ಬಿಎಂಟಿಸಿ ಕಂಡಕ್ಟರ್ಗಳಿಗೆ ಹೊಸ ತಂತ್ರಜ್ಞಾನದ ಆಂಡ್ರಾಯ್ಡ್ ಟಿಕೆಟ್ ಮಿಷನ್, ಮತ್ತೆ ಬೆಂಗಳೂರು ರಸ್ತೆಗೆ ಡಬ್ಬಲ್ ಡೆಕರ್ ಬಸ್
ಕಳೆದ ಐದು ವರ್ಷಗಳಲ್ಲಿ ₹ 1,324.9 ಕೋಟಿ ಸಾಲ ಪಡೆದಿರುವ ಬಿಎಂಟಿಸಿ ಇದೀಗ ಸಾಲದ ಸುಳಿಯಲ್ಲಿ ಸಿಲುಕಿದೆ.
ಬೆಂಗಳೂರು: ಪದೇಪದೆ ಹಾಳಾಗುತ್ತಿದ್ದ ಹಳೇ ಇಟಿಎಂ (Electronic Ticketing Machine – ETM) ಯಂತ್ರಗಳಿಂದ ಬಿಎಂಟಿಸಿ ನಿರ್ವಾಹಕರು ಸತತ ಕಿರಿಕಿರಿ ಅನುಭವಿಸುತ್ತಿದ್ದರು. ಇದನ್ನು ಮನಗಂಡ ಬಿಎಂಟಿಸಿ ಆಡಳಿತ ಮಂಡಳಿಯು ಹೊಸ ಮಾದರಿಯ ಇಟಿಎಂಗಳನ್ನು ನಿರ್ವಾಹಕರಿಗೆ ನೀಡಲು ನಿರ್ಧರಿಸಿದೆ. ಅದರಂತೆ ಪೈನ್ಲ್ಯಾಬ್ಸ್ ಕಂಪನಿಯಿಂದ ಹೊಸ ತಂತ್ರಜ್ಞಾನ ಹೊಂದಿರುವ 8 ಸಾವಿರ ಇಟಿಎಂಗಳನ್ನು ಖರೀದಿಸಿದೆ. ನಿರ್ವಾಹಕರು ವೇಗವಾಗಿ ಟಿಕೆಟ್ ನೀಡಲು ಸಹಕರಿಸುವ ಈ ಯಂತ್ರಗಳಿಂದ ಪ್ರಯಾಣಿಕರಿಗೂ ಅನುಕೂಲವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.
ಒಂದು ವರ್ಷದ ಅವಧಿಗೆ ಬಾಡಿಗೆ ಆಧಾರದ ಮೇಲೆ ಇಟಿಎಂಗಳನ್ನು ಬಿಎಂಟಿಸಿ ಪಡೆದುಕೊಂಡಿದೆ. ಆಂಡ್ರಾಯ್ಡ್ ಕಾರ್ಯಾಚರಣೆ ವ್ಯವಸ್ಥೆಯ ಮೂಲಕ ಈ ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ. ನೂತನ ಇಟಿಎಂ ಕಾರ್ಯನಿರ್ವಹಣೆ ಬಗ್ಗೆ ಕಂಡಕ್ಟರ್ಗಳಿಗೆ ಬಿಎಂಟಿಸಿ ಸಂಚಾರ ಅಧಿಕಾರಿಗಳು ತರಬೇತಿ ನೀಡಲಿದ್ದಾರೆ. ಡಿಸೆಂಬರ್ 10ರ ಒಳಗೆ ಹೊಸ ಇಟಿಎಂಗಳು ಕಂಡಕ್ಟರ್ಗಳ ಕೈ ಸೇರಬಹುದು ಎಂದು ಮೂಲಗಳು ಹೇಳಿವೆ.
ಕಂಡಕ್ಟರ್ ರಹಿತ ಬಸ್ಗಳ ಸಂಖ್ಯೆಯಲ್ಲಿ ಹೆಚ್ಚಳ
ಬೆಂಗಳೂರಿನಲ್ಲಿ ಶೀಘ್ರ 10 ಕಂಡಕ್ಟರ್ ರಹಿತ ಡಬ್ಬಲ್ ಡೆಕರ್ ಬಸ್ಗಳನ್ನು ಓಡಿಸಲು ಬಿಎಂಟಿಸಿ ನಿರ್ಧರಿಸಿದೆ. ಕಂಡಕ್ಟರ್ ಇಲ್ಲದಿರುವ 100 ಮಿನಿ ಬಸ್ಗಳನ್ನೂ ಮೆಟ್ರೋ ಫೀಡರ್ಗಳಾಗಿ ಓಡಿಸಲು ಬಿಎಂಟಿಸಿ ಮುಂದಾಗಿದೆ. ಡೀಸೆಲ್ ಬಸ್ಗಳ ಸ್ಥಾನದಲ್ಲಿ ಎಲೆಕ್ಟ್ರಿಕ್ ಬಸ್ಗಳನ್ನು ತರಲು ಬಿಎಂಟಿಸಿ ಯೋಜನೆ ರೂಪಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಎಲೆಕ್ಟ್ರಿಕ್ ಬಸ್ಗಳ ಖರೀದಿ ಪ್ರಕ್ರಿಯೆ ನಡೆಯಲಿದೆ.
ಸಾಲಬಾಧೆಯಿಂದ ಬಿಎಂಟಿಸಿ ಕಂಗಾಲು
ಕಳೆದ ಐದು ವರ್ಷಗಳಲ್ಲಿ ₹ 1,324.9 ಕೋಟಿ ಸಾಲ ಪಡೆದಿರುವ ಬಿಎಂಟಿಸಿ ಇದೀಗ ಸಾಲದ ಸುಳಿಯಲ್ಲಿ ಸಿಲುಕಿದೆ. ವಿಧಾನಸಭೆ ಅಧಿವೇಶನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಸಾರಿಗೆ ಸಚಿವ ಬಿ.ಶ್ರೀರಾಮುಲು ಈ ಮಾಹಿತಿ ಬಹಿರಂಗಪಡಿಸಿದ್ದರು. ಬಸ್ ನಿಲ್ದಾಣ ನಿರ್ಮಾಣ, ಡಿಪೊ ಸ್ಥಾಪನೆ, ಬಸ್ ಖರೀದಿ, ನಿವೃತ್ತಿ ಸಂದರ್ಭದಲ್ಲಿ ಉದ್ಯೋಗಿಗಳ ಹಣಕಾಸು ಇತ್ಯರ್ಥಪಡಿಸುವುದೂ ಸೇರಿದಂತೆ ಹಲವು ಕಾರಣಗಳಿಗೆ ಬಿಎಂಟಿಸಿ ಸಾಲ ಪಡೆದುಕೊಂಡಿದೆ. ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ನಿಗಮ ಮತ್ತು ಕೆನರಾ ಬ್ಯಾಂಕ್ಗಳು ಬಿಎಂಟಿಸಿಗೆ ಅತಿಹೆಚ್ಚಿನ ಪ್ರಮಾಣದ ಸಾಲ ನೀಡಿವೆ. 1997ರಿಂದ 2012ರವರೆಗೂ ಬಿಎಂಟಿಸಿ ಸತತ ಲಾಭದಲ್ಲಿಯೇ ನಡೆಯುತ್ತಿತ್ತು. ಆದರೆ ಎಸಿ ಬಸ್ಗಳ ಖರೀದಿಗೆ ಬಂಡವಾಳ ಹೂಡಿದ್ದು ದುಬಾರಿಯಾಗಿ ಪರಿಣಮಿಸಿತು. ನಿರೀಕ್ಷೆಯಂತೆ ಜನರು ಈ ಬಸ್ಗಳನ್ನು ಸ್ವೀಕರಿಸಲಿಲ್ಲ. ಗಾಯದ ಮೇಲೆ ಬರೆ ಎಳೆದಂತೆ ಕೊವಿಡ್ ಸಂಕಷ್ಟವು ನಿಗಮವನ್ನು ಸಾಲದ ಸುಳಿಗೆ ಸಿಲುಕುವಂತೆ ಮಾಡಿದೆ.
Published On - 10:50 am, Tue, 22 November 22