ಬಿಗ್ ಟ್ವಿಸ್ಟ್ ಸಾಧ್ಯತೆ! ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಇಂದು ಮಹತ್ವದ ಸಭೆ; ಒತ್ತಡ ಹಾಕಿ ಮೀಸಲಾತಿ ಪಡೆಯಲು ಆಗಲ್ಲ ಸಚಿವ ಈಶ್ವರಪ್ಪ

KS Eshwarappa: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವುದಕ್ಕೆ ಮಾರ್ಚ್ 4ರ ಡೆಡ್​ಲೈನ್​ ನೀಡಿದ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಒತ್ತಡ ಹಾಕಿ ಮೀಸಲಾತಿಯನ್ನ ಪಡೆದುಕೊಳ್ಳಲು ಆಗಲ್ಲ. ಅರ್ಹತೆಗೆ ತಕ್ಕಂತೆ ಮೀಸಲಾತಿ ಸಿಗಬೇಕು ಎಂದರು.

  • TV9 Web Team
  • Published On - 11:20 AM, 25 Feb 2021
ಬಿಗ್ ಟ್ವಿಸ್ಟ್ ಸಾಧ್ಯತೆ! ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಇಂದು ಮಹತ್ವದ ಸಭೆ; ಒತ್ತಡ ಹಾಕಿ ಮೀಸಲಾತಿ ಪಡೆಯಲು ಆಗಲ್ಲ ಸಚಿವ ಈಶ್ವರಪ್ಪ
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ

ಬೆಂಗಳೂರು: 2ಎ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಸಮುದಾಯ ಕಳೆದ ಮೂರು ದಿನಗಳಿಂದ ಫ್ರೀಡಂಪಾರ್ಕ್​​ನಲ್ಲಿ ಧರಣಿ ನಡೆಸುತ್ತಿದೆ. ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿ ಇಂದು ಮಹತ್ವದ ಸಭೆ ನಡೆಯಲಿದ್ದು, ಬಿಗ್ ಟ್ವಿಸ್ಟ್ ಸಿಗುವ ಸಾಧ್ಯತೆಯಿದೆ. ಖಾಸಗಿ ಹೋಟೆಲ್​ನಲ್ಲಿ ಸಭೆ ನಡೆಯಲಿದ್ದು, ಮುಂದಿನ ಮೀಸಲಾತಿ ಹೋರಾಟದ ರೂಪುರೇಷೆಗಳ ತೀರ್ಮಾನವಾಗಲಿದೆ. ಇಂದು ಸಂಜೆ 4 ಗಂಟೆಗೆ ಪಂಚಮಸಾಲಿ ಸಮುದಾಯದ ಶಾಸಕರು, ಮಾಜಿ ಶಾಸಕರು, ಸಚಿವರು, ಸ್ವಾಮೀಜಿಗಳು ಹಾಗೂ ತಾಲೂಕು ಜಿಲ್ಲಾ ಮಟ್ಟದ ಮುಖಂಡರನ್ನೊಳಗೊಂಡ ದುಂಡು ಮೇಜಿನ ಸಭೆ ನಡೆಯುತ್ತದೆ. ಸಭೆಗೆ ಮುಖ್ಯವಾಗಿ ಬಸವನಗೌಡ ಯತ್ನಾಳ್ ಕೂಡಾ ಭಾಗಿ ಆಗುತ್ತಾರೆ ಎಂದು ತಿಳಿದುಬಂದಿದೆ.

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವುದಕ್ಕೆ ಮಾರ್ಚ್ 4ರ ಡೆಡ್​ಲೈನ್​ ನೀಡಿದ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಒತ್ತಡ ಹಾಕಿ ಮೀಸಲಾತಿಯನ್ನ ಪಡೆದುಕೊಳ್ಳಲು ಆಗಲ್ಲ. ಅರ್ಹತೆಗೆ ತಕ್ಕಂತೆ ಮೀಸಲಾತಿ ಸಿಗಬೇಕು. ಈಗ ಶ್ರೀಮಂತರಿಗೆ ಮೀಸಲಾತಿ ಮುಂದುವರಿಯುತ್ತಿದೆ.. ಇದು ದುರ್ದೈವ. ಹೀಗೆ ಲಾಭ ಪಡೆದವರಿಗೆ ಮೀಸಲಾತಿ ರದ್ದು ಮಾಡಬೇಕು. ಈ ಬಗ್ಗೆ ಮುಂದಿನ ದಿನಗಳಲ್ಲಿ ಚಿಂತನೆ ಮಾಡಬೇಕು ಎಂದು ಬಾಗಲಕೋಟೆಯಲ್ಲಿ ಹೇಳಿದ್ದಾರೆ.

ಯಾವುದೇ ಒತ್ತಡದ ಮುಖಾಂತರ ಮೀಸಲಾತಿ ಪಡೆಯಲು ಸಾಧ್ಯವಿಲ್ಲ. ಸ್ವಾಮೀಜಿಗಳು ಧರಣಿ, ಉಪವಾಸ ಸತ್ಯಾಗ್ರಹ ಮಾಡುತ್ತೀವಿ ಅಂತ ಹೇಳಿದರೆ ಎಲ್ಲ ಸಮುದಾಯದ ಸ್ವಾಮೀಜಿಗಳು ಶುರು ಮಾಡುತ್ತಾರೆ. ಪ್ರಜಾಪ್ರಭುತ್ವದಲ್ಲಿ ಒತ್ತಡದ ಮೇಲೆ ಮೀಸಲಾತಿ ಪಡೆಯೋಕೆ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಎಸ್​​ಟಿ ಮೀಸಲಾತಿಗಾಗಿ ಕುರುಬರ ಹೋರಾಟ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ ಮೊದಲು ಸಿದ್ದರಾಮಯ್ಯ ಇದಕ್ಕೆ ಬೆಂಬಲ ನೀಡಿದ್ದರು. ಬಳಿಕ ಸ್ವಾಮೀಜಿಗಳು ನಮ್ಮ ಮನೆಗೆ ಬಂದು ಚರ್ಚಿಸಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ ಮೊದಲು ಒಪ್ಪಿಕೊಂಡಿದ್ದರು. ಬಳಿಕ ಸಮಾವೇಶಕ್ಕೆ ತಮ್ಮನ್ನು ಕರೆದೇ ಇಲ್ಲ ಎಂದಿದ್ದರು. ಸಿದ್ದರಾಮಯ್ಯ ಏಕೆ ಡಬಲ್ ಸ್ಟ್ಯಾಂಡ್ ತಗೊಂಡರೆಂದು ಗೊತ್ತಿಲ್ಲ.

ಈ ಹೋರಾಟದ ಹಿಂದೆ ಆರ್​ಎಸ್​ಎಸ್​ ಇದೆ ಅಂದಿದ್ದರು. ಕುರುಬರ ಪಾದಯಾತ್ರೆಗೆ ಆರ್​ಎಸ್​ಎಸ್​ ಹಣ ನೀಡಿದೆ ಎಂದರು. ಸಿದ್ದರಾಮಯ್ಯರವರ ಮಾತಿನಿಂದ ಇಡೀ ಸಮುದಾಯಕ್ಕೆ ನೋವಾಗಿದೆ. ಸಮಾವೇಶ ಯಾರು ನಿರೀಕ್ಷೆ ಮಾಡದಷ್ಟು ಯಶಸ್ವಿ ಆಯಿತು. ಬೆಂಬಲ ಕೊಡುತ್ತೇನೆ ಎಂದ ಸಿದ್ದರಾಮಯ್ಯ ವಿರೋಧ ಮಾಡಿದರು ಎಂದು ತಿಳಿಸಿದರು. ಅಹಿಂದ ಸಮಾವೇಶ ವಿಚಾರದ ಬಗ್ಗೆ ಮಾತನಾಡಿದ ಈಶ್ವರಪ್ಪ ಸಿದ್ದರಾಮಯ್ಯ ಇನ್ನೊಂದು ಸಮಾವೇಶ ಮಾಡುತ್ತಾರೋ ಬಿಡುತ್ತಾರೋ ಅದು ಅವರಿಗೆ ಸಂಬಂಧಿಸಿದ್ದು. ಮಾಡಬಾರದು ಅಂತ ನಾನು ಹೇಳುವುದಿಲ್ಲ ಎಂದರು.

ಇದನ್ನೂ ಓದಿ

ವಿಶ್ಲೇಷಣೆ | ಪಂಚಮಸಾಲಿ ಮೀಸಲಾತಿ ಮೂಸೆಯಲ್ಲಿ ಬೇಯುವುದು ಯಾರ ಬೇಳೆ?

ಕುರುಬ ಸಮುದಾಯದ ಬೃಹತ್ ಸಮಾವೇಶ; ಎಸ್​ಟಿ ಮೀಸಲು ಶೀಘ್ರ ಆಗಬೇಕೆಂದ ನಾಯಕರು