ಬೆಂಗಳೂರು, ಜುಲೈ 1: ಎರಡು ವರ್ಷಗಳ ಹಿಂದೆ ರದ್ದುಪಡಿಸಿದ್ದ ಕಾಮಗಾರಿಗಳಿಗೆ ಸಂಬಂಧಿಸಿದ 97.68 ಕೋಟಿ ರೂ.ಗಳ ಬಿಲ್‌ಗಳ ಮೊತ್ತವನ್ನು ಬಿಡುಗಡೆ ಮಾಡಲು ಬೆಂಗಳೂರು ನಗರ ಪಾಲಿಕೆ ನಿರ್ಧರಿಸಿದ್ದು, ಇದೀಗ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ರದ್ದಾದ ಕಾಮಗಾರಿಗಳಿಗೆ ಈಗ ಹೊಸದಾಗಿ ಅವಕಾಶ ನೀಡಿ ಬಿಲ್ ಬಿಡುಗಡೆ ಮಾಡಿದ್ದೇ ಆದಲ್ಲಿ ಇತರ ಗುತ್ತಿಗೆದಾರರಿಂದ ಕೂಡ ಇದೇ ರೀತಿಯ ವಿನಂತಿಗಳು ಬರುವ ಸಾಧ್ಯತೆ ಇದ್ದು, ಬಿಬಿಎಂಪಿಗೆ ನಷ್ಟವಾಗಲಿದೆ ಎಂದು ವರದಿಯಾಗಿದೆ.
ಬಿಬಿಎಂಪಿಯು ಆರ್ಥಿಕ ಶಿಸ್ತು ತರುವುದಕ್ಕಾಗಿ ಸುಮಾರು 45,781 ಕಾಮಗಾರಿಗಳನ್ನು ಹಿಂತೆಗೆದುಕೊಂಡಿತ್ತು. ಈ ಕಾಮಗಾರಿಗಳು ಒಟ್ಟು 7,931 ಕೋಟಿ ರೂಪಾಯಿ ಮೊತ್ತದ್ದಾಗಿವೆ. ಇವುಗಳನ್ನು ‘ಅನಗತ್ಯ’ ಅಥವಾ ‘ಅನಿವಾರ್ಯವಲ್ಲದ’ ಕೆಲಸಗಳು ಎಂದು ಬಿಬಿಎಂಪಿ ವಿಂಗಡಿಸಿತ್ತು. ಚರಂಡಿಗಳ ಹೂಳು ತೆಗೆಯುವುದು, ಭೂಮಿ ಅಭಿವೃದ್ಧಿ, ರಸ್ತೆಗಳ ಸುಧಾರಣೆ, ಹೂಳು ಮತ್ತು ಟ್ರ್ಯಾಕ್ಟರ್ ಒದಗಿಸುವುದು, ಶಾಲಾ ದುರಸ್ತಿ, ಕಟ್ಟಡಗಳ ನಿರ್ಮಾಣ, ಬೋರ್‌ವೆಲ್ ಕೊರೆಯುವುದು ಮತ್ತು ಎಲ್‌ಇಡಿ ಬೀದಿ ದೀಪಗಳನ್ನು ಒದಗಿಸುವುದು ಇತ್ಯಾದಿ ಕಾಮಗಾರಿಗಳು ಈ ಪಟ್ಟಿಯಲ್ಲಿದ್ದವು.
ಈ ಯೋಜನೆಗಳು ಬೆಂಗಳೂರಿನ ವಿವಿಧ ಭಾಗಗಳಲ್ಲಿ ಹರಡಿದ್ದು, 2016-17 ಮತ್ತು 2020-21 ರ ನಡುವೆ ಬಜೆಟ್ಗಳಲ್ಲಿ ಉಲ್ಲೇಖಿಸಿರುವವು ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಆದಾಗ್ಯೂ, ಬಿಬಿಎಂಪಿ 2022 ರ ಡಿಸೆಂಬರ್ನಲ್ಲಿ ಅವುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಿತ್ತು. ಏಕೆಂದರೆ ಅವುಗಳು ಬಹಳ ಸಮಯವಾದರೂ ಜಾರಿಗೆ ಬಂದಿರಲಿಲ್ಲ. ಆದರೆ, ಇದೀಗ ಕಾಮಗಾರಿಗೆ ಅವಕಾಶ ನೀಡಿ ಬಿಲ್ ಬಿಡುಗಡೆ ಮಾಡಲು ಮುಂದಾಗಿದೆ.
ರದ್ದಾದ ಕಾಮಗಾರಿಗಳಿಗೆ ಮತ್ತೆ ಅವಕಾಶ ನೀಡಿ ಬಿಲ್ ಮೊತ್ತ ಬಿಡುಗಡೆ ಮಾಡುವ ನಿರ್ಧಾರವನ್ನು ಸಮರ್ಥಿಸಿಕೊಂಡ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಇದಕ್ಕೆ ಎಂಜಿನಿಯರ್‌ಗಳು ಮತ್ತು ಕೇಂದ್ರ ಕಚೇರಿಯ ನಡುವಿನ ಸಂವಹನ ಸಮಸ್ಯೆಯೇ ಕಾರಣ ಎಂದು ಹೇಳಿದ್ದಾರೆ. ಗುತ್ತಿಗೆದಾರರು ಕೆಲಸವನ್ನು ನಿರ್ವಹಿಸುವ ಬಗ್ಗೆ ಸೂಕ್ತ ಪುರಾವೆಗಳನ್ನು ಒದಗಿಸಿದ ನಂತರವೇ ನಾವು ಅವರಿಗೆ ಅವಕಾಶಗಳನ್ನು ನೀಡಿದ್ದೇವೆ. ಅಂತಹ ಅನೇಕ ಮನವಿಗಳು ಈಗಲೂ ಬರುತ್ತಿವೆ. ಆದರೆ, ಇನ್ನೂ ಆರಂಭವಾಗದ ಕಾಮಗಾರಿಗಳಿಗೆ ಅವಕಾಶ ಕೊಡುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಪ್ರತಿ 2 ಗಂಟೆಗೆ ಇಬ್ಬರಲ್ಲಿ ಡೆಂಗ್ಯೂ ಲಕ್ಷಣ ಪತ್ತೆ; ಬೆಂಗಳೂರಿನಲ್ಲಿ 2457 ಪ್ರಕರಣ
ಬಿಬಿಎಂಪಿಯ ಈ ಕ್ರಮದಿಂದ ಹೆಚ್ಚೆಚ್ಚು ಗುತ್ತಿಗೆದಾರರು ತಾವು ಕಾಮಗಾರಿ ನಡೆಸಿದ್ದೇವೆ ಎಂದು ಹೇಳಿಕೊಂಡು ಮುಂದೆ ಬರುವ ಸಾಧ್ಯತೆ ಇದೆ. ಕಾನೂನುಬಾಹಿರ ಚಟುವಟಿಕೆಗಳಿಗೆ ಆಸ್ಪದ ನೀಡಿದಂತಾಗಲಿದೆ. ಇದರ ಹೆಚ್ಚುವರಿ ಆರ್ಥಿಕ ಹೊರೆ ಅಂತಿಮವಾಗಿ ಹೊಸ ಕಾಮಗಾರಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ಬಿಬಿಎಂಪಿ ನಿವೃತ್ತ ಎಂಜಿನಿಯರ್ ಒಬ್ಬರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಮತ್ತೊಬ್ಬ ಹಿರಿಯ ಅಧಿಕಾರಿ ಕೂಡ ಬಿಬಿಎಂಪಿಯ ನಿರ್ಧಾರಕ್ಕೆ ಆಘಾತ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ