ಲಸಿಕೆಗಾಗಿ 18-45 ವರ್ಷದವರು ನಾಳೆ ಆಸ್ಪತ್ರೆಗೆ ಹೋಗಬೇಡಿ, ಅಧಿಕೃತವಾಗಿ ಹೇಳೋ ತನಕ ಕಾಯಬೇಕು: ಡಾ.ಸುಧಾಕರ್

ಸರ್ಕಾರದಿಂದ ಅಧಿಕೃತ ಮಾಹಿತಿ ಸಿಗುವ ತನಕ 18-45 ವರ್ಷ ವಯೋಮಾನದವರು ಲಸಿಕೆ ಪಡೆಯಲೆಂದು ಆಸ್ಪತ್ರೆಗೆ ಹೋಗಬೇಡಿ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

  • TV9 Web Team
  • Published On - 10:07 AM, 30 Apr 2021
ಲಸಿಕೆಗಾಗಿ 18-45 ವರ್ಷದವರು ನಾಳೆ ಆಸ್ಪತ್ರೆಗೆ ಹೋಗಬೇಡಿ, ಅಧಿಕೃತವಾಗಿ ಹೇಳೋ ತನಕ ಕಾಯಬೇಕು: ಡಾ.ಸುಧಾಕರ್
ಡಾ.ಕೆ.ಸುಧಾಕರ್

ಬೆಂಗಳೂರು: ದೇಶದಲ್ಲಿ 18 ರಿಂದ 45 ವರ್ಷ ವಯೋಮಾನದವರಿಗೆ‌ ನಾಳೆಯಿಂದ (ಮೇ 1) ಕೊರೊನಾ‌ ಲಸಿಕೆ ನೀಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆಯಾದರೂ, ಲಸಿಕೆ ಪೂರೈಕೆ ಬಗ್ಗೆ ಕೆಲ ಗೊಂದಲಗಳು ಎದ್ದಿವೆ. ಈ ಬಗ್ಗೆ ಮಾತನಾಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಸರ್ಕಾರದಿಂದ ಅಧಿಕೃತ ಮಾಹಿತಿ ಸಿಗುವ ತನಕ 18-45 ವರ್ಷ ವಯೋಮಾನದವರು ಲಸಿಕೆ ಪಡೆಯಲೆಂದು ಆಸ್ಪತ್ರೆಗೆ ಹೋಗಬೇಡಿ ಎಂದು ಸ್ಪಷ್ಟನೆ ನೀಡಿದ್ದಾರೆ. ಮೇ 1 ರಿಂದ ಆರಂಭವಾಗಬೇಕಿದ್ದ ಲಸಿಕೆ ವಿತರಣೆ ಬಗ್ಗೆ ಲಸಿಕೆ ಉತ್ಪಾದನಾ ಕಂಪನಿಯಿಂದ ರಾಜ್ಯ ಸರ್ಕಾರಕ್ಕೆ ಅಧಿಕೃತ ಮಾಹಿತಿ ಬಂದಿಲ್ಲ ಹೀಗಾಗಿ ನಾಳೆ (ಮೇ 1) ಯಾರೂ ಲಸಿಕೆ ಪಡೆಯಲೆಂದು ಆಸ್ಪತ್ರೆಗೆ ಹೋಗುವುದು ಬೇಡ ಎಂದು ತಿಳಿಸಿದ್ದಾರೆ.

ನಮ್ಮಲ್ಲಿ ಲಸಿಕೆ‌ ಪಡೆಯಲು ಇದೀಗ ಅರ್ಹತೆ ಪಡೆದವರು ಅಂದಾಜು 3 ರಿಂದ 3.5 ಕೋಟಿಯಷ್ಟು ಜನರಿದ್ದಾರೆ. ಈಗಾಗಲೇ 1 ಕೋಟಿ ಡೋಸ್‌ ಕೊವಿಶೀಲ್ಡ್ ಆರ್ಡರ್ ಮಾಡಲಾಗಿದೆ. ಅದಕ್ಕಾಗಿ ₹400 ಕೋಟಿ ಮೀಸಲಿಡಲಾಗಿದೆ. ಸೆರಮ್ ಇನ್ಸ್‌ಸ್ಟಿಟ್ಯೂಷನ್ ಆಫ್ ಇಂಡಿಯಾ ಒಂದು ತಿಂಗಳಲ್ಲಿ 5-6 ಕೋಟಿ ಡೋಸ್ ಲಸಿಕೆ ಉತ್ಪಾದನೆ ಮಾಡುತ್ತಿದೆ. ಭಾರತ್ ಬಯೋಟೆಕ್ 1-1.5 ಕೋಟಿ ಡೋಸ್ ಲಸಿಕೆ ಉತ್ಪಾದನೆ ಮಾಡುತ್ತಿದೆ. ಸದ್ಯದಲ್ಲೇ ರಷ್ಯಾದ ಸ್ಪುಟ್ನಿಕ್-ವಿ ಲಸಿಕೆ ಕೂಡಾ ಬರಲಿದೆ. ಹೀಗಾಗಿ ಕೊವಿನ್ ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಂಡವರಿಗೆ ಲಸಿಕೆ‌ ಸಿಗಲಿದೆ. ಆದರೆ, ಸರ್ಕಾರ ಅಧಿಕೃತವಾಗಿ ಹೇಳುವ ತನಕ ಕಾಯಬೇಕು ಎಂದು ಮಾಹಿತಿ ನೀಡಿದ್ದಾರೆ‌.

18-45 ವರ್ಷದವರಿಗೆ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಲಸಿಕೆ ಕೊಡುತ್ತೇವೆ ಎಂದು ಸ್ಪಷ್ಟವಾಗಿ ತಿಳಿಸಿದ್ದೇವೆ. ಈ ವಿಚಾರದಲ್ಲಿ ಯಾವುದೇ ಗೊಂದಲ ಬೇಡ. ಖಾಸಗಿ ಆಸ್ಪತ್ರೆಯಲ್ಲಿ ಇಲ್ಲಿಯವರೆಗೆ ಕೊಡುತ್ತಿರೋದನ್ನು ಮುಂದುವರೆಸಬಹುದು. ಒಟ್ಟು 99 ಲಕ್ಷ ಡೋಸ್ ಲಸಿಕೆಯಲ್ಲಿ 95 ಲಕ್ಷ ಡೋಸ್ ಲಸಿಕೆ ಕೊಟ್ಟಿದ್ದೇವೆ. ಶೇಕಡಾ 1.4ರಷ್ಟು ಪೋಲಾಗಿದೆ. ಈಗ ನಮ್ಮ ಬಳಿ 6 ಲಕ್ಷ ಡೋಸ್ ಲಸಿಕೆ ಇದೆ. ಹೊಸದಾಗಿ ಪೂರೈಕೆ ಮಾಡಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಆದರೆ, ಲಸಿಕೆ ಯಾವಾಗ ಲಭ್ಯವಾಗಲಿದೆ‌ ಎಂದು ದಿನಾಂಕ ಹೇಳೋದಕ್ಕೆ ಆಗೋದಿಲ್ಲ. ಈ ವಿಚಾರದಲ್ಲಿ ಅಂದಾಜು ಮಾಡಲು ಸಾಧ್ಯವಿಲ್ಲ. ಹೀಗಾಗಿ ಅಧಿಕೃತವಾಗಿ ನಮಗೆ ಮಾಹಿತಿ ಸಿಕ್ಕ ಕೂಡಲೇ ರಾಜ್ಯದ ಜನರಿಗೆ ತಿಳಿಸುತ್ತೇವೆ ಎಂದು ಸ್ಪಷ್ಟೀಕರಿಸಿದ್ದಾರೆ.

ಜತೆಗೆ, ಕೊರೊನಾ ನಿಯಂತ್ರಣಕ್ಕೆ ರಾಜ್ಯದಲ್ಲಿ ಕಠಿಣ ನಿಯಮಗಳನ್ನು ಹೇರಿದ್ದರೂ ಜನರು ಬೇಕಾಬಿಟ್ಟಿ ಓಡಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಎಲ್ಲರೂ ನಿಮ್ಮ ನಿಮ್ಮ ಜವಾಬ್ದಾರಿಯನ್ನು ಅರ್ಥ ಮಾಡಿಕೊಳ್ಳಿ. ಮಾರ್ಗಸೂಚಿ ಪಾಲಿಸಿ ಕೊರೊನಾ ತಡೆಗೆ ನೆರವಾಗಿ. ಯಾರೂ ಕೂಡ ನಿಯಮ ಉಲ್ಲಂಘಿಸಬೇಡಿ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಮೇ ತಿಂಗಳಲ್ಲಿ 18-45 ವರ್ಷದವರಿಗೆ ಉಚಿತ ಲಸಿಕೆ ಸಿಗುವುದು ಅನುಮಾನ: ಬಿಬಿಎಂಪಿ ಸುಳಿವು