ಬೆಂಗಳೂರು ಮತ್ತು ಅಂಕೋರ್ ವಾಟ್ ದೇವಾಲಯವಿರುವ ಕಾಂಬೋಡಿಯಾಕ್ಕೆ ಶೀಘ್ರವೇ ಬೇಕಿದೆ ನೇರ ವಿಮಾನ ಸಂಪರ್ಕ, ಕಾರಣಗಳು ಹೀಗಿವೆ
KIA Bengaluru to Cambodia: ಬೆಂಗಳೂರಿನ ಹೊಸ ಅಂತರರಾಷ್ಟ್ರೀಯ ಟರ್ಮಿನಲ್ ಮತ್ತು ಕಾಂಬೋಡಿಯಾದ ಸೀಮ್ ರೀಪ್‌ನ ಹೊಸ ಟರ್ಮಿನಲ್ ನಡುವಣ ವಿಮಾನಯಾನ ಸಂಪರ್ಕವು ಆಯಕಟ್ಟಿನದ್ದಾಗಿದೆ ಎಂದು ಪರಿಗಣಿಸಲಾಗಿದ್ದು, ನೇರ ವಿಮಾನಗಳಿಗೆ ಸೂಕ್ತವೆನಿಸಿದೆ. ಕಾಂಬೋಡಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಭಾರತದಲ್ಲಿನ ಕಾಂಬೋಡಿಯನ್ ರಾಯಭಾರ ಕಚೇರಿ ಈ ವಿಮಾನ ಮಾರ್ಗಗಳಿಗಾಗಿ ಒಮ್ಮತ ಬೆಂಬಲ ವ್ಯಕ್ತಪಡಿಸಿವೆ.
ಭಾರತ ಮತ್ತು ಕಾಂಬೋಡಿಯಾ ರಾಷ್ಟ್ರಗಳ ಗೌರವ ಕಾನ್ಸುಲೇಟ್ ಕಚೇರಿಗಳು ಉಭಯ ದೇಶಗಳ ನಡುವೆ ನೇರ ವಿಮಾನ ಸಂಪರ್ಕದ ಅಗತ್ಯ ಬಹಳಷ್ಟಿದೆ ಎಂದು ಪ್ರತಿಪಾದಿಸಿವೆ. ಭಾರತ ಮತ್ತು ಕಾಂಬೋಡಿಯಾ ನಡುವೆ ನೇರ ವಿಮಾನಗಳ ಅವಶ್ಯಕತೆ ಬಹಳಷ್ಟಿದ್ದು, ಅದನ್ನು ಶೀಘ್ರವೇ ಕಾರ್ಯಗತಗೊಳಿಸಲು ಸಹ ಉತ್ಸುಕತೆ ತೋರಿವೆ. ಅದರ ಬಗ್ಗೆ ಸಮಾಲೋಚನಾ ಸಭೆಗಳನ್ನು ಆಯೋಜಿಸುವುದಕ್ಕೂ ಮುಂದಾಗಿವೆ. ಈ ಬಗ್ಗೆ ಬೆಂಗಳೂರಿನಲ್ಲಿ ಕಾಂಬೋಡಿಯಾದ ಗೌರವ ಕಾನ್ಸುಲ್ ಆಗಿರುವ ಕಾರ್ತಿಕ್ ತಲ್ಲಂ ಅವರು ಟಿವಿ9 ಜೊತೆ ಮಾಹಿತಿ ಹಂಚಿಕೊಂಡಿದ್ದು, ಬೆಂಗಳೂರಿನಿಂದ ಕಾಂಬೋಡಿಯಾಗೆ ನೇರ ವಿಮಾನ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇದನ್ನು ಆದ್ಯತೆಯನ್ನಾಗಿ ಪರಿಗಣಿಸುವುದಕ್ಕೆ ಇರುವ ಕಾರಣಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ.
ಪ್ರಸ್ತುತ, ಭಾರತ ಮತ್ತು ಕಾಂಬೋಡಿಯಾ ನಡುವೆ ಪ್ರಯಾಣಿಸಲು ಹತ್ತಿರದ ದೇಶವಾದ ಸಿಂಗಾಪುರ್, ಮಲೇಷ್ಯಾ ಅಥವಾ ಥೈಲ್ಯಾಂಡ್‌ಗೆ ಸಂಪರ್ಕ ಕಲ್ಪಿಸುವ ವಿಮಾನಗಳನ್ನು ಅವಲಂಬಿಸಬೇಕಾಗಿದೆ. ಇದು ಎಲ್ಲ ರೀತಿಯಲ್ಲೂ ಪ್ರಯಾಣಿಕರಿಗೆ ಹೊರೆಯಾಗಿದೆ. ಇನ್ನು ಕಾಂಬೋಡಿಯಾದಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿರುವ ರಿಲಯನ್ಸ್ ಇಂಡಸ್ಟ್ರೀಸ್, ಆದಿತ್ಯ ಬಿರ್ಲಾ ಗ್ರೂಪ್ ಮತ್ತು ಒಬೆರಾಯ್ ಹೋಟೆಲ್‌ಗಳಂತಹ ಹಲವಾರು ಫಾರ್ಚೂನ್ 500 ಕಂಪನಿಗಳು ಸಹ ಆ ದೇಶಕ್ಕೆ ಶೀಘ್ರವೇ ಪ್ರಯಾಣ ಬೆಳೆಸಲು ಬಯಸುತ್ತಿವೆ.
ಈ ನಿಟ್ಟಿನಲ್ಲಿ, ಭಾರತ- ಕಾಂಬೋಡಿಯಾ ನೇರ ವಿಮಾನಯಾನವನ್ನು ಸುಗಮಗೊಳಿಸುವುದು ಅವಶ್ಯಕವಾಗಿದೆ. ಬೆಂಗಳೂರಿನ ಹೊಸ ಅಂತರರಾಷ್ಟ್ರೀಯ ಟರ್ಮಿನಲ್ ಮತ್ತು ಕಾಂಬೋಡಿಯಾದ ಸೀಮ್ ರೀಪ್‌ನ ಹೊಸ ಟರ್ಮಿನಲ್ ನಡುವಣ ವಿಮಾನಯಾನ ಸಂಪರ್ಕವು ಆಯಕಟ್ಟಿನದ್ದಾಗಿದೆ ಎಂದು ಪರಿಗಣಿಸಲಾಗಿದ್ದು, ನೇರ ವಿಮಾನಗಳಿಗೆ ಸೂಕ್ತವೆನಿಸುತ್ತದೆ. ಕಾಂಬೋಡಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಭಾರತದಲ್ಲಿನ ಕಾಂಬೋಡಿಯನ್ ರಾಯಭಾರ ಕಚೇರಿ ಈ ವಿಮಾನ ಮಾರ್ಗಗಳಿಗಾಗಿ ಒಮ್ಮತ ಬೆಂಬಲ ವ್ಯಕ್ತಪಡಿಸಿವೆ.
ವೈಮಾನಿಕ ಮಾರುಕಟ್ಟೆಯ ನಾಡಿಮಿಡಿತ ಬಲ್ಲ BIAL ಉಪಾಧ್ಯಕ್ಷ ಪಿಂಟೊ ಹೇಳುವುದೇನು?: ರವೀನ್ ಪಿಂಟೊ, ಉಪಾಧ್ಯಕ್ಷ, ಏವಿಯೇಷನ್ ಬಿಸಿನೆಸ್, BIAL ಬೆಂಗಳೂರು ಅವರು ಕಾಂಬೋಡಿಯಾಗೆ ನೇರ ವಿಮಾನ ಸಂಪರ್ಕ ಕಲ್ಪಿಸುವ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಪ್ರಸ್ತುತ ವೈಮಾನಿಕ ಮಾರುಕಟ್ಟೆಯ ನಾಡಿಮಿಡಿತವನ್ನು ಚೆನ್ನಾಗಿ ಅರ್ಥೈಸಿಕೊಂಡಿದ್ದಾರೆ. ಭಾರತೀಯರು ಅಲ್ಪಾವಧಿಯ ಪ್ರವಾಸಿ ತಾಣಗಳನ್ನು ಹುಡುಕುತ್ತಿದ್ದಾರೆ. ಅಂತಹ ಯೋಜನೆಯಲ್ಲಿ ಕಾಂಬೋಡಿಯಾ ಸೂಕ್ತವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿರುವುದು ಗಮನಾರ್ಹವಾಗಿದೆ. ಈ ನಿಟ್ಟಿನಲ್ಲಿಇಂಡಿಗೋ, ಏರ್ ಇಂಡಿಯಾ ಮತ್ತು ಕಾಂಬೋಡಿಯಾ ಏರ್‌ನೊಂದಿಗೆ ಮಾತುಕತೆಯೂ ನಡೆಯುತ್ತಿದೆ.
1. ಧಾರ್ಮಿಕ-ಸಾಂಸ್ಕೃತಿಕ ಅಂಶಗಳು: ಭಾರತದ ಸಾಂಸ್ಕೃತಿಕ ಪರಂಪರೆ ಮತ್ತು ನಾಗರಿಕತೆ ಕೇವಲ ಉಪಖಂಡಕ್ಕೆ ಸೀಮಿತವಾಗಿಲ್ಲ. ಅದರಾಚೆಗೂ ಸ್ಪಷ್ಟವಾಗಿ ವಿಸ್ತರಿಸಿದೆ. ಉಪಖಂಡದಲ್ಲಿ ತನ್ನ ಸಾಂಸ್ಕೃತಿಕ ಅಸ್ತಿತ್ವವನ್ನು ಬಲಪಡಿಸುವ ನಿಟ್ಟಿನಲ್ಲಿ ಭಾರತವು ಗಮನಾರ್ಹ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇವುಗಳಲ್ಲಿ ಅತ್ಯಂತ ಮಹತ್ವದ್ದಾಗಿರುವುದು ಬೌದ್ಧ ಸರ್ಕ್ಯೂಟ್ ಜೋಡಣೆ (Buddhist Circuit). ಬುದ್ಧನ ಜೀವನ ಮತ್ತು ಬೋಧನೆಗಳ ಮೇಲೆ ಪ್ರಭಾವ ಬೀರುವ ಎಲ್ಲಾ ಸ್ಥಳಗಳನ್ನು ಈ ಬೌದ್ಧ ಸರ್ಕ್ಯೂಟ್ ಒಳಗೊಂಡಿದೆ.
ಕಾಂಬೋಡಿಯಾದ ಜನಸಂಖ್ಯೆಯಲ್ಲಿ ಶೇ. 97 ರಷ್ಟು ಜನರು ಬೌದ್ಧ ಧರ್ಮವನ್ನು (Buddhism) ಅನುಸರಿಸುತ್ತಾರೆ. ಹಾಗಾಗಿ, ಕಾಂಬೋಡಿಯಾದಲ್ಲಿರುವ ಬೌದ್ಧರು ತಮ್ಮ ಧರ್ಮದ ಪ್ರಮುಖ ದೇವಾಲಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವುದನ್ನು ನಿರೀಕ್ಷಿಸುವುದು ಅತಿಶಯೋಕ್ತಿ ಎನಿಸುವುದಿಲ್ಲ. ಆದರೆ ಈ ಅವಕಾಶವನ್ನು ಸಾಕಾರಗೊಳಿಸುವಲ್ಲಿ ನೇರ ವಿಮಾನಗಳ ಕೊರತೆ (lack of direct flights) ಪ್ರಮುಖ ಅಡಚಣೆಯಾಗಿದೆ ಎಂಬುದು ಎದ್ದುಕಾಣುತ್ತಿದೆ.
ಅಂದಹಾಗೆ, ವಿಶ್ವದ ಅತಿದೊಡ್ಡ ಅಂಕೋರ್ ವಾಟ್ ದೇವಾಲಯವು (Angkor Wat Temple) ವಿಶ್ವ ಪರಂಪರೆಯ ತಾಣವೆನಿಸಿದ್ದು, ಕಾಂಬೋಡಿಯಾದ ಸೀಮ್ ರೀಪ್‌ನಲ್ಲಿದೆ (Siem reap). ಈ ದೇವಾಲಯವು ಹಿಂದೂ ಧರ್ಮದ ಮೂರು ಪ್ರಮುಖ ದೇವರುಗಳಾದ ಶಿವ, ಬ್ರಹ್ಮ ಮತ್ತು ವಿಷ್ಣುವಿನ ವಿಗ್ರಹಗಳಿಗೆ ನೆಲೆಯಾಗಿದೆ. ಈ ದೇವಾಲಯದ ಗೋಡೆಗಳು ಹಿಂದೂ ಧರ್ಮಗ್ರಂಥಗಳಲ್ಲಿನ ಬರಹಗಳಿಂದ ಆವರಿಸಲ್ಪಟ್ಟಿದೆ. ಹಿಂದೂ ಧರ್ಮದ ಎರಡು ಮೂಲ ಗ್ರಂಥಗಳಾದ ಮಹಾಭಾರತ ಮತ್ತು ರಾಮಾಯಣದ ದೃಶ್ಯಾವಳಿಗಳೂ ಇಲ್ಲಿ ಕೆತ್ತಲ್ಪಟ್ಟಿವೆ.
ಈ ಮಧ್ಯೆ, ಭಾರತ ಸರ್ಕಾರವು ಸುಮಾರು $ 5.5 ಮಿಲಿಯನ್ ವೆಚ್ಚದಲ್ಲಿ ಬೃಹದಾದ ಈ ದೇವಾಲಯವನ್ನು ಪುನರ್ಸ್ಥಾಪಿಸುವ ಪ್ರಯತ್ನಗಳನ್ನು ಕೈಗೊಂಡಿದೆ. ಅಂಕೋರ್ ವಾಟ್‌ನಲ್ಲಿರುವ ತಾ ಪ್ರೋಮ್ ದೇವಾಲಯದಲ್ಲಿ ಆಕರ್ಷಕ ಹಾಲ್ ಆಫ್ ಡ್ಯಾನ್ಸರ್ಸ್ ವೇದಿಕೆ ಈಗ ಸಾರ್ವಜನಿಕರಿಗೆ ಮುಕ್ತವಾಗಿದೆ. ಇದರ ಸಮ್ಮುಖದಲ್ಲಿ ನೇರ ವಿಮಾನಗಳು ಲಭ್ಯವಾಗತೊಡಗಿದರೆ ಭಾರತೀಯರು ಈ ದೇವಾಲಯಕ್ಕೆ ಭೇಟಿ ನೀಡಲು ಹೆಚ್ಚು ಆಸಕ್ತಿ ವಹಿಸಬಹುದು. ವಿಶೇಷವಾಗಿ ಭಾರತದಿಂದ ಹಿಂದೂ ಸಮುದಾಯದವರು ತಮ್ಮಿಚ್ಛೆಯಂತೆ ಹೆಚ್ಚಿನ ಸಂಖ್ಯೆಯಲ್ಲಿ ಕಾಂಬೋಡಿಯಾಕ್ಕೆ ಪ್ರಯಾಣಿಸಲು ಸಾಧ್ಯವಾಗುತ್ತದೆ.
2. ನೇರ ವಿಮಾನ ಇಲ್ಲದಿರುವುದು ಆರ್ಥಿಕವಾಗಿ ಬಹಳಷ್ಟು ಹೊರೆಯಾಗಿದೆ: ಪ್ರಸ್ತುತ, ಭಾರತ ಮತ್ತು ಕಾಂಬೋಡಿಯಾ ನಡುವೆ ಪ್ರಯಾಣಿಸಲು ಹತ್ತಿರದ ದೇಶಗಳಾದ ಸಿಂಗಾಪುರ, ಮಲೇಷ್ಯಾ ಅಥವಾ ಥೈಲ್ಯಾಂಡ್‌ಗೆ ಸಂಪರ್ಕ ಕಲ್ಪಿಸುವ ವಿಮಾನಗಳನ್ನು ಅವಲಂಬಿಸಬೇಕಾಗಿದೆ. ಇದರಿಂದ ನಮ್ಮ ಆರ್ಥಿಕತೆಯ ಮೇಲೆ ದೊಡ್ಡ ಹೊರೆ ಬೀಳುತ್ತಿದೆ. ಭಾರತದಿಂದ ಕಾಂಬೋಡಿಯಾಕ್ಕೆ ನೇರ ವಿಮಾನಗಳ ಕೊರತೆಯಿಂದಾಗಿ ಸಿಂಗಾಪುರ ಅಥವಾ ಥೈಲ್ಯಾಂಡ್ ಮೂಲಕ ಹೆಚ್ಚು‘ವರಿ’ ಮೈಲುಗಳನ್ನು ಪ್ರಯಾಣಿಸುವ ಅನಿವಾರ್ಯತೆಯಿದೆ. ನಾಟಿಕಲ್ ಮೈಲ್ ಟು ನಾಟಿಕಲ್ ಮೈಲ್ ವಿವರ ಹೀಗಿದೆ.
ನವದೆಹಲಿಯಿಂದ ಸಿಂಗಾಪುರ- 2241 nm, ಸಿಂಗಾಪುರದಿಂದ ನಾಮ್ ಪೆನ್- 610 nm, ನವದೆಹಲಿಯಿಂದ ಬ್ಯಾಂಕಾಕ್- 1591 nm, ಬ್ಯಾಂಕಾಕ್ ನಿಂದ ನಾಮ್ ಪೆನ್- 272 nm, ನವದೆಹಲಿಯಿಂದ ಕೌಲಾಲಂಪುರ- 2089 nm, ಕೌಲಾಲಂಪುರದಿಂದ ನಾಮ್ ಪೆನ್- 558 nm ಮತ್ತು ನವದೆಹಲಿಯಿಂದ ನಾಮ್ ಪೆನ್- 1860 ನಾಟಿಕಲ್ ಮೈಲ್ ದೂರದಲ್ಲಿದೆ. ವಾಸ್ತವವಾಗಿ ಇದು ನಿಜಕ್ಕೂ ಹೆಚ್ಚು‘ವರಿ’ಯಾಗಿದೆ.
ಪ್ರತಿ ನಾಟಿಕಲ್ ಮೈಲು ಹಾರಾಟಕ್ಕೆ ವೈಮಾನಿಕ ಇಂಧನದ ಖರ್ಚು ಬಾಬತ್ತು ದುಬಾರಿಯಅಗಿದ್ದು, ಉಭಯ ರಾಷ್ಟ್ರಗಳ ನಡುವೆ ನೇರ ವಿಮಾನಗಳ ಕೊರತೆಯಿಂದಾಗಿ 2022-23ನೇ ಹಣಕಾಸು ವರ್ಷದಲ್ಲಿ ಭಾರತಕ್ಕೆ 18,184 ಕೋಟಿ ರೂಪಾಯಿಗಳಷ್ಟು ಹೆಚ್ಚು‘ವರಿ’ ವೆಚ್ಚ ತಗುಲಿದೆ. ಮತ್ತೊಂದು ಅಂಶವೆಂದರೆ ಜಾಗತಿಕಮಟ್ಟದಲ್ಲಿ ಆರ್ಥಿಕ ಹಿಂಜರಿತವಿದೆ. ಹಾಗಾಗಿ ಅಧಿಕ ಇಂಧನದಿಂದಾಗುವ ನಷ್ಟವನ್ನು ತಪ್ಪಿಸಲು ನೇರ ವಿಮಾನಯಾನ ಅಗತ್ಯ ಬಹಳಷ್ಟಿದೆ. ಪ್ರಯಾಣಿಕರಿಗೆ ತಗಲುವ ಹೆಚ್ಚು‘ವರಿ’ ವೆಚ್ಚಗಳನ್ನು ತಪ್ಪಿಸಿ, ವಿದೇಶಿ ವಿನಿಮಿಯವನ್ನು ತಗ್ಗಿಸಬಹುದಾಗಿದೆ.
3. ಹಾಲಿ ಪ್ರಯೋಜನಗಳು ಏನೆಂದರೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯಿರುವ ಹೊಸ ವಿಮಾನ ನಿಲ್ದಾಣ ಹಾಗೂ ಕಾಂಬೋಡಿಯಾದ ಮುಂಬರುವ ಸೀಮ್ ರೀಪ್ ವಿಮಾನ ನಿಲ್ದಾಣವು ವಾಸ್ತವವಾಗಿ ಈಗ ಅಸ್ತಿತ್ವದಲ್ಲಿರುವ ಪ್ರಯಾಣದ ಮಾರ್ಗಗಳಲ್ಲಿ ಹೆಚ್ಚುವರಿ ವಿಮಾನಗಳನ್ನು ಅಳವಡಿಸಿಕೊಳ್ಳುವುದಕ್ಕೆ ಹಾತೊರೆಯುತ್ತಿವೆ. ಹಾಗಾಗಿ ಬೆಂಗಳೂರು ಮತ್ತು ಸೀಮ್ ರೀಪ್ ನಡುವೆ ಬಹು ಅಪೇಕ್ಷಿತ ಹೊಸ ವಿಮಾನ ಯಾನಗಳನ್ನು ಸೇರಿಸುವುದಕ್ಕೆ ಇದು ಸಕಾಲವಾಗಿದೆ. ಅಷ್ಟೇ ಅಲ್ಲ, ಉಭಯ ನಿಲ್ದಾಣಗಳ ಮಧ್ಯೆ ನೇರ ವಿಮಾನಗಳನ್ನು ಕಲ್ಪಿಸುವುದರ ಮೂಲಕ ಇನ್ನೂ ಅನೇಕ ಪ್ರಯೋಜನಗಳನ್ನು ನಿರೀಕ್ಷಿಸಬಹುದಾಗಿದೆ. ಅವು ಹೀಗಿವೆ:
1. ಶಿಕ್ಷಣ ಪ್ರವಾಸೋದ್ಯಮ ಕಾಂಬೋಡಿಯಾದ ಶಿಕ್ಷಣ ವ್ಯವಸ್ಥೆಯು ವೃತ್ತಿಪರ ಮತ್ತು ತಾಂತ್ರಿಕ ಕೌಶಲ್ಯಗಳ ಕೊರತೆ, ಕಳಪೆ ತರಬೇತಿ ಪಡೆದ ಸಿಬ್ಬಂದಿ ಮತ್ತು ಅಕಾಡೆಮಿ-ಇಂಡಸ್ಟ್ರಿ ಅಂತರ ಹೆಚ್ಚಳದಂತಹ ಸಮಸ್ಯೆಗಳಿಂದ ಬಳಲುತ್ತಿದೆ. ಇಂತಹ ದುರ್ಭರ ಪರಿಸ್ಥಿತಿಯ ಪ್ರಯೋಜನ ಪಡೆದು ಭಾರತೀಯ ವಿಶ್ವವಿದ್ಯಾನಿಲಯಗಳು ಮತ್ತು ಇಲ್ಲಿನ ನುರಿತ ವೃತ್ತಿಪರರು ಕಾಂಬೋಡಿಯಾಕ್ಕೆ ಅಗತ್ಯ ತರಬೇತಿ ಮತ್ತು ತಂತ್ರಜ್ಞಾನಗಳ ವರ್ಗಾವಣೆ ಮಾಡಬಹುದು. ಇದರಿಂದ ಭಾರತೀಯರಿಗೆ ಉದ್ಯೋಗಾವಕಾಶಗಳು ಹೆಚ್ಚಲಿದೆ. ಮತ್ತು ಹಣಕಾಸು ಆದಾಯಗಳನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಭಾರತೀಯ ವಿಶ್ವವಿದ್ಯಾನಿಲಯಗಳಲ್ಲಿ ಕಲಿಯುತ್ತಿರುವ ಕಾಂಬೋಡಿಯಾದ ವಿದ್ಯಾರ್ಥಿಗಳು ಅಥವಾ ಕಾಂಬೋಡಿಯಾದಲ್ಲಿ ಶಿಕ್ಷಕರಿಗೆ ತರಬೇತಿ ನೀಡುವ ಭಾರತೀಯ ವೃತ್ತಿಪರರು ಆಸಿಯಾನ್-ಭಾರತ ಸಂಬಂಧಗಳ (ASEAN-India relations) ಪ್ರಮುಖ ಆಧಾರಸ್ತಂಭವಾಗಬಹುದು.
2. ವೈದ್ಯಕೀಯ ಪ್ರವಾಸೋದ್ಯಮ: ಭಾರತದ ವೈದ್ಯಕೀಯ ಸೇವೆಗಳು ಉನ್ನತ ಗುಣಮಟ್ಟದ್ದಾಗಿದ್ದು, ಕೈಗೆಟುಕುವ ದರದಲ್ಲಿಯೂ ಇವೆ. ಇಲ್ಲಿರುವ ಮೂಲಸೌಕರ್ಯ, ತಾಂತ್ರಿಕ ಜ್ಞಾನ, ತಾಂತ್ರಿಕ ಸೇವೆಗಳು ಮತ್ತು ಅರ್ಹ ವೈದ್ಯರು ವೈದ್ಯಕೀಯ ಪ್ರವಾಸೋದ್ಯಮಕ್ಕೆ ಪ್ರಮುಖ ಕೊಂಡಿ- ಕೊಡುಗೆಯಾಗಬಲ್ಲರು. ಇದು ಕಾಂಬೋಡಿಯಾಕ್ಕೆ ಅತ್ಯಂತ ಆಕರ್ಷಕವಾಗಿದೆ. ಹಾಗಾಗಿ ಕಾಂಬೋಡಿಯಾದ ರೋಗಿಗಳು ಪ್ರಸ್ತಾವಿತ ನೇರ ವಿಮಾನಯಾನ ಸೌಲಭ್ಯದಿಂದ ಅಪಾರ ಲಾಭ ಪಡೆಯಬಹುದಾಗಿದೆ.
3. ಕೈಗಾರಿಕಾ ವಿನಿಮಯ: ಭಾರತ ಮತ್ತು ಕಾಂಬೋಡಿಯಾ ನಡುವಣ ವ್ಯಾಪಾರ ಮತ್ತು ಉದ್ಯಮ ರಂಗವು ವಿಫುಲ ಅವಕಾಶಗಳು ಮತ್ತು ಸಾಮರ್ಥ್ಯವನ್ನು ಹೊಂದಿದೆ. ಜವಳಿ, ಕೃಷಿ ಉತ್ಪನ್ನಗಳು ಮತ್ತು ಕೃಷಿ ಸಂಸ್ಕರಣಾ ಘಟಕಗಳು, ಚರ್ಮದ ಸರಕುಗಳು, ಬೈಸಿಕಲ್ ಉತ್ಪನ್ನಗಳು, ಪಾದರಕ್ಷೆಗಳು, ಐಟಿ ಮತ್ತು ಐಟಿ-ಆಧಾರಿತ ಸೇವೆಗಳಂತಹ ಹಲವಾರು ಕ್ಷೇತ್ರಗಳು ಉಭಯ ದೇಶಗಳ ನಡುವಿನ ವ್ಯವಹಾರಕ್ಕೆ ನಿರ್ಣಾಯಕ ಕ್ಷೇತ್ರಗಳಾಗಿವೆ.
4. ಆಯಕಟ್ಟಿನ ಕಾರ್ಯತಂತ್ರ: ಈ ಔದ್ಯಮಿಕ ವಿನಿಮಯಗಳು ಮತ್ತು ಜನರ ನಡುವಣ ಸಂಪರ್ಕ ಸಾಧ್ಯತೆಗಳು ಭಾರತದ ಸಾಫ್ಟ್ ಪವರ್ ಅನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ಇಂಡೋ-ಪೆಸಿಫಿಕ್‌ನಲ್ಲಿ ತನ್ನ ಹಿತಾಸಕ್ತಿಗಳನ್ನು ವೃದ್ಧಿಸಿಕೊಳ್ಳಲು ಸಹ ಭಾರತಕ್ಕೆ ಉತ್ತಮ ಅವಕಾಶ ಕಲ್ಪಿಸುತ್ತದೆ. ವಿಯೆಟ್ನಾಂ ಅಂತಹ ದೇಶಗಳೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಆಗ್ನೇಯ ಏಷ್ಯಾದ ಕಡಲತೀರದ ದೇಶ ಕಾಂಬೋಡಿಯಾಕ್ಕೆ ಇದು ಅಗಾಧ ಪ್ರಮಾಣದಲ್ಲಿ ನೆರವಾಗುತ್ತದೆ. ಈ ಮಹತ್ವಾಕಾಂಕ್ಷಿ ಆಗಸ ಸಂಪರ್ಕದಿಂದ ಭಾರತ-ಕಾಂಬೋಡಿಯಾ ಸಂಬಂಧಗಳು ವೃದ್ಧಿಸಲ್ಪಟ್ಟು, ಪೂರ್ವದತ್ತ ಮುಖಮಾಡಬೇಕೆಂಬ ಭಾರತದ ನೀತಿಯನ್ನು ಬಲಪಡಿಸುತ್ತದೆ ಎಂಬುದು ದಾಖಲಾರ್ಹ ಸಂಗತಿಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:54 pm, Fri, 1 March 24