ಪ್ರವಾಸಕ್ಕೆ ಹೋದಾಗ ಮನೆ ಬಗ್ಗೆ ಚಿಂತೆ ಬೇಡ, ಬೆಂಗಳೂರು ಪೊಲೀಸರಿಂದ ನೂತನ ವ್ಯವಸ್ಥೆ ಜಾರಿ
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಮನೆಗಳ್ಳತನವನ್ನು ತಡೆಯಲು ಬೆಂಗಳೂರು ಪೊಲೀಸರು ಹೊಸ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಒಂದು ದಿನಕ್ಕಿಂತ ಹೆಚ್ಚು ಕಾಲ ಪ್ರಯಾಣಿಸುವವರು ತಮ್ಮ ಮನೆಯ ವಿಳಾಸ, ಫೋಟೋ ಮತ್ತು ದೂರವಾಣಿ ಸಂಖ್ಯೆಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಬೇಕು.ಈ ಮಾಹಿತಿ ಆಧಾರದ ಮೇಲೆ ಹೊಯ್ಸಳ ಸಿಬ್ಬಂದಿ ನಿಮ್ಮ ಮನೆಯನ್ನು ಕಾವಲು ಕಾಯುತ್ತದೆ. ಈ ಯೋಜನೆ ಪ್ರಸ್ತುತ ದಕ್ಷಿಣ ವಿಭಾಗದಲ್ಲಿ ಮಾತ್ರ ಜಾರಿಯಲ್ಲಿದೆ.

ಬೆಂಗಳೂರು, ಫೆಬ್ರವರಿ 04: ಬೆಂಗಳೂರು (Bengaluru) ನಗರದಲ್ಲಿ ದಿನದಿಂದ ದಿನಕ್ಕೆ ಮನೆಗಳ್ಳತನ (House Theft) ಪ್ರಕರಣಗಳು ಹೆಚ್ಚುತ್ತಿವೆ. ಇದನ್ನು ತೆಡೆಗಟ್ಟಲು ಬೆಂಗಳೂರು ಪೊಲೀಸರು (Bengaluru Police) ನೂತನ ಮಾರ್ಗವನ್ನು ಕಂಡುಕೊಂಡಿದ್ದಾರೆ. ಹೌದು, ಒಂದು ದಿನಕ್ಕಿಂತ ಹೆಚ್ಚು ದಿನಗಳ ಕಾಲ ಪ್ರವಾಸ ಅಥವಾ ಊರಿಗೆ ಹೋಗುವವರ ಮನೆಯ ಕಾವಲಿಗೆ ಪೊಲೀಸರು ಇರುತ್ತಾರೆ. ಆದರೆ, ನೀವು ಒಂದು ದಿನಕ್ಕಿಂತ ಹೆಚ್ಚು ದಿನಗಳ ಕಾಲ ಪ್ರವಾಸಕ್ಕೆ ಅಥವಾ ಊರಿಗೆ ಹೋಗುವ ವಿಚಾರವನ್ನು ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಿರಬೇಕು. ಆಗ ಪೊಲೀಸರು ಈ ವಿಚಾರವನ್ನು ರಾತ್ರಿ ಗಸ್ತು ತಿರುಗುವ ಹೊಯ್ಸಳಕ್ಕೆ ಮಾಹಿತಿ ನೀಡುತ್ತಾರೆ.
ಹೊಯ್ಸಳ ಸಿಬ್ಬಂದಿ ನಿಮ್ಮ ಮನೆಯನ್ನು ಕಾವಲು ಕಾಯುತ್ತಿರುತ್ತಾರೆ. ಸದ್ಯ ಈ ವ್ಯವಸ್ಥೆ ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಮಾತ್ರ ಕಾರ್ಯರೂಪಕ್ಕೆ ಬಂದಿದ್ದು, ಮುಂದಿನ ದಿನಗಳ ಎಲ್ಲ ವಿಭಾಗದಲ್ಲಿ ಕಾರ್ಯರೂಪಕ್ಕೆ ಬರಲಿದೆ ಎಂದು ಹೇಳಲಾಗುತ್ತಿದೆ.
ಮಾಹಿತಿ ನೀಡುವುದು ಹೇಗೆ?
ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸ್ ಆಯುಕ್ತರು ನೀಡಿರುವ ಮಾಹಿತಿ ಪ್ರಕಾರ, ಒಂದು ದಿನಕ್ಕಿಂತ ಹೆಚ್ಚು ದಿನಗಳ ಕಾಲ ಪ್ರವಾಸ ಅಥವಾ ಊರಿಗೆ ಹೋಗುವ ಮುನ್ನ, ದಕ್ಷಿಣ ವಿಭಾಗದ ಪೊಲೀಸ್ ಕಂಟ್ರೋಲ್ ರೂಮ್ ಸಂಖ್ಯೆ 080-22943111 ಅಥವಾ 9480801500ಗೆ ಕರೆ ಮಾಡಿ ನಿಮ್ಮ ಮನೆಯ ವಿಳಾಸ, ಫೋಟೋ ಮತ್ತು ನಿಮ್ಮ ದೂರವಾಣಿ ಸಂಖ್ಯೆಯನ್ನು ನೀಡಬೇಕು. ಈ ಮಾಹಿತಿಯನ್ನು ಪೊಲೀಸರು ದಾಖಲಿಸಿಕೊಳ್ಳುತ್ತಾರೆ.
ನಿಮ್ಮ ಮನೆಗೆ ಕಾವಲು ಹೇಗೆ ಇರುತ್ತದೆ?
ಕಂಟ್ರೋಲ್ ರೂಮ್ ಸಿಬ್ಬಂದಿ ಈ ಮಾಹಿತಿಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ನೀಡುವ ಜೊತೆಗೆ ಮನೆಯ ಮೇಲೆ ಗಮನವಿರಲಿ ಎಂದು ಎಚ್ಚರಿಸುತ್ತಾರೆ. ದಕ್ಷಿಣ ವಿಭಾಗದ ಅಡಿಯಲ್ಲಿ ಒಟ್ಟು 18 ಪೊಲೀಸ್ ಠಾಣೆಗಳು ಬರುತ್ತವೆ. ಈ ಉಪಕ್ರಮಕ್ಕೆ ‘Locked House Checking System’ ಎಂದು ಹೆಸರಿಡಲಾಗಿದೆ. ಆಯಾ ಪೊಲೀಸ್ ಠಾಣೆ ಅಧಿಕಾರಿಗಳು ಖಾಲಿ ಇರುವ ಮನೆಗಳ ಪಟ್ಟಿ ಸಿದ್ದಪಡಿಸಿಕೊಳ್ಳುತ್ತಾರೆ. ಬಳಿಕ, ಈ ಪಟ್ಟಿಯನ್ನು ರಾತ್ರಿ ಗಸ್ತು ತಿರುಗುವ ಹೊಯ್ಸಳ ಸಿಬ್ಬಂದಿಗೆ ನೀಡುತ್ತಾರೆ. ಹೊಯ್ಸಳ ಸಿಬ್ಬಂದಿ ನಿಮ್ಮ ಮನೆಗೆ ಕಾವಲಾಗಿರುತ್ತಾರೆ.
ಇದನ್ನೂ ಓದಿ: ಸ್ನೇಹಿತೆಗೆ 3 ಕೋಟಿ ರೂ. ಮೌಲ್ಯದ ಮನೆ ಕಟ್ಟಿಸಿಕೊಟ್ಟಿದ್ದ ಕಳ್ಳನಿಗಿತ್ತು ಪ್ರಖ್ಯಾತ ನಟಿ ಜೊತೆ ನಂಟು
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಮನೆಗಳ್ಳತನ ಪ್ರಕರಣ
ಕಳೆದ ಕೆಲವು ತಿಂಗಳಿನಿಂದ ಬೆಂಗಳೂರಿನಲ್ಲಿ ಮನೆಗಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ಖಾಸಗಿ ಸುದ್ದಿ ವಾಹಿನಿ ನ್ಯೂಸ್9 ವರದಿ ಮಾಡಿರುವ ಪ್ರಕಾರ, 2023ರಲ್ಲಿ ನಗರದಲ್ಲಿ 879 ರಾತ್ರಿ ಮನೆಗಳ್ಳತನ ಪ್ರಕರಣಗಳು ದಾಖಲಾಗಿದ್ದವು. ಇದರಲ್ಲಿ 264 ಪ್ರಕರಣಗಳು ಬಗೆಹರಿದಿವೆ. ಇನ್ನು, 2022 ಮತ್ತು 2021ರಲ್ಲಿ 702 ಮತ್ತು 654 ಪ್ರಕರಣಗಳು ದಾಖಲಾಗಿದ್ದವು. 2023ರಲ್ಲಿ ಮನೆಗಳ್ಳತನ ಪ್ರಕರಣಗಳು ಹೆಚ್ಚಿವೆ.