ಬೆಂಗಳೂರು: 15 ದಿನಗಳಿಗಿಂತ ಹೆಚ್ಚು ರಸ್ತೆ ಬದಿ ವಾಹನ ಪಾರ್ಕ್ ಮಾಡಿ ಹೋಗಿದ್ದೀರಾ, ಕಾದಿದೆ ಕಠಿಣ ಕ್ರಮ

ಹತ್ತಾರು ದಿನ ಬೆಂಗಳೂರಿನ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಹೋಗುವ ಅಭ್ಯಾಸವಿದ್ದರೆ ಇನ್ನು ಎಚ್ಚರಿಕೆ ವಹಿಸುವುದು ಉತ್ತಮ. ನಿಮ್ಮ ಜಾಡು ಹಿಡಿದು ಪೊಲೀಸರು ದಂಡ ವಿಧಿಸುವ ಸಾಧ್ಯತೆ ಇದೆ. ಅದಕ್ಕೂ ಸಿಗದಿದ್ದರೆ ವಾಹನವನ್ನು ಸ್ಕ್ರ್ಯಾಪ್ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಬಿಬಿಎಂಪಿ ಆಯಕ್ತರು ಸಲ್ಲಿಸಿದ ಅಫಿಡವಿಟ್​ನಲ್ಲಿ ಉಲ್ಲೇಖಿಸಲಾಗಿದೆ.

ಬೆಂಗಳೂರು: 15 ದಿನಗಳಿಗಿಂತ ಹೆಚ್ಚು ರಸ್ತೆ ಬದಿ ವಾಹನ ಪಾರ್ಕ್ ಮಾಡಿ ಹೋಗಿದ್ದೀರಾ, ಕಾದಿದೆ ಕಠಿಣ ಕ್ರಮ
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on: Feb 09, 2024 | 7:12 AM

ಬೆಂಗಳೂರು, ಫೆಬ್ರವರಿ 9: ಬೆಂಗಳೂರು (Bengaluru) ನಗರದ ಫುಟ್‌ಪಾತ್‌ಗಳು, ಸಾರ್ವಜನಿಕ ಮಾರ್ಗಗಳು ಮತ್ತು ರಸ್ತೆಗಳಲ್ಲಿ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸುವ ವಾಹನಗಳನ್ನು ಗುರುತಿಸಲು ತಂಡಗಳನ್ನು ರಚಿಸುವ ಕುರಿತು ಬಿಬಿಎಂಪಿ (BBMP) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸರ್ಕಾರಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಬಹಿರಂಗಪಡಿಸಿದ್ದಾರೆ. ಯಾವುದೇ ವಾಹನವನ್ನು 15 ದಿನಗಳಿಗಿಂತ ಹೆಚ್ಚು ಕಾಲ ಫುಟ್‌ಪಾತ್‌ಗಳು ಅಥವಾ ರಸ್ತೆಗಳಲ್ಲಿ ನಿಲ್ಲಿಸಿದರೆ ಅದನ್ನು ವಾರಸುದಾರರು ತ್ಯಜಿಸಿದ ವಾಹನ ಎಂದು ಪರಿಗಣಿಸಲಾಗುತ್ತದೆ ಮತ್ತು ನೋಂದಾಯಿತ ಮಾಲೀಕರಿಗೆ ದಂಡವನ್ನು ವಿಧಿಸಲಾಗುತ್ತದೆ ಎಂದು ಅಫಿಡವಿಟ್​​ನಲ್ಲಿ ಹೇಳಲಾಗಿದೆ. ವಾರಸುದಾರರಿಲ್ಲದ ವಾಹನಗಳಿಗೆ ಸಂಬಂಧಿಸಿದ ಕರ್ನಾಟಕ ಹೈಕೋರ್ಟ್ (Karnataka High Court) ವಿಚಾರಣೆ ವೇಳೆ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಸರ್ಕಾರದ ಪರ ಮಾಹಿತಿ ನೀಡುವ ಸಂದರ್ಭ ಇದನ್ನು ಉಲ್ಲೇಖಿಸಿದ್ದಾರೆ.

ರಸ್ತೆ ಬದಿ ಅಥವಾ ಸಾರ್ವಜನಿಕ ಸ್ಥಳದಲ್ಲಿ ನಿಲ್ಲಿಸಿ ಹೋಗಿದ್ದ ವಾಹನಗಳನ್ನು ತಮ್ಮದೆಂದು ಸಾಬೀತುಪಡಿಸಲು ಮಾಲೀಕರು ವಿಫಲವಾದರೆ ಇ-ಹರಾಜು ಪ್ರಕ್ರಿಯೆಗಳ ಮೂಲಕ ಅವುಗಳನ್ನು ಸ್ಕ್ರ್ಯಾಪ್​ಗೆ ಮಾರಾಟ ಮಾಡಲಾಗುತ್ತದೆ ಎಂದೂ ಬಿಬಿಎಂಪಿ ಆಯುಕ್ತರು ತಿಳಿಸಿದ್ದಾರೆ.

ಈ ಮಧ್ಯೆ, ಬೆಂಗಳೂರು ನಗರದ ರಸ್ತೆಗಳು ಮತ್ತು ಫುಟ್‌ಪಾತ್‌ಗಳಲ್ಲಿರುವ ವಾರಸುದಾರರಿಲ್ಲದ ಮತ್ತು ಕೈಬಿಟ್ಟ ವಾಹನಗಳನ್ನು ತೆರವುಗೊಳಿಸಲು ಕಾಲಮಿತಿ ನಿಗದಿಪಡಿಸಿ ಕರ್ನಾಟಕ ಹೈಕೋರ್ಟ್ ಗುರುವಾರ ಮಧ್ಯಂತರ ಆದೇಶ ನೀಡಿದೆ. ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ಜಂಟಿ ಪೊಲೀಸ್ ಆಯುಕ್ತರು (ಸಂಚಾರ), ಬೆಂಗಳೂರು ನಗರ ಅವರು ಸಲ್ಲಿಸಿದ ಅಫಿಡವಿಟ್‌ಗಳನ್ನು ಪರಿಗಣಿಸಿ ಮುಖ್ಯ ನ್ಯಾಯಮೂರ್ತಿ ಪಿಎಸ್ ದಿನೇಶ್ ಕುಮಾರ್ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.

ರಸ್ತೆ ಮತ್ತು ಫುಟ್‌ಪಾತ್‌ಗಳಲ್ಲಿ ವಾಹನಗಳನ್ನು ನಿಲ್ಲಿಸುವ ಸಮಸ್ಯೆಯನ್ನು ಪರಿಹರಿಸುವುದಕ್ಕೆ ಸಂಬಂಧಿಸಿ ಬಿಬಿಎಂಪಿ ಮತ್ತು ಪೊಲೀಸರು ಕೈಗೊಂಡ ಪ್ರಯತ್ನಗಳ ಬಗ್ಗೆ ವಿಚಾರಣೆಯ ಸಂದರ್ಭದಲ್ಲಿ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ವಾರಸುದಾರರಿಲ್ಲದ ವಾಹನಗಳನ್ನು ತೆಗೆದುಕೊಂಡು ಹೋಗಿ ಗೊತ್ತುಪಡಿಸಿದ ಮೈದಾನದಲ್ಲಿ ಸಂಗ್ರಹಿಸಲಾಗುತ್ತಿದೆ. ಆರ್‌ಟಿಒ ಮತ್ತು ಪೊಲೀಸ್ ಮೂಲಗಳ ಮೂಲಕ ಅವುಗಳ ಮಾಲೀಕರನ್ನು ಸಂಪರ್ಕಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದರು. ತರುವಾಯ, ಕಾನೂನಿನ ಪ್ರಕಾರ ಅಂತಹ ವಾಹನಗಳನ್ನು ಹರಾಜು ಮಾಡಲು ಅಥವಾ ಸ್ಕ್ರ್ಯಾಪ್ ಮಾಡಲು ನ್ಯಾಯವ್ಯಾಪ್ತಿಯ ಮ್ಯಾಜಿಸ್ಟ್ರೇಟ್‌ಗಳಿಂದ ಅನುಮತಿಯನ್ನು ಪಡೆಯಲಾಗುತ್ತದೆ.

ಇದನ್ನೂ ಓದಿ: ಕುಡುಕರು, ಪುಂಡರ ಅಡ್ಡೆಯಾದ ಹೈಟೆಕ್ ಶೌಚಾಲಯ; ಸಿಎಂ ಮನೆಯ ಸ್ವಲ್ಪ ದೂರದಲ್ಲೇ ಇದೆಂತಾ ಅವ್ಯವಸ್ಥೆ

ಮತ್ತೊಂದೆಡೆ, ಪ್ರತ್ಯೇಕ ಅಫಿಡವಿಟ್‌ನಲ್ಲಿ ಬೆಂಗಳೂರು ನಗರ ಜಂಟಿ ಆಯುಕ್ತ (ಸಂಚಾರ), ಎಂ.ಎನ್.ಅನುಚೇತ್ ಅವರು ಬೆಂಗಳೂರು ಉತ್ತರ ತಾಲ್ಲೂಕಿನ ಮಲ್ಲಸಂದ್ರ ಗ್ರಾಮದಲ್ಲಿ ಎರಡು ಎಕರೆ ಭೂಮಿಯನ್ನು ಹಕ್ಕು ಪಡೆಯದ ಮತ್ತು ಕೈಬಿಟ್ಟ ವಾಹನಗಳನ್ನು ನಿಲ್ಲಿಸಲು ಗುರುತಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಫುಟ್‌ಪಾತ್ ಪಾರ್ಕಿಂಗ್ ಮತ್ತು ರೈಡಿಂಗ್‌ಗಾಗಿ ಎಷ್ಟು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂಬುದನ್ನು ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ