ಬೆಂಗಳೂರಿನ 43 ನಗರಗಳಲ್ಲಿ ರೂಮ್ ಬಾಡಿಗೆಯಲ್ಲಿ ಹೆಚ್ಚಳ, ಏಳು ಕಡೆಗಳಲ್ಲಿ ವಸತಿ ದರಗಳಲ್ಲಿ ಇಳಿಕೆ
2023-24ರ ಮೊದಲ ತ್ರೈಮಾಸಿಕದಲ್ಲಿ ಬೆಂಗಳೂರಿನ 43 ನಗರ ಪ್ರದೇಶಗಳಲ್ಲಿ ವಸತಿ ಬೆಲೆಗಳು ಏರಿಕೆಯಾಗಿದ್ದು, ಏಳು ಕಡೆಗಳಲ್ಲಿ ವಸತಿ ಘಟಕಗಳ ದರಗಳು ಇಳಿದಿವೆ. ಕೋವಿಡ್ ನಂತರ ಅಗತ್ಯ ವಸ್ತುಗಳ ಬೆಲೆಗಳಲ್ಲಿ ಭಾರೀ ಏರಿಕೆಯಾಗಿದೆ. ಆದರೆ, ಬೆಂಗಳೂರು ನಗರದ ಮಾರತ್ತಹಳ್ಳಿ, ಬೆಳ್ಳಂದೂರು ಮತ್ತು ವೈಟ್ಫೀಲ್ಡ್ನಲ್ಲಿ ಕೋವಿಡ್ ಪೂರ್ವಕ್ಕೆ ಹೋಲಿಸಿದರೆ ವಸತಿ ಬಾಡಿಗೆ ಶೇಕಡಾ 50 ಕ್ಕಿಂತ ಹೆಚ್ಚಾಗಿದೆ. ಹೆಚ್ಚಿನ ಬಾಡಿಗೆಯ ಹೊರತಾಗಿಯೂ, ಸಾವಿರಾರು ಫ್ಲ್ಯಾಟ್ಗಳು ಬಾಡಿಗೆದಾರರನ್ನು ಪಡೆಯುತ್ತಿವೆ ಎಂದು ದಲ್ಲಾಳಿಗಳು ಹೇಳುತ್ತಿದ್ದಾರೆ.
ಬೆಂಗಳೂರು, ಆಗಸ್ಟ್ 31: 2023-24ರ ಮೊದಲ ತ್ರೈಮಾಸಿಕದಲ್ಲಿ ಬೆಂಗಳೂರಿನ (Bengaluru) 43 ನಗರ ಪ್ರದೇಶಗಳಲ್ಲಿನ ವಸತಿ ಬಾಡಿಗೆಯಲ್ಲಿ ಏರಿಕೆಯಾದರೆ, ಏಳು ಪ್ರದೇಶಗಳಲ್ಲಿ ದರಗಳಲ್ಲಿ ಇಳಿಕೆಯಾಗಿವೆ. ರಾಷ್ಟ್ರೀಯ ವಸತಿ ಬ್ಯಾಂಕ್ (NHB) ಪ್ರಕಟಿಸಿದ ವಸತಿ ಬೆಲೆ ಸೂಚ್ಯಂಕದಲ್ಲಿ, ಎಪ್ರಿಲ್-ಜೂನ್ 2023 ರ ಅವಧಿಯಲ್ಲಿ ಅಹಮದಾಬಾದ್ನಲ್ಲಿ ಶೇಕಡಾ 9.1 ರಷ್ಟು ಬೆಲೆ ಏರಿಕೆ ಕಂಡಿದ್ದರೆ, ಬೆಂಗಳೂರಿನಲ್ಲಿ ಶೇಕಡಾ 8.9 ಮತ್ತು ಕೋಲ್ಕತ್ತಾದಲ್ಲಿ ಶೇಕಡಾ 7.8 ರಷ್ಟು ಏರಿಕೆಯಾಗಿದೆ.
ಇತರ ನಗರಗಳಾದ ಚೆನ್ನೈ ಶೇ.1.1, ದೆಹಲಿಯಲ್ಲಿ ಶೇ. 0.8, ಹೈದರಾಬಾದ್ನಲ್ಲಿ ಶೇ. 6.9, ಮುಂಬೈನಲ್ಲಿ ಶೇ. 2.9, ಮತ್ತು ಪುಣೆಯಲ್ಲಿ ಶೇ. 6.1ರಷ್ಟು ಏರಿಕೆಯಾಗಿದೆ. ಸೂಚ್ಯಂಕದಲ್ಲಿ ವಸತಿ ಬೆಲೆ ಸೂಚ್ಯಂಕದ ಪ್ರಕಾರ ವಾರ್ಷಿಕ ಆಧಾರದ ಮೇಲೆ ಏರಿಕೆ ಕಂಡಿದೆ.
ಬೆಂಗಳೂರಿನ ಟೆಕ್ ಕಾರಿಡಾರ್ಗಳಲ್ಲಿ ಬೆಲೆ ಏರಿಕೆ ನಡುವೆ ರೂಮ್ಗಳಿಗೆ ಬೇಡಿಕೆ
ಬೆಂಗಳೂರಿನ ಟೆಕ್ ಕಾರಿಡಾರ್ಗಳಾದ ಮಾರತ್ತಹಳ್ಳಿ, ಬೆಳ್ಳಂದೂರು ಮತ್ತು ವೈಟ್ಫೀಲ್ಡ್ನಲ್ಲಿ ವಸತಿ ಬೇಡಿಕೆ ಹೆಚ್ಚುತ್ತಿರುವುದರಿಂದ ಕೋವಿಡ್ ಪೂರ್ವಕ್ಕೆ ಹೋಲಿಸಿದರೆ ವಸತಿ ಬಾಡಿಗೆ ಶೇಕಡಾ 50 ಕ್ಕಿಂತ ಹೆಚ್ಚಾಗಿದೆ. ಟೆಕ್ ಕಾರಿಡಾರ್ನ ಯಾವುದೇ ವಸತಿ ಪ್ರದೇಶದಲ್ಲಿ 1,000 ಚದರ ಅಡಿಗಿಂತ ಕಡಿಮೆ ವಿಸ್ತೀರ್ಣದ 2 ಬಿಎಚ್ಕೆ ಮನೆಗೆ ಬಾಡಿಗೆದಾರರು ತಿಂಗಳಿಗೆ ಕನಿಷ್ಠ 30,000 ರೂ.ಗಳನ್ನು ಪಾವತಿಸಬೇಕಾಗುತ್ತದೆ. ಆದರೆ ಕ್ಲಬ್ ಹೌಸ್ಗಳು ಮತ್ತು ಇತರ ಸೌಲಭ್ಯಗಳನ್ನು ಹೊಂದಿರುವ ದೊಡ್ಡ ಅಪಾರ್ಟ್ಮೆಂಟ್ ಸಂಕೀರ್ಣಗಳಲ್ಲಿನ ಬಾಡಿಗೆ ಫ್ಲ್ಯಾಟ್ಗಳಿಗೆ 50,000 ರೂ. ಪಾವತಿಸಬೇಕಾಗುತ್ತದೆ.
ಸ್ಥಳೀಯ ಆಸ್ತಿ ಮಾಲೀಕರ ಪ್ರಕಾರ, ಕೋವಿಡ್ -19 ರ ಮೊದಲು 2-ಬಿಎಚ್ಕೆ ಮನೆಗಳು ಅಥವಾ ಫ್ಲ್ಯಾಟ್ಗಳನ್ನು 12,000-20,000 ರೂ.ಗೆ ಬಾಡಿಗೆಗೆ ನೀಡಲಾಗುತ್ತಿತ್ತು. ಹೆಚ್ಚಿನ ಬಾಡಿಗೆಯ ಹೊರತಾಗಿಯೂ, ಸಾವಿರಾರು ಫ್ಲ್ಯಾಟ್ಗಳು ಯಾವುದೇ ಸಮಯದಲ್ಲಿ ಬಾಡಿಗೆದಾರರನ್ನು ಪಡೆಯುತ್ತಿವೆ ಎಂದು ಆಸ್ತಿ ದಲ್ಲಾಳಿಗಳು ಹೇಳುತ್ತಾರೆ.
ಇದನ್ನೂ ಓದಿ: Karnataka Rain: ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆ ಸೆಪ್ಟೆಂಬರ್ 6ರವರೆಗೆ ಮಳೆ
ವೈಟ್ ಫೀಲ್ಡ್ನಲ್ಲಿ 1-ಬಿಎಚ್ಕೆ, 2 ಬಿಎಚ್ಕೆ ಅಥವಾ 3 ಬಿಎಚ್ಕೆ ಸೇರಿದಂತೆ ಎಲ್ಲಾ ರೀತಿಯ ವಸತಿ ಆಸ್ತಿಗಳಿಗೆ ಹೆಚ್ಚಿನ ಬೇಡಿಕೆಯಿದೆ. ಪ್ರಸ್ತುತ ಬೇಡಿಕೆಯನ್ನು ಪೂರೈಸಲು ಯಾವುದೇ ಖಾಲಿ ಮನೆಗಳಿಲ್ಲ. ಕೆಲವು ಬಾಡಿಗೆದಾರರು 3-ಬಿಎಚ್ಕೆ ಫ್ಲ್ಯಾಟ್ಗಳು ಅಥವಾ ಮನೆಗಳನ್ನು ಬಯಸುತ್ತಾರೆ ಎಂದು ದಲ್ಲಾಳಿ ಹಗದೂರು ನಂಜೇಗೌಡ ಹೇಳಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಅನೇಕ ಐಟಿ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ವಾರಕ್ಕೆ ಕನಿಷ್ಠ ಎರಡು ದಿನ ಕಚೇರಿಯಿಂದ ಕೆಲಸ ಮಾಡಲು ಸೂಚಿಸಿವೆ. ಇದು ಉದ್ಯೋಗಿಗಳು ಬೆಂಗಳೂರಿನಲ್ಲಿ ಉಳಿಯಲು ಕಾರಣವಾಗಿದೆ. ಪರಿಣಾಮ ವಸತಿಗಳ ಬೇಡಿಕೆಯನ್ನು ಹೆಚ್ಚಿಸಿದೆ ಎಂದು ನಂಜೇಗೌಡ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:53 am, Thu, 31 August 23