ಕಳೆದೊಂದು ವಾರದಿಂದ ಉರಿಯುತ್ತಿರುವ ಮೀಸಲಾತಿ ಹೋರಾಟದ ಕಾವು ದಿನೇ ದಿನೇ ಹೆಚ್ಚಾಗುತ್ತಿದೆ. ಇದೀಗ ಪಂಚಮಸಾಲಿ ಮೀಸಲಾತಿ ಹೋರಾಟ ಬೆಂಗಳೂರಿಗೆ ಎಂಟ್ರಿಯಾಗಿದ್ದು, ಮುಂದಿನ ಹೋರಾಟ, ಸಮಾವೇಶದ ಬಗ್ಗೆ ರೂಪರೇಷೆ ಸಿದ್ಧತೆಯಾಗ್ತಿದೆ.
ರಾಜಧಾನಿ ಬೆಂಗಳೂರಿನಲ್ಲಿ ಪಂಚಮಸಾಲಿ ಲಿಂಗಾಯತ ಸಮುದಾಯದ ಮೀಸಲಾತಿ ರಣಕಹಳೆ ಮೊಳಗಲಿದೆ. ಬೃಹತ್ ಸಮಾವೇಶಕ್ಕೆ ಮೂರು ದಿನಗಳು ಮಾತ್ರ ಬಾಕಿ ಇದ್ದು, ದಿನಗಣನೆ ಆರಂಭವಾಗಿದೆ. ಬೆಂಗಳೂರಿನ ನಗರದಲ್ಲಿ ಪಾದಯಾತ್ರೆ ಮೂಲಕ ಸಂಚರಿಸಿ ಭಾನುವಾರ ನಡೆಯಲಿರುವ ಸಮಾವೇಶಕ್ಕೆ ಸಕಲ ಸಿದ್ದತೆ ನಡೆಸಲಾಗುತ್ತಿದೆ. ಸದ್ಯ ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ತಂಗಿದ್ದು, ಇಂದು ಎಂಟನೇ ಮೈಲಿಯಲ್ಲಿ ವಾಸ್ತವ್ಯ ಹೂಡಲಿದೆ.
ಪಾದಯಾತ್ರೆಯಲ್ಲಿ ಜಯಮೃತ್ಯುಂಜಯ ಶ್ರೀ, ವಚನಾನಂದ ಶ್ರೀ, ವಿಜಯಾನಂದ ಕಾಶಪ್ಪನವರ್ ಸೇರಿದಂತೆ ಪಂಚಮಸಾಲಿ ಸಮುದಾಯದ ನೂರಾರು ಜನರು ಭಾಗಿಯಾಗಿದ್ದಾರೆ. ಭಾನುವಾರ ಬೆಳಗ್ಗೆ 11 ಗಂಟೆಗೆ ಆರಂಭವಾಗುವ ಬೃಹತ್ ಱಲಿ ಸಮಾವೇಶ ಸಂಜೆ ನಾಲ್ಕು ಗಂಟೆ ವೇಳೆಗೆ ಮುಗಿಯಲಿದೆ. ಬಳಿಕ ಪಾದಯಾತ್ರೆ ಮೂಲಕ ವಿಧಾನಸೌಧಕ್ಕೆ ತೆರಳಿ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ.
ಮೀಸಲಾತಿ ವಿಚಾರ ಸರಕಾರಕ್ಕೆ ದೊಡ್ಡ ತಲೆನೋವು ಶುರುವಾಗಿದೆ. ಇನ್ನು ಮೀಸಲಾತಿ ವಿಚಾರವಾಗಿ ಪಂಚಮಸಾಲಿ ಸಮುದಾಯ ಹಿಂದುಳಿದ ವರ್ಗಗಳ ಆಯೋಗಕ್ಕೆ ನೀಡಿರುವ ಪತ್ರ ಅಧಿಕೃತವಾಗಿ ತಲುಪಿಲ್ಲ ಎಂದು ಗೊತ್ತಾಗಿದ್ದು, ಹೋರಾಟಗಾರರನ್ನ ಮತ್ತಷ್ಟು ಕೆರಳಿಸಿದೆ.
ಒಟ್ನಲ್ಲಿ ಪಂಚಮಸಾಲಿ ಪಾದಯಾತ್ರೆ ಇಂದು ಕೂಡ ಮುಂದುವರೆದು ಬೆಂಗಳೂರಿನ ಎಂಟನೇ ಮೈಲಿಯ ಪಾಟಿದಾರ್ ಕಲ್ಯಾಣ ಮಂಟಪದಲ್ಲಿ ವಾಸ್ತವ್ಯ ಹೂಡಲಿದೆ. ಫೆಬ್ರವರಿ 21 ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಲು ಭರ್ಜರಿ ತಯಾರಿ ನಡೆಸಲಾಗುತ್ತಿದೆ.
ಸಿಎಂ ಯಡಿಯೂರಪ್ಪ ನಮ್ಮ ಸಮಾಜದ ಜೊತೆ ಚೆಲ್ಲಾಟ ಆಡಬಾರದು..
ಇನ್ನು ಇದೇ ವಿಷಯವಾಗಿ ಕೆಲ ದಿನಗಳ ಹಿಂದೆ ಸಿದ್ದಗಂಗಾ ಮಠದಲ್ಲಿ ಮಾತಾನಾಡಿದ್ದ ವಿಜಯನಂದ ಕಾಶಪ್ಪನವರ್, ನಾನಾ ರೀತಿ ಒತ್ತಡಗಳು ಬಂದರೂ, ಅದಕ್ಕೆ ಬಗ್ಗದೇ ನಿರ್ಧಾರ ಮಾಡಲಾಗಿದೆ. ಆರಂಭದಲ್ಲಿ ನಿರ್ಧರಿಸಿರುವಂತೆ ಅರಮನೆ ಮೈದಾನದಲ್ಲಿ ಸಮಾವೇಶ ಮಾಡಲಾಗುತ್ತದೆ. ಬಳಿಕ ವಿಧಾನಸೌಧ ಬಳಿ ಮೀಸಲಾತಿ ನಿಡೋವರೆಗೂ ಧರಣಿ ಸತ್ಯಾಗ್ರಹ ಮಾಡಲಾಗುತ್ತದೆ ಎಂದಿದ್ದರು.
ಸಿಎಂ ಯಡಿಯೂರಪ್ಪ ಆಯೋಗಕ್ಕೆ ಕಳಿಸಿರುವ ಪತ್ರ ಅಧಿಕೃತವಾಗಿ ತಲುಪಿಲ್ಲ ಅಂತಾ ತಿಳಿದು ನೋವಾಯ್ತು. ಸಿಎಂ ಯಡಿಯೂರಪ್ಪ ನಮ್ಮ ಸಮಾಜದ ಜೊತೆ ಚೆಲ್ಲಾಟ ಆಡಬಾರದು. ಇಂದು ಸಿಎಂ ಪುತ್ರ ವಿಜಯೇಂದ್ರ ಇತರೆ ಮಠಾಧೀಶರನ್ನ ಸೇರಿಸಿ ಸಭೆ ಮಾಡಿ ನಮ್ಮ ಹೋರಾಟವನ್ನ ಹತ್ತಿಕ್ಕುವ ಕೆಲಸ ಮಾಡ್ತಿದ್ದಾರೆ.. ಇದು ಮಾಡಬಾರದು. ಸ್ವಾಮೀಜಿಗಳ ಮೂಲಕ ಪಂಚಮಸಾಲಿ ಹೋರಾಟ ಹತ್ತಿಕ್ಕುವ ಕೆಲಸ ಮಾಡ್ತಿದ್ದಾರೆ ಎಂದು ವಿಜಯೇಂದ್ರ ಮೇಲೆ ಕಾಶಪ್ಪನವರ್ ನೇರವಾಗಿ ಆರೋಪ ಮಾಡಿದ್ದರು.
ಇದನ್ನೂ ಓದಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹೋರಾಟ: ಫೆ. 21ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ಸಮಾವೇಶ