ಸೋಶಿಯಲ್​ ಮಿಡಿಯಾದಲ್ಲಿ ಕೊರೊನಾ ಬಗ್ಗೆ ತಪ್ಪು ಸಂದೇಶ ಆರೋಪ; ಡಾ.ರಾಜು ಕ್ಲಿನಿಕ್​ ಲೈಸೆನ್ಸ್​ ರದ್ದುಗೊಳಿಸಲು ನಿರ್ಧಾರ

ಕೊರೊನಾ ತಡೆಯಲು ಮಾಸ್ಕ್ ಹಾಕುವುದರಿಂದ ಪ್ರಯೋಜನವಿಲ್ಲ, ಸಾಮಾಜಿಕ ಅಂತರವೂ ಬೇಡ, ಕೊರೊನಾ ಎಂಬುದೇ ಇಲ್ಲವೆಂದು ಜನರಿಗೆ ಸುಳ್ಳು ಮಾಹಿತಿ ನೀಡುತ್ತಿದ್ದರು, ತಪ್ಪು ಸಂದೇಶ ಕೊಡುತ್ತಾ, ಅಪಪ್ರಚಾರ ಮಾಡುತ್ತಿದ್ದರು ಎಂಬ ಕಾರಣಕ್ಕೆ ಅವರ ರಿಜಿಸ್ಟ್ರೇಶನ್ ಸರ್ಟಿಫಿಕೇಟ್ ರದ್ದುಗೊಳಿಸಲು ಕರ್ನಾಟಕ ಮೆಡಿಕಲ್ ಕೌನ್ಸಿಲ್ ಆದೇಶ ನೀಡಿದೆ.

  • Publish Date - 3:25 pm, Mon, 17 May 21
ಸೋಶಿಯಲ್​ ಮಿಡಿಯಾದಲ್ಲಿ ಕೊರೊನಾ ಬಗ್ಗೆ ತಪ್ಪು ಸಂದೇಶ ಆರೋಪ; ಡಾ.ರಾಜು ಕ್ಲಿನಿಕ್​ ಲೈಸೆನ್ಸ್​ ರದ್ದುಗೊಳಿಸಲು ನಿರ್ಧಾರ
ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾ ಬಗ್ಗೆ ಮಾಹಿತಿ ನೀಡುವ ಡಾ. ರಾಜು

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆಯಿಂದಾಗಿ ವೈದ್ಯಕೀಯ ವ್ಯವಸ್ಥೆಯೇ ಅಲುಗಾಡಿ ಹೋಗಿದೆ. ಮೊದಲ ಅಲೆಗಿಂತಲೂ ಗಂಭೀರ ಸ್ವಭಾವವನ್ನು ಪ್ರದಶಿರ್ಸಸುತ್ತಿರುವ ವೈರಾಣು ನೋಡುನೋಡುತ್ತಲೇ ವ್ಯಾಪಕವಾಗಿ ಹರಡಿಬಿಟ್ಟಿದೆ. ಕೊರೊನಾ ಬಗ್ಗೆ ಕಳೆದ ಬಾರಿಯಿಂದಲೂ ವೈದ್ಯರಲ್ಲೇ ಹತ್ತು ಹಲವು ರೀತಿಯ ಅಭಿಪ್ರಾಯಗಳಿರುವ ಕಾರಣ ಸಹಜವಾಗಿ ಜನಸಾಮಾನ್ಯರಲ್ಲೂ ಅನೇಕ ಗೊಂದಲಗಳಿವೆ. ವಿಪರ್ಯಾಸವೆಂದರೆ ಎರಡನೇ ಅಲೆಯಿಂದ ಸಾವು, ನೋವು ಸಂಭವಿಸುತ್ತಿರುವಾಗಲೂ ಕೆಲವು ವೈದ್ಯರು ಮಾತ್ರ ಕೊರೊನಾಕ್ಕೆ ಹೆದರುವ ಅಗತ್ಯವಿಲ್ಲ, ಅದೊಂದು ಸಾಧಾರಣ ಜ್ವರ, ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಬೇಕಾಗಿಲ್ಲ ಎಂದು ಹೇಳುತ್ತಿರುವುದು ಜನರಲ್ಲಿ ಧೈರ್ಯ ತುಂಬುತ್ತಿರುವ ಮಾತೋ ಅಥವಾ ದಿಕ್ಕು ತಪ್ಪಿಸುತ್ತಿರುವ ಮಾತೋ ಎಂದು ಅರ್ಥವಾಗದೇ ಹಲವರು ಗೊಂದಲಕ್ಕೀಡಾಗಿದ್ದಾರೆ. ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾ ಬಗ್ಗೆ ಇದೇ ರೀತಿಯ ಮಾತುಗಳನ್ನಾಡುತ್ತಾ ಮಾಸ್ಕ್, ಸಾಮಾಜಿಕ ಅಂತರಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದ ಡಾ.ರಾಜು ಎಂಬ ವೈದ್ಯರ ಮೆಡಿಕಲ್ ಲೈಸೆನ್ಸ್ ರದ್ದುಗೊಳಿಸಲಾಗಿದೆ.

ಕೊರೊನಾ ತಡೆಯಲು ಮಾಸ್ಕ್ ಹಾಕುವುದರಿಂದ ಪ್ರಯೋಜನವಿಲ್ಲ, ಸಾಮಾಜಿಕ ಅಂತರವೂ ಬೇಡ, ಕೊರೊನಾ ಎಂಬುದೇ ಇಲ್ಲವೆಂದು ಜನರಿಗೆ ಸುಳ್ಳು ಮಾಹಿತಿ ನೀಡುತ್ತಿದ್ದರು, ತಪ್ಪು ಸಂದೇಶ ಕೊಡುತ್ತಾ, ಅಪಪ್ರಚಾರ ಮಾಡುತ್ತಿದ್ದರು ಎಂಬ ಕಾರಣಕ್ಕೆ ಅವರ ರಿಜಿಸ್ಟ್ರೇಶನ್ ಸರ್ಟಿಫಿಕೇಟ್ ರದ್ದುಗೊಳಿಸಲು ಕರ್ನಾಟಕ ಮೆಡಿಕಲ್ ಕೌನ್ಸಿಲ್ ಆದೇಶ ನೀಡಿದೆ. ಈ ಆದೇಶದ ಬೆನ್ನಲ್ಲೇ ಮೂಡಳಪಾಳ್ಯದಲ್ಲಿರುವ ಅವರ ಕ್ಲಿನಿಕ್​ಗೆ ಬೀಗ ಹಾಕಲು ಜಿಲ್ಲಾ ಆರೋಗ್ಯಾಧಿಕಾರಿ ಮುಂದಾಗಿದ್ದಾರೆ.

ನಗರದ ಮೂಡಲಪಾಳ್ಯ ವೃತ್ತದಲ್ಲಿರುವ ಸಾಗರ್‌ ಕ್ಲಿನಿಕ್‌ನಲ್ಲಿ ವೈದ್ಯರು, ಶುಶ್ರೂಷಕರು ಸೇರಿದಂತೆ ಯಾವುದೇ ವೈದ್ಯಕೀಯ ಸಿಬ್ಬಂದಿ ಮಾಸ್ಕ್‌ ಧರಿಸದೇ, ಸ್ಯಾನಿಟೈಸರ್ ಬಳಸದೇ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇದು ಸಾರ್ವಜನಿಕರ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರಬಹುದು ಎಂದು ಸಾರ್ವಜನಿಕರು, ತಜ್ಞರು ಆತಂಕ ವ್ಯಕ್ತಪಡಿಸಿದ್ದರು. ಆದರೆ, ಈ ಕುರಿತು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದ ಡಾ.ರಾಜು ಕೃಷ್ಣಮೂರ್ತಿ, ಮಾಸ್ಕ್‌ ಹಾಕಿಕೊಳ್ಳದೆ, ಸ್ಯಾನಿಟೈಸರ್ ಬಳಸದೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದು ನನ್ನ ವೈಯಕ್ತಿಕ ಆಯ್ಕೆ. ಹಾಗೊಂದು ವೇಳೆ ಮಾಸ್ಕ್ ಹಾಕದೇ ಇರುವುದಕ್ಕೆ ಅಪಾಯವಾಗುವುದಿದ್ದರೆ ಅದರ ಮೊದಲ ಪರಿಣಾಮ ನನ್ನ ಮೇಲೆಯೇ ಆಗುತ್ತದೆ. ಎಲ್ಲದಕ್ಕಿಂತ ಮುಖ್ಯವಾದುದು ರೋಗಿಗಳಿಗೆ ಧೈರ್ಯ ತುಂಬುವುದು. ಆ ಕೆಲಸವನ್ನು ಮಾಡುತ್ತಿದ್ದೇನೆ ಎಂದು ವಿಶ್ವಾಸದ ಮಾತುಗಳನ್ನಾಡಿದ್ದರು.

ರೋಗಿಗಳು ಮನೆಯಲ್ಲಿರುವಾಗ ಮಾಸ್ಕ್ ಧರಿಸುವುದು ಬೇಡ. ಹೊರಗಡೆ ಬಂದಾಗ ಮಾತ್ರ ಹಾಕಿಕೊಳ್ಳಬೇಕು ಎಂದೇ ಹೇಳುತ್ತಿದ್ದೇನೆ. ಕ್ಲಿನಿಕ್‌ನಲ್ಲಿ ವೈದ್ಯರು ಸೇರಿದಂತೆ ಒಟ್ಟು ಐವರು ಕೆಲಸ ಮಾಡುತ್ತಾರೆ. ಈವರೆಗೆ ಯಾರಿಗೂ ಕೊರೊನಾ ಪರೀಕ್ಷೆ ಮಾಡಿಸಿಲ್ಲ. ಈಗಾಗಲೇ ಅವರಿಗೆ ಸೋಂಕು ತಗುಲಿ ಹೋಗಿರಬಹುದು. ಆದರೆ, ಯಾರಿಗೂ ಅನಾರೋಗ್ಯ ಉಂಟಾಗಿಲ್ಲ ಎನ್ನುವುದನ್ನೂ ಹೇಳಿದ್ದರು. ಇದರ ಬೆನ್ನಲ್ಲೇ ಅನೇಕ ತಜ್ಞರು ಹಾಗೂ ವೈದ್ಯರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಮಾಸ್ಕ್ ಹಾಕದೇ ಚಿಕಿತ್ಸೆ ನೀಡುವುದು ಅಪಾಯಕಾರಿ. ಅದರಿಂದಾಗಿ ನಮ್ಮಿಂದ ಬೇರೆಯವರಿಗೆ ರೋಗ ಹರಡುವ ಸಾಧ್ಯತೆ ಇರುತ್ತದೆ. ರೋಗಿಗಳಿಗೆ ಧೈರ್ಯ ತುಂಬುವುದು ಮೆಚ್ಚುವಂತಹದ್ದೇ. ಹಾಗಂತ ಮಾಸ್ಕ್ ಧರಿಸದೇ ಚಿಕಿತ್ಸೆ ನೀಡುವುದನ್ನು ಸಮರ್ಥಿಸಿಕೊಳ್ಳಲಾಗದು ಎಂದು ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ:
ಎರಡು ಡೋಸ್​ ಲಸಿಕೆ ಪಡೆದರೂ ಮಾಸ್ಕ್​ ಕಡ್ಡಾಯ, ಭಾರತದಲ್ಲಿ ಸದ್ಯಕ್ಕಿಲ್ಲ ವಿನಾಯಿತಿ: ಡಾ. ರಣ್​ದೀಪ್ ಗುಲೇರಿಯಾ