ಇಂದು ಬೆಂಗಳೂರಿಗೆ ತಟ್ಟಲಿದೆ ಪ್ರತಿಭಟನೆ ಬಿಸಿ.. ಸಾರಿಗೆ ನೌಕರರು, ಅಂಗನವಾಡಿ ಕಾರ್ಯಕರ್ತೆಯರ ಪ್ರೊಟೆಸ್ಟ್‌

ರಾಜಧಾನಿ ಬೆಂಗಳೂರಿನಲ್ಲಿ ಇಂದು ಪ್ರತಿಭಟನೆ ಕಾವೇರಲಿದೆ. ಒಂದ್ಕಡೆ ಸಾರಿಗೆ ನೌಕರರು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ರೆ, ಇನ್ನೊದ್ಕಡೆ ಅಂಗನವಾಡಿ ಕಾರ್ಯಕರ್ತೆಯರು ಬೃಹತ್ ಱಲಿಗೆ ಮುಂದಾಗಿದ್ದಾರೆ. ಬಜೆಟ್ ಅಧಿನವೇಶನಕ್ಕೂ ಮುನ್ನ ಸರ್ಕಾರಕ್ಕೆ ಪ್ರತಿಭಟನೆ ಬಿಸಿ ಮುಟ್ಟಿಸೋಕೆ ವಿವಿಧ ಸಂಘಟನೆಗಳು ಸಜ್ಜಾಗಿವೆ.

  • TV9 Web Team
  • Published On - 6:51 AM, 2 Mar 2021
ಇಂದು ಬೆಂಗಳೂರಿಗೆ ತಟ್ಟಲಿದೆ ಪ್ರತಿಭಟನೆ ಬಿಸಿ.. ಸಾರಿಗೆ ನೌಕರರು, ಅಂಗನವಾಡಿ ಕಾರ್ಯಕರ್ತೆಯರ ಪ್ರೊಟೆಸ್ಟ್‌
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯ ರಾಜಧಾನಿಗೆ ಇಂದು ಮತ್ತೆ ಪ್ರತಿಭಟನೆಯ ಬಿಸಿ ತಟ್ಟಲಿದೆ. ವಿವಿಧ ಬೇಡಿಕೆಗಾಗಿ ಆಕ್ರೋಶದ ಕಿಚ್ಚು ಮೊಳಗಲಿದೆ. ಸಂಚಾರ ಬಂದ್ ಮಾಡಿ ಸಾರಿಗೆ ನೌಕರರು ಶಾಕ್ ಕೊಟ್ರೆ, ಅಂಗನವಾಡಿ ಕಾರ್ಯಕರ್ತರು ರೊಚ್ಚಿಗೇಳಲಿದ್ದಾರೆ. ತಮ್ಮ ಕಿಚ್ಚನ್ನ ಹೊರ ಹಾಕಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲಿದ್ದಾರೆ. ಇಂದು ಮತ್ತೆ ಬೆಂಗಳೂರು ರಣರಂಗ ಆಗಲಿದೆ. ಯಾಕಂದ್ರೆ ಇಂದು ಮತ್ತೆ ಸಾರಿಗೆ ನೌಕರರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಬೀದಿಗಿಳಿಯಲಿದ್ದಾರೆ. ಅದ್ರಲ್ಲೂ ನಮ್ಮನ್ನ ಸರ್ಕಾರಿ ನೌಕರರನ್ನಾಗಿಸಿ ಅಂತ ಡಿಸೆಂಬರ್‌ನಲ್ಲಿ ಮುಷ್ಕರ ನಡೆಸಿ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಿದ್ದ ಸಾರಿಗೆ ನೌಕರರು ಮತ್ತೆ ಇಂದು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

ಡಿಸೆಂಬರ್ ತಿಂಗಳಲ್ಲಿ ಮುಷ್ಕರದ ವೇಳೆ ಸರ್ಕಾರ 10 ಬೇಡಿಕೆಗಳ ಪೈಕಿ 9 ಬೇಡಿಕೆ ಈಡೇರಿಸೋ ಭರವಸೆ ನೀಡಿತ್ತು. ಆದ್ರೆ ಆ ಭರವಸೆಗಳಲ್ಲಿ ಅತಿ ಮುಖ್ಯವಾದದ್ದು ಅಂದ್ರೆ ಅದು ಆರನೇ ವೇತನ ಆಯೋಗ. ಸದ್ಯ ಬಜೆಟ್ ಅಧಿವೇಶನ ಆರಂಭವಾಗ್ತಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ 21-22ನೇ ಸಾಲಿನ ಬಜೆಟ್ ಮಂಡಿಸೋ ತಯಾರಿಯಲ್ಲಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಶತಾಯಗತಾಯ ಸಾರಿಗೆ ನೌಕರರ 6ನೇ ವೇತನ ಆಯೋಗ ಜಾರಿಯಾಗ್ಬೇಕು ಅನ್ನೋ ಬೇಡಿಕೆ ಮುಂದಿಟ್ಟು ಸಾರಿಗೆ ನೌಕರರು ಮೌರ್ಯ ಸರ್ಕಲ್ ನಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದಾರೆ ಈ ಸತ್ಯಾಗ್ರಹ ದಲ್ಲಿ ಸುಮಾರು ಎರಡರಿಂದ ಮೂರು ಸಾವಿರ ನೌಕರರು ಭಾಗಿಯಾಗುವ ಸಾಧ್ಯತೆ ‌ಇದೆ.

ನಾಲ್ಕು ನಿಗಮದ ನೌಕರರು ಭಾಗಿ, ಬಸ್‌ಗಳ ಸಂಚಾರಕ್ಕಿಲ್ಲ ಅಡ್ಡಿ
ಇಂದಿನ ಹೋರಾಟದಲ್ಲಿ ನಾಲ್ಕೂ ನಿಗಮದ ನೌಕರರು ಭಾಗಿಯಾಗಲಿದ್ದಾರೆ. ಆದ್ರೆ ವಾರದ ರಜೆ ಇರೋ ನೌಕರರು ಮಾತ್ರ ಹೋರಾಟದಲ್ಲಿ ಭಾಗಿಯಾಗಲು ಸಾರಿಗೆ ನಿಗಮಗಳ ನೌಕರರ ಯೂನಿಯನ್‌ಗಳು ಸೂಚಿಸಿವೆ. ಹೀಗಾಗಿ ಇಂದು ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗೋದಿಲ್ಲ, ಇಂದಿನ ನಮ್ಮ ಹೋರಾಟ ಕೇವಲ ಎಚ್ಚರಿಕೆಯಷ್ಟೇ. .ಮಾರ್ಚ್ 15 ಕ್ಕೆ ಸರ್ಕಾರ ತೆಗೆದುಕೊಂಡ ಗಡುವು ಮುಕ್ತಾಯವಾಗುತ್ತೆ. ಏನಾದ್ರು ಸರ್ಕಾರ ನಮ್ಮ ಬೇಡಿಕೆಗಳನ್ನ ಈಡೇರಿಸದೆ ನಿರ್ಲಕ್ಷ್ಯ ತೋರಿದ್ರೆ ಮುಂದೆ ನಮ್ಮ ಹೋರಾಟದ ಸ್ವರೂಪ ಬದಲಾಗುತ್ತೆ ಎಂದಿದ್ದಾರೆ.

ಇಂದು ಅಂಗನವಾಡಿ ಕಾರ್ಯಕರ್ತೆಯರಿಂದ ಬೃಹತ್ ರ‍್ಯಾಲಿ
ಸಾರಿಗೆ ನೌಕರರ ಒಂದ್ಕಡೆ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ರೆಡಿಯಾದ್ರೆ, ರಾಜಧಾನಿಗೆ ಅಂಗನವಾಡಿ ಕಾರ್ಯಕರ್ತೆಯರು ಲಗ್ಗೆ ಇಡಲಿದ್ದಾರೆ. ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ದೊಡ್ಡ ಮಟ್ಟದ ಪ್ರತಿಭಟನಾ ಱಲಿ ಹಮ್ಮಿಕೊಂಡಿದ್ದಾರೆ. ಬೆಳಗ್ಗೆ 11 ಗಂಟೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಫ್ರೀಡಂಪಾರ್ಕ್ ವರೆಗೆ ಪ್ರತಿಭಟನಾ ಱಲಿ ನಡೆಸಿ ಬೇಡಿಕೆ ಈಡೇರಿಕೆಗೆ ಸರ್ಕಾರಕ್ಕೆ ಒತ್ತಡ ಹಾಕಲಿದ್ದಾರೆ. ಈ ಱಲಿ ಯಲ್ಲಿ ರಾಜ್ಯದ ಮೂಲೇ ಮೂಲೆಯಿಂದ ಸುಮಾರು ನಾಲ್ಕರಿಂದ ಐದು ಸಾವಿರ ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರು ಭಾಗಿಯಾಗುವ ಸಾಧ್ಯತೆಯಿದೆ.

ಬೇಡಿಕೆಗಳೇನು?
ಸೇವಾ ಹಿರಿತನದ ಆಧಾರದಲ್ಲಿ ಗೌರವಧನ ಹೆಚ್ಚಳ ಮಾಡಬೇಕು. ಹಾಗೇ ಉಚಿತ ವೈದ್ಯಕೀಯ ಸೌಲಭ್ಯ ಅಥವಾ ಇಎಸ್‌ಐ ಸೌಲಭ್ಯ ನೀಡಬೇಕು. LKG, UKGಯನ್ನು ಅಂಗನವಾಡಿಯಲ್ಲೇ ಆರಂಭಿಸಬೇಕು. ಪಿಂಚಣಿ ಸೌಲಭ್ಯ ಸೇರಿದಂತೆ 7 ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನಾ ಱಲಿ ನಡೆಸಲಿದ್ದಾರೆ.

ಒಂದ್ಕಡೆ ಸೌರಿಗೆ ನೌಕರ 6ನೇ ವೇತನ ಆಯೋಗದ ಬೇಡಿಕೆ, ಇನ್ನೊಂದ್ಕಡೆ ಅಂಗನವಾಡಿ ಕಾರ್ಯಕರ್ತೆಯರ ಪಿಂಚಣಿಗಾಗಿ ಹೋರಾಟ. ಇವತ್ತು ಬೆಂಗಳೂರಿನಲ್ಲಿ ಪ್ರತಿಭಟನೆಯ ಕಾವು ಹೆಚ್ಚುವುದು ಪಕ್ಕಾ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮಂಗಳವಾರ ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆ