ಬಿಡಿಎ ಸೈಟ್ ಖರೀದಿಸಿ ಖಾಲಿ ಬಿಟ್ಟಿದ್ದೀರಾ? ಹಾಗಿದ್ದರೆ ಎಚ್ಚರ, ತೆರಬೇಕಾಗಲಿದೆ ಭಾರಿ ದಂಡ
ಬಿಡಿಎ ಸೈಟ್ ಖರೀದಿಸಿ ವರ್ಷಗಳಿಂದ ಖಾಲಿ ಬಿಟ್ಟವರಿಗೆ ದಂಡದ ಬಿಸಿಮುಟ್ಟಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ. ಹಳೆಯ ನಿಯಮದ ಪರಿಣಾಮಕಾರಿ ಅನುಷ್ಠಾನಕ್ಕೆ ಮುಂದಾಗಿದೆ. ಆದಾಯ ಸಂಗ್ರಹ ಹೆಚ್ಚಿಸುವ ನಿಟ್ಟಿನಿಂದ ಈ ಕ್ರಮಕ್ಕೆ ಬಿಡಿಎ ಮುಂದಾಗಿದ್ದು, ಮೂಲಸೌಕರ್ಯ ಒದಗಿಸದೇ ಈ ರೀತಿ ಮಾಡುವುದು ಸರಿಯಲ್ಲ ಎಂದು ಸೈಟ್ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ಜನವರಿ 20: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಲೇಔಟ್ಗಳಲ್ಲಿ ಸೈಟ್ ಖರೀದಿ ಮಾಡಿ ವರ್ಷಗಳಿಂದ ಅದನ್ನು ಹಾಗೆಯೇ ಖಾಲಿ ಬಿಟ್ಟಿದ್ದೀರಾ? ಹಾಗಿದ್ದರೆ ನಿಮಗೆ ತೊಂದರೆ ಎದುರಾಗುವುದು ನಿಶ್ಚಿತ. ಹೀಗೆ ಖಾಲಿ ಬಿಟ್ಟಿರುವ ನಿವೇಶನಗಳಿಗೆ ಅವುಗಳ ಪ್ರಸ್ತುತ ಮೌಲ್ಯದ ಶೇಕಡಾ 10 ರಷ್ಟು ಒಂದು ಬಾರಿಯ ದಂಡ ವಿಧಿಸುವುದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಬಿಡಿಎ ಇತ್ತೀಚೆಗೆ ತೀರ್ಮಾನಿಸಿದೆ. ಹಲವು ವರ್ಷಗಳಿಂದ ಸೈಟ್ ಇಟ್ಟುಕೊಂಡಿದ್ದರೂ ಮನೆಗಳನ್ನು ನಿರ್ಮಿಸಲು ವಿಫಲವಾದ ಮಾಲೀಕರನ್ನು ಗುರಿಯಾಗಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅತ್ಯುತ್ತಮವಾದ ಭೂ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದ್ದರೂ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಈ ಉಪಕ್ರಮವು ಅರ್ಕಾವತಿ ಲೇಔಟ್ (2006) ಮತ್ತು ನಾಡಪ್ರಭು ಕೆಂಪೇಗೌಡ ಲೇಔಟ್ (2016) ಗೆ ಅನ್ವಯಿಸುವುದಿಲ್ಲ. ಅಲ್ಲಿ ಮೂಲಸೌಕರ್ಯಗಳ ಕೊರತೆ ಇರುವುದರಿಂದ ಅವುಗಳನ್ನು ದಂಡದ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಆದರೆ, ಸರ್.ಎಂ.ವಿಶ್ವೇಶ್ವರಯ್ಯ ಲೇಔಟ್ನಂಥ (2000ರಲ್ಲಿ ಸ್ಥಾಪಿತ) ಹಳೆಯ ಬಡಾವಣೆಗಳಿಗೆ ದಂಡದ ನಿಯಮ ಅನ್ವಯವಾಗಲಿದೆ. ಇದಕ್ಕೆ ನಿವೇಶನಗಳ ಮಾಲೀಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬಿಡಿಎ ಕಾಯ್ದೆಯಲ್ಲೇನಿದೆ?
1976ರ ಬಿಡಿಎ ಕಾಯ್ದೆಯಡಿ, ನಿವೇಶನ ಹಂಚಿಕೆ ಮಾಡಿದವರು ಮೂರು ವರ್ಷಗಳೊಳಗೆ ಮನೆಗಳನ್ನು ನಿರ್ಮಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ವಿಫಲವಾದರೆ ಆ ಸಮಯದಲ್ಲಿ ಸೈಟ್‌ನ ಮಾರ್ಗದರ್ಶನ ಮೌಲ್ಯವನ್ನು ಆಧರಿಸಿ ಶೇಕಡಾ 10 ರಷ್ಟು ದಂಡವನ್ನು ವಿಧಿಸಲಾಗುತ್ತದೆ. ಈ ನಿಯಮವು ದಶಕಗಳಿಂದ ಅಸ್ತಿತ್ವದಲ್ಲಿದ್ದರೂ, ಇಲ್ಲಿಯವರೆಗೆ ಕಟ್ಟುನಿಟ್ಟಾಗಿ ಜಾರಿಗೆ ಬಂದಿಲ್ಲ. ಹಾಗಾಗಿ ಇದೀಗ ನಿಯಮದ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಬಿಡಿಎ ಮುಂದಾಗಿದೆ.
ಇದನ್ನೂ ಓದಿ: ಮೆಟ್ರೋ ಟಿಕೆಟ್ ದರ ಏರಿಕೆ ಮುಂದಿನ ವಾರದಿಂದ ಬಹುತೇಕ ಖಚಿತ
ಖಾಲಿ ನಿವೇಶನಕ್ಕೆ ದಂಡ ವಿಧಿಸುವ ನಿಯಮದ ಪರಿಣಾಮಕಾರಿ ಅನುಷ್ಠಾನಕ್ಕೆ ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಇತ್ತೀಚೆಗೆ ಸೂಚನೆ ನೀಡಿದ್ದರು. ಆದಾಯ ಸಂಗ್ರಹ ಹೆಚ್ಚಿಸುವ ದೃಷ್ಟಿಯಿಂದ ಅವರು ಈ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ದಂಡ ವಿಧಿಸುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.
ನಿವೇಶನ ಮಾಲೀಕರು ಹೇಳುವುದೇನು?
ಬಿಡಿಎ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ವಿಳಂಬ ಮಾಡುವುದರಿಂದ ಸಕಾಲಿಕ ಕಟ್ಟಡ ನಿರ್ಮಾಣ ಅಸಾಧ್ಯವಾಗಿದೆ ಎಂಬುದು ಸೈಟ್ ಮಾಲೀಕರ ವಾದವಾಗಿದೆ. ಅನೇಕರು ರಸ್ತೆಗಳು ಮತ್ತು ವಿದ್ಯುತ್‌ನಂತಹ ಸೌಕರ್ಯಗಳ ಕೊರತೆಗಳ ಬಗ್ಗೆ ಉಲ್ಲೇಖಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:32 am, Mon, 20 January 25