ಬರೋಬ್ಬರಿ 250 ಮೀಟರ್ ಎತ್ತರದ ಬೆಂಗಳೂರಿನ ಸ್ಕೈ ಡೆಕ್ ಹೇಗಿರಲಿದೆ?; ಇದರೊಳಗೆ ಏನೇನು ಇರುತ್ತೇ?

|

Updated on: May 07, 2024 | 3:49 PM

ಚೀನಾದ ಶಾಂಘೈನಲ್ಲಿನ ‘ಶಾಂಘೈ ಟವರ್‌’ ಯೋಜನೆಯನ್ನು ಪ್ರೇರಣೆಯಾಗಿಟ್ಟುಕೊಂಡು ಆಸ್ಟ್ರಿಯಾದ ಕೂಪ್ ಹಿಮ್ಮೆಲ್ಬ್‌ (ಎಲ್) ಎಯು ಸಂಸ್ಥೆಯು ಬೆಂಗಳೂರಿನ ಸ್ಕೈ ಡೆಕ್ ಅನ್ನು ವಿನ್ಯಾಸಗೊಳಿಸಲಿದೆ. ಫ್ರಾನ್ಸ್‌ನ ಮ್ಯೂಸಿ ಡೆಸ್ ಕಾನ್ಫ್ಲುಯೆನ್ಸ್ ಮತ್ತು ಜರ್ಮನಿಯ ಯುರೋಪಿಯನ್ ಸೆಂಟ್ರಲ್ ಬ್ಯಾಂಕ್‌ನಂತಹ ನಿರ್ಮಾಣಗಳಲ್ಲಿ ಇವರು ಕೆಲಸ ಮಾಡಿದ್ದಾರೆ.

ಬರೋಬ್ಬರಿ 250 ಮೀಟರ್ ಎತ್ತರದ ಬೆಂಗಳೂರಿನ ಸ್ಕೈ ಡೆಕ್ ಹೇಗಿರಲಿದೆ?; ಇದರೊಳಗೆ ಏನೇನು ಇರುತ್ತೇ?
ಬೆಂಗಳೂರು ಸ್ಕೈ ಡೆಕ್
Follow us on

ರೋಮಾಂಚಕ ಸ್ಕೈ ಲೈನ್‌ಗೆ ಹೆಸರುವಾಸಿಯಾಗಿರುವ ಬೆಂಗಳೂರು ನಗರವು ಇದೀಗ ಭಾರತದ ಅತಿ ಎತ್ತರದ ಸ್ಕೈ ಡೆಕ್ (Sky Deck) ನಗರ ಎಂಬ ಹೆಗ್ಗಳಿಕೆ ಪಡೆಯಲು ಅದ್ಭುತ ಯೋಜನೆಯನ್ನು ಪ್ರಾರಂಭಿಸಿದೆ. ಬರೋಬ್ಬರಿ 250 ಮೀಟರ್ ಎತ್ತರದ ಸ್ಕೈ ಡೆಕ್ ನಿರ್ಮಾಣಕ್ಕೆ ನಿರ್ಧರಿಸಲಾಗಿದ್ದು, ಬೆಂಗಳೂರಿನಲ್ಲಿ ಆಕರ್ಷಕ ಪ್ರವಾಸಿ ತಾಣ ನಿರ್ಮಾಣಕ್ಕೆ ಯೋಜನೆ ಮಾಡಲಾಗಿದೆ. ಈಗಾಗಲೇ ಸ್ಕೈ ಡೆಕ್‌ನ ನಿರ್ಮಾಣ ವೆಚ್ಚವನ್ನು ಅಂದಾಜು ಮಾಡಲು ವಿವರವಾದ ಯೋಜನಾ ವರದಿಗಳಿಗೆ (ಡಿಪಿಆರ್) ಟೆಂಡರ್‌ಗಳನ್ನು ನೀಡುವ ಮೂಲಕ ನಾಗರಿಕ ಸಂಸ್ಥೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮೊದಲ ಹೆಜ್ಜೆ ಇಟ್ಟಿದೆ.

ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ವೀವ್ ಡೆಕ್ ವಿಡಿಯೋವನ್ನು ವೀಕ್ಷಿಸಿದ ನಂತರ ಈ ಯೋಜನೆಯು ಮತ್ತಷ್ಟು ವೇಗವನ್ನು ಪಡೆದುಕೊಂಡಿದೆ. ಬಿಬಿಎಂಪಿ ಅಧಿಕಾರಿಗಳು ಸ್ಕೈ ಡೆಕ್‌ಗಾಗಿ ಎರಡು ಸಂಭಾವ್ಯ ಸ್ಥಳಗಳನ್ನು ಗುರುತಿಸಿ ಫೈನಲ್ ಮಾಡಿದ್ದರು. ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಎನ್‌ಜಿಇಎಫ್ ಮತ್ತು ಯಶವಂತಪುರದ ಸೋಪ್ ಫ್ಯಾಕ್ಟರಿ ಎರಡು ಸ್ಥಳಗಳನ್ನು ಆಯ್ಕೆ ಮಾಡಲಾಗಿತ್ತು. ಇದರಲ್ಲಿ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಇರುವ ಎನ್‌ಜಿಇಎಫ್​ನ ಪ್ರದೇಶವನ್ನು ಬಹುತೇಕ ಅಂತಿಮ ಮಾಡಲಾಗಿದೆ. ಸರ್ಕಾರಿ ಸ್ವಾಮ್ಯದ ಸೈಟ್‌ಗಳನ್ನು ಪರಿಗಣಿಸಲಾಗುತ್ತದೆ. ಯೋಜನೆಗೆ ಅನುಕೂಲವಾಗುವಂತೆ ಬಿಬಿಎಂಪಿ ಡಿಪಿಆರ್‌ ಸಿದ್ಧಪಡಿಸಲು 3 ಕೋಟಿ ರೂ. ಗಳನ್ನು ಮೀಸಲಿಟ್ಟಿದೆ.

ಸ್ಕೈ ಡೆಕ್ ಬೆಂಗಳೂರಿನ ವೈಮಾನಿಕ ನೋಟವನ್ನು ಒದಗಿಸುವ ಮೂಲಕ ಸಮಗ್ರ ಪ್ರವಾಸಿ ತಾಣವಾಗಲು ಸಜ್ಜಾಗಿದೆ. ಅದರ ಪ್ರಾಥಮಿಕ ಕಾರ್ಯವನ್ನು ಮೀರಿ, ವಾಹನ ನಿಲುಗಡೆ, ರೆಸ್ಟೋರೆಂಟ್‌ಗಳು, ಥಿಯೇಟರ್ ಮತ್ತು ಸ್ಕೈ ಗಾರ್ಡನ್‌ನಂತಹ ಸೌಕರ್ಯಗಳನ್ನು ಹೊಂದಿರುತ್ತದೆ. ಮೇಲಿನ ವಿಭಾಗವು ರೋಲರ್-ಕೋಸ್ಟರ್ ಸ್ಟೇಷನ್, ಎಕ್ಸಿಬಿಷನ್ ಹಾಲ್, ಸ್ಕೈ ಲಾಬಿ, ಬಾರ್ ಮತ್ತು ವಿಐಪಿಗಳಿಗಾಗಿ ವಿಶೇಷ ಸ್ಥಳ ಒಳಗೊಂಡಿರುತ್ತದೆ.

ಚೀನಾದ ಶಾಂಘೈನಲ್ಲಿನ ‘ಶಾಂಘೈ ಟವರ್‌’ ಯೋಜನೆಯನ್ನು ಪ್ರೇರಣೆಯಾಗಿಟ್ಟುಕೊಂಡು ಆಸ್ಟ್ರಿಯಾದ ಕೂಪ್ ಹಿಮ್ಮೆಲ್ಬ್‌ (ಎಲ್) ಎಯು ಸಂಸ್ಥೆಯು ಬೆಂಗಳೂರಿನ ಸ್ಕೈ ಡೆಕ್ ಅನ್ನು ವಿನ್ಯಾಸಗೊಳಿಸಲಿದೆ. ಫ್ರಾನ್ಸ್‌ನ ಮ್ಯೂಸಿ ಡೆಸ್ ಕಾನ್ಫ್ಲುಯೆನ್ಸ್ ಮತ್ತು ಜರ್ಮನಿಯ ಯುರೋಪಿಯನ್ ಸೆಂಟ್ರಲ್ ಬ್ಯಾಂಕ್‌ನಂತಹ ನಿರ್ಮಾಣಗಳಲ್ಲಿ ಇವರು ಕೆಲಸ ಮಾಡಿದ್ದಾರೆ. ಈ ಯೋಜನೆಗಾಗಿ ಅವರು ಬೆಂಗಳೂರಿನ ವಿಶ್ವ ವಿನ್ಯಾಸ ಸಂಸ್ಥೆಯೊಂದಿಗೆ ಸಹಕರಿಸಿದ್ದಾರೆ.

ಸ್ಕೈ ಡೆಕ್ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?

ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಈ ಯೋಜನೆಗೆ ತಗುಲುವ ವೆಚ್ಚ ಮತ್ತು ಅದರ ನಿರ್ಮಾಣಕ್ಕೆ ಬೇಕಾದ 8-10 ಎಕರೆ ಭೂಮಿಯನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ”ಸ್ಕೈ ಡೆಕ್ ಯೋಜನೆಯು ಆಲದ ಮರದ ರಚನೆಯಲ್ಲಿರಲಿದ್ದು, 250 ಮೀಟರ್ ಎತ್ತರವಿರಲಿದೆ. ಇದನ್ನು ವಿಶ್ವ ವಿನ್ಯಾಸ ಸಂಸ್ಥೆ (ಡಬ್ಲ್ಯುಡಿಒ) ಸಹಯೋಗದೊಂದಿಗೆ ಆಸ್ಟ್ರೀಯ ಮೂಲದ ವಿನ್ಯಾಸ ಮತ್ತು ವಾಸ್ತುಶಿಲ್ಪ ಸಂಸ್ಥೆಯಾಗಿರುವ ಕೋಪ್ ಹಿಮ್ಮೆಲ್ಬ್ (ಎಲ್) ಎಯು ವಿನ್ಯಾಸಗೊಳಿಸಲಿದೆ,” ಎಂದು ಹೇಳಿದ್ದಾರೆ.

”ಆಸ್ಟ್ರೀಯಾ ಮೂಲದ COOP HIMMELB(L)AU ಸಂಸ್ಥೆಯು ವರ್ಲ್ಡ್‌ ಡಿಸೈನ್ ಆರ್ಗನೈಸೇಶನ್ ಸಹಕಾರದೊಂದಿಗೆ ಬೆಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸ್ಕೈ ಡೆಸ್ಕ್ ಯೋಜನೆಯನ್ನು ಪರಿಶೀಲಿಸಿದೆ. ಇದು ನಿರ್ಮಾಣವಾದ ನಂತರ ದೇಶದಲ್ಲೇ ಅತಿ ಎತ್ತರದ ವೀಕ್ಷಣಾ ಗೋಪುರ ಎನ್ನುವ ಕೀರ್ತಿಗೆ ಪಾತ್ರವಾಗಲಿದೆ. ಯೋಜನೆಯ ಅನುಷ್ಠಾನಕ್ಕೆ ಸೂಕ್ತವಾದ 8-10 ಎಕರೆ ಭೂಮಿಯನ್ನು ಗುರುತಿಸುವುದರ ಜೊತೆಗೆ ಆರ್ಥಿಕ ಕಾರ್ಯಸಾಧ್ಯತೆಯನ್ನು ನಿರ್ಣಯಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ,” ಎಂದಿದ್ದಾರೆ.

ಈ ಕುರಿತು ಟಿವಿ9 ಆ್ಯಪ್ ಜೊತೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ”ಇದು 250 ಮೀಟರ್ ಎತ್ತರದ ಗೋಪುರವಾಗಿದೆ. ಅದ್ಭುತವಾಗಿ ನಿರ್ಮಾಣವಾಗಲಿದೆ. ಈ ಸ್ಕೈಡೆಕ್ ವಿನ್ಯಾಸವು ಆಲದ ಮರವನ್ನು ಹೋಲುತ್ತದೆ. ರೆಂಬೆ ಕೊಂಬೆಗಳು, ನೇತಾಡುವ ಬೇರುಗಳು ಮತ್ತು ಹೂವುಗಳನ್ನು ಹೊಂದಿರುವ ಆಲದ ಮರದ ರಚನೆಯಿಂದ ಸ್ಫೂರ್ತಿ ಪಡೆದಿದೆ. ಇದು ನಿರ್ಮಾಣವಾದರೆ, ಅತ್ಯದ್ಭುತ ಪ್ರವಾಸಿ ತಾಣವಾಗಲಿದೆ. ಪ್ರವಾಸಿಗರು ಕಟ್ಟಡದ ಮೇಲಿನಿಂದ ಬೆಂಗಳೂರು ನಗರದ ಅದ್ಭುತ ನೋಟವನ್ನು ಆನಂದಿಸಬಹುದು. ವೀಕ್ಷಣಾ ಡೆಕ್‌ನ ಹೊರತಾಗಿ, ಇಲ್ಲಿ ಹಲವಾರು ಬಗೆಯ ಮನರಂಜನಾ ಚಟುವಟಿಕೆಗಳು ಇರಲಿವೆ. ಫನ್ ಸೌಲಭ್ಯಗಳು, ಶಾಪಿಂಗ್ ಪ್ರದೇಶ, ರೆಸ್ಟೋರೆಂಟ್‌ಗಳು, ಥಿಯೇಟರ್ ಮತ್ತು ಸ್ಕೈ ಗಾರ್ಡನ್ ಕೂಡಾ ಇರಲಿದೆ,” ಎಂದು ಹೇಳಿದ್ದಾರೆ.

ತುಷಾರ್ ಗಿರಿನಾಥ್, ಬಿಬಿಎಂಪಿ ಮುಖ್ಯ ಆಯುಕ್ತ.

”250 ಮೀಟರ್ ಉದ್ದದ ಸ್ಕೈಡೆಕ್ ನಿರ್ಮಾಣಕ್ಕಾಗಿ NGEF ಭೂಮಿಯಲ್ಲಿ 10 ಎಕರೆಗಳನ್ನು ನಿಯೋಜಿಸಲಾಗಿದೆ. ಇದು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣಕ್ಕೆ ಸಮೀಪವಿರುವ ಕಾರಣ ಆಯಕಟ್ಟಿನದ್ದಾಗಿದೆ, ಖಾಸಗಿ ವಾಹನಗಳಿಗಿಂತ ಮೆಟ್ರೋ ಸಾರಿಗೆಯ ಬಳಕೆಯನ್ನು ಉತ್ತೇಜಿಸುತ್ತದೆ. ಫುಡ್ ಕೋರ್ಟ್‌ಗಳು, ಆಟದ ಪ್ರದೇಶಗಳು ಮತ್ತು ವಿಶ್ರಾಂತಿ ಕೊಠಡಿಗಳಂತಹ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಮಹತ್ವಾಕಾಂಕ್ಷೆಯ ಈ ಯೋಜನೆಗೆ ಅಂದಾಜು ವೆಚ್ಚವು 400 ರಿಂದ 500 ಕೋಟಿ ರೂಪಾಯಿಗಳ ವ್ಯಾಪ್ತಿಯಲ್ಲಿ ಬರುತ್ತದೆ,” ಎಂದರು.

ಪ್ರಾಥಮಿಕ ಯೋಜನೆಯ ಜೊತೆಗೆ ಎನ್‌ಜಿಇಎಫ್‌ ಜಮೀನಿನಲ್ಲಿ 30 ಕೋಟಿ ರೂ. ಗಳ ಅಂದಾಜು ವೆಚ್ಚದಲ್ಲಿ ಟ್ರೀ ಪಾರ್ಕ್‌ ಅಭಿವೃದ್ಧಿಗೆ ಕೂಡ ಪ್ರಸ್ತಾವನೆ ಸಲ್ಲಿಸಲಾಗಿದೆ. ಇಲ್ಲಿ ಉದ್ಯಾನಗಳು ಮತ್ತು ಕಾರಂಜಿಗಳನ್ನು ಸೇರಿಸುವ ಮೂಲಕ ಈ ಪ್ರದೇಶದ ಸೌಂದರ್ಯದ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸಲು ಯೋಜನೆಗಳು ಜಾರಿಯಲ್ಲಿವೆ. ವೀಕ್ಷಣೆ ಪ್ರದೇಶವನ್ನು ಪ್ರವೇಶಿಸಲು ಶುಲ್ಕ ವಿಧಿಸಲಾಗುತ್ತದೆ.

ಈ ಯೋಜನೆ ಕುರಿತು ಹೆಚ್ಚಿನ ಮಾಹಿತಿ ನೀಡಿದ ಅಧಿಕಾರಿಯೊಬ್ಬರು, ”ಸದ್ಯ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಿಂದ ಬಿಬಿಎಂಪಿಗೆ ಭೂಮಿ ಹಸ್ತಾಂತರಿಸುವ ಪ್ರಕ್ರಿಯೆ ಅಂತಿಮಗೊಂಡಿಲ್ಲ. ಭೂಮಿಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆ (ಯುಡಿಡಿ) ಮತ್ತು ಕೈಗಾರಿಕಾ ಇಲಾಖೆ ನಡುವೆ ಸಭೆ ನಡೆದಿದೆ, ಆದರೆ ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಹೀಗಾಗಿ ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮತ್ತೊಮ್ಮೆ ಸಭೆ ನಡೆಸಲಾಗುವುದು,” ಎಂದು ತಿಳಿಸಿದ್ದಾರೆ.

ಪ್ರಸ್ತುತ ದೇಶದ ಅತಿ ಎತ್ತರದ ಸ್ಕೈಡೆಕ್, ಸ್ಟ್ಯಾಚ್ಯೂ ಆಫ್ ಯೂನಿಟಿ (182 ಮೀಟರ್) ಆಗಿದೆ. ಬೆಂಗಳೂರಿನ ಸ್ಕೈಡೆಕ್ ಈ ದಾಖಲೆಯನ್ನು ಮೀರಿಸಲಿದೆ. ಜೊತೆಗೆ ಐಫೆಲ್ ಟವರ್ ಅಥವಾ ಸ್ಟ್ಯಾಚ್ಯೂ ಆಫ್ ಲಿಬರ್ಟಿಯಂತಹ ಐಕಾನಿಕ್​ಗೆ ಸಮಾನಾಂತರವಾಗಿ ಒಂದು ಪ್ರಮುಖ ಪ್ರವಾಸಿ ತಾಣವಾಗುವ ಗುರಿಯನ್ನು ಬೆಂಗಳೂರು ಹೊಂದಿದೆ. ಈಗಾಗಲೇ ಡಿಪಿಆರ್ ಟೆಂಡರ್ ಬಿಡುಗಡೆಯಾಗಿದ್ದು, ಬಜೆಟ್‌ನಲ್ಲಿ 3 ಕೋಟಿ ರೂಪಾಯಿ ಮೀಸಲಿಟ್ಟಿದ್ದು, ಯೋಜನೆ ಅಂತಿಮಗೊಂಡ ನಂತರ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಹಣವನ್ನು ಪಡೆಯಲು ಬಿಬಿಎಂಪಿ ಯೋಜಿಸಿದೆ ಎನ್ನುತ್ತಾರೆ ಅಧಿಕಾರಿಗಳು.

ಸದ್ಯ ಜಗತ್ತಿನಲ್ಲಿ ದುಬೈನ ಬುರ್ಜ್ ಖಲೀಫಾ (828 ಮೀಟರ್)‌, ಶಾಂಘೈನ ಶಾಂಘೈ ಟವರ್ (632 ಮೀಟರ್)‌, ಚೀನಾದ ಶೆಂಜೆನ್‌ನ ಪಿಂಗ್‌ ಆನ್‌ ಫೈನಾನ್ಸ್‌ ಸೆಂಟರ್‌ (599 ಮೀಟರ್)‌, ಚೀನಾದ ಗುಂವಾಂಗ್ಶುವಿನ ಕ್ಯಾಂಟನ್‌ ಟವರ್‌ (597 ಮೀಟರ್)‌, ದಕ್ಷಿಣ ಕೊರಿಯಾದ ಲಾಟ್ಟೆ ವರ್ಲ್ಡ್‌ ಟವರ್‌ (555 ಮೀಟರ್)‌ ವಿಶ್ವದ ಎತ್ತರದ ವೀಕ್ಷಣಾ ಗೋಪುರಗಳಾಗಿವೆ. ಬೆಂಗಳೂರಿನ ಸ್ಕೈಡೆಕ್ ಯೋಜನೆ ಕಾರ್ಯಗತವಾದರೆ ನಾಗರಿಕರು ಆಕಾಶದಿಂದ ಕಾಣುವ ಬೆಂಗಳೂರಿನ ಸೌಂದರ್ಯವನ್ನು ಆನಂದಿಸಬಹುದು.