ಎಲ್ಲದಕ್ಕೂ ಕೊರೊನಾ, ಕೊರೊನಾ ಅಂತೀರಾ! ನಮಗೆ ನಿಮಗೆ ಕೊರೊನಾ ಇಲ್ಲವೇ? – ಶಾಸಕ ಶಿವಲಿಂಗೇಗೌಡ ಮುಗ್ಧ ಪ್ರಶ್ನೆ

ಎಲ್ಲದಕ್ಕೂ ಕೊರೊನಾ ಕೊರೊನಾ ಅಂತೀರಾ ನಮಗೆ ನಿಮಗೆ ಕೊರೊನಾ ಇಲ್ಲವೇ ಎಂದು ಶಿವಲಿಂಗೇಗೌಡ ಪ್ರಶ್ನಿಸಿದ್ದಾರೆ. ಸಾವಿರಾರು ಕೋಟಿಗೆ ಸಂಪುಟದಲ್ಲಿ ಒಪ್ಪಿಗೆ ಕೊಡುತ್ತೀರಿ. ಆದರೆ ನಮಗ್ಯಾಕೆ ಅನುದಾನ ಕೊಡುತ್ತಿಲ್ಲ. ಕೇಂದ್ರ, ರಾಜ್ಯ ಎರಡೂ ಕಡೆಯೂ ನಿಮ್ಮದೇ ಸರ್ಕಾರವಿದೆ...

  • TV9 Web Team
  • Published On - 15:11 PM, 16 Mar 2021
ಎಲ್ಲದಕ್ಕೂ ಕೊರೊನಾ, ಕೊರೊನಾ ಅಂತೀರಾ! ನಮಗೆ ನಿಮಗೆ ಕೊರೊನಾ ಇಲ್ಲವೇ? - ಶಾಸಕ ಶಿವಲಿಂಗೇಗೌಡ ಮುಗ್ಧ ಪ್ರಶ್ನೆ
ಜೆಡಿಎಸ್ ಶಾಸಕ ಶಿವಲಿಂಗೇಗೌಡ

ಬೆಂಗಳೂರು: ಇಂದು ನಡೆದ ವಿಧಾನ ಪರಿಷತ್​ನಲ್ಲಿ ಜೆಡಿಎಸ್ ಶಾಸಕ ಕೆ.ಎಂ. ಶಿವಲಿಂಗೇಗೌಡ ಬಜೆಟ್ ಮೇಲೆ ಚರ್ಚೆ ನಡೆಸಿದ್ರು. ಈ ವೇಳೆ ಅನುದಾನ ವಿಚಾರದಲ್ಲಿ ತಾರತಮ್ಯ ಏಕೆಂದು ಪ್ರಶ್ನಿಸಿದರು. ಬಜೆಟ್ ಏಕೆ ಮಂಡಿಸಬೇಕು? ಬರೀ ಪುಸ್ತಕದಲ್ಲಿದ್ರೆ ಸಾಕಾ? ಶಾಸಕರನ್ನು ಹೀನಾಯ ಸ್ಥಿತಿಗೆ ತಂದು ಇಟ್ಟಿದ್ದೀರಲ್ಲಾ? ಏನು ಮಾಡಬೇಕು ನಾವು ಎಂದು ರಾಜ್ಯ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.

ಎಲ್ಲದಕ್ಕೂ ಕೊರೊನಾ ಕೊರೊನಾ ಅಂತೀರಾ! ನಮಗೆ ನಿಮಗೆ ಕೊರೊನಾ ಇಲ್ಲವೇ? ಎಂದು ಶಿವಲಿಂಗೇಗೌಡ ಪ್ರಶ್ನಿಸಿದ್ದಾರೆ. ಸಾವಿರಾರು ಕೋಟಿಗೆ ಸಂಪುಟದಲ್ಲಿ ಒಪ್ಪಿಗೆ ಕೊಡುತ್ತೀರಿ. ಆದರೆ ನಮಗ್ಯಾಕೆ ಅನುದಾನ ಕೊಡುತ್ತಿಲ್ಲ. ಕೇಂದ್ರ, ರಾಜ್ಯ ಎರಡೂ ಕಡೆಯೂ ನಿಮ್ಮದೇ ಸರ್ಕಾರವಿದೆ. ಆದರೆ ಬರಕ್ಕೂ ದುಡ್ಡಿಲ್ಲ, ಪ್ರವಾಹಕ್ಕೂ ದುಡ್ಡಿಲ್ಲ. ನಿಮ್ಮ ಬಳಿ ಯಾವುದಕ್ಕೂ ದುಡ್ಡಿಲ್ಲ. ನಮ್ಮ ರಾಜ್ಯದ ಸಂಸದರು ಏನು ಮಾಡುತ್ತಿದ್ದಾರೆ? ಕೇಂದ್ರ ಸರ್ಕಾರದ ಜುಟ್ಟು ಹಿಡಿದು ಏಕೆ ಪ್ರಶ್ನೆ ಮಾಡುತ್ತಿಲ್ಲ? ಕೊರೊನಾದಿಂದ ಶಾಸಕರ ಅನುದಾನವನ್ನು ತಡೆಯಬೇಡಿ. ಶಾಸಕರು‌ ಬೀದಿ ಬೀದಿ ಅಲೆಯುವಂತೆ ಮಾಡಬೇಡಿ. ನಮಗೆ ಯಾವ ಹೊಸ ಅನುದಾನವೂ ಬೇಕಿಲ್ಲ. ಕೊಡಬೇಕಾದ ಅನುದಾನ ಕೊಟ್ಟರೆ ಸಾಕು ಎಂದು ಶಿವಲಿಂಗೇಗೌಡ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರೆವಿನ್ಯೂ ಕೊರತೆಯನ್ನ ತುಂಬಬೇಕು
ನಾವು 202 ನಿಗಮ ಮಂಡಳಿ ಮಾಡಿ ಅಂತ ಹೇಳಿದ್ವಾ? ಅಭಿವೃದ್ಧಿ ಕೈ ಬಿಟ್ಟರೆ ಸಾಲ ಕಟ್ಟೋಕೆ ಆಗುತ್ತಾ? 5373 ಕೋಟಿ ಕೊವಿಡ್​ಗೆ ಹೇಗೆ ಖರ್ಚಾಯ್ತು? ರಾಜ್ಯದ ಜನರಿಗೆ ಸ್ಪಷ್ಟ ಸಂದೇಶ ಹೋಗಬೇಕು. ಉತ್ತರ ಕೊಡುವಾಗ ಇದರ ಬಗ್ಗೆ ಸ್ಪಷ್ಟಪಡಿಸಿ. ನಮ್ಮಪ್ಪ ಹೆಬ್ಬೆಟ್ಟು, ನಾನು ಏನೋ ಕಾಲೇಜು‌ ಮೆಟ್ಟಿಲು ಹತ್ತಿದೆ. ಎಕನಾಮಿಕ್ಸ್ ಓದಿ ಸ್ವಲ್ಪ ತಿಳಿದುಕೊಡಿದ್ದೇನೆ. ಅದಕ್ಕೆ ಸ್ವಲ್ಪ ನಾನು ಕೇಳ್ತಿದ್ದೇನೆ ಅಷ್ಟೇ.

ಮೊದಲು ನೀವು ಕೇಂದ್ರದ ಮೇಲೆ ಒತ್ತಡ ಹಾಕಿ. ಬರಬೇಕಾದ ಜಿಎಸ್​ಟಿ ಹಣವನ್ನ ತನ್ನಿ. 2,೦೦,೦೦೦ ಕೋಟಿ ರಾಜ್ಯದಿಂದ ತೆರಿಗೆ ಕೇಂದ್ರಕ್ಕೆ ಹೋಗುತ್ತದೆ. ಗುಜರಾತ್​ನಲ್ಲಿ ಕೇಂದ್ರದವರು 33 ಸಾವಿರ ಕೋಟಿ ಖರ್ಚು ಮಾಡಿ ಕ್ರೀಡಾಂಗಣ ಕಟ್ಟಿದ್ದಾರೆ. ರಾಜ್ಯಗಳ ತೆರಿಗೆ ಹಣವನ್ನ ಅಲ್ಲಿ ವೆಚ್ಚ ಮಾಡಲಾಗಿದೆ. ಒಟ್ಟು 2 ಲಕ್ಷ ಕೋಟಿ ಹಣ ರಾಜ್ಯದಿಂದ ತೆರಿಗೆಯಾಗಿ ಹೋಗ್ತಿದೆ. ಕೇಂದ್ರದಿಂದ ರಾಜ್ಯಕ್ಕೆ ಎಷ್ಟು ಹಣ ಖರ್ಚು ಮಾಡ್ತಿದ್ದಾರೆ? ರಾಜ್ಯಕ್ಕೆ ಕೇಂದ್ರದಿಂದ ಏನೇನೂ ಸಿಗ್ತಿಲ್ಲ. ರಾಜ್ಯ ರಾಜ್ಯಗಳ ಮಧ್ಯೆ ತಾರತಮ್ಯವಾಗ್ತಿದೆ ಎಂದು ಶಿವಲಿಂಗೇಗೌಡ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನಿಮಗೆ ತಾಕತ್ತಿದ್ದರೆ ದಾಖಲೆಗಳನ್ನು ಬಿಡುಗಡೆ ಮಾಡಿ.. ಯತ್ನಾಳ್‌ಗೆ ಶಾಸಕ ಎಂ.ಪಿ.ರೇಣುಕಾಚಾರ್ಯ ಸವಾಲ್