ಬೆಂಗಳೂರಿನ ಕೆಲವೆಡೆ ಕೊರೊನಾ ಲಸಿಕೆ ಕೊರತೆ; ಎರಡನೇ ಡೋಸ್ ಪಡೆಯಲು ಬಂದವರಿಗೆ ಲಸಿಕೆಯೇ ಸಿಗುತ್ತಿಲ್ಲ

ರಾಜಕಾರಣಿಗಳಿಗೆ ರೋಗ ಬಂದರೆ 3 ದಿನಕ್ಕೆ ವಾಸಿಯಾಗಿ ಹೊರಗೆ ಬರುತ್ತಾರೆ. ಬಡವರಿಗೆ ಕೊರೊನಾ ಬಂದ್ರೆ ಹೆಣವಾಗಿ ಬರ್ತಾರೆ. ಕನಿಷ್ಠ ಪಕ್ಷ ಲಸಿಕೆ ಆದ್ರೂ ಸರಿಯಾಗಿ ಸಿಗೋ ಹಾಗೆ ಸರ್ಕಾರ ನೋಡಿ ಕೊಳ್ಳಬೇಕು. ಕೊರೊನಾದಿಂದ ಪಾರಾಗಲು ಲಸಿಕೆ ಹಾಕಿಸೋಕೆ ಬಂದ್ರೆ, ಲಸಿಕೆನೇ ಇಲ್ಲ: ಜನರ ಅಳಲು

  • TV9 Web Team
  • Published On - 14:25 PM, 21 Apr 2021
ಬೆಂಗಳೂರಿನ ಕೆಲವೆಡೆ ಕೊರೊನಾ ಲಸಿಕೆ ಕೊರತೆ; ಎರಡನೇ ಡೋಸ್ ಪಡೆಯಲು ಬಂದವರಿಗೆ ಲಸಿಕೆಯೇ ಸಿಗುತ್ತಿಲ್ಲ
ಕೊರೊನಾ ಲಸಿಕೆ

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕು ದೊಡ್ಡ ಮಟ್ಟದ ಆತಂಕ ಸೃಷ್ಟಿಮಾಡಿದೆ. ಏಕಾಏಕಿ ಉದ್ವಿಗ್ನಗೊಂಡಿರುವ ಕೊರೊನಾ ಎರಡನೇ ಅಲೆಯಿಂದಾಗಿ ಆರೋಗ್ಯ ವ್ಯವಸ್ಥೆ ತಲ್ಲಣಿಸುತ್ತಿದೆ. ಈ ನಡುವೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಲಸಿಕೆಯ ಅಭಾವವೂ ತಲೆದೋರಿದ್ದು, ಮೊದಲ ಡೋಸ್ ಲಸಿಕೆ ಪಡೆದವರು ಈಗ ಎರಡನೇ ಡೋಸ್ ಪಡೆಯಲು ಪರದಾಡಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಟಿವಿ9 ಬಳಿ ಸಂಕಷ್ಟ ಹಂಚಿಕೊಂಡ ವೃದ್ಧರು, ಮೊದಲ ಬಾರಿಗೆ ಕೊರೊನಾ ಲಸಿಕೆ ನೀಡಿ 28 ದಿನ ಕಳೆದ ಮೇಲೆ ತಪ್ಪದೇ ಬರಬೇಕು ಎಂದು ವೈದ್ಯರು ಹೇಳಿದ್ದರು. ಅದರಂತೆಯೇ ನಾವು ಬಂದಿದ್ದೇವೆ. ಆದರೆ, ಇಲ್ಲಿ ಎರಡು ದಿನ ಬಿಟ್ಟು ಲಸಿಕೆ ಕೊಡುವುದಾಗಿ ಹೇಳುತ್ತಿದ್ದಾರೆ. ಹೆಚ್ಚೂಕಡಿಮೆ ಆದರೆ ಯಾರು ಹೊಣೆ ಎಂದು ಆತಂಕ ಹೊರಹಾಕಿದ್ದಾರೆ.

ರಾಜಕಾರಣಿಗಳಿಗೆ ರೋಗ ಬಂದರೆ 3 ದಿನಕ್ಕೆ ವಾಸಿಯಾಗಿ ಹೊರಗೆ ಬರುತ್ತಾರೆ. ಬಡವರಿಗೆ ಕೊರೊನಾ ಬಂದ್ರೆ ಹೆಣವಾಗಿ ಬರ್ತಾರೆ. ಕನಿಷ್ಠ ಪಕ್ಷ ಲಸಿಕೆ ಆದ್ರೂ ಸರಿಯಾಗಿ ಸಿಗೋ ಹಾಗೆ ಸರ್ಕಾರ ನೋಡಿ ಕೊಳ್ಳಬೇಕು. ಕೊರೊನಾದಿಂದ ಪಾರಾಗಲು ಲಸಿಕೆ ಹಾಕಿಸೋಕೆ ಬಂದ್ರೆ, ಲಸಿಕೆನೇ ಇಲ್ಲ ಎನ್ನುವ ಉತ್ತರ ಕೊಡುತ್ತಾರೆ. ಎರಡು ಮೂರು ಬಾರಿ ಆಸ್ಪತ್ರೆಗೆ ಅಲೆದರೂ ಲಸಿಕೆ ಇಲ್ಲ ಎನ್ನುತ್ತಿದ್ದಾರೆ ಎಂದು ಬಿಟಿಎಂ ಲೇಔಟ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಪಡೆಯಲು ಬಂದ ವೃದ್ಧರು ಅಳಲು ತೋಡಿಕೊಂಡಿದ್ದಾರೆ.

ಲಸಿಕೆ ಬೆಲೆಯೂ ದುಪ್ಪಟ್ಟಾಗಲಿದೆ!
ಒಂದೆಡೆ ಕೊರೊನಾ ಲಸಿಕೆ ಆಗುತ್ತಿರುವಾಗಲೇ ಇನ್ನೊಂದೆಡೆ ಲಸಿಕೆ ದರ ಏರುವ ಮುನ್ಸೂಚನೆ ಸಿಕ್ಕಿದೆ. ಮೇ 1 ರಿಂದ ಕೊವಿಡ್ ಲಸಿಕೆ 250 ರೂ.ಗೆ ಸಿಗುವುದು ಕಷ್ಟವಾಗಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ದರ ಹೆಚ್ಚಾಗುವ ಸಾಧ್ಯತೆ ಇದೆ. ಖಾಸಗಿ ಆಸ್ಪತ್ರೆಗಳು ಲಸಿಕೆ ಉತ್ಪಾದಕ ಕಂಪನಿಗಳಿಂದ ನೇರವಾಗಿ ಲಸಿಕೆ ಖರೀದಿಸಬೇಕಾಗಿರುವುದರಿಂದ 1 ಡೋಸ್ ಕೊವಿಡ್ ಲಸಿಕೆ 500 ರಿಂದ 1 ಸಾವಿರ ರೂ.ಗೆ ಮಾರಾಟವಾಗುವ ಸಾಧ್ಯತೆಯಿದೆ. ಇದೇ ವೇಳೆ, ಖಾಸಗಿ ಆಸ್ಪತ್ರೆಗಳು ದುಪ್ಪಟ್ಟು ದರಕ್ಕೆ ಲಸಿಕೆ ಮಾರಲು ಅನುಮತಿ ಕೋರಿವೆ ಎನ್ನುವುದು ಸಹ ತಿಳಿದುಬಂದಿದೆ.

ಕೊವಿಡ್ ಲಸಿಕೆ ತಯಾರಿಕಾ ಕಂಪನಿಗಳು ಈ ಹಿಂದೆಯೇ ಹೇಳಿದಂತೆ ಲಸಿಕೆಯನ್ನು 1 ಸಾವಿರದಿಂದ 2 ಸಾವಿರ ರೂ.ಗೆ ಮಾರಾಟ ಮಾಡುವ ಸಾಧ್ಯತೆಯಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ದರ 1 ಸಾವಿರ ರೂ. ಆಗಬಹುದು ಎಂದು ವಿಶ್ವದ ಅತಿ ದೊಡ್ಡ ಲಸಿಕೆ ತಯಾರಿಕಾ ಕಂಪನಿಯಾದ ಸೆರಮ್​ ಇನ್ಸ್​ಟಿಟ್ಯೂಟ್​ ಸಿಇಒ ಅದರ್ ಪೂನಾವಾಲಾ ಹೇಳಿದ್ದರು. ಇನ್ನು ಭಾರತ್​ ಬಯೋಟೆಕ್​ ಕಂಪನಿಯ ಕೃಷ್ಣಾ ಎಲ್ಲಾ ಪ್ರಕಾರ ಆರಂಭದಲ್ಲಿ ಬೆಲೆಗಳು ಇನ್ನೂ ಹೆಚ್ಚಾಗಿಯೇ ಇರಲಿವೆ. ಕೇಂದ್ರದೊಂದಿಗೆ ಆಗಿರುವ ಒಪ್ಪಂದದ ಪ್ರಕಾರ ಪ್ರಸ್ತುತ, ಸೆರಂ ಕಂಪನಿ 150 ರೂ.ಗೆ ಮತ್ತು ಭಾರತ್​ ಬಯೋಟೆಕ್​ 206 ರೂಪಾಯಿಗೆ (ತೆರಿಗೆಗಳು ಪ್ರತ್ಯೇಕ) ಲಸಿಕೆ ಸರಬರಾಜು ಮಾಡುತ್ತಿವೆ.

ಇದನ್ನೂ ಓದಿ:
ಮೇ 1 ರಿಂದ ಕೊವಿಡ್ ಲಸಿಕೆ 250 ರೂ.ಗೆ ಸಿಗುವುದಿಲ್ಲ; ದರ ದುಪ್ಪಟ್ಟು ಆಗಲಿದೆ! 

ಕೊರೊನಾ ಸೋಂಕಿತರ ಜೀವರಕ್ಷಕ ರೆಮ್​ಡೆಸಿವಿರ್​ ಮೇಲಿನ ಆಮದು ಸುಂಕ ಮನ್ನಾ ಮಾಡಿದ ಕೇಂದ್ರ ಸರ್ಕಾರ