ತುಳುನಾಡ 1253 ದೈವಗಳ ಮಾಹಿತಿಯುಳ್ಳ ‘ಕರಾವಳಿಯ ಸಾವಿರದೊಂದು ದೈವಗಳು’ ಪುಸ್ತಕ ಜನವರಿ 15ರಂದು ಬಿಡುಗಡೆ

ಭೂತ ಕಟ್ಟುವ ಜನಾಂಗದವರಿಂದ ಮತ್ತು ಇನ್ನಿತರ ಸಂಸ್ಕೃತಿ ಚಿಂತಕರ ಮೂಲದ ಐತಿಹ್ಯಗಳಿಂದ ಸಂಗ್ರಹಿಸಲ್ಪಟ್ಟು ವಿಶ್ಲೇಷಿಸಲ್ಪಟ್ಟ 1253 ದೈವಗಳ ಮಾಹಿತಿಗಳಿರುವ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕ ಬಿಡುಗಡೆ ಸಜ್ಜಾಗಿದೆ.

ತುಳುನಾಡ 1253 ದೈವಗಳ ಮಾಹಿತಿಯುಳ್ಳ 'ಕರಾವಳಿಯ ಸಾವಿರದೊಂದು ದೈವಗಳು' ಪುಸ್ತಕ ಜನವರಿ 15ರಂದು ಬಿಡುಗಡೆ
ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕದ ಮುಖಪುಟ (ಎಡ ಚಿತ್ರ) ಮತ್ತು ಸಂಶೋಧಕಿ ಡಾ.ಲಕ್ಷ್ಮೀ ಜಿ ಪ್ರಸಾದ್ (ಬಲ ಚಿತ್ರ)
Follow us
TV9 Web
| Updated By: Rakesh Nayak Manchi

Updated on: Jan 13, 2023 | 4:01 PM

ಬೆಂಗಳೂರು: ಸಂಶೋಧಕಿ ಡಾ. ಲಕ್ಷ್ಮೀ ಪ್ರಸಾದ್ (Dr.Lakshmi Ji. Prasad) ಸಂಶೋಧಿಸಿ ಸಿದ್ಧಪಡಿಸಿದ 1253 ದೈವಗಳ ಮಾಹಿತಿಗಳಿರುವ ‘ಕರಾವಳಿಯ ಸಾವಿರದೊಂದು ದೈವಗಳು’ ಪುಸ್ತಕ (Karavaliya Saviradondu Daivagalu Book) ಜನವರಿ 15ರಂದು ನಗರದ ಯಲಹಂಕ ಉಪನಗರದ 5ನೇ ಹಂತದಲ್ಲಿರುವ ಶ್ರೀಶ್ರೀಶ್ರೀ ಶಿವಕುಮಾರಸ್ವಾಮೀಜಿ ಸಭಾಂಗಣದಲ್ಲಿ ಉದ್ಘಾಟನೆಗೊಳ್ಳಲಿದೆ. ದಕ್ಷಿಣ ಕನ್ನಡ ಸಾಂಸ್ಕೃತಿಕ ಸಂಘ (ರಿ.) ಯಲಹಂಕದ ವತಿಯಿಂದ ಆಯೋಜಿಸಿರುವ ಈ ಕಾರ್ಯಕ್ರಮವನ್ನು ಉದ್ಯಮಿ ಗೋವಿಂದೂರು ವೆಂಕಪ್ಪ ಹೆಗ್ಡೆ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ಸಾಹಿತಿ ಡಾ.ಈಶ್ವರ ದೈತೋಟ, ಗೌರವಾನ್ವಿತ ಅತಿಥಿಯಾಗಿ ಬಿಡಿಎ ಅಧ್ಯಕ್ಷರಾಗಿರುವ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರು ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪುಸ್ತಕ ರಚಿಸಿದ ಲಕ್ಷ್ಮೀ ಜಿ ಪ್ರಸಾದ್ ಮತ್ತು ಕಿರುತೆರೆ, ಚಲನಚಿತ್ರ ನಟ ಅಜಿತ್ ಹಂದೆ ಅವರಿಗೆ ಸನ್ಮಾನಿಸಲಾಗುತ್ತಿದೆ.

ಕಾಸರಗೋಡು ಜಿಲ್ಲೆಯ ಕೋಳ್ಯೂರು ಗ್ರಾಮದ ಡಾ. ಲಕ್ಷ್ಮೀ ಪ್ರಸಾದ್ (ಲಕ್ಷ್ಮೀ ವಾರಣಾಸಿ) ರಚಿಸಿದ ಈ ಪುಸ್ತಕವು ತುಳು ಸಂಸ್ಕೃತಿಯ ಹೊನ್ನ ಕಿರೀಟಕ್ಕೆ ಇಟ್ಟ ನವಿಲಗರಿಯಾಗಿದೆ. ಕೊಡಗು ಸೇರಿದಂತೆ ಕಾರವಾರದಿಂದ ಕೋಟ್ಟಾಯಂ ತನಕದ ಕನ್ನಡ ತುಳು ಮಲೆಯಾಳ ಕೊಡವ ಭಾಷೆಯನ್ನಾಡುವ ಕೋಟಿ ಚೆನ್ನಯ್ಯ, ಕಾನದ ಕಟದ ಮುದ್ದ ಕಳಲ ಮಿತ್ತ ಮುಗರಾಯ ಪಟ್ಟದ ಮುಗೇರ ಕೊರಗ ತನಿಯ ಕೋಟೆದ ಬ್ಬು ತನ್ನಿ ಮಾಣಿಗ ಎಣ್ಮೂರ ದೆಯ್ಯು ಕೇಲತ್ತ ಪೆರ್ನೆ, ಬೀರ್ನಾಳ್ವ ಜುಮಾದಿ ಚಾಮುಂಡಿ ರಕ್ತೇಶ್ವರಿ ಮೊದಲಾದ ದೈವಗಳು ಜೊತೆಗೆ ಐತಿಹಾಸಿಕ ಪುರುಷರಾಗಿರುವ ತಿಮ್ಮಣ್ಣ ನಾಯಕ ಕೋಟೇಶ್ವರ ನಾಯ, ಬಸ್ತಿ ನಾಯಕ ದೈವಗಳು, ಬ್ರಾಹ್ಮಣ, ಮುಸ್ಲಿಂ ಜೈನ ಕನ್ನಡಿಗ, ಅರಬ್ ಚೀನಾ ಆಫ್ರಿಕಾ ಮೂಲದ ದೈವಗಳು ಸೇರಿದಂತೆ 1252 ದೈವಗಳ ಮಾಹಿತಿ ಇರುವ 1036 ಪುಟಗಳ ವರ್ಣ ಚಿತ್ರಗಳುಳ್ಳ ಬೃಹತ್ ಗ್ರಂಥ ಇದಾಗಿದೆ.

2230 ದೈವಗಳನ್ನು ಸಾಕ್ಷಿ ಸಮೇತ ಗುರುತಿಸಿದ ಲಕ್ಷ್ಮೀ ಪ್ರಸಾದ್

ಡಾ. ಲಕ್ಷ್ಮೀ ಪ್ರಸಾದ್ (ಲಕ್ಷ್ಮೀ ವಾರಣಾಸಿ) ಅವರು ಕಾಸರಗೋಡು ಜಿಲ್ಲೆಯ ಕೋಳ್ಯೂರು ಗ್ರಾಮದವರಾಗಿದ್ದಾರೆ. ಇವರ ತಂದೆ ವೇದಮೂರ್ತಿ ನಾರಾಯಣ ಭಟ್ಟರು ವಿದ್ವಾಂಸರೆಂದೇ ಪ್ರಸಿದ್ಧರಾದವರು. ತನ್ನ ಮನೆತನವು ವೈದಿಕಾಚರಣೆಯನ್ನೇ ಹೊಂದಿದ್ದರೂ ಕುಟುಂಬದಲ್ಲಿ ದೈವದ ಆರಾಧನೆಯನ್ನು ಮಾಡುತ್ತಿರುವುದೇಕೆ ಎಂಬ ಕುತೂಹಲವೇ ಡಾ. ಲಕ್ಷ್ಮೀ ಪ್ರಸಾದ್ ಅವರಿಗೆ ಪ್ರೇರಣೆಯಾಗಿ ಅವರು ಈ ಕುರಿತಾದ ಸಂಶೋಧನೆಗೆ ಇಳಿದರು.

ಅದರಂತೆ ಕರಾವಳಿ ಕರ್ನಾಟಕದ ಅಂದರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ ಮತ್ತು ಕೊಡಗನ್ನೂ ಒಳಗೊಂಡಂತೆ ದೈವರಾಧನೆಯ ಆಶಯ ಆಕೃತಿಯನ್ನು ನಿರಂತರ ಸಂಶೋಧಿಸಲು ಅವರು ಮುಂದಾದರು. ಈ ನಿರಂತರತೆ 21 ವರ್ಷಗಳ ಕಾಲ ನಡೆದುದರ ಪರಿಣಾಮವಾಗಿ ಒಟ್ಟು 2230 ದೈವಗಳು ಆರಾಧಿಸಲ್ಪಡುತ್ತವೆ ಎನ್ನುವ ಸತ್ಯ ಗೋಚರಿಸಿತು.

ಇದನ್ನೂ ಓದಿ: Kadugolla Tribe: ಚಳ್ಳಕೆರೆ ಕಾಡುಗೊಲ್ಲರ ಆರಾಧ್ಯ ದೈವ ಕ್ಯಾತಪ್ಪನ ಜಾತ್ರೆಯಲ್ಲಿ ಮುಳ್ಳಿನ ಗುಡಿ ಮೇಲಿಂದ ಕಳಶ ಕೀಳುವ ಪವಾಡ ಒಮ್ಮೆ ನೋಡಿ

ಹಿರಿಯ ಜಾನಪದ ತಜ್ಞರೂ ಆಗಿರುವ ವಿದ್ವಾಂಸ ಪ್ರೊ| ಬಿ.ಎ.ವಿವೇಕ ರೈ ಅವರು ತಮ್ಮ ಮಹಾಪ್ರಬಂಧದಲ್ಲಿ (1985) 267, ಇನ್ನೋರ್ವ ಜಾನಪದ ವಿದ್ವಾಂಸ ಪ್ರೊ| ಚಿನ್ನಪ್ಪಗೌಡರು ಇದನ್ನು ಪರಿಷ್ಕರಿಸಿ ತಮ್ಮ ಮಹಾಪ್ರಬಂಧದಲ್ಲಿ (1990) 300, ಮುಂದೆ ರಘುನಾಥ ವರ್ಕಾಡಿಯವರು ತಮ್ಮ ‘ಕಂಡಂಬಾರು ಮಲರಾಯ’ ಕೃತಿಯಲ್ಲಿ (2011) 407 ದೈವಗಳ ಹೆಸರುಗಳನ್ನು ಪಟ್ಟಿ ಮಾಡಿದ್ದಾರೆ.

ನಂತರ ದೈವಗಳ ಬಗ್ಗೆ ಸಂಶೋಧನೆ ನಡೆದದ್ದು ಕಡಿಮೆ ಅಥವಾ ಈ ಅರಿವಿನಲ್ಲೆ ಗಿರಕಿ ಹೊಡೆದದ್ದೇ ಹೆಚ್ಚು. ಆದರೆ ಡಾ. ಲಕ್ಷ್ಮಿ ಪ್ರಸಾದ್ ಅವರ ಆಸಕ್ತಿ ಅಥವಾ ಜಿಜ್ಞಾಸೆಯು ತಾವು ರಚಿಸಿದ ಮಹಾಪ್ರಬಂಧದ ಹೊತ್ತಿಗೆ (2007) 1435 ದೈವಗಳ ಕ್ಷೇತ್ರ ಕಾರ್ಯದ ತನಕ ಹಬ್ಬಿತು. ಇದೀಗ ಅವರು 2230 ದೈವಗಳನ್ನು ಸಾಕ್ಷಿ ಸಮೇತ ಗುರುತಿಸಿ ನಾಡು ಬೆರಗಾಗುವಂತೆ ಮಾಡಿದ್ದಾರೆ.

ತುಳು ಸಂಸ್ಕೃತಿಯ ಪ್ರಧಾನ ಅಂಗವಾಗಿ ದೈವಾರಾಧನೆ ಇದೆ. ಅದು ಇಲ್ಲದೆ ತುಳು ಸಂಸ್ಕೃತಿಯೇ ಇಲ್ಲ ಎನ್ನುವುದು ಅದರ ಪಾರಮ್ಯ. ನಂಬಿಕೆಯ ಆಧಾರದ ಮೇಲೆ ನಿಂತಿರುವ ಈ ಆರಾಧನಾ ಪದ್ಧತಿಯು ಶತಮಾನಗಳ ಪರಂಪರೆಯುಳ್ಳದ್ದಾಗಿದೆ. ಇಂಥ ಸಂಸ್ಕೃತಿಯ ಬೇರುಗಳ ಆಳಕ್ಕೆ ಇಳಿದು ಚಿನ್ನವನ್ನು ಅಗೆದು ತೆಗೆದು ಪುಟಕ್ಕಿಡುವ ಹಾಗೆ ಮಾಡುವ ಕೆಲಸವು ಸಂಕೀರ್ಣವೂ, ಸಂಕಷ್ಟದ್ದೂ ಆಗಿದೆ. ಹಾಗೆಯೇ ಪುರುಷರಿಗಷ್ಟೇ ಸೀಮಿತ ಎನ್ನುವಂತಿದ್ದ ಈ ಸಂಶೋಧನೆಯನ್ನು ಮಹಿಳೆಯರು ಮಾಡಬಹುದೆನ್ನುವಂತೆ ಡಾ.ಲಕ್ಷ್ಮೀ ಪ್ರಸಾದರು ಮಾಡಿ ತೋರಿಸಿದ್ದಾರೆ.

ಇದನ್ನೂ ಓದಿ: ದೈವಕೋಲದ ವಿಚಾರದಲ್ಲಿ ಕೋರ್ಟ್ ಮೆಟ್ಟಿಲೇರಿದ್ದ ವ್ಯಕ್ತಿ ಕುಸಿದು ಬಿದ್ದು ಸಾವು, ಕಾಂತಾರ ಸಿನಿಮಾದಂತಿದೆ ಈ ರಿಯಲ್ ಸ್ಟೋರಿ

ಇದಕ್ಕೆ ಅವರು ಹುಟ್ಟಿದ ಗಂಡು ಮೆಟ್ಟಿನ ನೆಲದ ಪ್ರಭಾವ ಎಷ್ಟು ಕಾರಣವೋ ಅಷ್ಟೇ ಅವರ ಗಂಡೆದೆಯೂ ಕೂಡಾ. ಡಾ. ಲಕ್ಷ್ಮೀ ಪ್ರಸಾದರು ಸಂಸ್ಕೃತ (1ನೇ ರ್ಯಾಂಕ್) ಹಿಂದಿ ಮತ್ತು ಕನ್ನಡ (4ನೇ ರ್ಯಾಂಕ್) ದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದಾರೆ. ಒಂದು ಎಂ.ಫಿಲ್ ಪದವಿ ಹಾಗೂ ಎರಡು ಪಿಎಚ್​ಡಿ ಪದವಿಗಳ ಗರಿಯೂ ಅವರ ಸಾಧನೆಗೆ ದಕ್ಕಿದೆ.

ಬದುಕನ್ನು ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನೆಗಳಿಗೆ ಮೀಸಲಿಟ್ಟಿರುವ ಅವರ ಈ 25ನೇ ಕೃತಿ ಅವರ ಮಹಾತ್ವಾಕಾಂಕ್ಷೆಯ ಶಿಖರವಾಗಿದೆ. ಸರಕಾರದ ಆಶ್ರಯವಿಲ್ಲದೆ, ಅಕಾಡಮಿಗಳ ಪ್ರೋತ್ಸಾಹವಿಲ್ಲದೆಯೇ ತನಗೆ ತಾನೇ ಸ್ವಯಂ ಭೂವಾಗಿ ನಡೆಸಿದ ಈ ಕ್ಷೇತ್ರ ಕಾರ್ಯ ಆಧಾರಿತ ಅಧ್ಯಯನ ಅಪರೂಪದಲ್ಲಿ ಅಪರೂಪವಾಗಿದೆ.

ಭೂತ ಕಟ್ಟುವ ಜನಾಂಗದವರಿಂದ ಮತ್ತು ಇನ್ನಿತರ ಸಂಸ್ಕೃತಿ ಚಿಂತಕರ ಮೂಲದ ಐತಿಹ್ಯಗಳಿಂದ ಸಂಗ್ರಹಿಸಲ್ಪಟ್ಟು ವಿಶ್ಲೇಷಿಸಲ್ಪಟ್ಟ ಅವರ ಸಂಶೋಧನೆಯ ಆಯ್ದ 1253 ದೈವಗಳ ಮಾಹಿತಿಗಳನ್ನು ಈ ಗ್ರಂಥದಲ್ಲಿ ಅವರು ಅನಾವರಣಗೊಳಿಸಿದ್ದಾರೆ. ಇದು ತುಳು ಸಂಸ್ಕೃತಿಯ ಹೊನ್ನ ಕಿರೀಟಕ್ಕೆ ಇಟ್ಟ ನವಿಲಗರಿಯಾಗಿದೆ ಎಂದು ಕನ್ನಡ ಸಂಘ, ಕಾಂತಾವರದ ಅಧ್ಯಕ್ಷೆ ಡಾ. ನಾ ಮೊಗಸಾಲೆ ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ