ಕಾಲೇಜಿನ ಬೇಜವಾಬ್ದಾರಿತನಕ್ಕೆ ಶಿಕ್ಷಣದಿಂದ ಅತಂತ್ರಳಾದ ವಿದ್ಯಾರ್ಥಿನಿ: 8 ವರ್ಷ ಅಲೆದರೂ ಸಿಕ್ಕಿಲ್ಲ ದಾಖಲೆಗಳು

ಕಳೆದ ಎಂಟು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಗೆ ಸೇರಲು ಸಲ್ಲಿಸಿದ್ದ ದಾಖಲೆಗಳನ್ನು ಮರಳಿ ಪಡೆಯಲು ವಿದ್ಯಾರ್ಥಿನಿಯೊಬ್ಬರು ಹರಸಾಹಸ ಪಡುತ್ತಿದ್ದು ಬೇರೆ ಕಾಲೇಜಿಗೆ ಸೇರಲಾಗದೆ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಮೈಸೂರು ರಸ್ತೆಯ ಕಂಬಿಪುರದಲ್ಲಿರುವ ಎಸಿಎಸ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್‌ ಮಾಡುತ್ತಿದ್ದ ವಿದ್ಯಾರ್ಥಿನಿ ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟಿದ್ದು ದಾಖಲೆಗಳನ್ನು ಹಿಂಪಡೆಯಲು ಓಡಾಡುತ್ತಿದ್ದಾರೆ.

ಕಾಲೇಜಿನ ಬೇಜವಾಬ್ದಾರಿತನಕ್ಕೆ ಶಿಕ್ಷಣದಿಂದ ಅತಂತ್ರಳಾದ ವಿದ್ಯಾರ್ಥಿನಿ: 8 ವರ್ಷ ಅಲೆದರೂ ಸಿಕ್ಕಿಲ್ಲ ದಾಖಲೆಗಳು
ಎಸಿಎಸ್ ಕಾಲೇಜು
Follow us
|

Updated on: Nov 07, 2023 | 9:29 AM

ಬೆಂಗಳೂರು, ನ.07: ಬೆಂಗಳೂರು ಮೂಲದ ಕಾಲೇಜಿಗೆ ಪ್ರವೇಶ ಪಡೆದಿದ್ದ ವಿದ್ಯಾರ್ಥಿನಿಯೊಬ್ಬರು ಕಳೆದ ಎಂಟು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಗೆ ಸೇರಲು ಸಲ್ಲಿಸಿದ್ದ ದಾಖಲೆಗಳನ್ನು ಮರಳಿ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಎಸಿಎಸ್ ಕಾಲೇಜಿನ (ACS College of Engineering) ಬೇಜವಾಬ್ದಾರಿತನದಿಂದ ವಿದ್ಯಾರ್ಥಿನಿಯ ಬದುಕು ಅತಂತ್ರವಾಗಿದೆ. ಬೇರೆ ಯಾವ ಕಾಲೇಜಿಗೂ ಸೇರಲಾಗದೇ ಶಿಕ್ಷಣದಿಂದ ವಂಚಿತರಾಗಿದ್ದಾರೆ. ವಿದ್ಯಾರ್ಥಿಗಳು ಕೋರ್ಸ್ ಅನ್ನು ಅರ್ಧಕ್ಕೆ ಬಿಟ್ಟರೂ ಅವರ ಮೂಲ ದಾಖಲೆಗಳನ್ನು ಇಟ್ಟುಕೊಳ್ಳುವಂತಿಲ್ಲ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ (ವಿಟಿಯು) ಈ ಹಿಂದೆಯೇ ಹೇಳಿದೆ. ಆದರೂ ಈ ವಿದ್ಯಾರ್ಥಿನಿ ತನ್ನ ಸರ್ಟಿಫಿಕೇಟ್​ಗಳಿಗಾಗಿ ಸುಮಾರು 8 ವರ್ಷಗಳಿಂದ ಅಲೆಯುತ್ತಿದ್ದು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಭವ್ಯ (ಹೆಸರು ಬದಲಾಯಿಸಲಾಗಿದೆ), 2014-15ರಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮಂಜೂರು ಮಾಡಿದ ಸರ್ಕಾರಿ ಕೋಟಾದ ಸೀಟಿನಡಿ ಮೈಸೂರು ರಸ್ತೆಯ ಕಂಬಿಪುರದಲ್ಲಿರುವ ಎಸಿಎಸ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್‌ಗೆ ಪ್ರವೇಶ ಪಡೆದಿದ್ದರು. ಆದರೆ ಕೆಲವು ವೈಯಕ್ತಿಕ ಕಾರಣಗಳಿಂದಾಗಿ ಭವ್ಯ ಅವರು ಎರಡು ವರ್ಷಗಳ ನಂತರ ಓದನ್ನು ಬಿಡಬೇಕಾಗಿ ಬಂತು. ಎಜುಕೇಶನ್ ಡಿಸ್ಕಟಿನ್ಯೂ ಮಾಡಿದರು. ಆದರೆ ಕಾಲೇಜಿಗೆ ಸೇರುವಾಗ ಸಲ್ಲಿಸಿದ ದಾಖಲೆಗಳನ್ನು ಕಾಲೇಜು ಇನ್ನೂ ಹಿಂದಿರುಗಿಸಿಲ್ಲ. ಅಂದಿನಿಂದ ಇಲ್ಲಿಯವರೆಗೆ ಭವ್ಯ ಹಾಗೂ ಆಕೆಯ ಪೋಷಕರು ಅನೇಕ ಬಾರಿ ಕಾಲೇಜಿಗೆ ಭೇಟಿ ನೀಡಿ ದಾಖಲೆಗಳನ್ನು ಹಿಂದಿರುಗಿಸುವಂತೆ ಮನವಿ ಮಾಡಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.

ಇದನ್ನೂ ಓದಿ: ಶಾಲಾ ಕಾಲೇಜುಗಳಲ್ಲಿ ಚುನಾವಣಾ ಸಾಕ್ಷರತೆಯನ್ನು ಉತ್ತೇಜಿಸಲು ಚುನಾವಣಾ ಆಯೋಗ, ಶಿಕ್ಷಣ ಸಚಿವಾಲಯ ಜೊತೆಗೂಡಿವೆ

ಈ ಬಗ್ಗೆ ಮಾತನಾಡಿದ ವಿದ್ಯಾರ್ಥಿನಿಯ ಪೋಷಕರು, ಕಾಲೇಜು ಅಧಿಕಾರಿಗಳು ನಮಗೆ ಅಕ್ಷರಶಃ ಕಿರುಕುಳ ನೀಡುತ್ತಿದ್ದಾರೆ. ನಾವು ಪೊಲೀಸ್ ಮತ್ತು ವಿಶ್ವವಿದ್ಯಾಲಯಕ್ಕೆ ದೂರು ನೀಡಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಬೇರೆ ಕೋರ್ಸ್‌ಗೆ ಸೇರಲು ಸಾಧ್ಯವಾಗುತ್ತಿಲ್ಲ

ಮತ್ತೊಂದೆಡೆ ತನ್ನ ಮೂಲ ದಾಖಲೆಗಳಿಲ್ಲದೆ, ಭವ್ಯ ಅವರು ಬೇರೆ ಯಾವುದೇ ಕೋರ್ಸ್ ಅಥವಾ ಕಾಲೇಜಿಗೆ ಸೇರಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದಾಗಿ ಅವರು ಡ್ರಾಪ್ಔಟ್ ಆಗಿಯೇ ಉಳಿದಿದ್ದಾರೆ. ಶಿಕ್ಷಣದಿಂದ ವಂಚಿತರಾಗಿದ್ದಾರೆ.

ಇನ್ನು ಅಕ್ಟೋಬರ್ 5 ರಂದು, ವಿಟಿಯು ಶಿಕ್ಷಣ ಸಂಸ್ಥೆ ದಾಖಲೆಗಳನ್ನು ಹಿಂದಿರುಗಿಸುವಂತೆ ಕಾಲೇಜಿಗೆ ತಾಕೀತು ಮಾಡಿತ್ತು. ಕಾಲೇಜಿನ ಪ್ರಾಂಶುಪಾಲ ಎ ಎಂ ಪ್ರಸನ್ನಕುಮಾರ್ ಅವರನ್ನು ಸಂಪರ್ಕಿಸಿದಾಗ, ನಾನು ಇತ್ತೀಚೆಗೆ ಕಾಲೇಜಿಗೆ ಸೇರಿದ್ದು, ಘಟನೆ ಬಗ್ಗೆ ಈಗ ತಿಳಿದಿದೆ. ಪೋಷಕರು ನನಗೆ ಕರೆ ಮಾಡಿದ್ದಾರೆ. ಮುಂದಿನ ವಾರ ನನ್ನನ್ನು ಭೇಟಿಯಾಗಲು ಹೇಳಿದ್ದೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ