ಬೆಂಗಳೂರು: ದೂರವಾಣಿ ಬಿಡಿಭಾಗ ಜೋಡಣೆಯಲ್ಲಿ ಮಗ್ನರಾದ ಮಹಿಳಾಮಣಿಗಳು, 1950ರ ಅಪರೂಪದ ಚಿತ್ರ ವೈರಲ್
1950ರ ದಶಕದ ಬೆಂಗಳೂರಿನ ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರ ಅಪರೂಪದ ಫೋಟೋ ವೈರಲ್ ಆಗಿದೆ. ಈ ಚಿತ್ರವು ಆ ಕಾಲದಲ್ಲಿ ಮಹಿಳೆಯರು ತಾಂತ್ರಿಕ ಕ್ಷೇತ್ರದಲ್ಲಿ ಹೇಗೆ ಕೊಡುಗೆ ನೀಡುತ್ತಿದ್ದರು ಎಂಬುದನ್ನು ತೋರಿಸುತ್ತದೆ. ಐಟಿಐ ಭಾರತದ ಮೊದಲ ಸಾರ್ವಜನಿಕ ವಲಯ ಉದ್ಯಮವಾಗಿದ್ದು, ಈ ಫೋಟೋ ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆಯರ ಪಾತ್ರವನ್ನು ಎತ್ತಿ ತೋರಿಸುತ್ತದೆ.

ಬೆಂಗಳೂರು, ಏಪ್ರಿಲ್ 10: ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ ಲಿಮಿಟೆಡ್ (ITI) ಸ್ವಾತಂತ್ರ್ಯ ನಂತರ ಸ್ಥಾಪಿತವಾದ ಮೊದಲ ಸಾರ್ವಜನಿಕ ವಲಯ ಉದ್ಯಮವಾಗಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ ಲಿಮಿಟೆಡ್ನ (Telephone Industries) ಒದೊಂದು ಅಪರೂಪದ ಫೋಟೋ ಭಾರಿ ವೈರಲ್ ಆಗುತ್ತಿದೆ. ಬೆಂಗಳೂರು ಮೂಲದ ಐಟಿಐ ಸಂಸ್ಥೆಯ 1950ರ ದಶಕದ ಕಪ್ಪು ಬಿಳುಪಿನ ಅಪರೂಪದ ಫೋಟೋ ಇದಾಗಿದ್ದು, ಸೀರೆಯುಟ್ಟ ಮಹಿಳೆಯರು ತಮ್ಮ ಕೆಲಸದಲ್ಲಿ ತೊಡಗಿರುವುದನ್ನು ಕಾಣಬಹುದು.
ಇಂಡಿಯನ್ ಹಿಸ್ಟರಿ ಪಿಕ್ಸ್ ಎಂಬ ಎಕ್ಸ್ ಖಾತೆಯೊಂದು ಬೆಂಗಳೂರಿನ ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ ಲಿಮಿಟೆಡ್ನಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರ 1950ರ ದಶಕದ ಕಪ್ಪು ಬಿಳುಪಿನ ಅಪರೂಪದ ಫೋಟೋವನ್ನು ಹಂಚಿಕೊಂಡಿದೆ. ಚಿತ್ರದಲ್ಲಿ ಸಾಂಪ್ರದಾಯಿಕ ಸೀರೆಯುಟ್ಟ ಮಹಿಳೆಯರು ಏಕಾಗ್ರತೆಯಿಂದ ದೂರವಾಣಿ ಘಟಕಗಳನ್ನು ಜೋಡಿಸುತ್ತಿರುವುದನ್ನು ಕಾಣಬಹುದಾಗಿದೆ.
ಇಂಡಿಯನ್ ಹಿಸ್ಟರಿ ಪಿಕ್ಸ್ ಟ್ವೀಟ್
1950s :: Ladies Assembling Telephones at Indian Telephone Industries , Bangalore pic.twitter.com/x108S7iLbv
— indianhistorypics (@IndiaHistorypic) April 9, 2025
ಈ ಒಂದು ಫೋಟೋ ಭಾರತದಲ್ಲಿ ಕೈಗಾರಿಕಾ ಯುಗದ ಆರಂಭಿಕ ದಿನಗಳನ್ನು ನೆನಪಿಸುವುದಲ್ಲದೆ, ಆ ದಶಕದಲ್ಲೂ ಮಹಿಳೆಯರು ತಾಂತ್ರಿಕ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿರುವುದನ್ನು ಕಾಣಬಹುದಾಗಿದೆ. ಮಹಿಳೆಯರು ಮನೆಯಿಂದ ಆಚೆ ಹೋಗುವುದೇ ದೊಡ್ಡ ಸವಾಲಾಗಿದ್ದ ಸಂದರ್ಭದಲ್ಲಿ ಸಾರ್ವಜನಿಕ ವಲಯದಲ್ಲಿ ಮಹಿಳೆಯರು ಕೆಲಸ ಮಾಡುತ್ತಿರುವುದನ್ನು ಈ ಫೋಟೋ ಎತ್ತಿ ತೋರಿಸುತ್ತದೆ.
ಇದನ್ನೂ ಓದಿ: ಇನ್ಮುಂದೆ ರೆವಿನ್ಯೂ ಸ್ವತ್ತುಗಳಿಗೂ ದೊರೆಯಲಿದೆ ನಕ್ಷೆ ಮಂಜೂರಾತಿ ಭಾಗ್ಯ: ಇಲ್ಲಿದೆ ಮಾಹಿತಿ
1948 ರಲ್ಲಿ ಸ್ಥಾಪನೆಯಾದ ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ ಲಿಮಿಟೆಡ್, ಭಾರತದ ಮೊದಲ ಸಾರ್ವಜನಿಕ ವಲಯದ ಉದ್ಯಮ (ಪಿಎಸ್‌ಯು) ಆಗಿತ್ತು. ಇದು ದೇಶದಲ್ಲಿ ದೂರಸಂಪರ್ಕ ಉಪಕರಣಗಳ ತಯಾರಿಕೆಯಲ್ಲಿ ಪ್ರಮುಖ ಪಾತ್ರವಹಿಸಿದ್ದು, ಭಾರತದ ದೂರಸಂಪರ್ಕ ಜಾಲದ ಅಡಿಪಾಯ ಹಾಕಿತು. ಈ ಫೋಟೋ ನೋಡುತ್ತಿದ್ದರೆ ಆ ಕಾಲದಲ್ಲೂ ಮಹಿಳೆಯರು ರಾಷ್ಟ್ರ ನಿರ್ಮಾಣಕ್ಕೆ ಸದ್ದಿಲ್ಲದೆ ತಮ್ಮ ಕೊಡುಗೆಯನ್ನು ನೀಡುತ್ತಿದ್ದರು ಎಂಬುದು ಸ್ಪಷ್ಟವಾಗುತ್ತದೆ.
ಈ ಕಪ್ಪು ಬಿಳುಪಿನ ಅಪರೂಪದ ಫೋಟೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಬಗೆಬಗೆಯಾಗಿ ಕಮೆಂಟ್ ಮೂಲಕ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಓರ್ವ ಎಕ್ಸ್ ಬಳಕೆದಾರರು, ‘ರಾಷ್ಟ್ರದ ಅಭಿವೃದ್ಧಿ ಹಿಂದೆ ಕಾಣದ ಕೈ ಎಂದು ಬರೆದುಕೊಂಡಿದ್ದಾರೆ. 1950ರ ದಶಕದಲ್ಲಿ ಜಗತ್ತು ಅಭಿವೃದ್ಧಿ ಬಗ್ಗೆ ಮಾತುಗಳನ್ನು ಕೇಳುತ್ತಿದ್ದಾಗ, ಅದನ್ನು ಒಂದೊಂದಾಗಿ ಒಟ್ಟುಗೂಡಿಸಿದವರು ಮಹಿಳೆಯರೇ ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಶಾಲಾ ಶುಲ್ಕವಾಯ್ತು, ಇದೀಗ ಶಾಲಾ ವಾಹನ ಶುಲ್ಕ ಏರಿಕೆ ಸರದಿ: ಕೇಳೋರಿಲ್ಲ ಪೋಷಕರ ಗೋಳು!
ಇನ್ನು ಈ ಚಿತ್ರವು ಹಿಂದಿನ ಕಥೆಯನ್ನು ಹೇಳುವುದಲ್ಲದೆ, ದಶಕಗಳ ಹಿಂದೆ ತಾಂತ್ರಿಕ ಮತ್ತು ನಿರ್ಮಾಣ ಕಾರ್ಯಗಳಲ್ಲಿ ಮಹಿಳೆಯರು ಹೇಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಎಂದು ಇಂದಿನ ಪೀಳಿಗೆ ಯೋಚಿಸುವಂತೆ ಮಾಡುತ್ತದೆ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.