Tv9 Digital Live| ಮಕ್ಕಳ ಆತ್ಮಹತ್ಯೆಗೆ ಕಾರಣವೇನು? ಪರಿಹಾರಗಳು ಹೀಗಿವೆ..

ದೇಶದ ಮುಂದಿನ ಪ್ರಜೆಗಳು ಪರೀಕ್ಷೆಯಲ್ಲಿ ಅಂಕ ಕಡಿಮೆಯಾಯಿತೆಂದು ಆತ್ಮಹತ್ಯೆ ಎಂಬ ಕೆಟ್ಟ ನಿರ್ಧಾರಕ್ಕೆ ಬರುತ್ತಿದ್ದಾರೆ. ಮುಂದಿನ ಬಾರಿ ಹೆಚ್ಚು ಅಂಕಗಳನ್ನು ಗಳಿಸಬಹುದೆಂಬ ಸಣ್ಣ ವಿಷಯವನ್ನು ಯೋಚಿಸದೆ ಜೀವವನ್ನೆ ತಮ್ಮ ಕೈಯಾರೆ ತೆಗೆದುಕೊಳ್ಳುತ್ತಿದ್ದಾರೆ. ಅರಳಿದ ಹೂವುಗಳು ತಮ್ಮ ಸುಹಾಸನೆ ಪಸರಿಸುವ ಮೊದಲೆ ಬಾಡಿ ಹೋದಾಗ ಆಗುವ ಬೇಸರ ಹೇಳಲು ಸಾಧ್ಯವಿಲ್ಲ.

  • TV9 Web Team
  • Published On - 22:57 PM, 8 Apr 2021
Tv9 Digital Live| ಮಕ್ಕಳ ಆತ್ಮಹತ್ಯೆಗೆ ಕಾರಣವೇನು? ಪರಿಹಾರಗಳು ಹೀಗಿವೆ..
ಪೂರ್ಣಿಮಾ, ಶಶಿಕುಮಾರ್, ಡಾ.ಪದ್ಮಾಕ್ಷಿ

ಬೆಂಗಳೂರು: ಚೆನ್ನಾಗಿ ಓದಬೇಕು. ಶಾಲೆಯಲ್ಲಿ ಉತ್ತಮ ವಿದ್ಯಾರ್ಥಿ ಎಂದೆನಿಸಿಕೊಳ್ಳಬೇಕು. ತರಗತಿಯಲ್ಲಿ ಎಲ್ಲರಿಗಿಂತ ಹೆಚ್ಚು ಅಂಕವನ್ನು ಪಡೆಯಬೇಕು. ಪಡೆದ ಅಂಕದಿಂದ ಹೆತ್ತವರಿಗೆ ಸಂತೋಷ ನೀಡಬೇಕು. ಒಟ್ಟಾರೆ ಜೀವನದಲ್ಲಿ ಓದಿ ಸಾಧನೆ ಮಾಡಬೇಕು ಎಂದು ಹಲವು ವಿದ್ಯಾರ್ಥಿಗಳು ಯೋಚಿಸುತ್ತಾರೆ. ಅದಕ್ಕೆ ಬೇಕಾದ ಪೂರ್ವ ತಯಾರಿಗಳನ್ನು ಮಾಡಿಕೊಳ್ಳುತ್ತಾರೆ. ಆದರೆ ಪರೀಕ್ಷೆ ಬರೆದು ಫಲಿತಾಂಶ ಪ್ರಕಟವಾದಾಗ ನಿರೀಕ್ಷೆಗೆ ತಕ್ಕಂತೆ ಅಂಕಗಳು ಬಾರದೆ ಇದ್ದಾಗ ವಿದ್ಯಾರ್ಥಿಗಳು ಮಾನಸಿಕವಾಗಿ ಕುಗ್ಗುತ್ತಾರೆ. ಜೀವನವೇ ಇಷ್ಟೆಂದು ಯೋಚಿಸಿ ಆತ್ಮಹತ್ಯೆಗೆ ನಿರ್ಧರಿಸುತ್ತಾರೆ. ಮುಂದಿನ ಜೀವನ ಚೆನ್ನಾಗಿರುತ್ತದೆ ಎಂದು ಒಂದು ಕ್ಷಣವೂ ಯೋಚಿಸದೇ ಕೆಟ್ಟ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಹಾಗಾದರೆ ವಿದ್ಯಾರ್ಥಿಗಳು ಮಾನಸಿಕವಾಗಿ ಹೇಗೆ ಸದೃಢರಾಗಿರಬೇಕು? ಪರೀಕ್ಷೆ ಫಲಿತಾಂಶವನ್ನು ಎದುರಿಸುವುದು ಹೇಗೆ ಎಂದು ಇಂದಿನ ಡಿಜಿಟಲ್ ಲೈವ್ನಲ್ಲಿ ಚರ್ಚಿಸಲಾಗಿದೆ. ಚರ್ಚೆಯಲ್ಲಿ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್, ಮನೋವೈದ್ಯರಾದ ಡಾ.ಪದ್ಮಾಕ್ಷಿ, ಶಿಕ್ಷಣ ತಜ್ಞ ನಿರಂಜನ ಆರಾಧ್ಯ ಮತ್ತು ಪೋಷಕರಾದ ಪೂರ್ಣಿಮಾ ಭಾಗವಹಿಸಿದ್ದರು. ಚರ್ಚೆಯನ್ನು ಆ್ಯಂಕರ್ ಆನಂದ್ ಬುರಲಿ ನಡೆಸಿಕೊಟ್ಟರು.

ದೇಶದ ಮುಂದಿನ ಪ್ರಜೆಗಳು ಪರೀಕ್ಷೆಯಲ್ಲಿ ಅಂಕ ಕಡಿಮೆಯಾಯಿತೆಂದು ಆತ್ಮಹತ್ಯೆ ಎಂಬ ಕೆಟ್ಟ ನಿರ್ಧಾರಕ್ಕೆ ಬರುತ್ತಿದ್ದಾರೆ. ಮುಂದಿನ ಬಾರಿ ಹೆಚ್ಚು ಅಂಕಗಳನ್ನು ಗಳಿಸಬಹುದೆಂಬ ಸಣ್ಣ ವಿಷಯವನ್ನು ಯೋಚಿಸದೆ ಜೀವವನ್ನೆ ತಮ್ಮ ಕೈಯಾರೆ ತೆಗೆದುಕೊಳ್ಳುತ್ತಿದ್ದಾರೆ. ಅರಳಿದ ಹೂವುಗಳು ತಮ್ಮ ಸುಹಾಸನೆ ಪಸರಿಸುವ ಮೊದಲೆ ಬಾಡಿ ಹೋದಾಗ ಆಗುವ ಬೇಸರ ಹೇಳಲು ಸಾಧ್ಯವಿಲ್ಲ. ಅದರಂತೆ ಕಷ್ಟಪಟ್ಟು ಸಾಕು ಸಲುಹಿದ ಮಕ್ಕಳ ಜೀವ ಹೋದಾಗ ಪೋಷಕರಿಗೆ ಆಗುವ ನೋವನ್ನು ವಿವರಿಸುವುದು ಸುಲಭದ ಮಾತಲ್ಲ. ಶಾಲೆಗಳಲ್ಲಿ ದಡ್ಡನೆಂದು ಎನಿಸಕೊಂಡ ಬಹುತೇಕ ಮಹನೀಯರು ಸಮಾಜದಲ್ಲಿ ದೊಡ್ಡ ದೊಡ್ಡ ಸಾಧನೆ ಮಾಡಿರುವ ಸಂಗತಿಗಳು ಕಣ್ಣ ಮುಂದಿವೆ. ಹೀಗಿದ್ದೂ ವಿದ್ಯಾರ್ಥಿಗಳ ಮನಸ್ಥಿತಿ ಮಾತ್ರ ಬೇರೆಯಾಗಿದೆ. ಇದಕ್ಕೆ ಕಾರಣವೇನು ಎಂದು ಚರ್ಚೆಯ ಮೊದಲಿಗೆ ಎಲ್ಲ ಪೋಷಕರ ಪರವಾಗಿ ಚರ್ಚೆಯಲ್ಲಿ ಭಾಗವಹಿಸಿದ ಪೂರ್ಣಿಮಾರನ್ನು ಕೇಳಿದಾಗ ಮಗುವಿಗೆ ಮೊದಲು ಓದಿನ ಬಗ್ಗೆ ಪೋಷಕರು ಒತ್ತಡ ಹೇರಬಾರದು. ಪ್ರತಿಯೊಬ್ಬರು ಒಂದಲ್ಲ ಒಂದು ವಿಷಯದಲ್ಲಿ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಆ ಸಾಮರ್ಥ್ಯವೇನು ಎಂದು ಮಕ್ಕಳಿಗೆ ಮೊದಲು ತಿಳಿಸುವ ಪ್ರಯತ್ನವನ್ನು ಪೋಷಕರು ಮಾಡಬೇಕು. ಮಕ್ಕಳ ಸಾಮರ್ಥ್ಯ ಸಮಾಜಕ್ಕೆ ಎಷ್ಟು ಮುಖ್ಯವಾಗಿದೆ ಎಂದು ತಿಳಿ ಹೇಳಿದಾಗ ಮಕ್ಕಳ ಆತ್ಮಹತ್ಯೆ ಪ್ರಕರಣಗಳು ತಾನಾಗೆ ಕಡಿಮೆಯಾಗುತ್ತದೆ ಎಂದು ತಿಳಿಸಿದರು.

ಸೋತಾಗಲೇ ಮುಂದಿನ ದಿನಗಳಲ್ಲಿ ಗೆಲುವನ್ನು ಸಾಧಿಸಲು ಸಾಧ್ಯ. ಹೀಗಾಗಿ ಮೊದಲು ಸೋಲನ್ನು ಅನುಭವಿಸಬೇಕು. ಮಕ್ಕಳು ಕಡಿಮೆ ಅಂಕ ಪಡೆದು ಬೇಸರವಾಗುತ್ತದೆ ಎಂದು ಪರೀಕ್ಷೆಯಲ್ಲಿ ಪೋಷಕರು ಉತ್ತರವನ್ನು ಹೇಳಿಕೊಡುವುದು ಮಗುವಿನ ಭವಿಷ್ಯ ಹಾಳು ಮಾಡಿದಂತಾಗುತ್ತದೆ. ಮಕ್ಕಳ ಸಾಮರ್ಥ್ಯಕ್ಕೆ ತಕ್ಕಂತೆ ಶಿಕ್ಷಣವನ್ನು ನೀಡಬೇಕು. ಬಾಲ್ಯ ಸೇರಿದಂತೆ ಎಲ್ಲಾ ವಯಸ್ಸನ್ನು ಮಕ್ಕಳು ಅನುಭವಿಸಬೇಕು. ಕೇವಲ ಓದು ಓದು ಎಂದಾಗ ಮಕ್ಕಳ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವಂತಾಗುತ್ತದೆ. ಈ ಬಗ್ಗೆ ಪೋಷಕರು ಹೆಚ್ಚು ಗಮನಹರಿಸಬೇಕು ಎಂದು ಹೇಳಿದರು.

ಚರ್ಚೆಯ ಮುಂದಿನ ಭಾಗವಾಗಿ ಮಾತನಾಡಿದ ಮನೋವೈದ್ಯೆ ಡಾ.ಪದ್ಮಾಕ್ಷಿ ಮಕ್ಕಳಿಗೆ ಮೊದಲಿನಿಂದ ಇಷ್ಟು ಅಂಕಗಳನ್ನು ಪಡೆಯಲೇಬೇಕೆಂದು ಪೋಷಕರು ಮತ್ತು ಶಿಕ್ಷಕರು ಒತ್ತಡ ಹೇರುತ್ತಾರೆ. ಇದರಿಂದ ಮಕ್ಕಳ ಮಾನಸಿಕ ಸ್ಥಿತಿ ಹದಗೆಡುತ್ತದೆ. ಹೆಚ್ಚು ಅಂಕಗಳನ್ನು ಪಡೆದಾಗ ಆಗುವ ಅನುಕೂಲಗಳೇನು.. ಕಡಿಮೆ ಅಂಕ ಬಂದಾಗ ಮುಂದಿನ ಪರೀಕ್ಷೆಗೆ ಹೇಗೆ ತಯಾರಿ ಆಗಬೇಕೆಂದು ತಿಳಿಸಬೇಕು. ಇದರ ಬದಲಿಗೆ ಇಷ್ಟೇ ಅಂಕಗಳನ್ನು ಪಡೆಯಲೇಬೇಕು ಎಂದು ಒತ್ತಡ ಹೇರಬಾರದು. ಮಕ್ಕಳ ಮನಸಲ್ಲಿ ಭಯ ಹುಟ್ಟಿಸುವ ಕೆಲಸ ಪೋಷಕರು ಮಾಡಿದಾಗ ವಿದ್ಯಾರ್ಥಿಗಳು ಯಶಸ್ಸಿನ ಹಾದಿ ಹಿಡಿಯುವುದು ಕಷ್ಟವೇ ಆಗಿರುತ್ತದೆ. ನಿನ್ನಿಂದ ಸಾಧ್ಯವಿದೆ ಎಂದು ಆತ್ಮವಿಶ್ವಾಸವನ್ನು ಮಕ್ಕಳಲ್ಲಿ ಮೊದಲು ತುಂಬಿದಾಗ ಆತ್ಮಹತ್ಯೆ ಎಂಬ ಕೆಟ್ಟ ನಿರ್ಧಾರಕ್ಕೆ ವಿದ್ಯಾರ್ಥಿಗಳು ಬರುವುದಿಲ್ಲ ಎಂದು ಒತ್ತಿ ಹೇಳಿದರು.

ಮಗು ಎಂಬುದು ಖಾಲಿ ಪಾತ್ರೆಯಿದ್ದಂತೆ. ಆ ಖಾಲಿ ಪಾತ್ರೆಗೆ ಪೋಷಕರು ಮತ್ತು ಶಿಕ್ಷಕರು ಏನು ತುಂಬುತ್ತಾರೆ ಎನ್ನುವುದು ಮುಖ್ಯವಾಗುತ್ತದೆ. ಮಕ್ಕಳು ಅತ್ಯಂತ ಸೂಕ್ಷ್ಮವಾಗಿ ಬೆಳೆಯುತ್ತಿದ್ದಾರೆ. ಬಹು ಮುಖ್ಯವಾಗಿ ಮಕ್ಕಳು ಪೋಷಕರ ಪ್ರೀತಿಯಿಂದ ವಂಚಿತರಾಗಿದ್ದಾರೆ. ಮಕ್ಕಳು ಮತ್ತು ಪೋಷಕರು ಸ್ನೇಹಿತರಂತೆ ಇದ್ದಾಗ ಮಕ್ಕಳಲ್ಲಿ ಧೈರ್ಯ ಹೆಚ್ಚಾಗುತ್ತದೆ. ಆತ್ಮಹತ್ಯೆಗೆ ಕಡಿಮೆ ಅಂಕ ಎನ್ನುವುದು ಒಂದು ಮೇಲ್ನೋಟದ ಕಾರಣವಾಗಿದೆ. ಆದರೆ ಅದರ ಬಗ್ಗೆ ಆಳಾವಾಗಿ ಅಧ್ಯಯನ ನಡೆಸಿದಾಗ ನಿಜ ಸಂಗತಿಗಳು ಬೇರೆ ಇರುತ್ತವೆ. ಮೊದಲು ತಮ್ಮ ತಮ್ಮ ಮಕ್ಕಳು ಯಾವ ಕೊರತೆಯಿಂದ ಬಳಲುತ್ತಿವೆ ಎಂದು ಪೋಷಕರು ಅರಿತುಕೊಳ್ಳಬೇಕು ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ತಿಳಿಸಿದರು.

ಆರಂಭದ ದಿನದಿಂದ ಮಕ್ಕಳಿಗೆ ಆತ್ಮಸ್ಥೈರ್ಯ ಕೊಡುವ ಕೆಲಸವನ್ನು ಮಾಡಬೇಕು. ಪರೀಕ್ಷೆ ಜೀವನದ ಅಂತಿಮವಲ್ಲ. ಅಧ್ಯಯನ ಪ್ರಕಾರ ಎಲ್ಲಾ ಮಕ್ಕಳು ಒಂದೇ ರೀತಿಯ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಒಬ್ಬೊಬ್ಬರ ಸಾಮರ್ಥ್ಯ ಒಂದೊಂದು ರೀತಿಯಲ್ಲಿರುತ್ತದೆ. ಆ ಸಾಮರ್ಥ್ಯವನ್ನು ಅರಿತುಕೊಂಡು ಮಕ್ಕಳಿಗೆ ಬೆಂಬಲ ನೀಡಬೇಕು. ಯಾವ ಮಗು ಯಾವ ವಿಷಯದಲ್ಲಿ ಕಡಿಮೆ ಸಾಮರ್ಥ್ಯವನ್ನು ಹೊಂದಿರುತ್ತದೆಯೋ ಅ ವಿಷಯಕ್ಕೆ ಸಂಬಂಧಿಸಿದಂತೆ ವಿಶೇಷವಾಗಿ ತರಬೇತಿ ನೀಡಬೇಕೆ ಹೊರತು ಒತ್ತಡ ಹೇರುವುದು ತಪ್ಪು ಎಂದು ಶಿಕ್ಷಣ ತಜ್ಞ ನಿರಂಜನ ಆರಾಧ್ಯ ಅಭಿಪ್ರಾಯಪಟ್ಟರು.

ಇದನ್ನೂ ಓದಿ

ನಕ್ಸಲರು ಅಪಹರಿಸಿದ್ದ ಸಿಆರ್​ಪಿಎಫ್ ಕೋಬ್ರಾ ತುಕಡಿಯ ಯೋಧ ರಾಕೇಶ್ವರ್ ಸಿಂಗ್ ಬಿಡುಗಡೆ

ನಾಳೆಯೂ ಮುಂದುವರೆಯಲಿದೆ ಬಸ್ ಮುಷ್ಕರ -ಕೋಡಿಹಳ್ಳಿ ಚಂದ್ರಶೇಖರ್ ಘೋಷಣೆ

(Discussion about What causes child suicide and solution on Tv9 Digital Live)