Bengaluru Water Crisis: ಬೇಸಗೆಯಲ್ಲಿ ಬೆಂಗಳೂರಿನಲ್ಲಿ ನೀರು ಮಿತ ಬಳಕೆಗೆ ಏನೇನು ಮಾಡಬಹುದು? ಇಲ್ಲಿದೆ ಸಲಹೆ
ಬೆಂಗಳೂರಿನಲ್ಲಿ ಬೇಸಗೆ ಆರಂಭದ ಸಂದರ್ಭದಲ್ಲೇ ಈ ವರ್ಷ ನೀರಿನ ಬಿಕ್ಕಟ್ಟು ತೀವ್ರಗೊಂಡಿದೆ. ಕುಡಿಯುವ ನೀರಿಗೂ ತತ್ವಾರ ಎದುರಾಗುವ ಆತಂಕ ಹೆಚ್ಚಾಗಿದೆ. ಹೀಗಾಗಿ ಈಗಲೇ ಎಚ್ಚೆತ್ತುಕೊಂಡು ನೀರಿನ ಮಿತ ಬಳಕೆ ಮಾಡುವುದೊಳಿತು. ಬೇಸಗೆ ಸಂದರ್ಭದಲ್ಲಿ ಹೇಗೆಲ್ಲ ನೀರು ಉಳಿಸಬಹುದು? ಕೆಲವೊಂದು ಸಲಹೆ ಇಲ್ಲಿವೆ.
ಬೆಂಗಳೂರು, ಮಾರ್ಚ್ 7: ಬೇಸಗೆ ಬರುತ್ತಿದ್ದಂತೆಯೇ ಬೆಂಗಳೂರಿನಲ್ಲಿ (Bengaluru) ನೀರಿನ ಬಿಕ್ಕಟ್ಟು ಮತ್ತೆ (Water Crisis) ಸೃಷ್ಟಿಯಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ನೀರಿನ ಸಮಸ್ಯೆ ಎದುರಾಗಿದೆ. ಆದರೆ, ಬರ ಪರಿಸ್ಥಿತಿಯಿಂದಾಗಿ ಈ ವರ್ಷ ಬೇಸಗೆ ಆರಂಭದ ಸಂದರ್ಭದಲ್ಲೇ ರಾಜ್ಯ ರಾಜಧಾನಿಯ ಹಲವೆಡೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಹಲವೆಡೆ ನೀರಿನ ಸರಬರಾಜಿನಲ್ಲಿಯೂ ವ್ಯತ್ಯಯವಾಗಿದೆ. ಪರಿಸ್ಥಿತಿ ಹೀಗಿರುವಾಗ, ನೀರಿನ ಮಿತ ಬಳಕೆಯ ಬಗ್ಗೆಯೂ ಗಮನ ಹರಿಸಬೇಕಿದೆ.
- ಮಿತವಾಗಿ ನೀರನ್ನು ಬಳಕೆ ಮಾಡುವುದು, ಮಳೆಗಾಲದಲ್ಲಿ ಮಳೆ ನೀರಿನ ಸಂಗ್ರಹ, ಮಳೆ ನೀರು ಕೊಯ್ಲಿನಂಥ ವಿಧಾನಗಳನ್ನು ಅನುಸರಿಸುವ ಮೂಲಕವೂ ಪ್ರತಿ ವರ್ಷ ಎದುರಾಗುವ ನೀರಿನ ಸಮಸ್ಯೆ ಬಗೆಹರಿಸಲು ಯತ್ನಿಸಬಹುದು. ಆದರೆ, ಈ ಬೇಸಗೆಯ ಸಂದರ್ಭದಲ್ಲಿ ನೀರಿನ ಉಳಿಕೆಗೆ ನಾವೇನು ಮಾಡಬಹುದು ಎಂಬ ಒಂದಷ್ಟು ಸಲಹೆಗಳು ಇಲ್ಲಿವೆ.
- ಪ್ರತಿಯೊಂದು ಮನೆಯವರೂ ಸಹ ಓವರ್‌ಹೆಡ್ ಟ್ಯಾಂಕ್ ತುಂಬಿ ಹರಿಯದಂತೆ ನೋಡಿಕೊಳ್ಳಬೇಕಾಗಿದೆ. ಈ ಮೂಲಕ ನೀರು ಪೋಲಾಗುವುದನ್ನು ತಪ್ಪಿಸಬೇಕು.
- ನಿಮ್ಮ ಕಾರು ಅಥವಾ ಇತರ ವಾಹನಗಳನ್ನು ಹೊರಾಂಗಣದಲ್ಲಿ ಪಾರ್ಕ್ ಮಾಡುವುದಿದ್ದರೆ ಕವರ್ ಹಾಕಿ ಮುಚ್ಚಿಡಬಹುದು. ಇದರಿಂದ ಅದನ್ನು ಪ್ರತಿದಿನ ತೊಳೆಯಲು ನೀರು ವ್ಯಯಿಸುವ ಅಗತ್ಯವಿರುವುದಿಲ್ಲ.
- ಮನೆಯಲ್ಲಿರುವ ಸೋರುವ ನೀರಿನ ಟ್ಯಾಪ್‌ಗಳನ್ನು ತಕ್ಷಣವೇ ಸರಿಪಡಿಸಿ. ಇದರಿಂದ ನೀರು ಪೋಲಾಗುವುದನ್ನು ತಡೆಗಟ್ಟಬಹುದು.
- ವಾಟರ್ ಪ್ಯೂರಿಫೈಯರ್ ಅಥವಾ ಆರ್ಒ ದಿಂದ ಹೊರಹೋಗುವ ಹೆಚ್ಚುವರಿ ನೀರನ್ನು ಒಂದು ಪಾತ್ರೆಯಲ್ಲಿ ಸಂಗ್ರಹಿಸಿಟ್ಟುಕೊಂಡು ಪಾತ್ರೆ ತೊಳೆಯುವಂಥ ಕೆಲಸಗಳಿಗೆ ಬಳಸಿಕೊಳ್ಳಬಹುದು.
- ಸಿಂಕ್ನಲ್ಲಿ ಪಾತ್ರೆ ತೊಳೆಯುವಾಗ ಟ್ಯಾಪ್ ನೀರು ಬಿಟ್ಟುಕೊಂಡೇ ಇರುವ ಅಭ್ಯಾಸ ಅನಕರಿಗೆ ಇರುತ್ತದೆ. ಅದನ್ನು ತಪ್ಪಿಸಿ. ಎಷ್ಟು ಬೇಕೋ ಅಷ್ಟೇ ನೀರನ್ನು ಬಳಸಿ.
- ಉದ್ಯಾನಗಳಲ್ಲಿ ಅಥವಾ ಮನೆಯ ಕೈತೋಟಗಳಿಗೆ ನೀರುಣಿಸುವಾಗ ಮುಂಜಾನೆ ಅಥವಾ ಸಂಜೆ ವೇಳೆಗೆ ಹೆಚ್ಚು ಆದ್ಯತೆ ನೀಡಿ. ಈ ವೇಳೆಯಲ್ಲಿ ಸಸ್ಯಗಳಿಗೆ ನೀರು ಹಾಕುವುದರಿಂದ ಹೆಚ್ಚು ನೀರು ಆವಿಯಾಗಿ ನಷ್ಟವಾಗುವುದನ್ನು ಕಡಿಮೆ ಮಾಡಬಹುದು.
- ಕಚೇರಿಗಳಲ್ಲಿ ಇರುವ ಸಂದರ್ಭದಲ್ಲಿ ವೃಥಾ ನೀರು ಪೋಲು ಮಾಡಬೇಡಿ. ಮುಖ ತೊಳೆಯುವಂಥ ಸಂದರ್ಭಗಳಲ್ಲಿ ಟ್ಯಾಪ್ನಲ್ಲಿ ನೀರನ್ನು ಬಿಟ್ಟುಕೊಂಡೇ ಇರಬೇಡಿ. ಬೇಕಿದ್ದಷ್ಟೇ ನೀರು ಬಳಸಿಕೊಂಡು ಟ್ಯಾಪ್ ಬಂದ್ ಮಾಡಿ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಕಂಡು ಕೇಳರಿಯದ ನೀರಿನ ಬಿಕ್ಕಟ್ಟು, ಇಲ್ಲಿವೆ ಪ್ರಮುಖ ಕಾರಣಗಳು
ಇದಿನ್ನೂ ಬೇಸಗೆಯ ಆರಂಭದ ಸಂದರ್ಭ. ಈಗಲೇ ನೀರಿನ ಬಿಕ್ಕಟ್ಟು ತೀವ್ರಗೊಂಡಿದ ಕಾರಣ ನೀರನ್ನು ಮಿತ ಬಳಕೆ ಮಾಡುವ ಮೂಲಕ ಮುಂದಿನ ಗಂಭೀರ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿರುವುದು ಉತ್ತಮ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ