ಬಿಎಂಟಿಸಿ ಆರ್ಥಿಕ ಕುಸಿತಕ್ಕೆ ಕಾರಣ ಬಹಿರಂಗ: ಸಿಎಜಿ ವರದಿಯಿಂದ ಬಯಲಾಯ್ತು ಸ್ಫೋಟಕ ಅಂಶ
ಭಾರತೀಯ ಲೆಕ್ಕಪರಿಶೋಧಕರು ಮತ್ತು ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿಯು ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಆರ್ಥಿಕವಾಗಿ ಕುಸಿಯುತ್ತಿರುವುದನ್ನು ಬಹಿರಂಗಪಡಿಸಿದೆ. ಬೆಂಗಳೂರು ಮಹಾನಗರ ಸಾರಿಗೆ (ಬಿಎಂಟಿಸಿ)ಯ ಕಾರ್ಯನಿರ್ವಹಣೆಯ ಕಾರ್ಯಕ್ಷಮತೆಯ ಸಿಎಜಿ ವರದಿ ಗುರುವಾರ ವಿಧಾನಸಭೆಯಲ್ಲಿ ಮಂಡನೆಯಾಯಿತು. ವರದಿಯಲ್ಲಿ ಬಿಎಂಟಿಸಿ ಆರ್ಥಿಕ ನಿರ್ವಹಣೆಯಲ್ಲಿನ ಸಮಸ್ಯೆಗಳ ಕುರಿತಂತೆ ಹಲವು ಅಂಶಗಳು ಬಹಿರಂಗಗೊಂಡಿವೆ.
ಬೆಂಗಳೂರು, ಡಿಸೆಂಬರ್ 13: ಪ್ರಯಾಣ ದರ ಹೆಚ್ಚಿಸದಿದ್ದಕ್ಕೆ ಮತ್ತು ಕರ್ನಾಟಕ ಸರ್ಕಾರವು (Karnataka Government) ಆರ್ಥಿಕ ನೆರವು ನೀಡದೆ ಇರುವುದರಿಂದ ಬೆಂಗಳೂರು ಮಹಾನಗರ ಸಾರಿಗೆ (BMTC)ಯ ಆರ್ಥಿಕ ಪರಿಸ್ಥಿತಿ ಸುಧಾರಿಸಿಲ್ಲ. ಇದು ಬಿಎಂಟಿಸಿ ಆರ್ಥಿಕವಾಗಿ ಕುಸಿಯಲು ಕಾರಣವಾಗಿದೆ ಎಂದು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರ (ಸಿಎಜಿ) ವರದಿ ಬಯಲು ಮಾಡಿದೆ.
ಬಿಎಂಟಿಸಿಯ ಕಾರ್ಯನಿರ್ವಹಣೆಯ ಕಾರ್ಯಕ್ಷಮತೆಯ ಸಿಎಜಿ ವರದಿ ಗುರುವಾರ ವಿಧಾನಸಭೆಯಲ್ಲಿ ಮಂಡನೆಯಾಯಿತು. ಹಿರಿಯ ನಾಗರಿಕರು, ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರ ಪ್ರಯಾಣಿಕರಿಗೆ ರಿಯಾಯಿತಿ ಬಸ್ ಪಾಸ್‌ಗೆ ರಾಜ್ಯ ಸರ್ಕಾರ ಅನುದಾನ ನೀಡುತ್ತಿರುವುದರಿಂದ ಬಿಎಂಟಿಸಿಗೆ ಆರ್ಥಿಕ ನೆರವು ನೀಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಬಿಎಂಟಿಸಿ ಆರ್ಥಿಕವಾಗಿ ಕುಸಿಯಲು ಇದು ಒಂದು ಕಾರಣವಾಗಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
ಇದನ್ನೂ ಓದಿ: ಬಿಎಂಟಿಸಿ ಮಹಿಳಾ ಪ್ರಯಾಣಿಕರಿಗೆ ಗುಡ್ ನ್ಯೂಸ್: ಕಂಡಕ್ಟರ್ ಜತೆಗಿನ ಕಿರಿಕ್ಗೆ ಬೀಳಲಿದೆ ಬ್ರೇಕ್
ರಿಯಾಯಿತಿ ಪಾಸ್ ಯೋಜನೆಗಳಲ್ಲಿ ಸರ್ಕಾರದ ಪಾಲು ಮರುಪಾವತಿಸಬೇಕು. ಬಿಎಂಟಿಸಿ ಘಟಕಗಳಲ್ಲಿ ಬಸ್‌ಗಳ ಸಮರ್ಪಕ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಇಂಜಿನ್, ಬ್ಯಾಟರಿ, ಬಿಡಿಭಾಗ ಕಾರ್ಯಕ್ಷಮತೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಇದನ್ನು ಸರಿಪಡಿಸಲು ಸರ್ಕಾರ ಬಿಎಂಟಿಸಿಗೆ ಕಾಲಕಾಲಕ್ಕೆ ಆರ್ಥಿಕ ಬೆಂಬಲ ನೀಡಬೇಕು ಎಂದು ಸಿಎಜಿ ವರದಿ ತಿಳಿಸಿದೆ.
2014ರಿಂದ ಪ್ರಯಾಣ ದರ ಪರಿಷ್ಕರಿಸದ ಕಾರಣದಿಂದಾಗಿ 649.74 ಕೋಟಿ ಸಂಭಾವ್ಯ ಆದಾಯವನ್ನು ಬಿಎಂಟಿಸಿ ಕಳೆದುಕೊಂಡಿದೆ. ನಿಗಮದ ಬಸ್‌ಗಳ ಪ್ರತಿ ಕಿ.ಮೀ. ಗಳಿಕೆ ವೆಚ್ಚಕ್ಕಿಂತ ಕಡಿಮೆ ಇದೆ. 2017-18ರಲ್ಲಿ ಶೇ.133.59ರಷ್ಟಿದ್ದ ನಿರ್ವಹಣಾ ವೆಚ್ಚದ ಅನುಪಾತ, 2021-22ಕ್ಕೆ ನಿರ್ವಹಣಾ ವೆಚ್ಚದ ಅನುಪಾತ ಶೇ.222.62 ಹೆಚ್ಚಳವಾಗಿದೆ. ಅದರಲ್ಲಿ ಸಿಬ್ಬಂದಿ ವೆಚ್ಚ ಶೇ.60 ಮತ್ತು ಇಂಧನ ವೆಚ್ಚ ಶೇ.27ರಷ್ಟಿದೆ. ಇದೆಲ್ಲವೂ ಬಿಎಂಟಿಸಿ ಸಂಸ್ಥೆ ಆರ್ಥಿಕವಾಗಿ ಕುಸಿಯಲು ಕಾರಣವಾಗಿದೆ ಎಂದು ವರದಿಯಲ್ಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:47 am, Fri, 13 December 24