ಡೆಂಗ್ಯೂ ಹೆಚ್ಚಳ ಪರಿಣಾಮ; ಬೆಂಗಳೂರಿನಲ್ಲಿ ಪ್ಲೇಟ್ಲೆಟ್ಗೆ ಹೆಚ್ಚಿದ ಬೇಡಿಕೆ
ಬೆಂಗಳೂರಿನಲ್ಲಿ ಡೆಂಗ್ಯೂ ಹಾವಳಿ ಅತಿಯಾಗಿದೆ. ಗಲ್ಲಿ-ಗಲ್ಲಿಯಲ್ಲೂ ಜನರಲ್ಲಿ ಕಾಣಿಸಿಕೊಳ್ಳುತ್ತಿರುವ ಸೋಂಕು ಮೂವರನ್ನ ಬಲಿ ಪಡೆದಿದೆ. ಇದರ ನಡುವೆ ಡೆಂಗ್ಯೂ ಪ್ರಕರಣಗಳು ಏರಿಕೆಯಾಗುತ್ತಿದ್ದಂತೆ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಬ್ಲಡ್ ಬ್ಯಾಂಕ್ಗಳಲ್ಲಿ ಪ್ಲೇಟ್ಲೆಟ್ಗಳಿಗೆ ಬೇಡಿಕೆ ಹೆಚ್ಚಾಗಿದೆ. ರಾಜ್ಯದಲ್ಲಿ ಹೇಗಿದೆ ಡೆಂಗ್ಯೂ ಪರಿಸ್ಥಿತಿ, ಬೆಂಗಳೂರಿನ ಪ್ಲೇಟ್ಲೆಟ್ ಲಭ್ಯತೆ ಹೇಗಿದೆ? ಇಲ್ಲಿದೆ ವಿವರ.
ಬೆಂಗಳೂರು, ಜುಲೈ 3: ಮುಂಗಾರು ಮಳೆಗಾಲ ಆರಂಭವಾಗುತ್ತಿದ್ದಂತೆ ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಡೆಂಗ್ಯೂ ಹರಡುವಿಕೆ ಹೆಚ್ಚಾಗಿದೆ. ಡೆಂಗ್ಯೂ ಆರ್ಭಟಕ್ಕೆ ಸಿಲಿಕಾನ್ ಸಿಟಿ ಮಂದಿ ಕಂಗಾಲಾಗಿದ್ದಾರೆ. ಆಸ್ಪತ್ರೆ ಕದತಟ್ಟುವರ ಸಂಖ್ಯೆಯೂ ಏರಿಕೆಯಾಗಿದೆ. ಡೆಂಗ್ಯೂ ಕೇಸ್ ಏರಿಕೆ ಬೆನ್ನಲ್ಲೇ ಪ್ಲೇಟ್ಲೆಟ್ಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಕೊರತೆ ಎದುರಾಗಿದೆ.
ಹೌದು, ಯಾವುದಾದರೂ ವ್ಯಕ್ತಿಗೆ ಡೆಂಗ್ಯೂ ಬಂದರೆ ಅದು ನೇರವಾಗಿ ಆ ವ್ಯಕ್ತಿಯ ದೇಹದ ರಕ್ತದಲ್ಲಿನ ಪ್ಲೇಟ್ಲೆಟ್ ಹಾಗೂ ಬಿಳಿ ರಕ್ತ ಕಣಗಳನ್ನು ಕಡಿಮೆ ಮಾಡುತ್ತದೆ. ಡೆಂಗ್ಯೂವಿನಿಂದ ಪಾರಾಗಬೇಕಾದರೆ, ನಮ್ಮ ದೇಹದ ರೋಗ ನಿರೋಧಕ ಶಕ್ತಿಯ ಸ್ವರೂಪವಾಗಿರುವ ಬಿಳಿ ರಕ್ತ ಕಣಗಳು ಮತ್ತು ಪ್ಲೇಟ್ಲೆಟ್ಗಳ ಸಂಖ್ಯೆಯನ್ನು ಹೆಚ್ಚು ಮಾಡಿಕೊಳ್ಳಬೇಕು. ಹೀಗಾಗಿ ಡೆಂಗ್ಯೂ ಪ್ರಕರಣ ಹೆಚ್ಚಾದ ಬೆನ್ನಲ್ಲೇ ಪ್ಲೇಟ್ಲೆಟ್ಗಳಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಅಂದಹಾಗೆ, ಕಳೆದ ತಿಂಗಳು ಪ್ರತಿ ಬ್ಲಡ್ ಬ್ಯಾಂಕ್ ನಲ್ಲಿ ನಿತ್ಯ 5-10 ಯುನಿಟ್ ಪ್ಲೇಟ್ಲೆಟ್ಗಳಿಗೆ ಬೇಡಿಕೆಯಿತ್ತು. ಆದರೆ ಈಗ 50-60 ಯುನಿಟ್ನಷ್ಟು ರ್ಯಾಂಡಮ್ ಡೋನರ್ ಪ್ಲೇಟ್ಲೆಟ್ಗಳಿಗೆ ಬೇಡಿಕೆ ಇದೆ.
ಪ್ಲೇಟ್‌ಲೆಟ್ ಕೊರತೆ ನೀಗಿಸಲು ಹಲವು ಕಡೆ ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡಲಾಗುತ್ತಿದ್ದು, ಹಲವರಿಂದ ಪ್ಲೇಟ್ಲೆಟ್ ಪಡೆಯಲಾಗುತ್ತಿದೆ ಎಂದು ರೆಡ್ ಕ್ರಾಸ್ ಘಟಕದ ಅಶೋಕ್ ತಿಳಿಸಿದ್ದಾರೆ.
ಸಾಕಷ್ಟು ಜನರು ಪ್ಲೇಟ್ಲೆಟ್ ಸಲುವಾಗಿ ಕರೆಮಾಡುತ್ತಿರುವ ಕಾರಣ ರಕ್ತದಾನಿಗಳು ತಾವಾಗಿಯೇ ಮುಂದೆ ಬಂದು ಪ್ಲೇಟ್ಲೆಟ್ ಕೊಡಲು ಮುಂದಾಗುತ್ತಿದ್ದಾರೆ.
ರಕ್ತದಾನ ಮಹಾದಾನ ಎನ್ನುತ್ತಾರೆ. ರಕ್ತದಾನ ಮಾಡುವುದರಿಂದ ನಮ್ಮ ಆರೋಗ್ಯಕ್ಕೂ ಒಳ್ಳೆಯದು. ನನಗೆ ಒಂದು 8 ವರ್ಷದ ಮಗುವಿಗೆ ಪ್ಲೇಟ್ಲೆಟ್ ಬೇಕು ಅಂತ ಕರೆ ಮಾಡಿದರು. ಹಾಗಾಗಿ ಪ್ಲೇಟ್ಲೆಟ್ ನೀಡುತ್ತಿದ್ದೇನೆ ಎಂದು ರಕ್ತದಾನಿ ಸಚಿನ್ ಶಿಂದೆ ತಿಳಿಸಿದ್ದಾರೆ.
ಯಾವ ಜಿಲ್ಲೆಯಲ್ಲಿ ಎಷ್ಟಿದೆ ಡೆಂಗ್ಯೂ ಪ್ರಕರಣ
ಜಿಲ್ಲೆ | ಪ್ರಕರಣಗಳು |
ಬೆಂಗಳೂರು | 1563 |
ಚಿಕ್ಕಮಗಳೂರು | 491 |
ಮೈಸೂರು | 479 |
ಹಾವೇರಿ | 451 |
ಚಿತ್ರದುರ್ಗ | 265 |
ದಕ್ಷಿಣ ಕನ್ನಡ | 233 |
ಸಾವಿನ ಸಂಖ್ಯೆ
ಜಿಲ್ಲೆ | ಸಾವಿನ ಸಂಖ್ಯೆ |
ಹಾಸನ | 2 |
ಶಿವಮೊಗ್ಗ | 1 |
ಹಾವೇರಿ | 1 |
ಧಾರವಾಡ | 1 |
ಬೆಂಗಳೂರು | 1 |
ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಚ್ಚಿದ ಡೆಂಗ್ಯೂ ಅಬ್ಬರ; ಸಿಲಿಕಾನ್ ಸಿಟಿಗೆ ಕಾದಿದ್ಯಾ ಸೆಪ್ಟೆಂಬರ್ ಗಂಡಾಂತರ..?
2023ರಲ್ಲಿ ಜನವರಿಯಿಂದ ಜೂನ್ ವರೆಗೆ 732 ಡೆಂಗ್ಯೂ ಪ್ರಕರಣ ವರದಿಯಾಗಿದ್ದವು. ಆದರೆ ಈಬಾರಿ 1530 ಕೇಸ್ ದಾಖಲಾಗಿ ಆತಂಕ ಹುಟ್ಟಿಸಿದೆ. ಬಿಬಿಎಂಪಿಯೂ ಎಚ್ಚೆತ್ತುಕೊಂಡಿದ್ದು, ಸೋಂಕು ಹರಡುವಿಕೆ ತಡೆಗೆ ಹಲವಾರು ಕ್ರಮಗಳನ್ನು ಕೈಗೊಂಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ