ಬೆಂಗಳೂರು, ಮಾರ್ಚ್ 1: ಬೆಂಗಳೂರಿನಿಂದ ತುಮಕೂರಿಗೆ ಮೆಟ್ರೋ ರೈಲು (Namma Metro) ಸಂಪರ್ಕವನ್ನು ನಿರೀಕ್ಷಿಸುತ್ತಿರುವ ಪ್ರಯಾಣಿಕರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಸಿಹಿ ಸುದ್ದಿ ನೀಡಿದೆ. ಉತ್ತರ ಬೆಂಗಳೂರಿನ ಮಾದಾವರದಿಂದ ತುಮಕೂರಿನವರೆಗೆ (Bengaluru to Tumkur Metro) 52.41 ಕಿ.ಮೀ ಉದ್ದದ ಮೆಟ್ರೋ ಮಾರ್ಗದ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಲು ಬಿಡ್‌ಗಳನ್ನು ಆಹ್ವಾನಿಸಿರುವುದಾಗಿ ವರದಿಯಾಗಿದೆ. ಸಾರ್ಕಾರಿ-ಖಾಸಗಿ ಸಹಭಾಗಿತ್ವದ (PPP) ಮಾದರಿಯಡಿಯಲ್ಲಿ ಬಿಡ್ ಆಹ್ವಾನಿಸಲಾಗಿದೆ.
ಟೆಂಡರ್ ದಾಖಲೆಯನ್ನು ಇಂದಿನಿಂದ (ಮಾರ್ಚ್ 1) ಡೌನ್‌ಲೋಡ್ ಮಾಡಬಹುದಾಗಿದ್ದು, ಬಿಡ್‌ಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 2 ಆಗಿದೆ.
2024-25ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುಮಕೂರು ಮತ್ತು ದೇವನಹಳ್ಳಿಗೆ ಮೆಟ್ರೋ ಮಾರ್ಗಗಳನ್ನು ಘೋಷಿಸಿದ್ದರು. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇವನಹಳ್ಳಿವರೆಗೆ ಮೆಟ್ರೋವನ್ನು ವಿಸ್ತರಿಸಲು ಕಾರ್ಯಸಾಧ್ಯತೆಯ ಅಧ್ಯಯನಕ್ಕಾಗಿ ಶೀಘ್ರದಲ್ಲೇ ಬಿಡ್‌ಗಳನ್ನು ಆಹ್ವಾನಿಸಲಾಗುವುದು ಎಂದು ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ ವಾರವಷ್ಟೇ ಬಿಎಂಆರ್‌ಸಿಎಲ್ ಮೆಟ್ರೋ ಜಾಲಕ್ಕೆ 118 ಕಿಮೀ ಸೇರಿಸುವ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಲು ಬಿಡ್‌ಗಳನ್ನು ಆಹ್ವಾನಿಸಿತ್ತು.
ಮಾದಾವರದಿಂದ ಕುಣಿಗಲ್ ಕ್ರಾಸ್ ವರೆಗೆ 11 ಕಿಮೀ ದೂರದವರೆಗೆ ಹಸಿರು ಮಾರ್ಗವನ್ನು ವಿಸ್ತರಿಸಲು ಸರ್ಕಾರ ಆರಂಭದಲ್ಲಿ ಯೋಜಿಸಿತ್ತು. ಆದರೆ ಕೊರಟಗೆರೆ ಶಾಸಕರಾಗಿರುವ ಗೃಹ ಸಚಿವ ಜಿ ಪರಮೇಶ್ವರ ಅವರು ತವರು ಜಿಲ್ಲೆ ತುಮಕೂರಿಗೆ ಮೆಟ್ರೋ ಸೇವೆ ವಿಸ್ತರಿಸಲು ಉತ್ಸುಕರಾಗಿದ್ದಾರೆ. ತುಮಕೂರಿಗೆ ಮೆಟ್ರೋವನ್ನು ವಿಸ್ತರಿಸುವುದರಿಂದ ಬೆಂಗಳೂರಿನ ಮೇಲಿನ ಹೊರೆ ಕಡಿಮೆಯಾಗುತ್ತದೆ ಮತ್ತು ಖಾಸಗಿ ಕಂಪನಿಗಳು ಯೋಜನೆಯಲ್ಲಿ ಹೂಡಿಕೆ ಮಾಡಲು ಸಿದ್ಧವಾಗಿವೆ ಎಂದು ಅವರು ಈ ಹಿಂದೆ ಹೇಳಿದ್ದರು. ರಾಷ್ಟ್ರೀಯ ಹೆದ್ದಾರಿ 48 ರ ಉದ್ದಕ್ಕೂ ಮೆಟ್ರೋ ಮಾರ್ಗವನ್ನು ನಿರ್ಮಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದರು.
ಇದನ್ನೂ ಓದಿ: Namma Metro: ಹೇಗಿದೆ ನೋಡಿ ಮೊದಲ ಚಾಲಕ ರಹಿತ ನಮ್ಮ ಮೆಟ್ರೋ ರೈಲು
ತುಮಕೂರಿಗೆ ಮೆಟ್ರೋ ವಿಸ್ತರಿಸುವ ಸಂಬಂಧ ಕಾರ್ಯಸಾಧ್ಯತೆಯ ವರದಿಗಳು ಮೂರ್ನಾಲ್ಕು ತಿಂಗಳಲ್ಲಿ ಸಿದ್ಧವಾಗಲಿದೆ ಮತ್ತು ಮುಂದಿನ ಕ್ರಮವನ್ನು ಸರ್ಕಾರ ನಿರ್ಧರಿಸುತ್ತದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಉಲ್ಲೇಖಿಸಿದೆ. ನಿರ್ಮಾಣದ ಅಂದಾಜು ವೆಚ್ಚ, ಟ್ರಾಫಿಕ್ ಸಮೀಕ್ಷೆ, ಮೆಟ್ರೋ ಮಾರ್ಗಗಳ ಜೋಡಣೆ, ಸ್ವಾಧೀನಪಡಿಸಿಕೊಳ್ಳಬೇಕಾದ ಆಸ್ತಿಗಳು, ಭೂಸ್ವಾಧೀನದಲ್ಲಿ ಸಂಭಾವ್ಯ ಅಡೆತಡೆಗಳು ಇತ್ಯಾದಿಗಳನ್ನು ಅಧ್ಯಯನವು ಒಳಗೊಂಡಿರುತ್ತದೆ ಎಂದು ಬಿಎಂಆರ್‌ಸಿಎಲ್‌ನ ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
ಕಾರ್ಯಸಾಧ್ಯತೆಯ ಅಧ್ಯಯನದ ಆಧಾರದ ಮೇಲೆ ಸರ್ಕಾರವು ಹೊಸ ಮಾರ್ಗಗಳನ್ನು ಅನುಮೋದಿಸುತ್ತದೆ ಅಥವಾ ತಿರಸ್ಕರಿಸುತ್ತದೆ. ಅನುಮೋದನೆಯ ಸಂದರ್ಭದಲ್ಲಿ, ಬಿಎಂಆರ್‌ಸಿಎಲ್ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಬೇಕಾಗುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ. ಯಾವುದೇ ಟೈಮ್‌ಲೈನ್‌ಗಳನ್ನು ನೀಡಿಲ್ಲವಾದರೂ, ಮೆಟ್ರೋ ಮಾರ್ಗ ನಿರ್ಮಾಣವು ಕನಿಷ್ಠ ಐದು ವರ್ಷಗಳ ಅವಧಿಯನ್ನು ಹೊಂದಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ