ಬೆಂಗಳೂರು: ಅಭಿವೃದ್ಧಿ ಹೆಸರಲ್ಲಿ ಕರ್ನಾಟಕದಲ್ಲಿ ಲಕ್ಷಾಂತರ ಮರಗಳ ಮಾರಣಹೋಮವಾಗುತ್ತಿದೆ. ರಾಜ್ಯ ಲೋಕೋಪಯೋಗಿ ಇಲಾಖೆ (PWD) ಪ್ರಕಾರ, 2018 ರಿಂದ 2021 ರವರೆಗೆ, ರಸ್ತೆಗಳು ಮತ್ತು ಹೆದ್ದಾರಿಗಳನ್ನು ನಿರ್ಮಿಸಲು ಕರ್ನಾಟಕದಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಮರಗಳನ್ನು ಕಡಿಯಲಾಗಿದೆ. ಅಲ್ಲದೆ ಉಪನಗರ ರೈಲು ಯೋಜನೆಗಾಗಿ ಬೆಂಗಳೂರಿನಲ್ಲಿ ಇನ್ನೂ 1,200 ಮರಗಳನ್ನು ಕಡಿಯುವ ಸಾಧ್ಯತೆ ಇದೆ. ಇತ್ತೀಚೆಗೆ ಪಿಎಂ ನರೇಂದ್ರ ಮೋದಿ ಉದ್ಘಾಟಿಸಿದ ಬೆಂಗಳೂರು-ಮೈಸೂರು ಹೆದ್ದಾರಿ (NH 275) ಅಭಿವೃದ್ಧಿಗೆ 2019 ರಲ್ಲಿ 11,078 ಮರಗಳನ್ನು ಕಡಿಯಲಾಗಿತ್ತು. ನಮ್ಮ ಮೆಟ್ರೋದ 2 ನೇ ಹಂತ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗಿನ ಮೆಟ್ರೋ ಅಭಿವೃದ್ಧಿಗಾಗಿ 1,253 ಮರಗಳನ್ನು ಕಡಿಯಲಾಗಿದೆ.
ಇದರ ಜೊತೆಗೆ ಈ ವರ್ಷ ಬೆಂಗಳೂರಿನಲ್ಲಿ ಮತ್ತಷ್ಟು ಮರಗಳ ಮಾರಣಹೋಮವಾಗುವ ಸಾಧ್ಯತೆ ಇದೆ. ಏಕೆಂದರೆ ಬೆಂಗಳೂರಿನಲ್ಲಿ ರೈಲು ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಾಗಿ ಮರಗಳನ್ನು ಕಡಿಯಲು ಈಗಾಗಲೇ ಆದೇಶ ನೀಡಲಾಗಿದೆ. ಬೈಯಪ್ಪನಹಳ್ಳಿ ಮತ್ತು ಲೊಟ್ಟೆಗೊಲ್ಲಹಳ್ಳಿ ನಡುವೆ 1,234 ಮರಗಳನ್ನು ಕಡಿಯಲು ರೈಲು ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಂಪನಿ (KRIDE) ಫೆಬ್ರವರಿಯಲ್ಲೇ ಅನುಮತಿ ನೀಡಿದೆ.
ಯಶವಂತಪುರ ರೈಲು ನಿಲ್ದಾಣದಲ್ಲಿ 216 ಮೀಟರ್ ಅಗಲದ ಒಳಾಂಗಣ ವಿನ್ಯಾಸ, ಮಾಲ್ ಮತ್ತು ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಕಟ್ಟುವ ಸಲುವಾಗಿ ನೈರುತ್ಯ ರೈಲ್ವೆಯು ಜನವರಿಯಲ್ಲಿ 141 ಮರಗಳನ್ನು ಕಡಿಯುವ ಅನುಮತಿಯನ್ನು ಪಡೆದಿದೆ. ಯಶವಂತಪುರ-ಚನ್ನಸಂದ್ರ ರೈಲು ಡಬ್ಲಿಂಗ್ ಯೋಜನೆಗಾಗಿ, ಮಾರ್ಚ್‌ನಲ್ಲಿಯೇ 698 ಮರಗಳನ್ನು ಕಡಿಯಲು ಮತ್ತು 38 ಮರಗಳನ್ನು ಸ್ಥಳಾಂತರಿಸಲು KRIDE ಈಗಾಗಲೇ ಅನುಮತಿ ಪಡೆದಿದೆ. ಇದೀಗ ಬೈಯಪ್ಪನಹಳ್ಳಿಯಿಂದ ಚಿಕ್ಕಬಾಣಾವರದವರೆಗೆ 25 ಕಿ.ಮೀ ಉದ್ದದ ಕಾರಿಡಾರ್-2 ಯೋಜನೆಗಾಗಿ 1,200 ಮರಗಳನ್ನು ಕಡಿಯಲು KRIDE ಅನುಮತಿ ಪಡೆದಿದೆ ಎಂದು ವರದಿಯಾಗಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಸಾವಿರಾರು ಮರಗಳು ಧರೆಗೆ ಉರುಳಲಿವೆ.
ಇದನ್ನೂ ಓದಿ: ಸ್ಯಾಂಕಿ ರಸ್ತೆಯಲ್ಲಿ ಮೇಲ್ಸೇತುವೆಗೆ ವಿರೋಧಿಸಿ ಧರಣಿ: ಸದಾಶಿವನಗರ ಠಾಣೆಯಲ್ಲಿ 9 ಜನರ ವಿರುದ್ಧ ಎಫ್‌ಐಆರ್ ದಾಖಲು
ಇನ್ನು ಮತ್ತೊಂದೆಡೆ ಅಭಿವೃದ್ಧಿ ಹೆಸರಲ್ಲಿ ನಗರದಲ್ಲಿ ಮರಗಳನ್ನು ಕಡಿಯಲಾಗುತ್ತಿದೆ. ಇದಕ್ಕೆ ಬೇರೆ ಮಾರ್ಗವಿಲ್ಲವಾ ಎಂದು ಸಾರ್ವಜನಿಕರು ಇದರ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ನಗರದಲ್ಲಿ ಮರಗಳ ಸಂಖ್ಯೆ ಕಡಿಮೆಯಾಗುತ್ತಿರುವುದನ್ನು ನೋಡಿದ ಸಾರ್ವಜನಿಕರು, ಪರಿಸರವಾದಿಗಳು ಮರಗಳನ್ನು ಕಡಿಯಲು ಅನುಮತಿ ಪಡೆಯಲು ಸಂಸ್ಥೆಗಳು ಸಲ್ಲಿಸುವ ಅರ್ಜಿಯ ಮೇಲೆ ಆದೇಶಗಳನ್ನು ನೀಡುವ ಮೊದಲೇ ಇದರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಬಹುದು. ಹೀಗಾಗಿ ಬೆಂಗಳೂರಿನಲ್ಲಿ ಅನೇಕ ಸ್ವಯಂ ಸಂಘಗಳು, ಪರಿಸರವಾದಿಗಳು, ಪರಿಸರ ಪ್ರೇಮಿಗಳು ಸರ್ಕಾರದ ನಿಲುವಿನ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ ಮರ ಉಳಿಸಿ ಅಭಿಯಾನಗಳನ್ನು ಮಾಡುತ್ತಿದ್ದಾರೆ. ಹಾಗೂ ಸರ್ಕಾರ ಕಡಿದ ಮರಗಳ ಪರವಾಗಿ ಬೇರೆ ಎಲ್ಲಿಯೂ ಮರಗಳನ್ನು ನೆಡುವ ಕಾರ್ಯ ಮಾಡುತ್ತಿಲ್ಲ. ಇದರಿಂದ ಮರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಮುಂದೆ ಸಮಸ್ಯೆ ಎದುರಿಸಬೇಕಾಗುತ್ತೆ. ಒಂದು ಮರ ಕಡಿದರೆ ಅದಕ್ಕೆ ಪರ್ಯಾಯವಾಗಿ ಮತ್ತೊಂದನ್ನು ನೆಡಬೇಕು ಎಂದು ಸಾರ್ವಜನಿಕರು ಸರ್ಕಾರದ ವಿರುದ್ಧ ದೂರಿದ್ದಾರೆ.
Will Bangalore be the same after 10 years?
We are cutting trees for development, but are we planting new trees? @KarnatakaWorld #Bengaluru https://t.co/Y0NhgtTafJ
— Krishna keshav (@kkpandeyofficia) March 22, 2023
ಏಪ್ರಿಲ್ 1 ರಂದು, ಸುಮಾರು 70 ನಾಗರಿಕರು ಬೆಂಗಳೂರಿನ ಸ್ಯಾಂಕಿ ರಸ್ತೆಯಲ್ಲಿ ಹೆದ್ದಾರಿಗಾಗಿ ಮರಗಳನ್ನು ಕಡಿಯುವುದನ್ನು ವಿರೋಧಿಸಿ ಮೆರವಣಿಗೆ ನಡೆಸಿದರು. ಅವರ ವಿರುದ್ಧ ಐಪಿಸಿಯ ಸೆಕ್ಷನ್ 341, 141, 149, ಮತ್ತು 283ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
The FIR against 70 peaceful demonstrators in Bangalore who came together to protect their trees does not surprise many.
Urban dwellers in India have generally made peace with corruption and in rare instances that they protest against it, they tend to see this blowback.
The…— K V DHANANJAY (@dhananjaylegal) April 3, 2023
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:33 am, Wed, 5 April 23