಕೆ ಗಡುವು ನೀಡಬಾರದು: ಕೈಮುಗಿದು ಕೇಳಿಕೊಂಡ ಆರ್. ಅಶೋಕ್

ಅರಮನೆ ಮೈದಾನದಲ್ಲಿ ಪಂಚಮಸಾಲಿ ಬೃಹತ್ ಸಮಾವೇಶಕ್ಕೆ ಚಾಲನೆ: ಸಮುದಾಯದ ಸ್ವಾಮೀಜಿಗಳು, ರಾಜಕೀಯ ಗಣ್ಯರು ಭಾಗಿ