ಪಿಯು ಪಠ್ಯ ಪರಿಷ್ಕರಣೆ ವಿವಾದ: ಸರ್ಕಾರಕ್ಕೆ ಮತ್ತೆ ಟಾಂಗ್ ಕೊಟ್ಟ ರೋಹಿತ್ ಚಕ್ರತೀರ್ಥ

ಶಿಕ್ಷಣ ಇಲಾಖೆಯ ನಡೆಯ ವಿರುದ್ಧ ರೋಹಿತ್ ಚಕ್ರತೀರ್ಥ ಅಸಮಧಾನ ಹೊರ ಹಾಕಿದ್ದಾರೆ.

ಪಿಯು ಪಠ್ಯ ಪರಿಷ್ಕರಣೆ ವಿವಾದ: ಸರ್ಕಾರಕ್ಕೆ ಮತ್ತೆ ಟಾಂಗ್ ಕೊಟ್ಟ ರೋಹಿತ್ ಚಕ್ರತೀರ್ಥ
ರೋಹಿತ್ ಚಕ್ರತೀರ್ಥ
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Sep 01, 2022 | 11:25 AM

ಬೆಂಗಳೂರು: ಪಠ್ಯ ಪರಿಷ್ಕರಣೆಯ ಮೆಗಾ ಜಟಾಪಟಿಯ ಬಳಿಕ ಮತ್ತೊಂದು ವಿವಾದ ಮುನ್ನೆಲೆಗೆ ಬಂದಿದೆ. ಪಿಯುಸಿಯ ಪಠ್ಯಗಳನ್ನು ಪರಿಷ್ಕರಣೆ ಮಾಡದ ಶಿಕ್ಷಣ ಇಲಾಖೆ ಕ್ರಮವನ್ನು ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷರಾಗಿದ್ದ ರೋಹಿತ್ ಚಕ್ರತೀರ್ಥ ಪ್ರಶ್ನಿಸಿದ್ದಾರೆ. ದ್ವಿತೀಯ ಪಿಯುಸಿಯ ಭಾರತದ ಇತಿಹಾಸ ಪಠ್ಯ ಪರಿಷ್ಕರಣೆ ಹೊಣೆಯನ್ನು ರೋಹಿತ್ ಚಕ್ರತೀರ್ಥ ಸಮಿತಿಗೆ ವಹಿಸಲಾಗಿತ್ತು. ಈ ಸಮಿತಿಯು ಪಿಯು ದ್ವಿತೀಯ ವರ್ಷದ ಅಧ್ಯಾಯ 4.2ರಲ್ಲಿರುವ ‘ಹೊಸ ಧರ್ಮಗಳ ಉದಯ’ ಪಠ್ಯಭಾಗವನ್ನು ಪರಿಷ್ಕರಣೆಗೆ ಶಿಫಾರಸು ಮಾಡಿ ವರದಿ ನೀಡಿತ್ತು.

ಈ ಪಠ್ಯದಲ್ಲಿ ನಿರ್ದಿಷ್ಟ ಸಮುದಾಯಗಳ ಭಾವನೆಗಳಿಗೆ ಧಕ್ಕೆಯಾಗುವಂತಹ ವಿಷಯಗಳಿರುವ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ಕೆಲ ಅಂಶಗಳನ್ನು ಪರಿಷ್ಕರಣೆ ಮಾಡಲಾಗಿತ್ತು. ರೋಹಿತ್ ಚಕ್ರತೀರ್ಥ ಸಮಿತಿಯ ಪಠ್ಯಪರಿಷ್ಕರಣೆಗೆ ತೀವ್ರ ವಿರೋಧ ಬಂದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು ರೋಹಿತ್ ಸಮಿತಿ ವಿಸರ್ಜನೆ ಮಾಡಿತ್ತು. ಆದರೆ ಈಗ ಪಿಯು ಪರಿಷ್ಕರಣೆಗೆ ನಿಗಧಿಯಾಗಿದ್ದ ಪಠ್ಯ ಪರಿಷ್ಕರಣೆಯಾಗದೆ ಹಾಗೆಯೇ ಉಳಿದುಕೊಂಡಿದೆ. ಅದೇ ಪಠ್ಯವನ್ನು ಮುದ್ರಣಕ್ಕೆ ಕಳಿಸಲು ಇಲಾಖೆ ಮುಂದಾಗಿದೆ.

ಶಿಕ್ಷಣ ಇಲಾಖೆಯ ನಡೆಯ ವಿರುದ್ಧ ರೋಹಿತ್ ಚಕ್ರತೀರ್ಥ ಅಸಮಧಾನ ಹೊರ ಹಾಕಿದ್ದಾರೆ. ಪಿಯು ಪಠ್ಯ ಪರಿಷ್ಕರಣೆಯಾಗಬೇಕು. ಈಗ ಇರುವ ಪಿಯು ಪಠ್ಯವು ಗೊಂದಲ ಸೃಷ್ಟಿಸುತ್ತಿದೆ. ಈಗಾಗಲೇ ಎಸ್ಎಸ್ಎಲ್​ಸಿ ಹಂತದವರೆಗೂ ಪಠ್ಯ ಪರಿಷ್ಕರಣೆಯಾಗಿದೆ. ಎಸ್ಎಸ್ಎಲ್​ಸಿ ಹಂತದಲ್ಲಿ ಸರಿಯಾದ ಅಂಶ ಕಲಿಯುತ್ತಾರೆ. ಆದರೆ ಪಿಯುಸಿಯಲ್ಲಿ ಪಠ್ಯ ಪರಿಷ್ಕರಣೆಯಾಗದ ಹಿನ್ನಲೆಯಲ್ಲಿ ತಪ್ಪು ಮಾಹಿತಿ ಕಲಿಯಬೇಕಾದ ಸ್ಥಿತಿ ಇದೆ. ಮಕ್ಕಳಿಗೆ ತಪ್ಪು ಮಾಹಿತಿ ಹೋಗುತ್ತಿದೆ ಎಂದು ಅವರು ಹೇಳಿದ್ದಾರೆ.

ಮುಗಿಯದ ವಿವಾದ

ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಸರ್ಕಾರವನ್ನು ಬಿಟ್ಟೂ ಬಿಡದೆ ಕಾಡುತ್ತಿದೆ. ಎಲ್ಲವೂ ಒಂದು ಹಂತಕ್ಕೆ ಬಂತು ಎನ್ನುವ ಹೊತ್ತಿಗೆ 8ನೇ ತರಗತಿಗೆ ಪಠ್ಯಪುಸ್ತಕವಾಗಿರುವ ಕೆ.ಟಿ.ಗಟ್ಟಿ ಅವರ ‘ಕಾಲವನ್ನು ಗೆದ್ದವರು’ ಬರಹದಲ್ಲಿದ್ದ ಕೋಣೆಯೊಳಗಿನ ಹಿಂಬದಿ ಗೋಡೆಯಲ್ಲಿ ಎತ್ತರದಲ್ಲಿ ಆಕಾಶ ಕೂಡ ಕಾಣಿಸದ, ಕಿಂಡಿ ಕೂಡ ಇಲ್ಲದ ಆ ಕತ್ತಲ ಕೋಣೆಯಲ್ಲಿ ಸಾವರ್ಕರ್‌ ಅವರನ್ನು ಇಡಲಾಗಿತ್ತು. ಆದರೂ, ಎಲ್ಲಿಂದಲೊ ಬುಲ್‌ಬುಲ್‌ ಹಕ್ಕಿಗಳು ಹಾರಿ ಸೆಲ್‌ನೊಳಗೆ ಬರುತ್ತಿದ್ದವು. ಅವುಗಳ ರೆಕ್ಕೆಯ ಮೇಲೆ ಕುಳಿತು ಸಾವರ್ಕರ್‌ ಪ್ರತಿದಿನ ತಾಯ್ನಾಡಿನ ನೆಲವನ್ನು ಸಂದರ್ಶಿಸಿ ಬರುತ್ತಿದ್ದರು’ ಸಾಲುಗಳು ವಿವಾದಕ್ಕೀಡಾಗಿದ್ದವು. ನಂತರ ಅರವಿಂದ ಚೊಕ್ಕಾಡಿ ಸೇರಿದಂತೆ ಹಲವು ಹಿರಿಯ ಸಾಹಿತಿಗಳು ‘ಇದು ಕಾವ್ಯ ಸತ್ಯ. ಅದರ ಆಶಯವನ್ನು ನಾವು ಗ್ರಹಿಸಬೇಕೇ ವಿನಃ ಪದಗಳ ಅರ್ಥವನ್ನು ಅಲ್ಲ. ಭಾವನೆಯನ್ನು ಗಮನಿಸಬೇಕು’ ಎಂದು ಸ್ಪಷ್ಟನೆ ನೀಡಿದ್ದರು.

Published On - 11:24 am, Thu, 1 September 22