AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಚ್ಎಸ್ಆರ್​ಪಿ ನಂಬರ್ ಪ್ಲೇಟ್​ಗೆ ವಿರೋಧ, ಲೋಕಾಯುಕ್ತಕ್ಕೆ ದೂರು ನೀಡಿದ ನಂಬರ್ ಪ್ಲೇಟ್ ಅಸೋಸಿಯೇಷನ್

ಹೊರ ರಾಜ್ಯದ ಕೇವಲ ನಾಲ್ಕು ಕಂಪನಿಗಳಿಗೆ ಮಾತ್ರ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಮಾಡಲು ರಾಜ್ಯ ಸಾರಿಗೆ ಇಲಾಖೆಯ ಅಧಿಕಾರಿಗಳು ಟೆಂಡರ್ ನೀಡಿದ್ದಾರೆ. ಇದರಿಂದ ರಾಜ್ಯದ 25 ಸಾವಿರ ಕನ್ನಡಿಗರು ಬೀದಿಗೆ ಬೀಳಲಿದ್ದಾರೆ ಎಂದು ಕರ್ನಾಟಕ ವಾಹನ ನಂಬರ್ ಪ್ಲೇಟ್ ತಯಾರಕರು ಮತ್ತು ಮಾರಾಟಗಾರರ ಸಂಘ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

ಹೆಚ್ಎಸ್ಆರ್​ಪಿ ನಂಬರ್ ಪ್ಲೇಟ್​ಗೆ ವಿರೋಧ, ಲೋಕಾಯುಕ್ತಕ್ಕೆ ದೂರು ನೀಡಿದ ನಂಬರ್ ಪ್ಲೇಟ್ ಅಸೋಸಿಯೇಷನ್
ಸಾಂದರ್ಭಿಕ ಚಿತ್ರ
Kiran Surya
| Updated By: ಆಯೇಷಾ ಬಾನು|

Updated on: Jan 10, 2024 | 3:55 PM

Share

ಬೆಂಗಳೂರು, ಜ.10: ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಗೆ (High Security Number Plate) ಭಾರಿ ವಿರೋಧ ವ್ಯಕ್ತವಾಗ್ತಿದೆ. ಯಾವುದೇ ಸೇಫ್ಟಿ ಇಲ್ಲದಿರುವ ನಂಬರ್ ಪ್ಲೇಟ್ ಗೆ ಹೈ ಸೆಕ್ಯುರಿಟಿ ನಂಬರ್ ‌ಪ್ಲೇಟ್ ಎಂದು ಹಣ ಪೀಕಲಾಗುತ್ತಿದೆ. ಹೊರ ರಾಜ್ಯದ ಕೇವಲ ನಾಲ್ಕು ಕಂಪನಿಗಳಿಗೆ ಮಾತ್ರ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಮಾಡಲು ರಾಜ್ಯ ಸಾರಿಗೆ ಇಲಾಖೆಯ (State Transport Department) ಅಧಿಕಾರಿಗಳು ಟೆಂಡರ್ ನೀಡಿದ್ದಾರೆ. ಇದರಿಂದ ರಾಜ್ಯದ 25 ಸಾವಿರ ಕನ್ನಡಿಗರು ಬೀದಿಗೆ ಬೀಳಲಿದ್ದಾರೆ ಎಂದು ಕರ್ನಾಟಕ ವಾಹನ ನಂಬರ್ ಪ್ಲೇಟ್ ತಯಾರಕರು ಮತ್ತು ಮಾರಾಟಗಾರರ ಸಂಘ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

ರಾಜ್ಯ ‌ಸಾರಿಗೆ ಇಲಾಖೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಮಾಡಲು ಕಾರಿಗೆ – 500 ರುಪಾಯಿ ಪಡೆದುಕೊಳ್ಳಬೇಕೆಂದು ಹೇಳಿದೆ. ಆದರೆ ನಾಲ್ಕು ಕಂಪನಿಗಳು 750 ರುಪಾಯಿ ಚಾರ್ಜ್ ಮಾಡ್ತಿದ್ದಾರೆ. ಬೈಕ್ ಗೆ 250 ರಿಂದ 300 ರುಪಾಯಿ ಪಡೆದುಕೊಳ್ಳಲು ಹೇಳ್ತಿದ್ದಾರೆ. ಆದರೆ ಇವರು 450 ರಿಂದ 500 ರುಪಾಯಿ ಹಣ ಪಡೆದುಕೊಳ್ಳುತ್ತಿದ್ದಾರೆ. 2019 ರಿಂದ ರಿಜಿಸ್ಟ್ರೇಷನ್ ಆಗಿರುವ ಹೊಸ ವಾಹನಗಳಿಗೆ ( ಹೆಚ್ಎಸ್ ಆರ್ಪಿ ಕಡ್ಡಾಯ ) ಈಗಾಗಲೇ ಮಾಡಲಾಗಿದೆ. ಆದರೆ ಈ ವರ್ಷದ ಆಗಸ್ಟ್‌ 17 ರಿಂದ ಹಳೆಯ ವಾಹನಗಳಿಗೂ ಹೆಚ್ಎಸ್ಆರ್ಪಿ ನೇಮ್ ಬೋರ್ಡ್ ಕಡ್ಡಾಯ ಮಾಡಿ ಏಕಾಏಕಿ ಆದೇಶ ಮಾಡಲಾಗಿದೆ. ಆದರೆ 2019 ರ ಹಿಂದೆ ರಿಜಿಸ್ಟರ್ ಆಗಿರುವ ವಾಹನಗಳು ರಾಜ್ಯದಲ್ಲಿ ಅಂದಾಜು 2 ಕೋಟಿ 10 ಲಕ್ಷ ಕಾರು,ಬೈಕ್ ಹಾಗೂ ಲಾರಿಗಳಿವೆ.

ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಮಾಡಲು ಬೇರೆ ಬೇರೆ ರಾಜ್ಯದ ( ರೋಸ್ ಮಾರ್ಟ್ ದೆಹಲಿ ) (ಎಫ್ ಫ್ಟಿಎ, ಗುಜರಾತ್) (ಚಿಮ್ ನಿಟ್ , ಮುಂಬೈ)( ಸೆಲೆಕ್ಸ್ – ಕೊಲ್ಕತ್ತಾ) ಇದರಿಂದ 1200 ರಿಂದ 1400 ಕೋಟಿ ರುಪಾಯಿ ನಾಲ್ಕು ಕಂಪನಿ ಆದಾಯ ಬರುತ್ತದೆ. ಫೆಬ್ರವರಿ- 17 ರೊಳಗೆ ಎಲ್ಲಾ ಕಾರು ಬೈಕ್ ಗಳಿಗೆ ಅಳವಡಿಸಲು ಆದೇಶ ಮಾಡಲಾಗಿದೆ. ಅಳವಡಿಸಿಲ್ಲ ಅಂದರೆ ದಂಡ ಹಾಕಲಾಗುತ್ತದೆ ಎಂದು ರಾಜ್ಯ ಸಾರಿಗೆ ‌ಇಲಾಖೆ ಆದೇಶ ಹೊರಡಿಸಿದೆ. ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗ್ತಿದೆ.

ಹೊರ ರಾಜ್ಯದ ನಾಲ್ಕು ಕಂಪನಿ ಗೆ ಟೆಂಡರ್, ಇಪ್ಪತ್ತೈದು ಸಾವಿರ ಕನ್ನಡಿಗರು ಬೀದಿಗೆ

ಹಳೆಯ ವಾಹನಗಳಿಗೆ ಅಂದ್ರೆ ಏಪ್ರಿಲ್ 1, 2019ಕ್ಕೂ ಮುನ್ನ ನೋಂದಣಿ ಆಗಿರುವ ವಾಹನಗಳಿಗೂ ಸದ್ಯ HSRP ನಂಬರ್ ಪ್ಲೇಟ್ ಹಾಕಬೇಕು ಅಂತ ರಾಜ್ಯ ಸರ್ಕಾರ ಸದ್ಯ ಆದೇಶ ಮಾಡಿದೆ. ರಾಜ್ಯ ಸಾರಿಗೆ ಇಲಾಖೆ ಫೆಬ್ರವರಿ 17ಕ್ಕೆ ಡೆಡ್ ಲೈನ್ ನೀಡಿದೆ. ಆದ್ರೆ ಈ ನಂಬರ್ ಪ್ಲೇಟ್ ತಯಾರಿಸಲು OEM ಅಂದ್ರೆ original equipment manufacturers ಹತ್ರ ಹಾಗೇ ಅವರ ಡೀಲರ್ಸ್ ಹತ್ತಿರ ಮಾತ್ರ ನಂಬರ್ ಪ್ಲೇಟ್ ಹಾಕಲು ಅವಕಾಶವನ್ನ ನೀಡಿದೆ.. ಮತ್ತು ಈ‌ ನಂಬರ್ ಪ್ಲೇಟ್ ಗಳಲ್ಲಿ ಯಾವುದೇ ಹೈ ಸೆಕ್ಯುರಿಟಿ ಇಲ್ಲ ಇದರಲ್ಲಿ ಯಾವುದೇ ಚಿಪ್ಪು ಇಲ್ಲ ಜಿಪಿಎಸ್ ಟ್ರ್ಯಾಕಿಂಗ್ ಕೂಡ ಇರೋದಿಲ್ಲ ಕೇವಲ ದುಡ್ಡು ಮಾಡಲು ಅಷ್ಟೇ ಎಚ್ಎಸ್ಎಸ್ಆರ್ಪಿ ನಂಬರ್ ಪ್ಲೇಟ್ ಹಾಕಲು ಹೇಳ್ತಿದ್ದು, ಸದ್ಯ ಸಾರಿಗೆ ಇಲಾಖೆಯ ಈ ನಿರ್ಧಾರ ನಂಬರ್ ಪ್ಲೇಟ್ ತಯಾರಕರು ಮತ್ತು ಮಾರಾಟಗಾರರ ಸಂಘ ಸಿಡಿಮಿಡಿ ಗೊಳ್ಳುವಂತೆ ಮಾಡಿದ್ದು, ಇದ್ರಿಂದ ಸುಮಾರು 25 ಸಾವಿರ ಕುಟುಂಬಗಳು ಬೀದಿಗೆ ಬರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

ಏನಿದು HSRP?

HSRP ಅಂದ್ರೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಎಂದರ್ಥ. ವಾಹನಗಳ ನಂಬರ್ ಪ್ಲೇಟ್ನಲ್ಲೇ ಈ ತಂತ್ರಜ್ಞಾನ ಅಳವಡಿಕೆ ಮಾಡಲಾಗುತ್ತೆ. ಈ ತಂತ್ರಜ್ಞಾನದಿಂದ ವಾಹನ ಕಳ್ಳತನ, ಕದ್ದ ವಾಹನ ಬಳಸಿ ಮಾಡೋ ಕೃತ್ಯಗಳನ್ನು ತಡೆಯಲು ಸಹಾಯವಾಗುತ್ತೆ. ಜೊತೆಗೆ ಕಾನೂನು ಉಲ್ಲಂಘನೆ ಪ್ರಕರಣಗಳನ್ನು ಬೇಧಿಸಲು ಅನುಕೂಲಗಲಿದೆ. HSRP ನಂಬರ್ ಪ್ಲೇಟ್ ಶಾಶ್ವತ ಗುರುತಿನ ನಂಬರ್ ಒದಗಿಸುತ್ತದೆ. ಇನ್ನೂ ಈ ತಂತ್ರಜ್ಞಾನ ಅಳವಡಿಸಿರೋ ವಾಹನ ರಸ್ತೆಯಲ್ಲಿ ಸಂಚರಿಸುವಾಗಲೇ ವಾಹನವನ್ನು ಗುರುತಿಸಬಹುದು. ಇನ್ನೂ ಈ ನಂಬರ್‌ ಪ್ಲೇಟ್‌ಗಳಲ್ಲಿ ಲೇಸರ್ ತಂತ್ರಜ್ಞಾನದ ಅಳವಡಿಕೆಯೂ ಮಾಡಲಾಗಿರುತ್ತದೆ ಅನ್ನುವುದು ಸಾರಿಗೆ ಇಲಾಖೆಯ ಅಧಿಕಾರಿಗಳ ವಾದ. ಆದರೆ ಈ ಹೆಚ್ಎಸ್ಆರ್ಪಿ ಪ್ಲೇಟ್ ಯಾವುದೇ ಸೆಕ್ಯುರಿಟಿ ಫಿಚರ್ಸ್ ಕೂಡ ಅಳವಡಿಸಿಲ್ಲ ಎನ್ನುವುದು ನಂಬರ್ ‌ಪ್ಲೇಟ್ ತಯಾರಕರ ಮಾತು. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿಯನ್ನು ಕೇಳಿದ್ರೆ 8 ಅಥವಾ 9 ಕಂಪನಿಗಳಿಗೆ ಅವಕಾಶ ನೀಡಲಾಗಿದೆ. ಅದರಿಂದ ನಂಬರ್ ಪ್ಲೇಟ್ ಅಳವಡಿಸುವ ಅಸೋಸಿಯೇಷನ್ ಅವರು ಕೋರ್ಟ್ ಗೆ ಹೋಗಿದ್ದಾರೆ ಕೋರ್ಟ್ ಏನು ಹೇಳುತ್ತದೋ ಹಾಗೆ ಮಾಡ್ತಿವಿ. ಆ ಕಂಪನಿಗಳಿಗೆ ಎಲಿಜಬಲಿಟಿ ಇತ್ತು ಅದಕ್ಕೆ ನೀಡಲಾಗಿದೆ ಕೇಂದ್ರ ಸರ್ಕಾರದ ಗೈಡ್ ಲೈನ್ಸ್ ಪ್ರಕಾರ ಅನುಮತಿ ನೀಡಲಾಗಿದೆ. ಗೈಡ್ ಲೈನ್ಸ್ ಮೀರಿ ಅನುಮತಿ ನೀಡಿಲ್ಲ. ಈಗಾಗಲೇ ಈ ಕೇಸ್ ಕೋರ್ಟ್ ನಲ್ಲಿದೆ. ಕೋರ್ಟ್ ತೀರ್ಪಿನಂತೆ ತೀರ್ಮಾನ ಕೈಗೊಳ್ಳುತ್ತಿವಿ ಎಂದರು.

ಒಟ್ನಲ್ಲಿ ಫೆಬ್ರವರಿ ಒಳಗಡೆ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡದೇ ಇದ್ರೆ ದಂಡಾಸ್ತ್ರ ಪ್ರಯೋಗ ಮಾಡ್ತಿವಿ ಅಂತ ಸಾರಿಗೆ ಇಲಾಖೆ ತಿಳಿಸಿದೆ. ಆದ್ರೆ ಈ ಪ್ಲೇಟ್ಗಳ ತಯಾರಿಕೆಗೆ ಕೇವಲ ನಾಲ್ಕು ಕಂಪನಿಗೆ ಮಾತ್ರ ಅನುಮತಿ ಕೊಟ್ಟಿರೋದು ಫೆಬ್ರವರಿ ಒಳಗೆ ಎರಡು ಕೋಟಿ ವಾಹನಗಳಿಗೆ ನಂಬರ್ ‌ಪ್ಲೇಟ್ ಅಳವಡಿಸಲು ಸಾಧ್ಯವಾ ಅನ್ನೋದು ನಂಬರ್ ಪ್ಲೇಟ್ ತಯಾರಕರ ಪ್ರಶ್ನೆ. ಇದಕ್ಕೆ ರಾಜ್ಯ ಸಾರಿಗೆ ಇಲಾಖೆಯ ಅಧಿಕಾರಿಗಳ ಉತ್ತರ ಏನಾಗಿರುತ್ತೆ ಅನ್ನೋದನ್ನ ಕಾದು ನೋಡ್ಬೇಕಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ