ಬೆಂಗಳೂರಿನಲ್ಲಿ ನಿಲ್ಲದ ಪ್ರತಿಭಟನೆ ಕಾವು: ನಾಳೆಯಿಂದ ಮೂರು ದಿನ ವಿವಿಧ ಸಂಘಟನೆಗಳ ಧರಣಿ

ನಾಳೆ ಪುನಃ ಬಿಸಿಯೂಟ ಕಾರ್ಯಕರ್ತೆಯರಿಂದ ಪ್ರತಿಭಟನೆ ನಡೆಯಲಿದ್ದು, ನಾಳೆಯೂ ಕೂಡ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ಮೆರವಣಿಗೆ ಇದೆ.

  • TV9 Web Team
  • Published On - 18:20 PM, 2 Mar 2021
ಬೆಂಗಳೂರಿನಲ್ಲಿ ನಿಲ್ಲದ ಪ್ರತಿಭಟನೆ ಕಾವು: ನಾಳೆಯಿಂದ ಮೂರು ದಿನ ವಿವಿಧ ಸಂಘಟನೆಗಳ ಧರಣಿ
ಸಂಗ್ರಹ ಚಿತ್ರ

ಬೆಂಗಳೂರು: ನಗರದಲ್ಲಿ ಇನ್ನೂ 3 ದಿನಗಳ ಕಾಲ ಸಾಲುಸಾಲು ಪ್ರತಿಭಟನೆ ನಡೆಯಲಿದ್ದು, ಇಂದಿಗೆ ಧರಣಿ ನಿಲ್ಲುವುದಿಲ್ಲ. ಬದಲಾಗಿ ಸರ್ಕಾರದ ವಿರುದ್ಧ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಲು ಸಜ್ಜಾಗಿವೆ. ಇಂದು ಮೂರು ಪ್ರತ್ಯೇಕ ಪ್ರತಿಭಟನೆಗಳ ಬಿಸಿ ನಗರಕ್ಕೆ ತಟ್ಟಿತ್ತು. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ನಡೆಸುತ್ತಿರುವ ಪ್ರತಿಭಟನೆ, ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್​ ಪಕ್ಷದ ಪ್ರತಿಭಟನೆ ಮತ್ತು ಬೇಡಿಕೆ ಈಡೇರಿಕೆಗೆ ಪಟ್ಟು ಹಿಡಿದು ಸಾರಿಗೆ ನೌಕರರ ಪ್ರತಿಭಟನೆ ನಗರದಲ್ಲಿ ಮುಂದುವರಿದಿದೆ.

ಇನ್ನು ನಾಳೆ ಪುನಃ ಬಿಸಿಯೂಟ ಕಾರ್ಯಕರ್ತೆಯರಿಂದ ಪ್ರತಿಭಟನೆ ನಡೆಯಲಿದೆ. ನಾಳೆಯೂ ಕೂಡ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್​ವರೆಗೆ ಮೆರವಣಿಗೆ ಇದೆ. ಈ ಹಿನ್ನೆಲೆಯಲ್ಲಿ ಮತ್ತೆ ನಾಳೆ ಬೆಂಗಳೂರಿನ ಹಲವೆಡೆ ವಾಹನ ಸಂಚಾರ ಅಸ್ತವ್ಯಸ್ತವಾಗಿ ಟ್ರಾಫಿಕ್ ಜಾಮ್​ನಿಂದ ಜನಸಾಮಾನ್ಯರು ಕಿರಿಕಿರಿ ಅನುಭವಿಸುವಂತಹ ಸ್ಥಿತಿ ಮುಂದುವರಿಯಲಿದೆ.

ಇದರ ಜೊತೆಗೆ ವರಲಕ್ಷ್ಮೀ ನೇತೃತ್ವದಲ್ಲಿ ನಾಳೆ ಮಾರ್ಚ್​ 3ರಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ(ಬಿಸಿಯೂಟ ಕಾರ್ಯಕರ್ತೆಯರಿಂದ ಪ್ರತಿಭಟನೆ) ಪ್ರತಿಭಟನೆ ನಡೆಸುತ್ತಿದೆ. ಮಾರ್ಚ್ ​4ರಂದು ಸಿಐಟಿಯುಸಿ ಕಾರ್ಮಿಕ ಸಂಘಟನೆಯ ವತಿಯಿಂದ ವಿಧಾನಸೌಧ ಚಲೋ ಪ್ರತಿಭಟನೆ ನಡೆಯಲಿದ್ದು, ಮಾರ್ಚ್ 5 ರಂದು ವರಲಕ್ಷ್ಮೀ ನೇತೃತ್ವದಲ್ಲಿ ಸಿಐಟಿಯು ಅಂಗನವಾಡಿ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ ನಡೆಯಲಿದೆ.

ಆ ಮೂಲಕ ವಿವಿಧ ಸಂಘಟನೆಗಳು ಈವರೆಗೆ ರಾಜ್ಯ ರಾಜಧಾನಿಗೆ ಪ್ರತಿಭಟನೆಯ ಬಿಸಿ ತಟ್ಟಸಿದ್ದು, ವಿವಿಧ ಬೇಡಿಕೆಗಾಗಿ ಆಕ್ರೋಶದ ಕಿಚ್ಚು ಮೊಳಗಲಿದೆ. ಸಂಚಾರ ಬಂದ್ ಮಾಡಿ ಸಾರಿಗೆ ನೌಕರರು ಶಾಕ್ ಕೊಟ್ಟರೆ, ಅಂಗನವಾಡಿ ಕಾರ್ಯಕರ್ತರು ರೊಚ್ಚಿಗೆದಿದ್ದಾರೆ. ಅದ್ರಲ್ಲೂ ನಮ್ಮನ್ನ ಸರ್ಕಾರಿ ನೌಕರರನ್ನಾಗಿಸಿ ಎಂದು ಡಿಸೆಂಬರ್‌ನಲ್ಲಿ ಮುಷ್ಕರ ನಡೆಸಿ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಿದ್ದ ಸಾರಿಗೆ ನೌಕರರು ಮತ್ತೆ ಇಂದು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

ಡಿಸೆಂಬರ್ ತಿಂಗಳಲ್ಲಿ ಮುಷ್ಕರದ ವೇಳೆ ಸರ್ಕಾರ 10 ಬೇಡಿಕೆಗಳ ಪೈಕಿ 9 ಬೇಡಿಕೆ ಈಡೇರಿಸುವ ಭರವಸೆ ನೀಡಿತ್ತು. ಆದರೆ ಆ ಭರವಸೆಗಳಲ್ಲಿ ಅತಿಮುಖ್ಯವಾದದ್ದು ಎಂದರೆ ಅದು ಆರನೇ ವೇತನ ಆಯೋಗ. ಸದ್ಯ ಬಜೆಟ್ ಅಧಿವೇಶನ ಆರಂಭವಾಗುತ್ತಿದೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ 2021-22ನೇ ಸಾಲಿನ ಬಜೆಟ್ ಮಂಡಿಸುವ ತಯಾರಿಯಲ್ಲಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಶತಾಯಗತಾಯ ಸಾರಿಗೆ ನೌಕರರ 6ನೇ ವೇತನ ಆಯೋಗ ಜಾರಿಯಾಗಬೇಕು ಎನ್ನುವ ಬೇಡಿಕೆ ಮುಂದಿಟ್ಟು ಮೌರ್ಯ ಸರ್ಕಲ್​ನಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದಾರೆ. ಈ ಸತ್ಯಾಗ್ರಹದಲ್ಲಿ ಸುಮಾರು ಎರಡರಿಂದ ಮೂರು ಸಾವಿರ ನೌಕರರು ಭಾಗಿಯಾಗುವ ಸಾಧ್ಯತೆ ‌ಇದೆ.

ಒಟ್ಟಾರೆ ವಿವಿಧ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಗೆ ಸಾರ್ವಜನಿಕರು ಶಿಕ್ಷೆ ಅನುಭವಿಸುವಂತಹ ವಾತಾವರಣ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಆದಷ್ಟು ಮುನ್ನೇಚ್ಚರಿಕೆ ತೆಗೆದುಕೊಂಡು ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಜೋರಾದ ಪ್ರತಿಭಟನೆ ಕಾವು; ಟ್ರಾಫಿಕ್​ ಕಿರಿಕಿರಿಯಿಂದ ಹೈರಾಣಾದ ಜನಸಾಮಾನ್ಯರು