ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿನಿಯ ಮನೆಗೇ ತೆರಳಿ ಆತ್ಮವಿಶ್ವಾಸ ಹೆಚ್ಚಿಸಿದ ಸಚಿವ ಸುರೇಶ್ ಕುಮಾರ್

ಜನವರಿ 25ರಂದು ವಿದ್ಯಾರ್ಥಿನಿ ಯಶಸ್ವಿನಿ ರಾಷ್ಟ್ರೀಯ ಮಟ್ಟದ ಪ್ರತಿಭಾ ಅನ್ವೇಷಣಾ ಪರೀಕ್ಷೆಗೆ ಹಾಜರಾಗಲು ತಂದೆಯೊಂದಿಗೆ ಹೋಗುತ್ತಿದ್ದಾಗ ಕೆಂಗೇರಿ ಬಳಿ ದೊಡ್ಡಮಟ್ಟದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದರು. ಕತ್ತಿನ ಬೆನ್ನುಮೂಳೆ ಮತ್ತು ಬಲಗೈಗೆ ತೀವ್ರವಾಗಿ ಘಾಸಿಯಾಗಿತ್ತು. ಬಳಿಕ ಯಶಸ್ವಿನಿಗೆ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 2 ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿತ್ತು.

  • TV9 Web Team
  • Published On - 10:38 AM, 25 Feb 2021
ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿನಿಯ ಮನೆಗೇ ತೆರಳಿ ಆತ್ಮವಿಶ್ವಾಸ ಹೆಚ್ಚಿಸಿದ ಸಚಿವ ಸುರೇಶ್ ಕುಮಾರ್
ವಿದ್ಯಾರ್ಥಿನಿ ಯಶಸ್ವಿನಿ ನಿವಾಸಕ್ಕೆ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಭೇಟಿ ನೀಡಿದ್ದಾರೆ.

ಬೆಂಗಳೂರು: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಘಾಸಿಗೊಳಗಾಗಿರುವ ವಿದ್ಯಾರ್ಥಿಯ ಮನೆಗೆ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಭೇಟಿ ನೀಡಿದ್ದಾರೆ. ಬೆಂಗಳೂರಿನ ಕುಂಬಳಗೂಡಿನಲ್ಲಿರುವ ಸರ್ಕಾರಿ ಶಾಲೆ ವಿದ್ಯಾರ್ಥಿನಿ ಯಶಸ್ವಿನಿ ನಿವಾಸಕ್ಕೆ ಇಂದು ಬೆಳಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

ಜನವರಿ 25ರಂದು ವಿದ್ಯಾರ್ಥಿನಿ ಯಶಸ್ವಿನಿ ರಾಷ್ಟ್ರೀಯ ಮಟ್ಟದ ಪ್ರತಿಭಾ ಅನ್ವೇಷಣಾ ಪರೀಕ್ಷೆಗೆ ಹಾಜರಾಗಲು ತಂದೆಯೊಂದಿಗೆ ಹೋಗುತ್ತಿದ್ದಾಗ ಕೆಂಗೇರಿ ಬಳಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದರು. ಕತ್ತಿನ ಬೆನ್ನುಮೂಳೆ ಮತ್ತು ಬಲಗೈಗೆ ತೀವ್ರವಾಗಿ ಘಾಸಿಯಾಗಿತ್ತು. ಬಳಿಕ ಯಶಸ್ವಿನಿಗೆ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 2 ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿತ್ತು. ಸದ್ಯ ಯಶಸ್ವಿನಿ ಕೊಂಚ ಕೊಂಚ ಚೇತರಿಸಿಕೊಂಡಿದ್ದು ತನ್ನ ಕತ್ತು ತಿರುಗಿಸಲು ಇನ್ನೂ ಸುಮಾರು 3 ವಾರಗಳು ಬೇಕಿದೆ. ಬಲಗೈ ಎತ್ತಲು ಸಹ ಪ್ರಯತ್ನಿಸುತ್ತಿದ್ದಾರೆ. ಚಿಕಿತ್ಸೆಯ ಬಳಿಕ ವಿದ್ಯಾರ್ಥಿನಿಯು ತನ್ನ ನಿವಾಸಕ್ಕೆ ವಾಪಸಾಗಿದ್ದಾಳೆ. ಹಾಗಾಗಿ, ಸಚಿವ ಸುರೇಶ್ ಕುಮಾರ್ ಇಂದು ಯಶಸ್ವಿನಿ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

ಇನ್ನು ಶಿಕ್ಷಣ ಇಲಾಖೆಯಿಂದ ಆಕೆಯ ಶಸ್ತ್ರಚಿಕಿತ್ಸೆಗೆ ಅಗತ್ಯ ಹಣ ಪಾವತಿ ಮಾಡಲಾಗಿದೆ. ಈಗ ಯಶಸ್ವಿನಿ ಮುಂಬರುವ SSLC ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸುತ್ತೇನೆ ಎಂದು ಹೇಳಿದ್ದಾಳೆ. ಇಂದು ನಾನು ಆಕೆಯ ಮನೆಗೆ ಹೋಗಿ ಆಕೆಯನ್ನು ಮಾತನಾಡಿಸಿ ಆತ್ಮವಿಶ್ವಾಸವನ್ನು ಹೆಚ್ಚಿಸುವ ಪ್ರಯತ್ನ ಮಾಡಿದ್ದೇನೆ. ಈ ಬಾಲಕಿಗೆ ಇನ್ಮುಂದೆ ಕಲಿಕೆಗೆ ಎಲ್ಲ ವ್ಯವಸ್ಥೆ ಮಾಡಲಾಗುವುದು. ಪೂರ್ಣ ಗುಣಮುಖವಾಗುವವರೆಗೆ ಮನೆಗೆ ಶಾಲಾ ಶಿಕ್ಷಕರು ಪಾಠ ಹೇಳಿಕೊಡುವ ವ್ಯವಸ್ಥೆ ಮಾಡಲಾಗಿದೆ. ತಾನು SSLC ಪರೀಕ್ಷೆ ಪಡೆದು ನನ್ನಿಂದಲೇ ಬಹುಮಾನ ಸ್ವೀಕರಿಸುತ್ತೇನೆ ಎಂಬ ಆತ್ಮವಿಶ್ವಾಸದ ಮಾತುಗಳನ್ನು ಯಶಸ್ವಿನಿ ಹೇಳಿದ್ದಾರೆ. ಎಲ್ಲ ರೀತಿಯಲ್ಲೂ ಶುಭವಾಗಲಿ ಎಂದು ಹಾರೈಸಿ ಬಂದಿದ್ದೇನೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

Suresh kumar Visits Student house

ವಿದ್ಯಾರ್ಥಿನಿ ಯಶಸ್ವಿನಿ ನಿವಾಸಕ್ಕೆ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಭೇಟಿ ನೀಡಿದ್ದಾರೆ.

ಇದನ್ನೂ ಓದಿ: School Reopen: ಫೆ. 22ರಿಂದ 6-8 ತರಗತಿಗಳಿಗೆ ಪೂರ್ಣ ಶಾಲೆ ಆರಂಭ -ಶಿಕ್ಷಣ ಸಚಿವ ಸುರೇಶ್ ಕುಮಾರ್ ಘೋಷಣೆ