ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಪಡೆಯದೆ ಬೆಂಗಳೂರನ್ನು ಬಿಟ್ಟು ತೆರಳುವುದಿಲ್ಲ – ಜಯಮೃತ್ಯುಂಜಯ ಸ್ವಾಮೀಜಿ

Panchamasali Reservation: ಪಂಚಮಸಾಲಿ ಮೀಸಲಾತಿ ಬಗ್ಗೆ ಸಿಎಂ ಉತ್ತರಿಸಬೇಕೆಂದು ಬಿಗಿ ಪಟ್ಟು ಹಿಡಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸಚಿವರ ಕೈಯಲ್ಲಿ ಪರಮಾಧಿಕಾರ ಇಲ್ಲ. ಮೀಸಲಾತಿ ಬಗ್ಗೆ ನಿರ್ಧರಿಸಲು ಸಿಎಂಗೆ ಅಧಿಕಾರ ಇದೆ. ಸಚಿವರು ಸಿಎಂ ಪರವಾಗಿ ಬಂದು ಮನವಿ ಪಡೆಯುತ್ತಾರೆ ಎಂದರು.

  • TV9 Web Team
  • Published On - 13:22 PM, 22 Feb 2021
ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಪಡೆಯದೆ ಬೆಂಗಳೂರನ್ನು ಬಿಟ್ಟು ತೆರಳುವುದಿಲ್ಲ - ಜಯಮೃತ್ಯುಂಜಯ ಸ್ವಾಮೀಜಿ
ಜಯಮೃತ್ಯುಂಜಯ ಸ್ವಾಮೀಜಿ

ಬೆಂಗಳೂರು: ಮಾರ್ಚ್ 4ರವರೆಗೆ ಫ್ರೀಡಂಪಾರ್ಕ್​ನಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ತಿಳಿಸಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮೀಸಲಾತಿ ಪಡೆಯದೆ ಬೆಂಗಳೂರನ್ನು ಬಿಟ್ಟು ತೆರಳುವುದಿಲ್ಲ. ಮೀಸಲಾತಿ ನೀಡುವ ಬಗ್ಗೆ ಲಿಖಿತ ರೂಪದಲ್ಲಿ ಭರವಸೆ ನೀಡಿದರೆ ಧರಣಿ ಕೈಬಿಡುವ ಬಗ್ಗೆ ಸಮುದಾಯದವರ ಜೊತೆ ಚರ್ಚೆ ನಡೆಸುತ್ತೇವೆ. ಪ್ರತಿ ಬಾರಿ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರಕ್ಕೂ ನಮ್ಮ ಮೀಸಲಾತಿಗೂ ಸಂಬಂಧವಿಲ್ಲ. ಪಂಚಮಸಾಲಿ ಸಮುದಾಯವನ್ನು ರಾಜ್ಯದ ಮುಖ್ಯಮಂತ್ರಿ ನಿರ್ಲಕ್ಷಿಸ್ತಿದ್ದಾರೆ. ಇದಕ್ಕೆ ಮುಂದಿನ ದಿನಗಳಲ್ಲಿ ಅವರೇ ಬೆಲೆ ತೆರಬೇಕಾಗುತ್ತದೆ. ಯಡಿಯೂರಪ್ಪ ಸಿಎಂ ಆಗಿರುವುದು ಇದೇ ಕೊನೆಯ ಬಾರಿ. ಹೀಗಾಗಿ ನಮಗೆ ಮೀಸಲಾತಿ ನೀಡಿದರೆ ಒಳ್ಳೆಯದಾಗುತ್ತದೆ ಎಂದರು.

ಸಿಎಂ ನಿರ್ಲಕ್ಷ್ಯದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ಹೋಗಬೇಕು. ಈ ನಿಟ್ಟಿನಲ್ಲಿ ಸಮುದಾಯದ ಶಾಸಕರು ಕೆಲಸ ಮಾಡಬೇಕು. ಪಂಚಮಸಾಲಿ ಸಮುದಾಯದ ಒಗ್ಗಟ್ಟು ತೋರಿಸಿದ್ದೇವೆ. ಹಲವು ಹೋರಾಟಗಳ ಬಳಿಕ ಸಿಎಂ ಪ್ರತಿಕ್ರಿಯಿಸಿದ್ದರು. ಜೊತೆಗೆ ಸ್ವಲ್ಪ ಸಮಯವನ್ನು ಕೇಳಿದ್ದರು. ತಾಂತ್ರಿಕ ಕಾರಣಗಳಿಂದಾಗ ನಾವು ಸುಮ್ಮನೆ ಇದ್ದೆವು. ನಾವು ಸಮಯ ನೀಡಿದರೂ ಸಿಎಂ ಮೀಸಲಾತಿ ನೀಡಿಲ್ಲ. ಸಮುದಾಯದ ಜನರು ಧರಣಿ ಸತ್ಯಾಗ್ರಹಕ್ಕೆ ಆಗ್ರಹಿಸಿದ ಕಾರಣ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ವಿಧಾನಸೌಧಕ್ಕೆ ಮುತ್ತಿಗೆ
ನಿನ್ನೆ ಸರ್ಕಾರ ಉದ್ದೇಶಪೂರ್ವಕವಾಗಿ 144 ಜಾರಿ ಮಾಡಿದೆ. ಬೇಕಂತಲೇ ಮಾರ್ಗ ಬದಲಾವಣೆ ಮಾಡಿದ್ದರು. ಇಷ್ಟೆಲ್ಲ ಮಾಡಿದ್ದರೂ ನಾವು ಕಾನೂನು ಕೈಗೆ ತೆಗೆದುಕೊಂಡಲಿಲ್ಲ ಎಂದು ಮಾತನಾಡಿದ ಜಯಮೃತ್ಯುಂಜಯ ಸ್ವಾಮೀಜಿ ಫ್ರೀಡಂಪಾರ್ಕ್​ನಲ್ಲಿ ಪ್ರತಿಭಟನೆಗೆ ಅನುಮತಿ ಇಲ್ಲ. ಅದಕ್ಕೆ ಪೊಲೀಸ್​ರವರೇ ಅನುಮತಿ ಕೊಡಬೇಕು. ಶಾಮೀಯಾನಾವನ್ನೂ ಪೊಲೀಸರೇ ಹಾಕಿಸಿಕೊಡಬೇಕು. ಇಲ್ಲದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಹೇಳಿದರು.

ಸಚಿವರ ಕೈಯಲ್ಲಿ ಪರಮಾಧಿಕಾರ ಇಲ್ಲ
ಪಂಚಮಸಾಲಿ ಮೀಸಲಾತಿ ಬಗ್ಗೆ ಸಿಎಂ ಉತ್ತರಿಸಬೇಕೆಂದು ಬಿಗಿ ಪಟ್ಟು ಹಿಡಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸಚಿವರ ಕೈಯಲ್ಲಿ ಪರಮಾಧಿಕಾರ ಇಲ್ಲ. ಮೀಸಲಾತಿ ಬಗ್ಗೆ ನಿರ್ಧರಿಸಲು ಸಿಎಂಗೆ ಅಧಿಕಾರ ಇದೆ. ಸಚಿವರು ಸಿಎಂ ಪರವಾಗಿ ಬಂದು ಮನವಿ ಪಡೆಯುತ್ತಾರೆ. ಹೀಗಿರುವಾಗ ಸಚಿವರು ನಿರ್ಧರಿಸುತ್ತಾರೆ ಎಂದರೆ ತಪ್ಪು. ಆಯಾ ಜನಾಂಗದ ಸಚಿವರೇ ಸುಪ್ರೀಂ ಆಗಿದ್ದಿದ್ದರೆ, ನಾವು ಸಚಿವ ಪಾಟೀಲ್ ಕೂರಿಸಿಕೊಂಡೇ 2ಎ ಮಾಡಿಸಿಕೊಳ್ಳುತ್ತಿದ್ದೆವು. ಕೇಂದ್ರ ಸರ್ಕಾರಕ್ಕೆ ಸಿಎಂ ಮನವರಿಕೆ ಮಾಡಿಕೊಡಬೇಕು. ಯಾವುದೇ ಕಾರಣಕ್ಕೂ ನಮ್ಮ ಹೋರಾಟ ನಿರ್ಲಕ್ಷಿಸಬಾರದು ಎಂದರು.

ಸಮಯ ನೀಡಲ್ಲ
ಕಾನೂನಿಗೆ ಗೌರವ ನೀಡಿ ಹೇಳಿದ ಕಡೆ ಪ್ರತಿಭಟನೆ ಮಾಡುತ್ತಿದ್ದೇವೆ. ಮಾರ್ಚ್ 4 ರಂದು ಸಮುದಾಯದವರು ಸಭೆ ಮಾಡುತ್ತೇವೆ. ಅಮರಣಾಂತ ಉಪವಾಸ ಸತ್ಯಾಗ್ರಹದ ಬಗ್ಗೆ ಚರ್ಚಿಸುತ್ತೇವೆ. ಮುಖ್ಯಮಂತ್ರಿಯನ್ನು ನಾವು ಎಲ್ಲ ವರ್ಗದ ನಾಯಕರೆಂದು ತಿಳಿದಿದ್ದೆವು. ಆದರೆ ಒಂದು ಪಂಗಡದ ನಾಯಕರಂತೆ ವರ್ತಿಸುತ್ತಿದ್ದಾರೆ. ಈ ರೀತಿಯಾಗಿ ಸಮುದಾಯದ ಸಚಿವರಿಗೆ ಹೊಣೆ ಹೊರಿಸಿದರೆ ಸಚಿವರೇ ಸಿಟ್ಟಾಗುತ್ತಾರೆ. ನಾವು ಇನ್ನು ಯಾವುದೇ ಸಮಯವನ್ನು ನೀಡಲು ಹೋಗಲ್ಲ. ನಾವು ಕೊಟ್ಟ ಸಮಯ ಈಗಾಗಲೇ ಮುಗಿದು ಹೋಗಿದೆ. ಇನ್ನೇನಿದ್ದರೂ ಸಿಎಂ ಯಡಿಯೂರಪ್ಪ ಉತ್ತರ ನೀಡಬೇಕು. ಸಿಎಂ ನಿರ್ಲಕ್ಷ್ಯವಹಿಸಿದರೆ ನಾವು ಅವರನ್ನ ನಿರ್ಲಕ್ಷಿಸುತ್ತೇವೆ ಎಂದು ತಿಳಿಸಿದರು.

ಯತ್ನಾಳ್​ರನ್ನ ಹತ್ತಿಕ್ಕುವ ಕೆಲಸವಾಗುತ್ತಿದೆ. ಪಂಚಮಸಾಲಿ ನಾಯಕ ಬೆಳೆಯುತ್ತಿದ್ದಾರೆ ಎಂಬ ಭಯ ಇದೆ. ಹೀಗಾಗಿ ವರಿಷ್ಠರಿಗೆ ಸುಳ್ಳು ಮಾಹಿತಿ ಕೊಟ್ಟು ನೋಟಿಸ್ ಕೊಡಿಸುವ ಕೆಲಸ ಮಾಡಿಸುತ್ತಿದ್ದಾರೆ. ಯಾರು ಏನೇ ಮಾಡಿದರೂ ಯತ್ನಾಳ್​ರನ್ನ ಏನೂ ಮಾಡೋಕ್ಕೆ ಆಗಲ್ಲ ಎಂದು ಸ್ವಾಮೀಜಿ ಹೇಳಿದರು.

ಇದನ್ನೂ ಓದಿ:

ಪಂಚಮಸಾಲಿ ಸಮಾವೇಶದಲ್ಲಿ ಸಿಎಂ BSY ವಿರುದ್ಧ ಯತ್ನಾಳ್​ ಗುಡುಗು.. ಹೈಕಮಾಂಡ್​ನಿಂದ ಬಂತು ಬುಲಾವ್

ರಾಣಿ ಚೆನ್ನಮ್ಮನ ಕಿತ್ತೂರು ಕೋಟೆ ದುರಸ್ತಿಗೆ ಹಣ ನೀಡಿ: ಪಂಚಮಸಾಲಿ ಸಮಾವೇಶದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಒತ್ತಾಯ