ಚಿಕಿತ್ಸೆಗಷ್ಟೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು, ಕೇಸ್ ದಾಖಲಿಸಲು ಹಿಂದೇಟು: ಪರಿಹಾರ ಹಣ ಮುಖ ನೋಡದ ಸುಟ್ಟ ಗಾಯಾಳುಗಳು

|

Updated on: Jun 07, 2023 | 8:14 AM

ಜನವರಿ 2020 ಮತ್ತು ಏಪ್ರಿಲ್ 2023 ರ ನಡುವೆ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೌಟುಂಬಿಕ ಹಿಂಸೆಗೆ ಒಳಗಾದ ಸುಮಾರು 600 ಸುಟ್ಟ ರೋಗಿಗಳನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗಿದೆ. ಆದ್ರೆ ಯಾರೂ ಕೂಡ ಸರ್ಕಾರದ ಯೋಜನೆಯಡಿ ಪರಿಹಾರ ಹಣ ಪಡೆಯುವ ಆಸಕ್ತಿ ತೋರಿಲ್ಲ.

ಚಿಕಿತ್ಸೆಗಷ್ಟೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು, ಕೇಸ್ ದಾಖಲಿಸಲು ಹಿಂದೇಟು: ಪರಿಹಾರ ಹಣ ಮುಖ ನೋಡದ ಸುಟ್ಟ ಗಾಯಾಳುಗಳು
ವಿಕ್ಟೋರಿಯಾ ಆಸ್ಪತ್ರೆ
Follow us on

ಬೆಂಗಳೂರು: ಪತಿಯ ಕಿರುಕುಳ, ಅತ್ತೆ ಕಾಟ, ವರದಕ್ಷಿಣೆ ಕಿರುಕುಳ ಹೀಗೆ ನಾನಾ ಸಮಸ್ಯೆಗಳಿಂದ ಗಂಡನ ಮನೆಯವರಿಂದ ಸೀಮೆ ಎಣ್ಣೆ ಸುರಿಸಿಕೊಂಡು, ಅಥವಾ ಹಿಂಸೆ ಸಹಿಸಲಾಗದೇ ತಾನೇ ಸೀಮೆ ಎಣ್ಣೆ ಸುರಿದು ಕೊಂಡು ನೋವಿನಿಂದ ವಿಲವಿಲ ಒದ್ದಾಡುತ ಸುಟ್ಟ ಗಾಯಗಳೊಂದಿಗೆ(Domestic Violence Burn Victims) ವಿಕ್ಟೋರಿಯಾ ಆಸ್ಪತ್ರೆಗೆ(Victoria Hospital) ವರ್ಷಕ್ಕೆ ನೂರಾರು ಹೆಣ್ಣುಮಕ್ಕಳು ಅಡ್ಮಿಟ್ ಆಗುತ್ತಾರೆ. ಆದರೆ ಇಂತಹ ಸಂತ್ರಸ್ತರು ಯಾರೂ ಸಹ ಸರ್ಕಾರದ ಸಂತ್ರಸ್ತ ಪರಿಹಾರ ಯೋಜನೆಯಡಿ ಪರಿಹಾರವನ್ನು(Victim Compensation Scheme) ಪಡೆದಿಲ್ಲ. ಇದಕ್ಕೆ ಕಾರಣ, ಸಂತ್ರಸ್ತರು ಪೊಲೀಸ್ ಕೇಸುಗಳನ್ನು ದಾಖಲಿಸದೇ ಇರುವುದು. ಭಯ ಅಥವಾ ಸಾಮಾಜಿಕ ಒತ್ತಡದಿಂದ ಪೊಲೀಸ್ ಕೇಸ್ ದಾಖಲಿಸದೆ ಸರ್ಕಾರದ ಯೋಜನೆಯ ಅಡಿ ಪರಿಹಾರ ಪಡೆಯುತ್ತಿಲ್ಲ.

ಗಂಡನಿಂದ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚುವಂತಹ ಹೀನ ಕೃತ್ಯದ ಬಳಿಕ ಹೆಚ್ಚಿನ ಮಹಿಳೆಯರು ತಮ್ಮ ಗಂಡನನ್ನು ಬಿಟ್ಟು ಹೋಗುತ್ತಾರೆ. ಯಾವುದೇ ಆರ್ಥಿಕ ಬೆಂಬಲವಿಲ್ಲದೆ ಒಂಟಿಯಾಗಿಯೇ ಜೀವನ ನಡೆಸುತ್ತಾರೆ. ಆದರೆ ಗಾಯದ ತೀವ್ರತೆಗೆ ಅನುಗುಣವಾಗಿ ಅವರು ಸರ್ಕಾರದ ಯೋಜನೆಯಡಿ 2 ರಿಂದ 8 ಲಕ್ಷ ರೂಪಾಯಿಗಳವರೆಗೆ ಪರಿಹಾರವನ್ನು ಪಡೆಯಬಹುದು.

ಕೇಸ್ ದಾಖಲಿಸಲು ಹಿಂದೇಟು ಹಾಕುವ ಮಹಿಳೆಯರು

ಜನವರಿ 2020 ಮತ್ತು ಏಪ್ರಿಲ್ 2023 ರ ನಡುವೆ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೌಟುಂಬಿಕ ಹಿಂಸೆಗೆ ಒಳಗಾದ ಸುಮಾರು 600 ಸುಟ್ಟ ರೋಗಿಗಳನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗಿದೆ ಎಂದು ಸಂತ್ರಸ್ತರ ಪರ ಆಸ್ಪತ್ರೆಯೊಂದಿಗೆ ಕೆಲಸ ಮಾಡುವ ಅವೇಕ್ಷಾ ಎಂಬ ಎನ್‌ಜಿಒನ ಸತ್ಯ ದೇವಿ ಎಂಬುವವರು ಮಾಹಿತಿ ನೀಡಿದ್ದಾರೆ. ಪತಿ ಅಥವಾ ಸಂಗಾತಿಯು ಮಹಿಳೆಯರನ್ನು ಸುಟ್ಟುಹಾಕಿದ ಪ್ರಕರಣಗಳು ಅಥವಾ ನಿರಂತರ ಕಿರುಕುಳದಿಂದಾಗಿ ಮಹಿಳೆಯರು ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಗಳು ಇದರಲ್ಲಿ ಸೇರಿವೆ ಎಂದು ಅವರು ತಿಳಿಸಿದರು.

ಪರಿಹಾರ ಪಡೆಯಲು, ಸಂತ್ರಸ್ತರು ಮೊದಲು ಎಫ್‌ಐಆರ್ ದಾಖಲಿಸಬೇಕು. ಆದರೆ 33 ಪ್ರಕರಣಗಳಲ್ಲಿ ಮಾತ್ರ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ, ಅದರಲ್ಲಿ 28 ಕೇಸ್​ಗಳು ಸುಟ್ಟಗಾಯಗಳು, ವರದಕ್ಷಿಣೆ ಸಂಬಂಧಿತ ಹಿಂಸೆ ಮತ್ತು ಆತ್ಮಹತ್ಯೆಗೆ ಪ್ರಚೋದನೆಯಿಂದ ಉಂಟಾದ ಸಾವುಗಳಾಗಿವೆ. ಉಳಿದ ಐವರು ಬದುಕುಳಿದವರು.

ಇದನ್ನೂ ಓದಿ: ಪ್ರೀತಿಸಿ ಮದುವೆಯಾಗಿದ್ದವಳ ಮೇಲೆ ಸೀಮೆ ಎಣ್ಣೆ ಸುರಿದು ಕೊಲೆ ಯತ್ನ; 26 ದಿನಗಳ ಹೋರಾಟದ ಬಳಿಕ ಪ್ರಾಣಬಿಟ್ಟ ಮಹಿಳೆ

ಸಂತ್ರಸ್ತರು ನ್ಯಾಯಾಲಯದ ವಿಚಾರಣೆಯ ನಂತರ ಪರಿಹಾರವನ್ನು ಪಡೆಯಬಹುದು, ಆದರೆ ಮಧ್ಯಂತರ ಪರಿಹಾರಕ್ಕಾಗಿ, ಅವರು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರವನ್ನು (KSLSA) ಸಂಪರ್ಕಿಸಬಹುದು. ಈವರೆಗೆ ಇಬ್ಬರು ಮಾತ್ರ ಪ್ರಾಧಿಕಾರಕ್ಕೆ ಬಂದಿದ್ದಾರೆ ಎಂದು ದೇವಿ ತಿಳಿಸಿದರು. ಮತ್ತು ಅವರಲ್ಲಿ ಒಬ್ಬರಿಗೆ ದಾಳಿಕೋರ ಮೂರನೇ ವ್ಯಕ್ತಿಯಾಗಿದ್ದು, ಪತಿ ಅಲ್ಲ. ಅವರು 1.5 ಲಕ್ಷ ರೂಪಾಯಿಗಳ ಮಧ್ಯಂತರ ಪರಿಹಾರವನ್ನು ಪಡೆದರು. ಸಂತ್ರಸ್ತರು ಸಾಮಾನ್ಯವಾಗಿ ಸುಟ್ಟಗಾಯಗಳ ನಿಜವಾದ ಕಾರಣವನ್ನು ವೈದ್ಯರಿಗೆ ಅಥವಾ ಪೊಲೀಸರಿಗೆ ಬಹಿರಂಗಪಡಿಸುವುದಿಲ್ಲ ಎಂದು ದೇವಿ ಹೇಳಿದರು.

ಸುಟ್ಟ ಗಾಯಗಳಿಂದ ಬಳಲುವವರಿಗೆ ಚಿಕಿತ್ಸೆಯು ಸಾಮಾನ್ಯವಾಗಿ ಆರರಿಂದ ಏಳು ತಿಂಗಳವರೆಗೆ ಇರುತ್ತದೆಯಾದ್ದರಿಂದ, ಕೆಲ ಸಂತ್ರಸ್ತರು ಆಸ್ಪತ್ರೆಯಲ್ಲಿ ನೋಡಿಕೊಳ್ಳುವುದು, ಖರ್ಚು ಮತ್ತು ನಂತರದ ಭೇಟಿಗಳಿಗಾಗಿ ತಮ್ಮ ಗಂಡನ ಮೇಲೆ ಅವಲಂಬಿತರಾಗಿರುತ್ತಾರೆ. ಆದ್ದರಿಂದ, ಅವರು ಈ ಕೃತ್ಯಗಳ ಬಗ್ಗೆ ಕೇಸ್ ದಾಖಲಿಸುವುದಿಲ್ಲ. ಅದು ಆಕಸ್ಮಿಕವಾಗಿ ನಡೆದ ಘಟನೆ ಎಂಬಂತೆ ಹೇಳಿಬಿಡುತ್ತಾರೆ. ದೂಷಣೆ ಮತ್ತು ಸಾಮಾಜಿಕ ಒತ್ತಡವು ಸಂತ್ರಸ್ತರನ್ನು ತಡೆಯುತ್ತದೆ. ಸಂತ್ರಸ್ತರು ಹೇಳಿಕೊಂಡಂತೆ ಸುಟ್ಟಗಾಯಗಳು ಅಡುಗೆಮನೆಯ ಅಪಘಾತಗಳಿಂದ ಅಲ್ಲ ಎಂಬುದು ಸ್ಪಷ್ಟವಾದಾಗಲೂ ಪೊಲೀಸರು ಪ್ರಕರಣಗಳನ್ನು ತನಿಖೆ ಮಾಡಲು ಹೋಗುವುದಿಲ್ಲ.

ಘಟನೆಯನ್ನು ಗಂಭೀರವಾಗಿ ಪರಿಗಣಿಸದ ಪೊಲೀಸರು

ಸುಟ್ಟ ಗಾಯಗಳಿಂದ ಚೇತರಿಕೆ ಕಂಡ ನಂತರವೂ ಕೂಡ ಮಹಿಳೆಯರ ಮುಂದುವರಿದ ಜೀವನ ಅಷ್ಟಾಗಿ ಚನ್ನಾಗಿರುವುದಿಲ್ಲ. ಆರೋಗ್ಯ ಸಮಸ್ಯೆಗಳಿಂದ, ಅವರು ಯೋಗ್ಯವಾದ ಉದ್ಯೋಗಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಬಾಡಿಗೆ, ಆಹಾರ ಮತ್ತು ಮಕ್ಕಳ ಶಿಕ್ಷಣ ಎಲ್ಲವೂ ತೊಂದರೆಯಾಗುತ್ತದೆ ಎಂದು ದೇವಿ ವಿವರಿಸಿದರು.

KSLSA ಉಪ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್ ಮಾತನಾಡಿ, ಪೊಲೀಸರು ಕೌಟುಂಬಿಕ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ತನಿಖೆ ಮಾಡಲು ಮತ್ತು ಎಫ್‌ಐಆರ್‌ಗಳನ್ನು ದಾಖಲಿಸಲು ಒಲವು ತೋರುತ್ತಿಲ್ಲ. ಪರಿಹಾರ ನೀಡುವ ಬಗ್ಗೆ ಅರಿವಿನ ಕೊರತೆ ಮತ್ತೊಂದು ಸಮಸ್ಯೆಯಾಗಿದೆ ಎಂದರು.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ