ಕನ್ನಡಾಂಬೆ ಭುವನೇಶ್ವರಿ ದೇವಿಯ ಅಧಿಕೃತ ಚಿತ್ರ ಜಾರಿಗೆ ಸರ್ಕಾರ ಒಪ್ಪಿಗೆ

ಕನ್ನಡಾಂಬೆಗೆ ನಿರ್ದಿಷ್ಟವಾದ ಚಿತ್ರ ಇಲ್ಲದನ್ನು ಗಮನಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಮಾತೆಯ ಪ್ರಮಾಣಿತ ಹಾಗೂ ಅಧಿಕೃತ ಚಿತ್ರವನ್ನು ಬಿಡುಗಡೆ ಮಾಡಲು ಒಪ್ಪಿದೆ.

ಕನ್ನಡಾಂಬೆ ಭುವನೇಶ್ವರಿ ದೇವಿಯ ಅಧಿಕೃತ ಚಿತ್ರ ಜಾರಿಗೆ ಸರ್ಕಾರ ಒಪ್ಪಿಗೆ
ಕನ್ನಡಾಂಬೆ ಭುವನೇಶ್ವರಿ ದೇವಿ
Follow us
TV9 Web
| Updated By: ಆಯೇಷಾ ಬಾನು

Updated on:Nov 22, 2022 | 8:24 AM

ಬೆಂಗಳೂರು: ಕರ್ನಾಟಕದಲ್ಲಿ ಅದ್ದೂರಿಯಾಗಿ ಆಚರಿಸುವ ಕನ್ನಡ ರಾಜ್ಯೋತ್ಸವ, ವಿವಿಧ ಕಾರ್ಯಕ್ರಮಗಳಲ್ಲಿ ಕನ್ನಡಾಂಬೆಯ ಚಿತ್ರದ ಬದಲಿಗೆ ಸರಸ್ವತಿ, ದುರ್ಗಾದೇವಿ ಸೇರಿದಂತೆ ಇತರೆ ದೇವರ ಚಿತ್ರಗಳನ್ನು ಇಟ್ಟು ಪೂಜಿಸಲಾಗುತ್ತಿತ್ತು. ಹಾಗೂ ನಾಡ ದೇವಿ ಭುವನೇಶ್ವರಿಯ ಚಿತ್ರವನ್ನು ವಿವಿಧ ರೀತಿಯಲ್ಲಿ ಬಳಸಲಾಗಿದೆ. ಕನ್ನಡಾಂಬೆಗೆ ನಿರ್ದಿಷ್ಟವಾದ ಚಿತ್ರ ಇಲ್ಲದನ್ನು ಗಮನಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಮಾತೆಯ ಪ್ರಮಾಣಿತ ಹಾಗೂ ಅಧಿಕೃತ ಚಿತ್ರವನ್ನು ಬಿಡುಗಡೆ ಮಾಡಲು ಒಪ್ಪಿದೆ.

ಲಲಿತ ಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಡಿ.ಮಹೇಂದ್ರ ನೇತೃತ್ವದ ಸಮಿತಿ ಈ ಬಗ್ಗೆ ಶಿಫಾರಸು ನೀಡಿತ್ತು. ಕಲಾವಿದರಾದ ಸೋಮಶೇಖರ್.ಕೆ ಅವರು ರಚಿಸಿರುವ ಚಿತ್ರವನ್ನು ಅಧಿಕೃತವಾಗಿ ಜಾರಿಗೆ ತರುವಂತೆ ಶಿಫಾರಸು ಸಲ್ಲಿಸಿತ್ತು. ಸಮಿತಿಯಲ್ಲಿ ಡಾ. ಚೂಡಾಮಣಿ ನಂದಗೋಪಾಲ್, ಎಚ್.ಎಚ್.‌ಮ್ಯಾದರ್, ಬಾಬು ನಡೋಣಿ, ವಿ.ಎಸ್. ಕಡೇಮನಿ ಸದಸ್ಯರಾಗಿದ್ದರು.

ಇದನ್ನೂ ಓದಿ: ದುಬಾರಿ ಬೆಲೆಗೆ ಬಾರ್​ಗಳಿಗೆ ಕನ್ನಡಾಂಬೆ ಫೋಟೊ ಮಾರಿದ ಅಬಕಾರಿ ಇಲಾಖೆ: ಫೋಟೊಗಳಲ್ಲಿ ಅನ್ಯ ಬಾವುಟ: ವ್ಯಾಪಕ ಆಕ್ರೋಶ

ಅದರಂತೆ ಈಗ ಕರ್ನಾಟಕದ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಚಿತ್ರವನ್ನು ಐವರು ಕಲಾವಿದರ ಸಮಿತಿಯ ಶಿಫಾರಸುಗಳನ್ನು ಒಪ್ಪಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ. ಆದಷ್ಟು ಬೇಗ ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಕಚೇರಿಯಿಂದ ಆದೇಶ ಹೊರಬೀಳಲಿದೆ. ಅಲ್ಲದೆ ಎಲ್ಲ ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾಗೂ ಶಾಲಾ ಕಾಲೇಜುಗಳ ಗೋಡೆಯ ಮೇಲೆ ಈ ಚಿತ್ರವನ್ನೇ ಕಡ್ಡಾಯವಾಗಿ ಬಳಸಬೇಕು ಎಂಬ ಆದೇಶವೂ ಹೊರ ಬೀಳಲಿದೆ.

ಬೆಂಗಳೂರು ವಿವಿ ಆವರಣದಲ್ಲಿ ಸ್ಥಾಪಿಸುವ ನಾಡದೇವಿ ಪ್ರತಿಮೆ ಇದೇ ರೀತಿ ಆಗಿರುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ. ಕನ್ನಡಾಂಬೆಯ ಅಧಿಕೃತ ಚಿತ್ರದಲ್ಲಿ ಕರ್ನಾಟಕದ ಸಾಂಪ್ರದಾಯಿಕ ಕಲೆಯನ್ನು ಬಿಂಬಿಸುವ ಹಾಗೂ ನಾಡಗೀತೆಯಲ್ಲಿರುವ ಕೆಲವು ಅಂಶಗಳನ್ನು ಸಾಂಕೇತಿಕವಾಗಿ ಬಳಸಲಾಗಿದೆ.

ಕನ್ನಡಾಂಬೆಯ ಅಧಿಕೃತ ಭಾವಚಿತ್ರದಲ್ಲಿ ಅಳವಡಿಸಲಾಗಿರುವ ಅಂಶಗಳು

  • ನಾಡದೇವತೆಯ ಹಿನ್ನೆಲೆಯಲ್ಲಿ ಕರ್ನಾಟಕದ ನಕ್ಷೆ ಇರುತ್ತದೆ.
  • ಮುಖದಲ್ಲಿ ಸ್ವಾಭಾವಿಕ ಸೌಂದರ್ಯ ಮತ್ತು ದೈವಿ ಭಾವವಿದೆ.
  • ದ್ವಿಭುಜ ಅಂದರೆ ಎರಡು ಕೈಗಳು ವಾಸ್ತವಿಕತೆಗೆ ಹತ್ತಿರವಾಗಿದೆ.
  • ಬಲಗೈಯಲ್ಲಿ ಅಭಯ ಮುದ್ರೆ ಸಾಂಕೇತಿಕವಾಗಿ ರಕ್ಷಣೆ ನೀಡುತ್ತಿದ್ದರೆ, ಎಡಗೈಯಲ್ಲಿರುವ ತಾಳೆಗರಿ ಕನ್ನಡ ಭಾಷಾ ಸಂಪತ್ತು, ಜ್ಞಾನ ಸಮೃದ್ಧಿಯನ್ನು ಪ್ರವಹಿಸುವ ನಿಟ್ಟನ್ನು ಸೂಚಿಸುತ್ತದೆ.
  • ನಾಡದೇವತೆಯು ಕುಳಿತಿರುವ ಭಂಗಿಯು ಭವ್ಯತೆಯನ್ನು ಹಾಗೂ ಸಾಕ್ಷ್ಯತೆಯನ್ನು ಪ್ರತಿಬಿಂಬಿಸುತ್ತದೆ.
  • ಕರ್ನಾಟಕದ ಧ್ವಜ ಕನ್ನಡಾಭಿಮಾನದ ಸಂಕೇತವಾಗಿ ರಾರಾಜಿಸುತ್ತದೆ.
  • ಹಸಿರು ಸೀರೆಯು ಸಿರಿ ಸಂಪದ ಸಮೃದ್ಧಿಯನ್ನು ಸೂಚಿಸುತ್ತದೆ.
  • ಕರ್ನಾಟಕದ ಭವ್ಯ ವೈಶಿಷ್ಟ್ಯವನ್ನು ಸಾರುವ ಆಭರಣಗಳು ನಮ್ಮ ನಾಡನ್ನು ಆಳಿದ ಸಾಮ್ರಾಜ್ಯಗಳ ವೈಭವವನ್ನು ಸಾರುತ್ತವೆ.
  • ಚಾಲುಕ್ಯರ ಕಾಲದ ಕರಂಡ ಮುಕುಟೋಪಾದಿಯಲ್ಲಿ ಕಿರೀಟ, ಕಿವಿಯಲ್ಲಿ ಸುಂದರ-ಕೌಶಲ್ಯ ಕರ್ಣಪರ್ಯಗಳು, ಭುಜದ ಮೇಲೆ ಕರ್ನಾಟಕ ವೈಶಿಷ್ಟ್ಯದ ಸಿಂಹ ಲಾಂಛನ ಭುಜಕೀರ್ತಿಗಳು, ಕುತ್ತಿಗೆಯಲ್ಲಿ ಕಂಠಿ, ಕಟ್ಟಾಣಿ, ಹಾರಗಳು, ಕರ್ನಾಟಕ ಲಾಂಛನ – ಗಂಡ ಭೇರುಂಡ ಪದಕ, ಕಟಿಯ ಆಭರಣವಾದ ಬೆಳ್ಳಿಯ ಡಾಬು, ಕಟಿಯಲ್ಲಿ ಕೀರ್ತಿಮುಖ ಲಾಂಛನದ ವಡ್ಯಾಣ, ಉದ್ದನೆಯ ವೈಜಯಂತಿ ಹಾರ, ನಡುವೆ ಹೊಯ್ಸಳ ಲಾಂಛನದ ಪದಕ ನಾಡದೇವತೆಯನ್ನು ಅಲಂಕರಿಸಿದೆ.
  • ಕಾಲಿನಲ್ಲಿ ಕಡಗ, ಋಳಿ ಮತ್ತು ಕಾಲುಂಗುರಗಳು, ಹಣೆಯ ಲಲಾಟ ತಿಲಕ, ಶಿರದಲ್ಲಿ ಮುಡಿದಿರುವ ಹೂವು ಸೌಭಾಗ್ಯದ್ಯೋತಕಗಳಾಗಿವೆ.
  • ತೆಳುವಾದ-ಮೃದುವಾದ ಹೂವಿನ ತೋಮಾಲೆಯು ನಾಡದೇವತೆಯ ಸಂಪೂರ್ಣ ಅಲಂಕಾರಕ್ಕೆ ಒಂದು ರೀತಿಯ ಮೆರಗು ನೀಡಿದೆ.
  • ಕೆಳಗೆ ಸುಂದರ ಸದೃಢ ತಾವರೆ ಹೂವು(ಕಮಲ) ದೇವಿಯ ಮೃದುವಾದ ಕಾಲುಗಳಿಗೆ ಆಸರೆ ನೀಡಿದೆ.
  • ಹಿನ್ನೆಲೆಯಲ್ಲಿ ಪಶ್ಚಿಮ ಘಟ್ಟ, ಸಸ್ಯಕಾಶಿಯ ಸೊಬಗನ್ನು ಚಿತ್ರಿಸಲಾಗಿದೆ.
  • ಅತಿ ಹೆಚ್ಚು ಪ್ರಮಾಣದಲ್ಲಿ ಖ್ಯಾತ ಕಲಾವಿದ ಬಿ.ಕೆ.ಎಸ್‌. ವರ್ಮ ಅವರ ಚಿತ್ರವನ್ನು ಬಳಸಲಾಗುತ್ತಿತ್ತು. ಇದೀಗ ಹೊಸ ಚಿತ್ರವನ್ನು ಸಮಿತಿಯು ಸೂಚಿಸಿದಂತೆ ಕೆ. ಸೋಮಶೇಖರ್‌ ರಚಿಸಿದ್ದಾರೆ.

Published On - 8:24 am, Tue, 22 November 22