ಬೆಂಗಳೂರು: ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ಉಪನಗರ ರೈಲು ಯೋಜನೆಯ (Bengaluru Suburban Train) ಅನುಷ್ಠಾನ ಕೊನೆಗೂ ವೇಗ ಪಡೆದುಕೊಳ್ಳುತ್ತಿದೆ. ಹೀಲಲಿಗೆಯಿಂದ ರಾಜಾನುಕುಂಟೆಗೆ ಸಂಪರ್ಕ ಕಲ್ಪಿಸುವ 3ನೇ ಕಾರಿಡಾರ್ನ ಕಾಮಗಾರಿ ಅನುಷ್ಠಾನಕ್ಕೆ ಟೆಂಡರ್ ಕರೆಯಲಾಯಿತು. ಈ ಕಾರಿಡಾರ್ಗೆ ‘ಕನಕ ಮಾರ್ಗ’ (Kanaka Line) ಎಂಬ ಹೆಸರನ್ನೂ ಇಡಲಾಗಿದೆ. 8.96 ಕಿಮೀಗಳಷ್ಟು ಎತ್ತರಿಸಿದ ರೈಲು ಮಾರ್ಗ (elevated tracks – viaducts), 37.92 ಕಿಮೀ ಗಳಷ್ಟು ಅಂತರದ ಸಾಮಾನ್ಯ ರೈಲು ಮಾರ್ಗ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಏಪ್ರಿಲ್ 27 ಟೆಂಡರ್ಗೆ ಬಿಡ್ ಸಲ್ಲಿಸಲು ಕೊನೆಯ ದಿನದ ಎಂದು ಘೋಷಿಸಲಾಗಿದೆ.
ಎಲ್ಲವೂ ಅಂದುಕೊಂಡಂತೆ ಆದರೆ ಇದೇ ವರ್ಷಾಂತ್ಯದೊಳಗೆ ಗುತ್ತಿಗೆ ಅಲಾಟ್ಮೆಂಟ್ ಮುಗಿಯಲಿದೆ. ನಂತರ ಮೂರು ವರ್ಷಗಳ ಒಳಗೆ ಯೋಜನೆಯನ್ನು ಅನುಷ್ಠಾನಗೊಳಿಸುವ ಹೊಣೆಯನ್ನು ಟೆಂಡರ್ ಪಡೆದ ಕಂಪನಿಗಳು ಹೊತ್ತುಕೊಳ್ಳಬೇಕಿದೆ. ‘ಕನಕ ಮಾರ್ಗ’ದಲ್ಲಿ ಬರುವ 19 ನಿಲ್ದಾಣಗಳ ನಿರ್ಮಾಣಕ್ಕಾಗಿ ಪ್ರತ್ಯೇಕ ಟೆಂಡರ್ ಕರೆಯಲಾಗುವುದು ಎಂದು ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪನಿಯ (Rail Infrastructure Development Company – K RIDE) ಅಧಿಕಾರಿಗಳು ತಿಳಿಸಿದ್ದಾರೆ.
ವಿಸ್ತೃತ ಯೋಜನಾ ವರದಿಗೆ (Detailed Project Report – DPR) ಕೆ-ರೈಡ್ ಅಧಿಕಾರಿಗಳು ತುಸು ಮಾರ್ಪಾಡು ಮಾಡಿದ್ದಾರೆ. ಅದರಂತೆ ‘ಕನಕ ಮಾರ್ಗ’ದ ಒಟ್ಟು ಉದ್ದ 4.24 ಕಿಮೀ ಆಗುತ್ತದೆ. ಭೂ ಸ್ವಾಧೀನ ವೆಚ್ಚ ತಗ್ಗಿಸುವ ಉದ್ದೇಶದಿಂದ ಸಾಮಾನ್ಯ ರೈಲು ಮಾರ್ಗ ನಿರ್ಮಾಣವಾಗಬೇಕಾದ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ. ಎತ್ತರಿಸಿದ ಮಾರ್ಗವನ್ನು ಹೆಚ್ಚಿಸಲಾಗಿದೆ.
ಯೂರೋಪಿಯನ್ ಇನ್ವೆಸ್ಟ್ಮೆಂಟ್ ಬ್ಯಾಂಕ್ ಮತ್ತು ಜರ್ಮನ್ ಇನ್ವೆಸ್ಟ್ಮೆಂಟ್ ಅಂಡ್ ಡೆವಲಪ್ಮೆಂಟ್ ಬ್ಯಾಂಕ್ ಜೊತೆಗೆ ಈ ಸಂಬಂಧ ಕೆ-ರೈಡ್ ಮಾತುಕತೆ ನಡೆಸುತ್ತಿದ್ದು, ಬಂಡವಾಳ ಒಗ್ಗೂಡಿಸಲು ಯತ್ನಿಸುತ್ತಿದೆ. ಬೆಂಗಳೂರು ಉಪನಗರ ರೈಲು ಯೋಜನೆಗೆ ಒಟ್ಟು ₹ 15,767 ಕೋಟಿ ವೆಚ್ಚವಾಗುವ ನಿರೀಕ್ಷೆಯಿದೆ. ಮಾರ್ಚ್ ತಿಂಗಳಲ್ಲಿ ಈ ಸಂಬಂಧ ಒಪ್ಪಂದವಾಗುವ ಸಾಧ್ಯತೆಯಿದೆ.
2025ರಲ್ಲಿ ‘ಕನಕ ಮಾರ್ಗ’ದ ಕಾರ್ಯಾಚರಣೆ ಆರಂಭವಾಗಲಿದೆ. ಈ ಮಾರ್ಗದಲ್ಲಿ ಪ್ರತಿದಿನ 3.5 ಲಕ್ಷ ಮಂದಿ ಪ್ರಯಾಣಿಸಬಹುದು ಎಂದು ನಿರೀಕ್ಷಿಸಲಾಗಿದೆ. ಯಲಹಂಕ ಇಂಟರ್ಚೇಂಜ್ ಸ್ಟೇಷನ್ ಆಗಲಿದ್ದು, ಇದು ಬೆಂಗಳೂರು-ದೇವನಹಳ್ಳಿ (ಏರ್ಪೋರ್ಟ್) ಮಾರ್ಗವನ್ನೂ ಸಂಪರ್ಕಿಸಲಿದೆ.
ಮಲ್ಲಿಗೆ ಮಾರ್ಗ
24.86 ಕಿಮೀ ಅಂತರದ ‘ಮಲ್ಲಿಗೆ ಮಾರ್ಗ’ವು ಬೈಯ್ಯಪ್ಪನಹಳ್ಳಿಯಿಂದ ಚಿಕ್ಕಬಾಣಾವರವನ್ನು ಸಂಪರ್ಕಿಸುತ್ತದೆ. ಈವರೆಗೆ ಕಾಮಗಾರಿ ಆರಂಭವಾಗಿರುವುದು ಇದೊಂದೇ ಮಾರ್ಗದಲ್ಲಿ. ಹೆಬ್ಬಾಳ ಮತ್ತು ಬೆನ್ನಿಗಾನಹಳ್ಳಿಯಲ್ಲಿ ಡಿಪೊಗಳನ್ನು ನಿರ್ಮಿಸಲು ಕೆ-ರೈಡ್ ಅಧಿಕಾರಿಗಳು ಮುಂದಾಗಿದ್ದಾರೆ. ಸೂಚಿತ ಸ್ಥಳಕ್ಕೆ ಬೇಲಿ ಹಾಕುವ, ನೆಲ ಸಮತಟ್ಟು ಮಾಡುವ, ಕಾಂಕ್ರೀಟ್ ಬ್ಯಾಚ್ ಘಟಕ ಅಳವಡಿಸುವ, ಮಣ್ಣು ಪರೀಕ್ಷಾ ಘಟಕ ನಿರ್ಮಾಣದ ಕೆಲಸಗಳು ಮುಕ್ತಾಯವಾಗಿವೆ.
ಮಲ್ಲಿಗೆ ಮಾರ್ಗಕ್ಕೆ ಒಟ್ಟು 177.83 ಎಕರೆ ಭೂಮಿ ಬೇಕಾಗಿದೆ. ಇದರಲ್ಲಿ 157.07 ಎಕರೆಗಳಷ್ಟು ರೈಲ್ವೆ ಭೂಮಿ ಇದ್ದರೆ 15.72 ಎಕರೆಗಳಷ್ಟು ರಾಜ್ಯ ಸರ್ಕಾರದ ಹಾಗೂ 5.11 ಎಕರೆಗಳಷ್ಟು ಖಾಸಗಿ ಭೂಮಿಯಿದೆ. ಈ ಪೈಕಿ ರೈಲ್ವೆ ಇಲಾಖೆಯ ಭೂಮಿಯನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ಮುಕ್ತಾಯವಾಗಿದ್ದರೆ, ಕೇವಲ 3.21 ಎಕರೆ ಖಾಸಗಿ ಭೂಮಿ ಹಾಗೂ 0.62 ಎಕರೆ ಸರ್ಕಾರಿ ಭೂಮಿಯನ್ನು ಸ್ವಾಧೀನಕ್ಕೆ ಪಡೆಯಲಾಗಿದೆ.
306 ಕೋಚ್ಗಳ ಖರೀದಿಗೆ ಟೆಂಡರ್
ಉಪನಗರ ರೈಲು ಯೋಜನೆಗಾಗಿ ಕೆ-ರೈಡ್ 306 ಕೋಚ್ಗಳಿಗೆ ಟೆಂಡರ್ ಕರೆದಿದೆ. ಕೋಚ್ಗಳ ವಿನ್ಯಾಸ, ನಿರ್ಮಾಣ, ಪೂರೈಕೆ, ಕಾರ್ಯಾಚರಣೆ ಮತ್ತು ನಿರ್ವಹಣೆಯ ಷರತ್ತುಗಳನ್ನು ವಿಧಿಸಲಾಗಿದೆ.
ಟೆಂಡರ್ ಫೈಲ್ ಮಾಡಲು ಮಾರ್ಚ್ 15 ಕೊನೆಯ ದಿನ. ಒಂದು ತಿಂಗಳ ಮೌಲ್ಯಮಾಪನದ ನಂತರ ಟೆಂಡರ್ ಅಂತಿಮಗೊಳಿಸಲಾಗುವುದು. ನಂತರದ 60 ತಿಂಗಳಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗುತ್ತದೆ. ಪ್ರತಿ ಬೋಗಿಯೂ 3.2 ಮೀಟರ್ಗಳಷ್ಟು ಅಗಲ, 21.74 ಮೀಟರ್ ಉದ್ದ ಇರುತ್ತದೆ. ಏರ್ ಕಂಡಿಷನ್ ವ್ಯವಸ್ಥೆ ಹೊಂದಿರುತ್ತದೆ. ಬಹುತೇಕ ಮೆಟ್ರೋ ಬೋಗಿಗಳನ್ನೇ ಹೋಲಲಿದ್ದು, ಗಂಟೆಗೆ ಗರಿಷ್ಠ 90 ಕಿಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.
Published On - 3:24 pm, Thu, 26 January 23