ಬೆಂಗಳೂರು: ಮುಗಿಯದ ಇ-ಖಾತಾ ಸಂಕಷ್ಟ, ಸರ್ವರ್ ಸಮಸ್ಯೆ, ಅಧಿಕಾರಿಗಳ ನಡೆಯಿಂದ ಜನ ಕಂಗಾಲು
ಬೆಂಗಳೂರಿನ ಆಸ್ತಿ ಮಾಲೀಕರಿಗೆ ಇ-ಖಾತಾ ಸಮಸ್ಯೆ ಮುಗಿಯದ ಅಧ್ಯಾಯವಾಗಿದೆ. ವಾರ್ಡ್ಗಳಲ್ಲಿ ಪಾಲಿಕೆ ಕಚೇರಿಗೆ ಹೋದರೂ, ಬೆಂಗಳೂರು ಒನ್ ಕೇಂದ್ರಗಳ ಬಾಗಿಲು ಕಾದರೂ ಇ-ಖಾತಾ ಗೊಂದಲ ಇನ್ನೂ ಬಗೆಹರಿದಿಲ್ಲ. ಇದರಿಂದ ಬೆಂಗಳೂರಿನ ಆಸ್ತಿ ಮಾಲೀಕರು ಹೈರಾಣಾಗಿದ್ದಾರೆ. ಇ-ಖಾತಾ ಪಡೆಯಲು ತಾಂತ್ರಿಕ ಸಮಸ್ಯೆ, ಅಧಿಕಾರಿಗಳ ಬೇಜವಾಬ್ದಾರಿಗೆ ಜನ ಬೇಸತ್ತು ಹೋಗಿದ್ದರೇ, ಇತ್ತ ಪಾಲಿಕೆ ಮಾತ್ರ ಹೆಲ್ಪ್ ಲೈನ್ ತೆರದಿದ್ದೇವೆ, ಎಲ್ಲವನ್ನು ಸರಿಪಡಿಸಿದ್ದೇವೆ ಅಂತ ಹೇಳುತ್ತಲೇ ಇದೆ.
ಬೆಂಗಳೂರು, ಡಿಸೆಂಬರ್ 13: ರಾಜಧಾನಿ ಬೆಂಗಳೂರಲ್ಲಿ (Bengaluru) ಆಸ್ತಿ ಮಾರಾಟ, ಖರೀದಿ ಸೇರಿದಂತೆ ಇತರೆ ಕೆಲಸಗಳಿಗೆ ಇ-ಖಾತಾ (E-Khata) ಕಡ್ಡಾಯಗೊಳಿಸಲಾಗಿದೆ. ಇತ್ತ, ಇ-ಖಾತಾ ಪಡೆಯೋಕೆ ಪ್ರತಿ ವಾರ್ಡ್ನ ಬಿಬಿಎಂಪಿ ಕಚೇರಿಗಳಲ್ಲಿ ಅವಕಾಶ ಕಲ್ಪಿಸಿದ್ದರೂ, ಬೆಂಗಳರು ಒನ್ ಕೇಂದ್ರಗಳಲ್ಲಿ ಇ-ಖಾತಾ ಪಡೆಯಲು ಅವಕಾಶ ನೀಡಿದ್ದರೂ ಜನರಿಗೆ ಮಾತ್ರ ಸಮಸ್ಯೆ ತಪ್ಪದಂತಾಗಿದೆ. ದಾಖಲೆಗಳು ಸರಿಯಿದ್ದರೆ ಸರ್ವರ್ ಇರಲ್ಲ, ಸರ್ವರ್ ಸರಿಯಿದ್ದರೆ ದಾಖಲೆ ಇಲ್ಲ ಎಂಬ ಸಂದಿಗ್ದ ಪರಿಸ್ಥಿತಿಗೆ ಸಿಲುಕಿರುವ ಜನರು ಇ-ಖಾತಾ ಪಡೆಯೋಕೆ ಪರದಾಡುತ್ತಿದ್ದಾರೆ.
ಸದ್ಯ ಕೃಷಿಭೂಮಿಯಿಂದ ಪರಿವರ್ತನೆಯಾದ ಜಾಗಗಳು, ಬಿಡಿಎ ಸ್ವಾಧೀನ ಬಳಿಕ ಕೈಬಿಟ್ಟ ಜಾಗಗಳು, ಎ ಖಾತಾ, ಬಿ ಖಾತಾ ಪಡೆಯುವಾಗ ಮ್ಯಾನುವಲ್ ಇದ್ದಿದ್ದರಿಂದ ಕೆಲ ದಾಖಲೆಗಳು ಇಲ್ಲದಿದ್ದರೂ ಖಾತಾ ಲಭ್ಯವಾಗಿದೆ. ಆದರೆ, ಇದೀಗ ಇ-ಖಾತಾ ಮಾಡಿಸಲು ಕೆಲ ದಾಖಲೆಗಳು ಸೂಕ್ತ ರೀತಿಯಲ್ಲಿ ಒದಗಿಸಲು ಆಗದಿರುವುದರಿಂದ ಜನರಿಗೆ ಸಂಕಷ್ಟವಾಗಿದೆ. ಕಟ್ಟಡ ಮಂಜೂರು ನಕ್ಷೆ, ಕೂಡ ಹಲವು ಮಾಲೀಕರ ಬಳಿ ಇಲ್ಲದಿರುವುದು ಕೂಡ ಸಮಸ್ಯೆಗೆ ಕಾರಣವಾಗಿದೆ. ಇ-ಖಾತಾ ಪಡೆಯಲು ಇನ್ನೂ ಪರದಾಡವ ಸ್ಥಿತಿ ನಿರ್ಮಾಣವಾಗಿದೆ. ಇ-ಖಾತಾ ಪಡೆಯಲು ಹೋದರೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿಬರುತ್ತಿದ್ದು, ಇ-ಖಾತಾ ಸಮಸ್ಯೆಗಳನ್ನು ಬಗೆಹರಿಸದ ಪಾಲಿಕೆ ವಿರುದ್ಧ ಜನರು ಕಿಡಿಕಾರುತ್ತಿದ್ದಾರೆ.
ಇದನ್ನೂ ಓದಿ: ಇನ್ಮುಂದೆ ಇ-ಖಾತಾ ಪಡೆಯುವುದು ಬಲು ಸುಲಭ: ಇಲ್ಲಿದೆ ಹಂತ ಹಂತದ ಮಾಹಿತಿ
ಇತ್ತ ಇ-ಖಾತಾ ಸಮಸ್ಯೆಗೆ ಹೆಲ್ಪ್ ಲೈನ್ ಬಿಟ್ಟು ಸೈಲೆಂಟ್ ಆಗಿರೋ ಪಾಲಿಕೆ ಖಾತಾ ಸಮಸ್ಯೆ ಬಗೆಹರಿಸೋಕೆ ಎಷ್ಟೇ ಸರ್ಕಸ್ ಮಾಡಿದ್ರೂ ಪರಿಹಾರ ಸಿಗದಂತಾಗಿದೆ. ಸದ್ಯ ಪಾಲಿಕೆ ವ್ಯಾಪ್ತಿಯಲ್ಲಿ ಇ-ಖಾತಾ ಅರ್ಜಿಗಳಿಗೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು 46,962 ಅರ್ಜಿಗಳು ಬಂದಿದ್ದು, ಈ ಪೈಕಿ ಈಗಾಗಲೇ 39,784 ಅರ್ಜಿಗಳಿಗೆ ಅನುಮೋದನೆ ನೀಡಿ ಅಂತಿಮ ಇ-ಖಾತಾ ನೀಡಲಾಗಿದೆ. ಆದರೆ, ಇನ್ನೂ ಲಕ್ಷಗಟ್ಟಲೇ ಆಸ್ತಿ ಮಾಲೀಕರು ಇ-ಖಾತಾ ಪಡೆಯಲು ಪರದಾಡುತ್ತಿದ್ದು, ಜನರು ಸುಸ್ತಾಗಿದ್ದಾರೆ.
ಇತ್ತ ಇ-ಖಾತಾ ಸಮಸ್ಯೆಗಳನ್ನು ಬಗೆಹರಿಸಿದ್ದೇವೆ ಅಂತಿರುವ ಪಾಲಿಕೆ ಇದೀಗ ಅಂಕಿ-ಅಂಶಗಳ ಪಟ್ಟಿ ರಿಲೀಸ್ ಮಾಡಿ ಕಣ್ಣೋರೆಸುವ ತಂತ್ರ ಅನುಸರಿಸುತ್ತಿದೆ. ಸದ್ಯ ಆಸ್ತಿ ತೆರಿಗೆ ರಶೀದಿ, ಮಾರಾಟ ಅಥವಾ ನೋಂದಾಯಿತ ಪತ್ರ, ಮಾಲೀಕರ ಆಧಾರ್, ಬಿಡಿಎ ಅಥವಾ ಯೋಜನಾ ಪ್ರಾಧಿಕಾರದಿಂದ ಲೇಔಟ್ ಅಥವಾ ಸೈಟ್ ಅನುಮೋದನೆ, ಬಿಬಿಎಂಪಿಯ ನಕ್ಷೆ ಅನುಮೋದನೆ ಸೇರಿ ಹಲವು ದಾಖಲೆಗಳನ್ನ ಸಲ್ಲಿಸಿ ಇ-ಖಾತಾ ಪಡೆಯೋಕೆ ಅವಕಾಶ ನೀಡಲಾಗಿದೆ. ಆದರೆ, ಇದೀಗ, ಇ-ಖಾತಾ ಸಮಸ್ಯೆ ಬಗೆಹರಿಸುತ್ತೇವೆ ಅಂತ ಅದೇ ರಾಗ ಹಾಡುತ್ತಿರುವ ಪಾಲಿಕೆ ಇನ್ನಾದರೂ ಇ-ಖಾತಾ ಸಂಕಷ್ಟಗಳನ್ನು ಬಗೆಹರಿಸಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:25 am, Fri, 13 December 24