ಸೋಂಕಿತರ ಸಾವಿನ ವಿಚಾರದಲ್ಲಿ ಸರ್ಕಾರ ಸುಳ್ಳು ಹೇಳುತ್ತಿದೆ, ಸಿಎಂಗೆ ಸುದೀರ್ಘ ಪತ್ರ ಬರೆದು ನಿಖರ ಮಾಹಿತಿಗೆ ಒತ್ತಾಯಿಸಿದ ಸಿದ್ದರಾಮಯ್ಯ

ರಾಜ್ಯದಲ್ಲಿ ಕೊವಿಡ್ ಸಂಖ್ಯೆ ಕಡಿಮೆಯಾಗಿದೆ ಎಂದು ಸಿಎಂ ಮಾತಾಡ್ತಿದ್ದಾರೆ. ತಜ್ಞರ ಪ್ರಕಾರ ಕೊವಿಡ್ ಅಲೆ ಕಡಿಮೆಯಾಗುವುದೆಂದರೆ, ಟೆಸ್ಟ್ ನಡೆಸಿದಾಗ ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆಯಾಗಿರಬೇಕು. ವಾಸ್ತವದಲ್ಲಿ ರಾಜ್ಯದಲ್ಲಿ ಕೊವಿಡ್ ಪ್ರಮಾಣ ಹೆಚ್ಚಾಗುತ್ತಿದೆ.

ಸೋಂಕಿತರ ಸಾವಿನ ವಿಚಾರದಲ್ಲಿ ಸರ್ಕಾರ ಸುಳ್ಳು ಹೇಳುತ್ತಿದೆ, ಸಿಎಂಗೆ ಸುದೀರ್ಘ ಪತ್ರ ಬರೆದು ನಿಖರ ಮಾಹಿತಿಗೆ ಒತ್ತಾಯಿಸಿದ ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಕೊವಿಡ್ ಟೆಸ್ಟ್ ಮತ್ತು ಸೋಂಕಿತರ ಸಾವಿನ ವಿಚಾರದಲ್ಲಿ ರಾಜ್ಯ ಸರ್ಕಾರ ಸುಳ್ಳು ಹೇಳುತ್ತಿದೆ. ರಾಜ್ಯದಲ್ಲಿ ಕೊವಿಡ್ ಟೆಸ್ಟ್ ಸಂಖ್ಯೆ ಕೂಡಲೇ ಹೆಚ್ವಿಸಿ ಕೊವಿಡ್ನಿಂದಾದ ಮರಣಗಳನ್ನು ನಿಖರವಾಗಿ ದಾಖಲಿಸಬೇಕು ಎಂದು ಒತ್ತಾಯಿಸಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಿಎಂ ಬಿಎಸ್‌ ಯಡಿಯೂರಪ್ಪರಿಗೆ ಸುದೀರ್ಘ ಪತ್ರ ಬರೆದಿದ್ದಾರೆ.

ರಾಜ್ಯದಲ್ಲಿ ಕೊವಿಡ್ ಸಂಖ್ಯೆ ಕಡಿಮೆಯಾಗಿದೆ ಎಂದು ಸಿಎಂ ಮಾತಾಡ್ತಿದ್ದಾರೆ. ತಜ್ಞರ ಪ್ರಕಾರ ಕೊವಿಡ್ ಅಲೆ ಕಡಿಮೆಯಾಗುವುದೆಂದರೆ, ಟೆಸ್ಟ್ ನಡೆಸಿದಾಗ ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆಯಾಗಿರಬೇಕು. ವಾಸ್ತವದಲ್ಲಿ ರಾಜ್ಯದಲ್ಲಿ ಕೊವಿಡ್ ಪ್ರಮಾಣ ಹೆಚ್ಚಾಗುತ್ತಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಬಳ್ಳಾರಿ, ಹಾಸನ, ಮೈಸೂರು, ಬೆಳಗಾವಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಸೇರಿ ಹಲವು ಜಿಲ್ಲೆಗಳಲ್ಲಿ ಕೊವಿಡ್ ಪಾಸಿಟಿವಿಟಿ ದರ ಶೇಕಡಾ 50ಕ್ಕಿಂತ ಹೆಚ್ಚು ಇದೆ. ಇನ್ನುಳಿದ ಜಿಲ್ಲೆಗಳಲ್ಲಿ ಶೇಕಡಾ 35ರ ಆಸುಪಾಸಿನಲ್ಲಿ ಇದೆ.

ಶೇ.20ಕ್ಕಿಂತ ಕಡಿಮೆ ಒಂದೆರಡು ಜಿಲ್ಲೆಗಳಲ್ಲಿ ಮಾತ್ರ ಇದೆ. ಹೀಗಿದ್ದರೂ ಕೊರೊನಾ ಹೇಗೆ ಕಡಿಮೆಯಾಗುತ್ತಿದೆ ಅಂತಾರೆ. ಕೊರೊನಾ ಕಡಿಮೆಯಾಗುತ್ತಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಏಪ್ರಿಲ್‌ನಲ್ಲಿ ಕೊವಿಡ್ ಟೆಸ್ಟ್ ದಿನಕ್ಕೆ 1.75 ಲಕ್ಷ ಮಾಡ್ತಿದ್ರು. ಈಗ ದಿನಕ್ಕೆ 1.24 ಲಕ್ಷ ಕೊವಿಡ್ ಟೆಸ್ಟ್ ಮಾಡಲಾಗುತ್ತಿದೆ. ಈಗ ಕೊವಿಡ್ ಟೆಸ್ಟ್ ಶೇಕಡಾ 30ರಷ್ಟು ಕಡಿಮೆಯಾಗಿದೆ. ಲಸಿಕೆ ಪಡೆಯುವುದಕ್ಕೂ ಸೂಕ್ತ ವ್ಯವಸ್ಥೆಯನ್ನು ಮಾಡಿಲ್ಲ. ಲಸಿಕಾ ಕೇಂದ್ರದ ಬಳಿ ಕಿ.ಮೀ.ಗಟ್ಟಲೇ ಕ್ಯೂ ನಿಲ್ಲಬೇಕಾಗಿದೆ. ಪಡಿತರ ಅಂಗಡಿಗಳ ಮುಂದೆಯೂ ಕ್ಯೂ ನಿಲ್ಲುವಂತಾಗಿದೆ. ಇಂತಹ ಅವ್ಯವಸ್ಥೆಯಲ್ಲಿ ಹೇಗೆ ಕೊರೊನಾ ನಿಯಂತ್ರಿಸ್ತೀರಿ? ಸರ್ಕಾರದ ತಪ್ಪು ಮುಚ್ಚಿಕೊಳ್ಳಲು ಟೆಸ್ಟ್ ಮಾಡುತ್ತಿದ್ದಾರೆ. ಟೆಸ್ಟ್ ಕಡಿಮೆ ಮಾಡಿ ನಿಯಂತ್ರಣಕ್ಕೆ ಬಂದಿದೆ ಎನ್ನುತ್ತಿದ್ದಾರೆ. ಜೊತೆಗೆ ಲಸಿಕೆ ಉತ್ಪಾದನೆ ಹೆಚ್ಚಿಸುವಂತೆ ಸಿದ್ದರಾಮಯ್ಯ ಸಿಎಂಗೆ ಒತ್ತಾಯಿಸಿ ಪತ್ರ ಬರೆದಿದ್ದಾರೆ.

3 ತಿಂಗಳೊಳಗೆ ಮಕ್ಕಳಿಗೆ ಲಸಿಕೆ ಹಾಕಿ
ಪೇಟೆಂಟ್ ರದ್ದು ಮಾಡಿ ಹೆಚ್ಚು ಉತ್ಪಾದನೆಗೆ ಅವಕಾಶ ನೀಡಿ. ಹೆಚ್ಚು ಕಂಪನಿಗಳಿಗೆ ಉತ್ಪಾದನೆಗೆ ಅವಕಾಶ ನೀಡಿ ಎಂದಿದ್ದೆ. ಹಲವು ದಿನಗಳಿಂದ ಒತ್ತಾಯ ಮಾಡಿದೆ. ಈ ಕುರಿತು ನಾನು ಪ್ರಧಾನಮಂತ್ರಿಗಳಿಗೆ ಪತ್ರವನ್ನೂ ಬರೆದಿದ್ದೆ. ಇಷ್ಟೆಲ್ಲಾ ಆದ ಬಳಿಕ ಪ್ರತಿ ರಾಜ್ಯದಲ್ಲೂ ಲಸಿಕೆ ಉತ್ಪಾದನೆಗೆ ಅವಕಾಶ ನೀಡಬೇಕು. ಅಮೆರಿಕದಲ್ಲಿ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ನೀಡ್ತಿದ್ದಾರೆ. 3ನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ತೊಂದರೆ ಎಂದು ಹೇಳ್ತಿದ್ದಾರೆ. ಹೀಗಾಗಿ ಪೋಷಕರು ಹೆಚ್ಚು ಆತಂಕಕ್ಕೆ ಒಳಗಾಗುತ್ತಿದ್ದಾರೆ. ನಮ್ಮಲ್ಲಿಯೂ 3 ತಿಂಗಳೊಳಗೆ ಮಕ್ಕಳಿಗೆ ಲಸಿಕೆ ಹಾಕಬೇಕು ಎಂದು ಸಿಎಂ BSYಗೆ ಬರೆದ ಪತ್ರದಲ್ಲಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

‘ಕನಿಷ್ಠ ಸರ್ಕಾರ ಗರಿಷ್ಟ ಆಡಳಿತ’ ಎಂದು ಬುರುಡೆ ಬಿಟ್ಟಿದ್ದರು
ಇನ್ನು ಮೋದಿ ಸರ್ಕಾರ ‘ಕನಿಷ್ಠ ಸರ್ಕಾರ ಗರಿಷ್ಟ ಆಡಳಿತ’ ಎಂದು ಬುರುಡೆ ಬಿಟ್ಟು ಜನರನ್ನು ಯಾಮಾರಿಸಿದೆ. ಅವರ ಪಟಾಲಮ್ಮಿಗೆ ಈಗಲಾದರೂ ಅರ್ಥವಾಗಿರಬೇಕು. ದೇಶದ ರಕ್ಷಣೆಗೆ ಸರ್ಕಾರದ ಅಧೀನದಲ್ಲಿರುವ ಕಂಪನಿಗಳು, ಕಾರ್ಖಾನೆಗಳು ಮಾತ್ರ ನಿಲ್ಲುವುದೆಂದು ಅರ್ಥವಾಗಿರಬೇಕು. ಸಾರಾ ಸಗಟಾಗಿ ಸರ್ಕಾರದ ಅಧೀನದಲ್ಲಿದ್ದ ಕಾರ್ಖಾನೆ, ಕಂಪನಿ, ಸಂಸ್ಥೆಗಳನ್ನು ಕಾರ್ಪೊರೇಟ್ ಧಣಿಗಳಿಗೆ ಮಾರಿ ಸಂಪತ್ತು ದೋಚುವ ಭೀಕರ ಭ್ರಷ್ಟಾಚಾರಕ್ಕೆ ಅವಕಾಶ ಕೊಟ್ರಿ. ಆದರೆ ಈಗ ಒಬ್ಬರನ್ನೂ ನಿಯಂತ್ರಿಸಲು ಆಗದ ದುಸ್ಥಿತಿ ಇದೆ. ಒಬ್ಬ ವ್ಯಾಕ್ಸಿನ್ ತಯಾರಕನನ್ನು ನಿಯಂತ್ರಿಸಲು ಆಗುತ್ತಿಲ್ಲ. ಸಾರ್ವಜನಿಕ ಕಂಪನಿಗಳು ಖಾಸಗಿಯವರಿಗೆ ನೀಡಬಾರದು. ಠರಾವು ಮಾಡಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಒತ್ತಾಯಿಸಬೇಕು. ಕಳೆದ ವರ್ಷ ಹೃದಯಾಘಾತದಿಂದ 38,583 ಜನ ಮೃತಪಟ್ಟಿದ್ದಾರೆ. ವಯಸ್ಸಿನ ಕಾರಣಗಳಿಂದ 28,647 ಜನ ಮೃತಪಟ್ಟಿದ್ದಾರೆ. ಪ್ಯಾರಾಲಿಸಿಸ್‌ನಿಂದ 4,262ಕ್ಕೂ ಹೆಚ್ಚು ಜನರ ಸಾವು. ಕೊವಿಡ್‌ನಿಂದ 12,090 ಎಂದು ರಾಜ್ಯ ಸರ್ಕಾರ ಹೇಳ್ತಿದೆ. ಆದರೆ 22,320 ಜನ ಮೃತಪಟ್ಟಿರುವುದಾಗಿ ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯಿಂದ ಮಾಹಿತಿ ಇದೆ. 4 ಕಾಯಿಲೆಗಳಿಂದ ಕಳೆದ ವರ್ಷ ಹೆಚ್ಚು ಜನ ಮೃತಪಟ್ಟಿದ್ದಾರೆ. 2019ಕ್ಕೆ ಹೋಲಿಸಿದರೆ 93,812ಕ್ಕೂ ಹೆಚ್ಚು ಜನರ ಸಾವನ್ನಪ್ಪಿದ್ದಾರೆ.

ಇವು ಕೊರೊನಾ ಸಾವುಗಳು ಎನ್ನೋದರಲ್ಲಿ ಅನುಮಾನವಿಲ್ಲ. ಇಷ್ಟೆಲ್ಲಾ ಆಗುತ್ತಿದ್ದರೂ ನಮ್ಮಲ್ಲಿ ಸಾವುಗಳು ಕಡಿಮೆ ಎನ್ನುತ್ತಿದ್ದಾರೆ. ಪ್ರಧಾನಿ ಮೋದಿ, ಬಿಜೆಪಿ ಮುಖಂಡರು ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿ ಸುಳ್ಳು ಹೇಳುವುದಕ್ಕೆ ಸೋಷಿಯಲ್ ಮೀಡಿಯಾ ಎಂಬ ಕಾರ್ಖಾನೆಯನ್ನು ತೆರೆದಿದೆ. ಸರ್ಕಾರಗಳಿಗೆ ಧೈರ್ಯವಿದ್ದರೆ ಮರಣ ಪ್ರಮಾಣಪತ್ರ ಪ್ರಕಟಿಸಲಿ. ಈ ಎಲ್ಲ ಅಂಶಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರದ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ಮೇ 24ರವರೆಗೆ ಮುಂದುವರಿಯಲಿದೆ ಲಾಕ್‌ಡೌನ್, ಮೆಟ್ರೊ ಸೇವೆಗಳು ಬಂದ್: ಅರವಿಂದ ಕೇಜ್ರಿವಾಲ್