ರೈಲ್ವೇ ಪ್ರಯಾಣಿಕರೇ ಗಮನಿಸಿ: ವಾರಾಂತ್ಯದಲ್ಲಿ ಬೆಂಗಳೂರು-ಮೈಸೂರು ನಡುವೆ ವಿಶೇಷ ರೈಲು
ಸೌತ್ ವೆಸ್ಟರ್ನ್ ರೈಲ್ವೇ ನವೆಂಬರ್ 14ರಿಂದ ಡಿಸೆಂಬರ್ 28ರವರೆಗೆ ಬೆಂಗಳೂರು-ಮೈಸೂರು ನಡುವೆ ಮೆಮು ವಿಶೇಷ ರೈಲು ಸಂಚಾರವನ್ನು ಘೋಷಿಸಿದೆ. ವಾರಾಂತ್ಯ ಮತ್ತು ಶ್ರೀ ಸತ್ಯ ಸಾಯಿ ಬಾಬಾ ಶತಮಾನೋತ್ಸವ ಆಚರಣೆ ಹಿನ್ನಲೆ ಪ್ರಯಾಣಿಕರ ಅನುಕೂಲಕ್ಕಾಗಿ ಈ ಸೇವೆ ಒದಗಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.

ಬೆಂಗಳೂರು, ನವೆಂಬರ್ 14: ವಾರಾಂತ್ಯಗಳಲ್ಲಿ ಮತ್ತು ಶ್ರೀ ಸತ್ಯ ಸಾಯಿ ಬಾಬಾ ಶತಮಾನೋತ್ಸವ ಆಚರಣೆ ಹಿನ್ನಲೆ ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಎಸ್‌ಆರ್ ಬೆಂಗಳೂರು ಮತ್ತು ಅಶೋಕಪುರಂ (ಮೈಸೂರು) ನಡುವೆ ಮೆಮು ವಿಶೇಷ ರೈಲು ಸಂಚರಿಸಲಿವೆ ಎಂದು ಸೌತ್ ವೆಸ್ಟರ್ನ್ ರೈಲ್ವೇ ತಿಳಿಸಿದೆ. ನವೆಂಬರ್ 14ರಿಂದ ಡಿಸೆಂಬರ್ 28ರ ವರೆಗೆ ಶುಕ್ರವಾರ, ಶನಿವಾರ ಮತ್ತು ಭಾನುವಾರ ಈ ರೈಲು ಸಂಚಾರ ನಡೆಸಲಿದೆ. ಆದರೆ, ನವೆಂಬರ್ 21, 22 ಮತ್ತು 23 ರಂದು ರೈಲಿನ ಸಂಚಾರ ಇರುವುದಿಲ್ಲ.
ಇದನ್ನೂ ಓದಿ: ಬೆಂಗಳೂರು-ಮುಂಬೈ ನಡುವೆ ಮತ್ತೊಂದು ಸೂಪರ್ ಫಾಸ್ಟ್ ರೈಲು
ರೈಲು ಸಂಖ್ಯೆ 06213 ಕೆಎಸ್‌ಆರ್ ಬೆಂಗಳೂರಿನಿಂದ ಮಧ್ಯಾಹ್ನ 12.15ಕ್ಕೆ ಹೊರಡಲಿದ್ದು, ಅಶೋಕಪುರಂಗೆ ಮಧ್ಯಾಹ್ನ 3.40ಕ್ಕೆ ತಲುಪಲಿದೆ. ಅಶೋಕಪುರಂನಿಂದ ಸಂಜೆ 4.10ಕ್ಕೆ ಹೊರಡಲಿರುವ ರೈಲು ಸಂಖ್ಯೆ 06214,ಕೆಎಸ್‌ಆರ್ ಬೆಂಗಳೂರಿಗೆ ರಾತ್ರಿ 8 ಗಂಟೆಗೆ ತಲುಪಲಿದೆ. ಕೃಷ್ಣದೇವರಾಯ ಹಾಲ್ಟ್, ನಾಯಂಡಹಳ್ಳಿ, ಜ್ಞಾನಭಾರತೀ ಹಾಲ್ಟ್, ಕೆಂಗೇರಿ, ಹೆಜ್ಜಾಲ, ಬಿಡದಿ, ಕೇತೋಹಳ್ಳಿ, ರಾಮನಗರ, ಚನ್ನಪಟ್ಟಣ, ಸತ್ತಿಹಳ್ಳಿ, ನಿಡಘಟ್ಟ ಹಾಲ್ಟ್, ಮದ್ದೂರು, ಹನಕೇರಿ, ಮಂಡ್ಯ, ಯಲಿಯೂರು, ಬ್ಯಾದರಹಳ್ಳಿ, ಪಾಂಡವಪುರ, ಶ್ರೀರಂಗಪಟ್ಟಣ, ನಾಗನಹಳ್ಳಿ, ಮೈಸೂರು ಮತ್ತು ಚಾಮರಾಜಪುರಂನಲ್ಲಿ ಮೆಮು ರೈಲಿನ ನಿಲುಗಡೆ ಇರಲಿದೆ ಎಂದು ಸೌತ್ ವೆಸ್ಟರ್ನ್ ರೈಲ್ವೇ ತಿಳಿಸಿರುವ ಬಗ್ಗೆ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ವಿಶೇಷ ರೈಲುಗಳಿಂದ 171 ಕೋಟಿ ಆದಾಯ
2025–26ರ ಮೊದಲ ಏಳು ತಿಂಗಳಲ್ಲಿ ವಿಶೇಷ ರೈಲುಗಳ ಸಂಚಾರದಿಂದ ಸೌತ್ ವೆಸ್ಟರ್ನ್ ರೈಲ್ವೇ (SWR) ಆದಾಯದಲ್ಲಿ ಶೆ.23ರಷ್ಟು ಏರಿಕೆಯಾಗಿದೆ. ಈ ವರ್ಷದ ಏಪ್ರಿಲ್ ತಿಂಗಳಿಂದ ಅಕ್ಟೋಬರ್ ವರೆಗೆ ಪ್ರಯಾಣಿಕರ ಅನುಕೂಲಕ್ಕಾಗಿ 355 ವಿಶೇಷ ರೈಲುಗಳು ಸಂಚರಿಸಿದ್ದವು. ಈ ಮೂಲಕ SWR 171.47 ಕೋಟಿ ರೂ. ಗಳಿಸಿದೆ. 2024–25ರ ಇದೇ ಅವಧಿಯಲ್ಲಿ ಸಂಚರಿಸಿದ್ದ 351 ವಿಶೇಷ ರೈಲುಗಳಿಂದ 138.83 ಕೋಟಿ ರೂ. ಆದಾಯ ಇಲಾಖೆಗೆ ಬಂದಿತ್ತು. ಈ ಆರ್ಥಿಕ ವರ್ಷದಲ್ಲಿ 19.55 ಲಕ್ಷ ಪ್ರಯಾಣಿಕರು ವಿಶೇಷ ರೈಲುಗಳಲ್ಲಿ ಪ್ರಯಾಣಿಸಿದ್ದಾರೆ ಎಂದು ಇಲಾಖೆ ತಿಳಿಸಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:18 pm, Fri, 14 November 25




