1 ರೂ. ನಾಣ್ಯಕ್ಕೆ 1 ಕೋಟಿ ರೂ. ಸಿಗಲಿದೆ ಎಂದು ನಂಬಿ 1 ಲಕ್ಷ ರೂ. ಕೊಟ್ಟು ಕೈ ಸುಟ್ಟುಕೊಂಡ ಬೆಂಗಳೂರಿನ ಶಿಕ್ಷಕಿ

ಶಿಕ್ಷಕಿಯ ಪುತ್ರಿ ಯಾವುದೋ ಜಾಲತಾಣದಲ್ಲಿ ಹಳೇ ನಾಣ್ಯಕ್ಕೆ ಭಾರೀ ಬೇಡಿಕೆ ಇದೆ ಎನ್ನುವುದನ್ನು ನೋಡಿದ್ದರು. ಅಂತೆಯೇ ತನ್ನ ತಾಯಿಯ ಬಳಿ ಹಳೇ ನಾಣ್ಯವಿರುವುದು ಗೊತ್ತಾಗಿ ಅದನ್ನು ಆನ್​ಲೈನ್​ನಲ್ಲಿ ಮಾರಾಟ ಮಾಡಲು ಹೋಗಿದ್ದಾರೆ. ಅದಕ್ಕೆ ಪ್ರತಿಯಾಗಿ ಅಪರಿಚಿತ ವ್ಯಕ್ತಿ ನಿಮಗೆ ಆ ನಾಣ್ಯಕ್ಕೆ 1 ಕೋಟಿ ರೂಪಾಯಿ ಸಿಗಲಿದೆ ಎಂದು ನಂಬಿಸಿದ್ದ.

1 ರೂ. ನಾಣ್ಯಕ್ಕೆ 1 ಕೋಟಿ ರೂ. ಸಿಗಲಿದೆ ಎಂದು ನಂಬಿ 1 ಲಕ್ಷ ರೂ. ಕೊಟ್ಟು ಕೈ ಸುಟ್ಟುಕೊಂಡ ಬೆಂಗಳೂರಿನ ಶಿಕ್ಷಕಿ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಸಾಮಾಜಿಕ ಜಾಲತಾಣಗಳನ್ನು ದುರುದ್ದೇಶಕ್ಕೆ ಬಳಸಿಕೊಂಡು ಮಾನಹಾನಿ ಮಾಡುವವರಿಂದ ಹಿಡಿದು ಹಣಕಾಸು ಲೂಟಿ ಮಾಡುವವರ ತನಕ ಮೋಸಗಾರರ ಸಂಖ್ಯೆ ಹೆಚ್ಚಾಗಿದೆ. ಅದಕ್ಕೆ ತಕ್ಕದಾಗಿ ಮೋಸ ಹೋಗುವವರು ಕೂಡಾ ಇರುವುದರಿಂದ ಪ್ರತಿನಿತ್ಯ ದೇಶದಲ್ಲಿ ಇಂತಹ ನೂರಾರು ಪ್ರಕರಣಗಳು ದಾಖಲಾಗುತ್ತಿವೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಪ್ರಕರಣವೊಂದರಲ್ಲಿ ಶಾಲಾ ಶಿಕ್ಷಕಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬನನ್ನು ನಂಬಿ ಹಳೇ ನಾಣ್ಯಗಳಿಂದ ದುಡ್ಡು ಮಾಡುವ ಆಸೆಗೆ ಮರುಳಾಗಿ ಒಂದು ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ನಡೆದಿದೆ.

ಬೆಂಗಳೂರಿನಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ 38 ವರ್ಷದ ಮಹಿಳೆಯೊಬ್ಬರು ಮೋಸ ಹೋಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬನ ಪೋಸ್ಟ್ ನೋಡಿ ಹಣ ಕಳೆದುಕೊಂಡಿದ್ದಾರೆ. ಬೆಂಗಳೂರಿನ ವೈಟ್​ಫೀಲ್ಡ್ ಸೈಬರ್​ ಎಕನಾಮಿಕ್ ಅಂಡ್ ನಾರ್ಕೋಟಿಕ್​ ಕ್ರೈಂ (ಸಿಇಎನ್ ಅಪರಾಧ ಪೊಲೀಸ್ ಠಾಣೆ) ವಿಭಾಗಕ್ಕೆ ಸಲ್ಲಿಸಲಾದ ದೂರಿನಲ್ಲಿ ತಿಳಿಸಿರುವಂತೆ ಮೂವರು ಅವರಿಗೆ ಕರೆ ಮಾಡಿದ್ದು, ಭಾರತದ ಸ್ವಾತಂತ್ರ್ಯ ವರ್ಷವಾದ 1947ನೇ ಇಸವಿಯ ಒಂದು ರೂಪಾಯಿ ನಾಣ್ಯಕ್ಕೆ 1 ಕೋಟಿ ರೂ. ಕೊಡುವುದಾಗಿ ಹೇಳಿ, ಬ್ಯಾಂಕ್​ ಖಾತೆಯ ವಿವರಗಳನ್ನೆಲ್ಲಾ ನೀಡಿ ಇವರಿಂದಲೇ 1 ಲಕ್ಷ ರೂ. ಹಣ ಪಡೆದಿದ್ದಾರೆ.

ಇದಕ್ಕೂ ಮುನ್ನ ಶಿಕ್ಷಕಿಯ ಪುತ್ರಿ ಯಾವುದೋ ಜಾಲತಾಣದಲ್ಲಿ ಹಳೇ ನಾಣ್ಯಕ್ಕೆ ಭಾರೀ ಬೇಡಿಕೆ ಇದೆ ಎನ್ನುವುದನ್ನು ನೋಡಿದ್ದರು. ಅಂತೆಯೇ ತನ್ನ ತಾಯಿಯ ಬಳಿ ಹಳೇ ನಾಣ್ಯವಿರುವುದು ಗೊತ್ತಾಗಿ ಅದನ್ನು ಆನ್​ಲೈನ್​ನಲ್ಲಿ ಮಾರಾಟ ಮಾಡಲು ಹೋಗಿದ್ದಾರೆ. ಅದಕ್ಕೆ ಪ್ರತಿಯಾಗಿ ಅಪರಿಚಿತ ವ್ಯಕ್ತಿ ನಿಮಗೆ ಆ ನಾಣ್ಯಕ್ಕೆ 1 ಕೋಟಿ ರೂಪಾಯಿ ಸಿಗಲಿದೆ ಎಂದು ನಂಬಿಸಿದ್ದ. ಇದನ್ನು ನಂಬಿದ ಅವರು 1 ಕೋಟಿ ರೂಪಾಯಿ ಪಡೆಯುವ ಆಸೆಗೆ ಬಿದ್ದು, ಅವರು ಹೇಳಿದಂತೆ ಕೆಲವು ವ್ಯವಹಾರಗಳ ಖರ್ಚೆಂದು ಸುಮಾರು 1 ಲಕ್ಷ ರೂಪಾಯಿ ಕಳುಹಿಸಿದ್ದಾರೆ. ಅಲ್ಲದೇ, ಆ ನಾಣ್ಯಕ್ಕೆ 1 ಕೋಟಿ ರೂಪಾಯಿ ಸಿಗುವುದು ಖಚಿತ ಎಂದೂ ನಂಬಿದ್ದಾರೆ. ಆದರೆ, ಸುಮಾರು 1,00,600 ರೂಪಾಯಿ ಹಣ ವರ್ಗಾವಣೆ ಆದ ನಂತರ ಅತ್ತ ಕಡೆಯಿದ್ದ ವ್ಯಕ್ತಿಯ ಮೊಬೈಲ್​ ಸ್ವಿಚ್ಡ್ ಆಫ್​ ಆಗಿದ್ದು, ಅನೇಕ ಬಾರಿ ಪ್ರಯತ್ನಿಸಿದ ನಂತರ ಮಹಿಳೆಗೆ ಅನುಮಾನ ಮೂಡಿದೆ.

ಹೀಗಾಗಿ, ತಕ್ಷಣವೇ ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದು, ತನಗಾಗಿರುವ ಮೋಸವನ್ನು ವಿವರಿಸಿದ್ದಾರೆ. ಸದ್ಯ ಬೇರೆ ಬೇರೆ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ನಕಲಿ ಖಾತೆಗಳನ್ನು 24 ತಾಸಿನೊಳಗೆ ಬಂದ್​ ಮಾಡಿ
ಭಾರತ ಸರ್ಕಾರ ಸಾಮಾಜಿಕ ಜಾಲತಾಣಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಹತ್ತರ ಹೆಜ್ಜೆ ಇರಿಸಿದ್ದು, ಮಾನಹಾನಿ ಮಾಡುವ ಸಾಮಾಜಿಕ ಜಾಲತಾಣಗಳಲ್ಲಿನ ಖಾತೆಗಳ ವಿರುದ್ಧ ತ್ವರಿತ ಕ್ರಮ ಕೈಗೊಳ್ಳುವಂತೆ ಟ್ವಿಟರ್, ಫೇಸ್​ಬುಕ್, ಇನ್​ಸ್ಟಾಗ್ರಾಮ್​, ಯೂಟ್ಯೂಬ್ ಸಂಸ್ಥೆಗಳಿಗೆ ಸೂಚನೆ ನೀಡಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಟ್ವಿಟರ್, ಫೇಸ್​ಬುಕ್, ಇನ್​ಸ್ಟಾಗ್ರಾಮ್​, ಯೂಟ್ಯೂಬ್ ಸಂಸ್ಥೆಗಳಿಗೆ ಸೂಚನೆ ನೀಡಿರುವ ಭಾರತ ಸರ್ಕಾರ, ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ಅಥವಾ ಮಾನಹಾನಿ ಉಂಟುಮಾಡುವ ಖಾತೆ ವಿರುದ್ಧ ದೂರು ಸಲ್ಲಿಕೆಯಾದ ಅಥವಾ ಗಮನಕ್ಕೆ ಬಂದ 24 ತಾಸಿನೊಳಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಹೇಳಿದೆ.

ಪ್ರಸಿದ್ಧ ವ್ಯಕ್ತಿಗಳು, ಖ್ಯಾತನಾಮರು ಅಥವಾ ಸಾರ್ವಜನಿಕರ ಫೋಟೋ ಬಳಸಿಕೊಂಡು ನಕಲಿ ಖಾತೆ ಸೃಷ್ಟಿಸಿ ಅದನ್ನು ದುರ್ಬಳಕೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಈ ತೆರನಾದ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಇದು ನೂತನ ಐಟಿ ನಿಯಮಗಳ ಭಾಗವಾಗಿದ್ದು, ಸಾಮಾಜಿಕ ಜಾಲತಾಣಗಳು ಕೂಡಲೇ ಇದನ್ನು ಅನ್ವಯಿಸಿಕೊಳ್ಳಬೇಕು. ದೂರು ಬಂದ ನಂತರ ವಿಳಂಬ ನೀತಿ ಅನುಸರಿಸದೆ ತಕ್ಷಣ ಕ್ರಮ ಕೈಗೊಳ್ಳಲು ಬದ್ಧರಾಗಿರಬೇಕು ಎಂದು ಇದೇ ಸಂದರ್ಭದಲ್ಲಿ ಸೂಚಿಸಲಾಗಿದೆ.

ಇದನ್ನೂ ಓದಿ:
ಸಾಮಾಜಿಕ ಜಾಲತಾಣಗಳು ಮಾನಹಾನಿ ಮಾಡುವ ಅಥವಾ ನಕಲಿ ಖಾತೆಗಳನ್ನು ದೂರು ನೀಡಿದ 24 ತಾಸಿನೊಳಗೆ ತೆಗೆಯಬೇಕು: ಭಾರತ ಸರ್ಕಾರ