9 ತಿಂಗಳಲ್ಲಿ 380 ಮಕ್ಕಳ ಸಾವು; ಆತಂಕ ಹುಟ್ಟಿಸಿದೆ ಇಂದಿರಾಗಾಂಧಿ ಆಸ್ಪತ್ರೆ ವೈದ್ಯರ ವರದಿ
ಕೊರೊನಾ ಬಂದ ಬಳಿಕ ಪುಟಾಣಿ ಮಕ್ಕಳನ್ನ ಒಂದಲ್ಲ ಒಂದು ಖಾಯಿಲೆಗಳು ನಿರಂತರವಾಗಿ ಹಿಂಸೆ ನೀಡುತ್ತಿದ್ದು ಮಕ್ಕಳ ಸಾವಿಗೆ ಕಾರಣವಾಗ್ತಿವೆ. ಅದರಲ್ಲೂ ರಾಜ್ಯದಲ್ಲಿ ಮಕ್ಕಳಿಗೆ ಹೆಚ್ಚಾಗಿ ಪ್ರತ್ಯೇಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲದೆ ಇರುವುದು ಹಾಗೂ ಪೋಷಕರ ನಿರ್ಲಕ್ಷ್ಯ ಕಂದಮ್ಮಗಳ ಸಾವಿಗೆ ಕಾರಣವಾಗ್ತಿದೆ.
ಬೆಂಗಳೂರು, ಜ.14: ಕೊರೊನಾ (Coronavirus) ಮೊದಲ ಹಾಗೂ ಎರಡನೇ ಅಲೆ ಬಳಿಕ ಒಂದಲ್ಲ ಒಂದು ರೋಗಗಳು ಮಕ್ಕಳಿಗೆ ಬಿಟ್ಟು ಬಿಡ್ಡದಂತೆ ಒಕ್ಕರಿಸುತ್ತಿವೆ. ಎಲ್ಲವೂ ಕೂಡಾ ತುಸು ಹೆಚ್ಚಾಗಿಯೇ ಈ ವರ್ಷ ಪುಟಾಣಿಗಳಿಗೆ ಕಾಟ ನೀಡಿವೆ. ಡೆಂಘಿ, ಅಡಿನೋ ವೈರಸ್, ನ್ಯೂಮೋನಿಯಾ, ಅಪೌಷ್ಠಿಕತೆ, ಉಸಿರಾಟದ ತೊಂದರೆಯ ಸಮಸ್ಯೆಗಳು ಕೊಂಚ ಈ ವರ್ಷ ಹೆಚ್ಚಾಗಿಯೇ ಮಕ್ಕಳನ್ನ ಕಾಡಿದ್ದು ಮಕ್ಕಳ ಸಾವಿನ ಸಂಖ್ಯೆ ಹೆಚ್ಚಾಗಿದೆ (Children Death Increased). ಆದರೆ ಇದರ ಜೊತೆಗೆ ಪೋಷಕರ ನಿರ್ಲಕ್ಷ್ಯ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಇಂದಿರಾಗಾಂಧಿ ಆಸ್ಪತ್ರೆಯಂತೆ ಮಕ್ಕಳಿಗೆ ಪ್ರತ್ಯೇಕ ಆಸ್ಪತ್ರೆ ಇಲ್ಲದೆ ಇರುವುದು ಮಕ್ಕಳ ಸಾವಿನ ಏರಿಕೆಗೆ ಪ್ರಮುಖ ಕಾರಣವಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರುವ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಂತೆ ರಾಜ್ಯದಲ್ಲಿ ಬೇರೆಯಲ್ಲೂ ಮಕ್ಕಳ ಪ್ರತ್ಯೇಕ ಆಸ್ಪತ್ರೆ ಇಲ್ಲ. ಬೇರೆ ಜಿಲ್ಲೆಗಳಿಂದ ಅಷ್ಟೇ ಅಲ್ಲದೆ ತಮಿಳುನಾಡು, ಆಂಧ್ರ ಪ್ರದೇಶದಿಂದಲೂ ಮಕ್ಕಳ ಹೆಚ್ಚಿನ ಚಿಕಿತ್ಸೆಗೆ ಈ ಆಸ್ಪತ್ರೆಗೆ ಬರಬೇಕಿದೆ. ಸದ್ಯ ಕಂದಮ್ಮಗಳ ಸಾವಿಗೆ ಮಕ್ಕಳ ಆರೋಗ್ಯದ ಬಗ್ಗೆ ಪೋಷಕರ ದಿವ್ಯ ನಿರ್ಲಕ್ಷ್ಯವು ಕೂಡಾ ಕಾರಣವಾಗಿದೆ ಅಂತಾ ವೈದ್ಯರು ಹೇಳುತಿದ್ದಾರೆ. ಕೊನೆ ಗಳಿಗೆಯಲ್ಲಿ ಗೋಲ್ಡ್ ಟೈಮ್ನಲ್ಲಿ ಚಿಕಿತ್ಸೆ ಸಿಗುತ್ತಿಲ್ಲ. ಕೊನೆಯ ಗಳಿಗೆಯಲ್ಲಿ ಮಕ್ಕಳನ್ನ ಪೋಷಕರು ಆಸ್ಪತ್ರಗೆ ದಾಖಲು ಮಾಡ್ತೀದ್ದಾರೆ. ಅಲ್ದೆ ಬೇರೆ ಬೇರೆ ಆಸ್ಪತ್ರೆಯಿಂದ ತಡವಾಗಿ ಇಲ್ಲಿಗೆ ರೆಫರ್ ಆಗಿ ಬರ್ತಾರೆ. ಉತ್ತರ ಕರ್ನಾಟಕದ ಅನೇಕ ಜಿಲ್ಲೆಯ ಪೋಷಕರು ಬೆಂಗಳೂರು ದೂರ ಅಂತಾ ಕೊನೆಯ ಗಳಿಗೆಯಲ್ಲಿ ನಮ್ಮ ಆಸ್ಪತ್ರೆಗೆ ಬರ್ತಾರೆ. ಇದರಿಂದ ನಮ್ಮ ಆಸ್ಪತ್ರೆಯಲ್ಲಿ ಕಳೆದ 9 ತಿಂಗಳಲ್ಲಿ 380 ಮಕ್ಕಳ ಸಾವಾಗಿದೆ ಎಂದು ಇಂದಿರಾಗಾಂಧಿ ಆಸ್ಪತ್ರೆಯ ನಿರ್ದೇಶಕ ಡಾ ಸಂಜಯ್ ತಿಳಿಸಿದ್ದಾರೆ.
ತಿಂಗಳು | ಅಡ್ಮಿಷನ್ | ಸಾವು |
ಜನವರಿ | 1623 | 48 |
ಫೆಬ್ರವರಿ | 1455 | 46 |
ಮಾರ್ಚ್ | 1584 | 48 |
ಏಪ್ರಿಲ್ | 1384 | 27 |
ಮೇ | 1420 | 44 |
ಜೂನ್ | 1463 | 40 |
ಜುಲೈ | 1713 | 30 |
ಆಗಸ್ಟ್ | 2080 | 47 |
ಸೆಪ್ಟೆಂಬರ್ | 1818 | 50 |
ಇದನ್ನೂ ಓದಿ: ಸರ್ಕಾರದ ಸಹಭಾಗಿತ್ವ: ಜ.18 ರಿಂದ 26ರ ವರೆಗೆ ಬೆಂಗಳೂರಿನಲ್ಲಿ ಚೆಸ್ ಪಂದ್ಯವಳಿ, ವಿಶ್ವನಾಥ್ ಆನಂದ ಭಾಗಿ
ಪ್ರತಿ ತಿಂಗಳು 40 ರಿಂದ 50 ಪುಟಾಣಿ ಮಕ್ಕಳು ಉಸಿರು ಚೆಲ್ಲುತ್ತಿವೆ. ಇಂದಿರಾಗಾಂಧಿ ಆಸ್ಪತ್ರೆಯಲ್ಲಿ ಕಳೆದ ಜನವರಿ 1 ರಿಂದ ಸೆಪ್ಟೆಂಬರ್ ವರೆಗೆ ಬರೊಬ್ಬರಿ 380 ಮಕ್ಕಳು ಸಾವನಪ್ಪಿವೆ. ನಗರದ ಬೇರೆ ಬೇರೆ ಆಸ್ಪತ್ರೆಯಿಂದ ಮಕ್ಕಳು ಗಂಭೀರ ಹಂತ ತಲುಪಿದ ಬಳಿಕ ಇಂದಿರಾಗಾಂಧಿ ಆಸ್ಪತ್ರೆಗೆ ರೆಫರ್ ಮಾಡಲಾಗುತ್ತದೆ. ಈ ವೇಳೆ ಮಕ್ಕಳಿಗೆ ಬೇರೆ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಸಿಕ್ಕಿರೋದಿಲ್ಲ. ಕೊನೆಯ ಸ್ಟೇಜ್ ನಲ್ಲಿ ಮಕ್ಕಳನ್ನ ಆಸ್ಪತ್ರೆಗೆ ಕರೆ ತರೋ ಹಿನ್ನೆಲೆ ಮಕ್ಕಳನ್ನ ಹೆಚ್ಚಾಗಿ ಬದುಕಿಸಲು ಸಾಧ್ಯವಾಗ್ತಿಲ್ಲ. ನಮ್ಮಲ್ಲಿ ಪ್ರತಿ ತಿಂಗಳು ಸರಾಸರಿ 1400-1500 ಮಕ್ಕಳು ಪ್ರತಿ ತಿಂಗಳು ದಾಖಲಾಗ್ತಾರೆ. ಈ ವರ್ಷ ಡೆಂಗ್ಯೂ, ನಿಮೋನಿಯಾ ಕೂಡಾ ಹೆಚ್ಚಾಗಿರುವುದರಿಂದ ಮಕ್ಕಳ ಸಾವಿನ ಪ್ರಮಾಣ ಹೆಚ್ಚಾಗಿದ್ರು ಗುಣಮುಖ ಮಕ್ಕಳ ಸಂಖ್ಯೆಯೂ ಹೆಚ್ಚಾಗಿದೆ ಎಂದು ಇಂದಿರಾಗಾಂಧಿ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದರು.
ಒಟ್ನಲ್ಲಿ ರಾಜ್ಯದಲ್ಲಿ ಏಕೈಕ ಮಕ್ಕಳ ಪ್ರತ್ಯೇಕ ಆಸ್ಪತ್ರೆಯಿಂದ ಮಕ್ಕಳಿಗೆ ಉತ್ತಮ ಗುಣಮಟ್ಟದ ತುರ್ತು ಚಿಕಿತ್ಸೆ ಸಿಗುತ್ತಿಲ್ಲ. ಗೋಲ್ಡ್ ಟೈಮ್ ನಲ್ಲಿಯೇ ಸೂಕ್ತ ಚಿಕಿತ್ಸಾ ಕೊರತೆ ಮಕ್ಕಳ ಸಾವಿಗೆ ಪ್ರಮುಖ ಕಾರಣವಾಗ್ತಿದ್ದು ಸರ್ಕಾರ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕಿದೆ. ಇಂದಿರಾಗಾಂಧಿ ಆಸ್ಪತ್ರೆಯ ಸಬ್ ಯೂನಿಟ್ ಗಳನ್ನ ರಾಜ್ಯದಲ್ಲಿ ಆರಂಭಿಸಿ ಮಕ್ಕಳ ಸಾವಿಗೆ ಬ್ರೇಕ್ ಹಾಕಬೇಕಿದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ