ನಾನೂ ದೇವರತ್ರ ಹೋಗ್ತೀನಿ; ಕೊರೊನಾದಿಂದ ಅಮ್ಮನನ್ನು ಕಳೆದುಕೊಂಡು ಕಣ್ಣೀರಿಟ್ಟ ಮಗು, ಗೋಳಾಡಿದ ಅಪ್ಪ

ಬೆಂಗಳೂರಿನ ಕುಟುಂಬವೊಂದರಲ್ಲಿ ಮಾವ ಸೊಸೆ ಇಬ್ಬರೂ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಹೆಂಡತಿ ಮತ್ತು ತಂದೆ ಇಬ್ಬರನ್ನೂ ಕಳೆದುಕೊಂಡ ವ್ಯಕ್ತಿ ಪುಟ್ಟ ಮಗುವನ್ನು ಸಂತೈಸುತ್ತಿರುವ ದೃಶ್ಯ ಮನಕಲಕುವಂತಿದೆ. ನಾನೂ ದೇವರ ಬಳಿ ಹೋಗುತ್ತೇನೆ ಎಂಬ ಮಗುವಿನ ಮಾತು ಕಂಬನಿ ತರಿಸುತ್ತಿದೆ.

  • TV9 Web Team
  • Published On - 15:14 PM, 30 Apr 2021
ನಾನೂ ದೇವರತ್ರ ಹೋಗ್ತೀನಿ; ಕೊರೊನಾದಿಂದ ಅಮ್ಮನನ್ನು ಕಳೆದುಕೊಂಡು ಕಣ್ಣೀರಿಟ್ಟ ಮಗು, ಗೋಳಾಡಿದ ಅಪ್ಪ
ಕುಟುಂಬಸ್ಥರಿಂದ ಕಣ್ಣೀರು

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆಯಿಂದಾಗಿ ಉಂಟಾಗುತ್ತಿರುವ ಸಾವು ನೋವು ಎಂತಹ ಕಲ್ಲು ಹೃದಯವನ್ನೂ ಕರಗಿಸುವಂತಿದೆ. ವಯಸ್ಸಿನ ಭೇದಭಾವವಿಲ್ಲದೇ ಸೋಂಕಿತರು ಸಾವಿಗೀಡಾಗುತ್ತಿದ್ದು, ತಮ್ಮವರನ್ನು ಉಳಿಸಿಕೊಳ್ಳಲಾಗದೇ ಅಸಹಾಯಕತೆಯಿಂದ ಕಣ್ಣೀರಿಡುತ್ತಿರುವ ಕುಟುಂಬಸ್ಥರ ನೋವು ಮನಕಲಕುವಂತಿದೆ. ರಾಜ್ಯ ರಾಜಧಾನಿ ಬೆಂಗಳೂರಿನ ಕುಟುಂಬವೊಂದರಲ್ಲಿ ಮಾವ ಸೊಸೆ ಇಬ್ಬರೂ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಒಂದೆಡೆ ಹೆಂಡತಿ ಮತ್ತು ತಂದೆಯನ್ನು ಕಳೆದುಕೊಂಡು ವ್ಯಕ್ತಿ ಗೋಳಿಡುತ್ತಿದ್ದರೆ ಪಕ್ಕದಲ್ಲಿರುವ ಮಗು ಅಮ್ಮ ಮತ್ತು ಅಜ್ಜ ಇಬ್ಬರ ಸಾವನ್ನೂ ನೋಡಿ ಏನಾಗುತ್ತಿದೆಯೆಂದು ಗೊತ್ತಾಗದೇ ನಾನೂ ದೇವರ ಬಳಿ ಹೋಗ್ತೀನಿ ಎಂದು ಅಳುತ್ತಿರುವುದು ನೋಡುಗರ ಕರುಳು ಹಿಂಡುತ್ತಿದೆ.

ಕೊರೊನಾ ಸೋಂಕಿತರಾಗಿದ್ದ 65 ವರ್ಷದ ಮಾವ ಹಾಗೂ 29 ವರ್ಷದ ಸೊಸೆ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಏಪ್ರಿಲ್ 27ರಂದು ಚಿಕಿತ್ಸೆ ಫಲಕಾರಿಯಾಗದೇ ಸೊಸೆ ಮೃತಪಟ್ಟಿದ್ದು, ಇಂದು (ಏಪ್ರಿಲ್ 30) ಮಾವ ಕೂಡಾ ಕೊನೆಯುಸಿರೆಳೆದಿದ್ದಾರೆ. ಆದರೆ, ಈ ಇಬ್ಬರನ್ನೂ ಕಳೆದುಕೊಂಡ ವ್ಯಕ್ತಿ 7 ವರ್ಷದ ಮಗನನ್ನು ಬಗಲಲ್ಲಿ ಇಟ್ಟುಕೊಂಡು ಮೇಡಿ ಅಗ್ರಹಾರದ ಚಿತಾಗಾರದ ಬಳಿ ಆಕ್ರಂದಿಸುತ್ತಿರುವುದು ಎಂತಹ ಕಟು ಹೃದಯದವರೂ ಮರುಕಪಡುವಂತಿದೆ. ಅತ್ತ ಪುಟ್ಟ ಮಗು ಅಮ್ಮ ಎಲ್ಲಿ ಎಂದು ಕೇಳಿದಾಗ ಈ ವ್ಯಕ್ತಿ ದೇವರ ಬಳಿ ಹೋಗಿದ್ದಾರೆ ಎಂದು ಸಂತೈಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅದನ್ನು ಕೇಳಿದ ಮಗು ನಾನೂ ದೇವರ ಬಳಿ ಹೋಗುತ್ತೇನೆ ಎಂದಾಗ ಮತ್ತೆ ಮಗುವನ್ನು ತಬ್ಬಿ ಕಣ್ಣೀರಾಗುತ್ತಿದ್ದಾರೆ.

ಹೆಂಡತಿ ಮತ್ತು ತಂದೆ ಇಬ್ಬರನ್ನೂ ಕಳೆದುಕೊಂಡ ವ್ಯಕ್ತಿ ಈ ಬಗ್ಗೆ ಮಾತನಾಡುತ್ತಾ, ಆಸ್ಪತ್ರೆಗೆ ತೆರಳುವಾಗ ಇಬ್ಬರೂ ಚೆನ್ನಾಗಿಯೇ ಇದ್ರು. ರಿಕವರಿ ಆಗ್ತಿದ್ದಾರೆಂದು ವೈದ್ಯರೂ ಮಾಹಿತಿ ಕೊಟ್ರು. ಆದರೆ, ಈಗ ಒಬ್ಬರ ಹಿಂದೊಬ್ಬರು ಜೀವ ಬಿಟ್ಟಿದ್ದಾರೆ. ಆಸ್ಪತ್ರೆಗೆ ಅಡ್ಮಿಟ್‌ ಮಾಡಿದ್ರೆ ಅವ್ರ ಕಥೆ ಮುಗೀತು. ಚಿಕಿತ್ಸೆ ನೀಡಲು ಹಣಕ್ಕಾಗಿ ಆಸ್ಪತ್ರೆಯಲ್ಲಿ ಹಪಾಹಪಿ ಇದೆ. ಮೈಮೇಲಿನ ಚಿನ್ನಾಭರಣ ನೋಡಿ ಹಣ ಅಳೀತಾರೆ. ಕೈಮುಗಿದು ಕೇಳ್ಕೋತೀವಿ, ಯಾರೂ ಹೊರಗೆ ಬರ್ಬೇಡಿ. ನಮಗಾದ ಸ್ಥಿತಿ ಮತ್ಯಾರಿಗೂ ಬರದಿರಲಿ ಎಂದು ಕಣ್ಣೀರಿಡುತ್ತಲೇ ಮನವಿ ಮಾಡಿದ್ದಾರೆ.

ಆಸ್ಪತ್ರೆಯವರು ಹೆಣದ ಮೇಲೆ ಕೂತು ಊಟ ಮಾಡ್ತಿದ್ದಾರೆ. ದುಡ್ಡು ಕೊಟ್ರೂ ನಮಗೆ ಜೀವ ಸಿಗುವುದಿಲ್ಲ. ಕೊವಿಡ್‌ ಸೆಂಟರ್‌ನಲ್ಲಿ ಯಾರೂ ಸಿಸಿಟಿವಿ ಹಾಕಿಲ್ಲ. ಅಲ್ಲಿ ಚಿಕಿತ್ಸೆ ನೀಡುತ್ತಾರೋ ಇಲ್ವೋ ಗೊತ್ತಿಲ್ಲ. ಸೋಂಕಿತರಿಗೆ ಕಿರುಕುಳ ಎಂತ ಎಲ್ಲೆಡೆ ಸುದ್ದಿ ಕೇಳಿ ಬರ್ತಿದೆ. ಚಿಕಿತ್ಸೆ ನೀಡ್ತಿರೋ ಬಗ್ಗೆ ನಮಗೆ ಹೇಗೆ ಗೊತ್ತಾಗಬೇಕು? ಕೊವಿಡ್‌ ರೋಗಿಗಳು ಇರೋ ಕಡೆ ಸಿಸಿಟಿವಿ ಅಳವಡಿಸಿ ಎಂದು ಕುಟುಂಬಸ್ಥರು ಇದೇ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ. ಆಕ್ಸಿಜನ್ ಸರಿಯಾಗಿ ನೀಡಲ್ಲ, ಸ್ಯಾನಿಟೈಸ್‌ ಮಾಡ್ತಿಲ್ಲ. ಒಬ್ಬ ಸೋಂಕಿತನಿಗಾಗಿ ಗ್ಲೌಸ್‌, ಪಿಪಿಇ ಕಿಟ್‌ ಬಳಕೆ ಚಾರ್ಜ್‌ ಹಾಕ್ತಾರೆ. ಆದ್ರೆ, ಒಂದೇ ಪಿಪಿಇ ಕಿಟ್‌ ಧರಿಸಿ ಎಲ್ಲೆಡೆ ಓಡಾಡ್ತಾರೆ. ಹೀಗಾಗಿ ಗುಣಮುಖರಾದವ್ರಿಗೂ ಮತ್ತೆ ಸೋಂಕು ಹರಡುತ್ತೆ ಎಂದು ಕುಟುಂಬದ ಇಬ್ಬರನ್ನೂ ಕಳೆದುಕೊಂಡ ಸಂಬಂಧಿಗಳು ಚಿತಾಗಾರದಲ್ಲಿ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ:
ತಾಯಿಗೆ ಕೊರೊನಾ ಬಂದ್ರೆ ಎಳೆಕಂದಮ್ಮಗಳಿಗೆ ಎದೆಹಾಲುಣಿಸಲಿದ್ದಾರೆ ಬೆಂಗಳೂರಿನ ಅಮ್ಮಂದಿರು 

ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದ ಗರ್ಭಿಣಿ ವೈದ್ಯೆ ಕೊರೊನಾಗೆ ಬಲಿ