ಜೆ.ಪಿ.ನಗರದಲ್ಲಿ ಡಬಲ್ ಮರ್ಡರ್ ಕೇಸ್; ಗುಂಡು ಹಾರಿಸಿ ಆರೋಪಿಯನ್ನು ಬಂಧಿಸಿದ ಪೊಲೀಸ್

ಮನೆಯಲ್ಲಿ ಇದ್ದ ಹಣ ಮೊಬೈಲ್, ಚಿನ್ನಾಭರಣವನ್ನು ದೋಚುವ ಸಲುವಾಗಿ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಡಬಲ್ ಮರ್ಡರ್ ಮಾಡಿದ್ದ ಕೇಸ್ ಸಂಬಂಧ ಆರೋಪಿ ಮಂಜುನಾಥ್ ಅಲಿಯಾಸ್ ಅಂಬಾರಿ ಬಂಧನಕ್ಕೆ ಪೊಲೀಸರು ತೆರಳಿದ್ದರು. ಈ ವೇಳೆ ಪೊಲೀಸರ ಮೇಲೆ ದಾಳಿ ಮಾಡಿ ಆರೋಪಿ ಪರಾರಿಗೆ ಯತ್ನಿಸಿದ್ದಾನೆ.

  • Updated On - 10:19 am, Wed, 14 April 21 Edited By: sadhu srinath
ಜೆ.ಪಿ.ನಗರದಲ್ಲಿ ಡಬಲ್ ಮರ್ಡರ್ ಕೇಸ್; ಗುಂಡು ಹಾರಿಸಿ ಆರೋಪಿಯನ್ನು ಬಂಧಿಸಿದ ಪೊಲೀಸ್
ಇನ್ಸ್‌ಪೆಕ್ಟರ್ ಕಿಶೋರ್‌ ಮತ್ತು ಆರೋಪಿ ಮಂಜುನಾಥ್ ಅಲಿಯಾಸ್ ಅಂಬಾರಿ


ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಖಾಕಿ ಗನ್ ಸದ್ದು ಮಾಡಿದೆ. ಕೊಲೆ ಆರೋಪಿ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಬೆಂಗಳೂರಿನ ಕೋಣನಕುಂಟೆ ಠಾಣಾ ವ್ಯಾಪ್ತಿಯಲ್ಲಿ ಮಂಜುನಾಥ್ ಅಲಿಯಾಸ್ ಅಂಬಾರಿ ಮೇಲೆ ಇನ್ಸ್‌ಪೆಕ್ಟರ್ ಕಿಶೋರ್‌ ಫೈರಿಂಗ್ ಮಾಡಿದ್ದಾರೆ. ಕಾಲಿಗೆ ಗುಂಡು ಹಾರಿಸಿ ಆರೋಪಿ ಮಂಜುನಾಥ್​ನನ್ನು ಸೆರೆ ಹಿಡಿಯಲಾಗಿದೆ.

ಮನೆಯಲ್ಲಿ ಇದ್ದ ಹಣ ಮೊಬೈಲ್, ಚಿನ್ನಾಭರಣವನ್ನು ದೋಚುವ ಸಲುವಾಗಿ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಡಬಲ್ ಮರ್ಡರ್ ಮಾಡಿದ್ದ ಕೇಸ್ ಸಂಬಂಧ ಆರೋಪಿ ಮಂಜುನಾಥ್ ಅಲಿಯಾಸ್ ಅಂಬಾರಿ ಬಂಧನಕ್ಕೆ ಪೊಲೀಸರು ತೆರಳಿದ್ದರು. ಈ ವೇಳೆ ಪೊಲೀಸರ ಮೇಲೆ ದಾಳಿ ಮಾಡಿ ಆರೋಪಿ ಪರಾರಿಗೆ ಯತ್ನಿಸಿದ್ದಾನೆ. ಶರಣಾಗುವಂತೆ ಸೂಚಿಸಿದರೂ ಪರಾರಿಗೆ ಯತ್ನಿಸಿದ ಹಿನ್ನೆಲೆಯಲ್ಲಿ ಇನ್ಸ್‌ಪೆಕ್ಟರ್ ಕಿಶೋರ್‌ ಆರೋಪಿ ಕಾಲಿಗೆ ಗುಂಡು ಹಾರಿಸಿ ಆತನನ್ನು ಬಂಧಿಸಿದ್ದಾರೆ. ಸದ್ಯ ಆರೋಪಿ ಮಂಜುನಾಥ್‌ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಕೇಸ್ ದಾಖಲಾಗಿವೆ.

ಜೆಪಿ ನಗರದಲ್ಲಿ ನಡೆದಿತ್ತು ಡಬಲ್ ಮರ್ಡರ್
ಏಪ್ರಿಲ್ 7 ರಂದು ಜೆಪಿ ನಗರದ 7 ನೇ ಹಂತದಲ್ಲಿನ ಮನೆಯಲ್ಲಿ ಮಮತಾ ಬಸು ಮತ್ತು ದೇವ ವ್ರಥಾ ಮೆಹರ(41) ಎಂಬುವವರ ಮೇಲೆ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಸದ್ಯ ಈಗ ಈ ಕೊಲೆ ಆರೋಪಿಯ ಬಂಧನವಾಗಿದೆ. ಮೃತ ಮಮತಾ ಬಸು ಬೆಂಗಳೂರಿನಲ್ಲಿ ಕಳೆದ 20 ವರ್ಷದಿಂದ ನೆಲೆಸಿದ್ದರು. ಅವರ ಮಗ ದೀಪ್ ದೇವ್ ಬಸು ಬೇರೆ ಮನೆಯಲ್ಲಿ ವಾಸವಾಗಿದ್ದಾರೆ. ಮಗನ ಸ್ನೇಹಿತ ಮೃತ ದೇವ ವ್ರಥಾ, ಕಳೆದ 20 ದಿನಗಳಿಂದ ಮಮತಾರವರ ಮನೆಯಲ್ಲಿ ವಾಸವಾಗಿದ್ದರು.

JP Nagar Police Arrest  Double Murder Accused


ಕಾಲಿಗೆ ಗುಂಡು ಹಾರಿಸಿ ಆರೋಪಿ ಮಂಜುನಾಥ್​ನನ್ನು ಸೆರೆ ಹಿಡಿಯಲಾಗಿದೆ

ದೇವ ವ್ರಥಾ ಲಾಕ್​ಡೌನ್ ಸಮಯದಲ್ಲಿ ಕೆಲಸ ಕಳೆದುಕೊಂಡಿದ್ದರು. ಇತ್ತೀಚೆಗೆ ಖಾಸಗಿ ಕಂಪನಿಯಲ್ಲಿ ಕೆಲಸ ಸಿಕ್ಕಿತ್ತು. ಅದಕ್ಕಾಗಿ ಸ್ನೇಹಿತನ ತಾಯಿ ಮಮತಾರ ಮನೆಯಲ್ಲಿ ವಾಸವಾಗಿದ್ದರು. ಘಟನಾ ದಿನ ರಾತ್ರಿ 8:30 ರ ವರೆಗೂ ಇದೇ ಮನೆಯಲ್ಲಿದ್ದ ಮಗ ದೀಪ್ ದೇವ್ ಬಸು ಊಟ ಮುಗಿಸಿ ನಂತರ ತನ್ನ ಮನೆಗೆ ತೆರಳಿದ್ದರು. ಅದೇ ದಿನ ತಡರಾತ್ರಿ 1:30 ರ ಸಮಯದಲ್ಲಿ ಡಬಲ್ ಮರ್ಡರ್ ನಡೆದಿದೆ. ದೇವ ವ್ರಥಾರ ಶವ ಮನೆಯ ಸ್ಟೋರ್ ರೂಂನಲ್ಲಿ ಪತ್ತೆಯಾಗಿದ್ದು ಮೊದಲನೆ ಮಹಡಿಯಲ್ಲಿ ಮಮತಾ ಬಸುರವರ ಶವ ದೊರೆತಿತ್ತು. ಚಾಕುವಿನಿಂದ ಇರಿದು ಇಬ್ಬರನ್ನೂ ಆರೋಪಿ ಮಂಜುನಾಥ್ ಕೊಲೆ ಮಾಡಿದ್ದರು.

ಏಪ್ರಿಲ್ 8 ರಂದು ಬೆಳಿಗ್ಗೆ ಮನೆಗೆಲಸದಾಕೆ ಬಂದಾಗ ಕೊಲೆ ನಡೆದಿರುವುದು ಬೆಳಕಿಗೆ ಬಂದಿತ್ತು. ಕೊಲೆಗೈದ ಬಳಿಕ ಮನೆಯಲ್ಲಿದ್ದ ಸಿಸಿ ಟಿವಿಯ ಡಿವಿಆರ್​ನ್ನ ಕದ್ದೊಯ್ದಿದ್ದ ಆರೋಪಿ ಮಂಜುನಾಥ್, ಬೆಲೆಬಾಳುವ ವಸ್ತುಗಳು ಹಾಗೂ ಎಲೆಕ್ಟ್ರಾನಿಕ್ ಐಟಂಗಳನ್ನ ಕದ್ದಿದ್ದ. ಈ ಬಗ್ಗೆ ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದ್ನನೂ ಓದಿ: ತಡರಾತ್ರಿ ಜೆ.ಪಿ.ನಗರದಲ್ಲಿ ಡರೋಡೆಗೆ ಯತ್ನ, ಮನೆಗೆ ನುಗ್ಗಿ ಇಬ್ಬರ ಹತ್ಯೆ; ಕಮಿಷನರ್ ಕಮಲ್ ಪಂತ್ ಸ್ಥಳಕ್ಕೆ ದೌಡು

(Police Arrest JP Nagar Double Murder Accused By Open Fire In Bengaluru)